ADVERTISEMENT

ಭಕ್ತರ ಕಷ್ಟ ಪರಿಹರಿಸುವ ಮುತ್ತಪ್ಪ ತೆರೆ

ಕೊಡಗಿನ ಮುತ್ತಪ್ಪ ದೇಗುಲಗಳಲ್ಲಿ ಉತ್ಸವಗಳು ಆರಂಭ; ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿ

ರೆಜಿತ್ ಕುಮಾರ್
Published 25 ಫೆಬ್ರುವರಿ 2023, 19:31 IST
Last Updated 25 ಫೆಬ್ರುವರಿ 2023, 19:31 IST
ಗುಳಿಗನ ತೆರೆ
ಗುಳಿಗನ ತೆರೆ   

ಸಿದ್ದಾಪುರ: ಕೊಡಗು ಜಿಲ್ಲೆಯಲ್ಲಿ ಈಗ ಕೋಲಗಳು, ತೆರೆ ಮಹೋತ್ಸವಗಳ ಕಾಲ. ಕೊಡಗಿನಲ್ಲಿ ಸುಮಾರು 30ಕ್ಕೂ ಅಧಿಕ ಮುತ್ತಪ್ಪ ದೇವಾಲಯಗಳಿದ್ದು, ಮುತ್ತಪ್ಪ ತೆರೆ ಮಹೋತ್ಸವಗಳು ಆರಂಭವಾಗಿವೆ.

ಮಡಿಕೇರಿ, ಕುಶಾಲನಗರ, ಸೋಮವಾರಪೇಟೆ, ವಿರಾಜಪೇಟೆ, ಸಿದ್ದಾಪುರ, ನೆಲ್ಯಹುದಿಕೇರಿ, ಅಮ್ಮತ್ತಿ, ಹೊಸಕೋಟೆಯಲ್ಲಿ ಫೆಬ್ರುವರಿಯಿಂದ ಮೇ ಅಂತ್ಯದವರೆಗೂ ತೆರೆ ಮಹೋತ್ಸವಗಳು ವಿಜೃಂಭಣೆಯಿಂದ ನಡೆಯುತ್ತವೆ.

ಮುತ್ತಪ್ಪ ವೆಳ್ಳಾಟಂ: ಮುತ್ತಪ್ಪ ದೇವಸ್ಥಾನಗಳಲ್ಲಿ ಮುತ್ತಪ್ಪ, ತಿರುವಪ್ಪನ ವೆಳ್ಳಾಟಂ ಹಾಗೂ ತೆರೆ ಪ್ರಮುಖವಾಗಿವೆ. ಕೇರಳದ ಕಣ್ಣೂರು ಜಿಲ್ಲೆಯ ಪರಶಿನಿಕಡವು ಶ್ರೀ ಮುತ್ತಪ್ಪ ದೇವರ ಮೂಲ ಸ್ಥಾನವಾಗಿದ್ದು, ನೆರೆಯ ಜಿಲ್ಲೆಯಾದ ಕಾರಣ ಕೊಡಗಿನಲ್ಲೂ ಹೆಚ್ಚು ದೇವಾಲಯಗಳಿವೆ. ಕೈಯಲ್ಲಿ ಬಿಲ್ಲು ಬಾಣದೊಂದಿಗೆ, ಚೆಂಡೆ ವಾದ್ಯಕ್ಕೆ ನೃತ್ಯ ಮಾಡಿಕೊಂಡು, ಭಕ್ತರ ಕಷ್ಟಗಳನ್ನು ಕೇಳುವುದು ಮುತ್ತಪ್ಪ ಕೋಲದ ವಿಶೇಷ.

ADVERTISEMENT

ವಿವಿಧ ಕೋಲಗಳು: ಸಾಮಾನ್ಯವಾಗಿ ಮುತ್ತಪ್ಪ ದೇವಾಲಯಗಳಲ್ಲಿ ಮುತ್ತಪ್ಪ ತಿರುವಪ್ಪನ ತೆರೆಯೊಂದಿಗೆ, ಇನ್ನಿತರ ಕೋಲಗಳೂ ನಡೆಯಲಿವೆ. ಶಾಸ್ತಪ್ಪನ ವೆಳ್ಳಾಟಂ, ಭಗವತಿ, ಗುಳಿಗನ ತೆರೆಗಳು ಕೂಡ ಉತ್ಸವದ ಆಕರ್ಷಣೆ.

ಮಧ್ಯರಾತ್ರಿ 12 ಗಂಟೆಗೆ ನಡೆಯುವ ವಸೂರಿಮಾಲಾ ತೆರೆಯಲ್ಲಿ ಯುವಕರು ಹೆಚ್ಚಾಗಿ ಪಾಲ್ಗೊಳ್ಳುತ್ತಾರೆ. ದೇವಾಲಯ ಸಮೀಪದ ನದಿ ಅಥವಾ ಜಲಮೂಲದಿಂದ ವಸೂರಿಮಾನ ದೇವಿಯ ಕೋಲ ಆರಂಭವಾಗಿ ದೇವಾಲ
ಯದವರೆಗೂ ಚೆಂಡೆ ವಾದ್ಯಕ್ಕೆ ಕುಣಿಸು
ತ್ತದೆ. ಆಗ ಯುವಕರು ವಸೂರಿಮಾಲ ಕಿವಿಯಲ್ಲಿ ಕಿರುಚುತ್ತಾರೆ. ಯುವಕರನ್ನು ಸಿಟ್ಟಿನಿಂದ ಓಡಿಸುವುದು, ಯುವಕರು ಎದ್ದು ಬಿದ್ದು ಓಡುವುದು ವಿಶೇಷ.

ಕೆಲವು ದೇವಾಲಯಗಳಲ್ಲಿ ಎರಡು ಅಥವಾ ಹೆಚ್ಚು ವಸೂರಿಮಾಲ ಕೋಲವೂ ನಡೆಯುತ್ತದೆ. ಇದಲ್ಲದೇ ವಿಷ್ಣುಮೂರ್ತಿ ತೆರೆ, ಕುಟ್ಟಿಚಾತನ್ ಮುಂತಾದ ಕೋಲಗಳ ತೆರೆ ನಡೆಯಲಿದೆ. ಸಮೀಪದ ನೂರಾರು ಭಕ್ತಾದಿಗಳು ತೆರೆ ಮಹೋತ್ಸವದಲ್ಲಿ ಪಾಲ್ಗೊಳ್ಳುತ್ತಾರೆ.

ನೆಲ್ಯಹುದಿಕೇರಿಯ ಪದ್ಮನಾಭ ಪ್ರತಿಕ್ರಿಯಿಸಿ, ‘ಜಿಲ್ಲೆಯಲ್ಲಿ ಹಲವು ವರ್ಷದಿಂದ ಮುತ್ತಪ್ಪ ದೇವಾಲಯಗಳಲ್ಲಿ ಕೋಲಗಳು ನಡೆಯುತ್ತಿವೆ. ಕೆಲವು ಮುತ್ತಪ್ಪ ದೇವಾಲಯದಲ್ಲಿ ಹುತ್ತರಿ ಸಂದರ್ಭ ವೆಳ್ಳಾಟಂ ನಡೆಯುತ್ತಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.