ADVERTISEMENT

ಮೈಸೂರು - ಕುಶಾಲನಗರ ಹೆದ್ದಾರಿ ಕಾಮಗಾರಿ 16 ತಿಂಗಳಲ್ಲಿ ಪೂರ್ಣ: ಪ್ರತಾಪ ಸಿಂಹ

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2023, 13:36 IST
Last Updated 20 ಆಗಸ್ಟ್ 2023, 13:36 IST
ನೂತನ ಬಹುಸೇವಾ ಕೇಂದ್ರದ ಗೋದಾಮು, ಮಳಿಗೆಗಳು, ನೂತನ ಸಹಕಾರ ಭವನವನ್ನು ಸಂಸದ ಪ್ರತಾಪ್ ಸಿಂಹ ಭಾನುವಾರ ಉದ್ಘಾಟಿಸಿದರು. ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೊಡಂದೇರ ಪಿ.ಬಾಂಡ್ ಗಣಪತಿ, ಜಿಲ್ಲಾ ಸಹಕಾರ ಯೂನಿಯನ್ ಬ್ಯಾಂಕ್ ಅಧ್ಯಕ್ಷ ಅಪ್ಪಚಟ್ಟೋಳಂಡ ಮನ ಮುತ್ತಪ್ಪ, ಸಂಘದ ಅಧ್ಯಕ್ಷ ಬಿ.ಸಿ.ಮಾದಯ್ಯ, ಗ್ರಾಮ ಪಂಚಾಯತಿ ಅಧ್ಯಕ್ಷ ಸಿ.ಎಲ್.ವಿಶ್ವ ಇದ್ದಾರೆ
ನೂತನ ಬಹುಸೇವಾ ಕೇಂದ್ರದ ಗೋದಾಮು, ಮಳಿಗೆಗಳು, ನೂತನ ಸಹಕಾರ ಭವನವನ್ನು ಸಂಸದ ಪ್ರತಾಪ್ ಸಿಂಹ ಭಾನುವಾರ ಉದ್ಘಾಟಿಸಿದರು. ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೊಡಂದೇರ ಪಿ.ಬಾಂಡ್ ಗಣಪತಿ, ಜಿಲ್ಲಾ ಸಹಕಾರ ಯೂನಿಯನ್ ಬ್ಯಾಂಕ್ ಅಧ್ಯಕ್ಷ ಅಪ್ಪಚಟ್ಟೋಳಂಡ ಮನ ಮುತ್ತಪ್ಪ, ಸಂಘದ ಅಧ್ಯಕ್ಷ ಬಿ.ಸಿ.ಮಾದಯ್ಯ, ಗ್ರಾಮ ಪಂಚಾಯತಿ ಅಧ್ಯಕ್ಷ ಸಿ.ಎಲ್.ವಿಶ್ವ ಇದ್ದಾರೆ   

ಕುಶಾಲನಗರ: ಮೈಸೂರು - ಕುಶಾಲನಗರದ ವರೆಗೆ 94 ಕಿ.ಮೀ ಉದ್ದದ ₹ 4130 ಕೋಟಿ ವೆಚ್ಚದ ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯನ್ನು ಮುಂದಿನ‌ ಹದಿನಾರು ತಿಂಗಳ ಅಲ್ಪಾವಧಿಯಲ್ಲಿ ಪೂರ್ಣಗೊಳಿಸಲಾಗುವುದು ಎಂದು ಲೋಕಸಭಾ ಸದಸ್ಯ ಪ್ರತಾಪ್ ಸಿಂಹ ಹೇಳಿದರು.

ಸಮೀಪದ ನಂಜರಾಯಪಟ್ಟಣ ವಿವಿಧೋದ್ದೇಶ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ
ನಬಾರ್ಡ್ ಪ್ರಯೋಜಕತ್ದದಲ್ಲಿ ₹ 3.7 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ನೂತನ ಬಹುಸೇವಾ ಕೇಂದ್ರದ ಗೋದಾಮು, ಮಳಿಗೆಗಳು, ನೂತನ ಸಹಕಾರ ಭವನವನ್ನು ಭಾನುವಾರ ಉದ್ಘಾಟಿಸಿ ಮಾತನಾಡಿದರು.

ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ಸರ್ವೆ ಕಾರ್ಯ ಮುಗಿದು ಹದ್ದುಬಸ್ತು ಕೂಡ ಆಗಿದ್ದು, ಭೂಸ್ವಾಧೀನ ಪ್ರಕ್ರಿಯೆ ಆರಂಭ ಮಾಡಲಾಗಿದೆ. ರಸ್ತೆ ನಿರ್ಮಾಣಕ್ಕಾಗಿ ಭೂಮಿ ಕಳೆದುಕೊಳ್ಳುವ ರೈತರಿಗೆ ನ್ಯಾಯಯುತ ಪರಿಹಾರ ನೀಡಲು ಕ್ರಮ ಕೈಗೊಳ್ಳಲಾಗುತ್ತದೆ ಎಂದರು.

ADVERTISEMENT

ಮೈಸೂರು-ಕುಶಾಲನಗರ ಹೆದ್ದಾರಿ ನಿರ್ಮಾಣ ಕಾಮಗಾರಿಗೆ ಪ್ರಧಾನಿ ಅವರು ಭೂಮಿ ಪೂಜೆ ಮಾಡಿದ್ದಾರೆ. 2024 ಡಿಸೆಂಬರ್ ಒಳಗೆ ಅವರಿಂದಲೇ ಉದ್ಘಾಟನೆ ಮಾಡಿಸಲಾಗುತ್ತದೆ ಎಂದು ಹೇಳಿದರು.

ಮೈಸೂರಿನಿಂದ‌ ಕುಶಾಲನಗರದ ರಾಣಿಗೇಟ್ ವರೆಗಿನ ₹ 1954 ಕೋಟಿ ವೆಚ್ಚದ ರೈಲ್ವೆ ಯೋಜನೆಯ ಡಿಪಿಆರ್ ಅನ್ನು ಸೆಪ್ಟೆಂಬರ್ ನಲ್ಲಿ ಸಲ್ಲಿಸಲಾಗುತ್ತದೆ. ರಾಜ್ಯ ಸರ್ಕಾರ ಭೂಮಿ ಒದಗಿಸಿದರೆ ಈ ಯೋಜನೆ ಕೂಡ ಬೇಗ ಅನುಷ್ಠಾನವಾಗಲಿದೆ ಎಂದರು.

ನಬಾರ್ಡ್ ನಿಂದ ಶೇ 4 ಬಡ್ಡಿದರದಲ್ಲಿ ಸಾಲ ಪಡೆದು ಉತ್ತಮವಾದ ಬೃಹತ್ ಕಟ್ಟಡ, ಕಚೇರಿ, ವಾಣಿಜ್ಯ ಮಳಿಗೆಗಳನ್ನು ನಿರ್ಮಾಣ ಮಾಡಿರುವುದು ಶ್ಲಾಘನೀಯ. ವಾಣಿಜ್ಯ ಮಳಿಗೆಗಳಿಂದ ಆದಾಯ ಕೂಡ ಬರುತ್ತದೆ. ಇದು ಸಂಘದ ಬಲವರ್ಧನೆ ಸಹಕಾರಿ ಆಗುತ್ತದೆ. ಸಂಘದ ಅಧ್ಯಕ್ಷರು ಹಾಗೂ ಆಡಳಿತ ಮಂಡಳಿ ಸದಸ್ಯ ಕಾರ್ಯ ಸಾಧನೆ ಇತರೆ ಸಂಘಗಳಿಗೆ ಮಾದರಿಯಾಗಿದೆ ಎಂದರು.

ನಬಾರ್ಡ್‌ನಿಂದ ರಸ್ತೆ, ಸೇತುವೆ ಹಾಗೂ ಪಶು ಆಸ್ಪತ್ರೆ ನಿರ್ಮಾಣ ಮಾಡಬಹುದು. ಆದ್ದರಿಂದ ಸಹಕಾರ ಸಂಘಗಳು ನಬಾರ್ಡ್ ಸಾಲ ಯೋಜನೆಯನ್ನು ಸದುಪಯೋಗ ಪಡಿಸಿಕೊಂಡು ಅಭಿವೃದ್ಧಿ ಹೊಂದಬೇಕು ಎಂದರು.

ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿಯಮಿತ ಮಡಿಕೇರ ಅಧ್ಯಕ್ಷ ಕೊಡಂದೇರ ಪಿ.ಬಾಂಡ್ ಗಣಪತಿ
ನೂತನ ಕಚೇರಿ ಉದ್ಘಾಟಿಸಿ ಮಾತನಾಡಿ, ರೈತರು ಬ್ಯಾಂಕ್‌ನಿಂದ ಪಡೆದ ಸಾಲವನ್ನು ಸಕಾಲದಲ್ಲಿ ಹಿಂದಿರಿಗಿಸುವ ಮೂಲಕ ಬ್ಯಾಂಕ್ ಜೊತೆಗೆ ತಾವೂ ಬೆಳೆಯಬೇಕು.

ಸಾಲ ಬಾಕಿ ಉಳಿಸಿಕೊಂಡರೆ ಬ್ಯಾಂಕ್ ನಷ್ಟದ ಸುಳಿಗೆ ಸಿಲುಕಿ, ರೈತರಿಗೆ ಸಿಗುವ ಹಲವು ಸೌಲಭ್ಯಗಳು ಸಹ ಕೈತಪ್ಪಲಿವೆ. ಡಿಸಿಸಿ ಬ್ಯಾಂಕ್ ರೈತರ ಬೆನ್ನೆಲುಬಾಗಿ ಕೆಲಸ ಮಾಡುತ್ತಿದ್ದು, ರೈತರ ಬದುಕು ಹಸನಾಗಿಸುವುದೇ ಇದರ ಸ್ಥಾಪನೆಯ ಉದ್ದೇಶವಾಗಿದೆ ಎಂದರು.

ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಬ್ಯಾಂಕ್ ಅಧ್ಯಕ್ಷ ಅಪ್ಪಚಟ್ಟೋಳಂಡ ಮನ ಮುತ್ತಪ್ಪ ಲಿಫ್ಟ್ ಉದ್ಘಾಟಿಸಿ ಮಾತನಾಡಿ, ರೈತರ ಆರ್ಥಿಕ ಸುಧಾರಣೆಗೆ ಪ್ರಾಥಮಿಕ ಸಹಕಾರ ಸಂಘಗಳ ಪಾತ್ರ ಮಹತ್ವದ್ದಾಗಿದೆ. ಸಂಘಗಳನ್ನು ಬಹುಸೇವಾ ಚಟುವಟಿಕೆಗಳ ಕೇಂದ್ರವನ್ನಾಗಿ ಪರಿವರ್ತಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ರಾಜ್ಯ ಸರ್ಕಾರ ಸಹ ಒಪ್ಪಿದೆ. ರೈತರಿಗೆ ಬೇಕಾದ ಎಲ್ಲಾ ಸೇವೆಗಳನ್ನು ಒಂದೇ ಕಡೆ ಒದಗಿಸುವುದು ಇದರ ಉದ್ದೇಶ ಎಂದರು. ಸಂಘದಲ್ಲಿ ಬೆಳೆ ಸಾಲದ ಜೊತೆಗೆ ಇನ್ನಿತರ ಸಾಲ ಕೂಡ ಸಿಗಲಿದ್ದು, ಸದುಪಯೋಗ ಮಾಡಿಕೊಳ್ಳಬೇಕು. ಸಂಘಗಳ ಕಂಪ್ಯೂಟರೀಕರಣ ಆಗಬೇಕು. ‌ಇದರಿಂದ ಹಣ ದುರುಪಯೋಗಕ್ಕೆ ಕಡಿವಾಣ ಬೀಳಲಿದೆ‌. ದಾಖಲೆಗಳ ಸಂಗ್ರಹವೂ ಸುಲಭವಾಗಲಿದೆ ಎಂದು ಹೇಳಿದರು.

ಸಂಘದ ಅಧ್ಯಕ್ಷ ಬಿ.ಸಿ.ಮಾದಯ್ಯ ಅಧ್ಯಕ್ಷತೆ ವಹಿಸಿದ್ದರು. ನಂಜರಾಯಪಟ್ಟಣ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಿ.ಎಲ್.ವಿಶ್ವ, ಕೊಡಗು ನಿರ್ಮಿತಿ ಕೇಂದ್ರದ ಎಂಜಿನಿಯರ್ ಸುಖೇಶ್, ಯಶಸ್ವಿನಿ ಯೋಜನೆಯ ಸಂಯೋಜಕ ಚೇತನ್, ಸಂಘದ ಉಪಾಧ್ಯಕ್ಷ ಬಿ.ಎನ್.ಧನಪಾಲ, ನಿರ್ದೇಶಕರಾದ  ಡಿ.ಎಲ್.ಮಹೇಶ್ಚಂದ್ರ, ಪಿ.ಬಿ.ಅಶೋಕ, ಬಿ.ಎನ್.ಕಾಶಿ, ಕೆ.ಡಿ.ದಾದಪ್ಪ, ವಿ.ಎಸ್.ರಾಜಪ್ಪ,ಕೆ.ಜಿ.ಲೋಕನಾಥ್, ಎಚ್.ಎನ್‌.ಕಮಲಮ್ಮ, ಎಸ್.ಬಿ.ಅನಿತಾ, ಆರ್.ಕೆ.ಚಂದ್ರು, ಎಚ್.ಜೆ.ಕೃಷ್ಣ ಸಹಕಾರ ಸಂಘಗಳ ಮೇಲ್ವಿಚಾರಕ ವಿ.ಸಿ.ಅಜಿತ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಟಿ.ಧನಂಜಯ ಇದ್ದರು. ಸಂಘದ ಅಭಿವೃದ್ಧಿಗಾಗಿ ದುಡಿದ ಮಾಜಿ ಅಧ್ಯಕ್ಷರನ್ನು ಸನ್ಮಾನಿಸಿ ಗೌರವಿಸಲಾಯಿತು.

ಕುಶಾಲನಗರ ಸಮೀಪದ ನಂಜರಾಯಪಟ್ಟಣ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ನಬಾರ್ಡ್ ಪ್ರಯೋಜಕತ್ದದಲ್ಲಿ ರೂ.3.7 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ನೂತನ ಸಹಕಾರ ಭವನ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.