ADVERTISEMENT

ಕೂಟುಹೊಳೆಗೆ ಭೇಟಿ ನೀಡಿದ ಪೌರಾಯುಕ್ತ

ನೀರನ್ನು ಮಿತವಾಗಿ ಬಳಸಲು ಸಾರ್ವಜನಿಕರಲ್ಲಿ ಮನವಿ

​ಪ್ರಜಾವಾಣಿ ವಾರ್ತೆ
Published 9 ಮೇ 2024, 8:10 IST
Last Updated 9 ಮೇ 2024, 8:10 IST
ಮಡಿಕೇರಿ ನಗರಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ಕೂಟುಹೊಳೆಗೆ ನಗರಸಭೆ ಪೌರಾಯುಕ್ತ ವಿಜಯ್ ಬುಧವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು
ಮಡಿಕೇರಿ ನಗರಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ಕೂಟುಹೊಳೆಗೆ ನಗರಸಭೆ ಪೌರಾಯುಕ್ತ ವಿಜಯ್ ಬುಧವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು   

ಮಡಿಕೇರಿ: ನಗರಸಭೆ ಪೌರಾಯುಕ್ತ ವಿಜಯ್ ಅವರು ಬುಧವಾರ ನಗರಕ್ಕೆ ನೀರು ಸರಬರಾಜು ಮಾಡುವ ಕೂಟುಹೊಳೆ ಹಾಗೂ ಕುಂಡಾಮೇಸ್ತ್ರಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನಗರಕ್ಕೆ ನೀರು ಪೂರೈಕೆ ಮಾಡುವ ಪ್ರಮುಖ ಮೂಲವಾದ ಕೂಟುಹೊಳೆ ಈಗಾಗಲೇ ಬತ್ತಿ ಹೋಗಿದ್ದು, ಕುಂಡಾಮೇಸ್ತ್ರಿಯಿಂದ ಅಲ್ಲಿಗೆ  ನೀರು  ಪೂರೈಸಲಾಗುತ್ತಿದೆ. ಇದರೊಂದಿಗೆ ನೀರಿನ ಇತರೆ ಮೂಲಗಳಾದ ರೋಷನಾರಾ, ಕನ್ನಂಡಬಾಣೆ ಹಾಗೂ ಪಂಪಿನಕೆರೆಗಳು ಸಹ ಬತ್ತಿ ಹೋಗಿವೆ. ಮುಂದೆ ನೀರಿಗೆ ಹಾಹಾಕಾರ ಸೃಷ್ಟಿಯಾಗಬಾರದು ಎಂಬ ಕಾರಣಕ್ಕೆ ದಿನ ಬಿಟ್ಟು ದಿನ ನೀರು ಪೂರೈಸಲಾಗುತ್ತಿದೆ’ ಎಂದರು.

ಇದರೊಂದಿಗೆ ಬೇಸಿಗೆಯಲ್ಲಿ ನೀರೆತ್ತುವ ಮೋಟಾರ್‌ಗಳ ಸಾಮರ್ಥ್ಯವೂ ಕಡಿಮೆ ಇರುತ್ತದೆ. ಬೇಸಿಗೆ ರಜೆ ದಿನಗಳು ಇರುವುದರಿಂದ ವಾರಾಂತ್ಯದಲ್ಲಿ  ಸಾಮಾನ್ಯವಾಗಿ ಇಲ್ಲಿರುವ ಜನಸಂಖ್ಯೆಗೆ ಎರಡು ಪಟ್ಟು ಪ್ರವಾಸಿಗರು ಇಲ್ಲಿಗೆ ಬರುತ್ತಿದ್ದಾರೆ. ನೀರಿನ ಬಳಕೆಯ ಪ್ರಮಾಣವೂ  ಹೆಚ್ಚಾಗುತ್ತಿದೆ. ಇದನ್ನು ಸರಿದೂಗಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.

ADVERTISEMENT

ಕಳೆದ ವರ್ಷ ಏಪ್ರಿಲ್‌ನಲ್ಲೇ ದಿನ ಬಿಟ್ಟು ದಿನ ನೀರು ಪೂರೈಕೆ ಮಾಡುತ್ತಿದ್ದೆವು. ಆದರೆ, ಈಗ ಮೇ ತಿಂಗಳಿನವರೆಗೂ ಕಾದು ಮಳೆ ಬಾರದೇ ಇರುವುದರಿಂದ ಈ ಕ್ರಮ ಕೈಗೊಳ್ಳಲಾಗಿದೆ. ಈಚೆಗೆ ನಡೆದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲೂ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ನೀರಿನ ಕೊರತೆ ಉಂಟಾಗದಂತೆ ಎಚ್ಚರಿಕೆ ವಹಿಸಲು  ಸೂಚಿಸಿದ್ದರು ಎಂದು ಮಾಹಿತಿ ನೀಡಿದರು.

ಸಾರ್ವಜನಿಕರು ಸಮಸ್ಯೆ ಗಾಂಭೀರ್ಯತೆಯನ್ನು ಅರಿತು, ನೀರನ್ನು ಪೋಲು ಮಾಡಬಾರದು. ವಾಹನ ತೊಳೆಯಲು, ಮನೆಯ ಆವರಣದ ಕೈತೋಟಗಳಿಗೆ ಬಳಕೆ ಮಾಡದೇ ಅವಶ್ಯಕ ಕಾರಣಗಳಿಗಾಗಿ ಬಳಸಬೇಕು. ಮಿತವಾಗಿ ನೀರು ಬಳಕೆ ಮಾಡಬೇಕು ಎಂದು ಅವರು ಮನವಿ ಮಾಡಿದರು.

ಮಡಿಕೇರಿ ನಗರಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ಕೂಟುಹೊಳೆಗೆ ನಗರಸಭೆ ಪೌರಾಯುಕ್ತ ವಿಜಯ್ ಬುಧವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.