ಮಡಿಕೇರಿ: ಆದಿಮಸಂಜಾತ ಕೊಡವ ಬುಡಕಟ್ಟು ಜನರು ಇಲ್ಲಿಯವರೆಗೆ ಹಸಿರಿನ ಕೊಡವ ಭೂಮಿಯನ್ನು ಉಳಿಸಿ, ಬೆಳೆಸಿಕೊಂಡು ಬಂದಿದ್ದಾರೆ. ಆದರೆ, ಇಂದು ಭೂಮಾಫಿಯಾ, ಬೃಹತ್ ಭೂಪರಿವರ್ತನೆ, ಭೂವಿಲೇವಾರಿ ಮಾಫಿಯಾಗಳು ಕೊಡವ ಲ್ಯಾಂಡ್‌ನ್ನು ನಾಶ ಮಾಡುತ್ತಿದ್ದಾರೆ ಮತ್ತು ಕೊಡವರನ್ನು ಬಲಿಪಶು ಮಾಡುತ್ತಿದ್ದಾರೆ ಎಂದು ಕೊಡವ ನ್ಯಾಷನಲ್ ಕೌನ್ಸಿಲ್ (ಸಿಎನ್‌ಸಿ) ಅಧ್ಯಕ್ಷ ಎನ್.ಯು.ನಾಚಪ್ಪ ಆಕ್ರೋಶ ವ್ಯಕ್ತಪಡಿಸಿದರು.
ಇಲ್ಲಿನ ಬಿಟ್ಟಂಗಾಲದಲ್ಲಿ ಬುಧವಾರ ಸಿಎನ್‌ಸಿ ಏರ್ಪಡಿಸಿದ್ದ ಮಾನವ ಸರಪಳಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕೊಡವರಿಗೆ ಮಾತೃಭೂಮಿಯಲ್ಲಿ ನೆಲೆ ಇಲ್ಲದಂತೆ ಮಾಡುವ ಹುನ್ನಾರ ನಡೆದಿದೆ. ಇದಕ್ಕೆ ಕೊಡವ ವಿರೋಧಿಗಳ ಬೆಂಬಲವಿದೆ ಎಂದು ಅವರು ಆರೋಪಸಿದರು.
‘ಹಚ್ಚ ಹಸಿರಿನ ಕಾಫಿ ತೋಟದಲ್ಲಿ ನಗರ ನಿರ್ಮಿಸಿದರೆ ಕಾವೇರಿಗೆ ಹಾಗೂ ಅದರ ಉಪನದಿಗಳಿಗೆ ಸೇರುವ ನೀರಿನ ಸೆಳೆಗಳು ಬತ್ತಿ ಹೋಗುತ್ತವೆ’ ಎಂದು ಅವರು ಆತಂಕ ವ್ಯಕ್ತಪಡಿಸಿದರು.
ಬಂಡವಾಳಶಾಹಿಗಳು ಕೊಡವರ ಭೂಮಿಯನ್ನು ದೊಡ್ಡ ಪ್ರಮಾಣದಲ್ಲಿ ಖರೀದಿಸುತ್ತಿದ್ದಾರೆ. ಜಿಲ್ಲೆಯ ವಿವಿಧೆಡೆ ನಡೆಯುತ್ತಿರುವ ಬೃಹತ್ ಭೂಪರಿವರ್ತನೆ ಮತ್ತು ಭೂವಿಲೇವಾರಿಯನ್ನು ಸ್ಥಗಿತಗೊಳಿಸದೇ ಇದ್ದರೆ ಕೊಡವರಿಗೆ ಉಳಿಗಾಲವಿಲ್ಲ ಎಂದು ಹೇಳಿದರು.
‘ಬೃಹತ್ ಭೂಪರಿವರ್ತನೆ ಮತ್ತು ಭೂವಿಲೇವಾರಿಯಲ್ಲಿ ತೊಡಗಿರುವ ಉದ್ಯಮಪತಿ ಬಂಡವಾಳಶಾಹಿಗಳು ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಸಮಾಜ ಸೇವೆಯ ಮುಖವಾಡ ತೊಟ್ಟು ಕೊಡುಗೆಗಳನ್ನು ನೀಡುತ್ತಿದ್ದಾರೆ. ಮಾಫಿಯಾಗಳು ನೀಡುವ ಆಮಿಷಗಳನ್ನು ತಿರಸ್ಕರಿಸಿ ಭೂಅಕ್ರಮಗಳ ವಿರುದ್ಧ ಕೊಡವರು ಜಾಗೃತರಾಗದಿದ್ದಲ್ಲಿ ಕೊಡವ ಲ್ಯಾಂಡ್‌ನ್ನು ಕಳೆದುಕೊಳ್ಳುವ ಹೀನಾಯ ಸ್ಥಿತಿ ಬರಬಹುದು’ ಎಂದು ಅವರು ಆತಂಕ ವ್ಯಕ್ತಪಡಿದರು.
ಕೊಡವ ಲ್ಯಾಂಡ್ ಸ್ವಯಂ ನಿರ್ಣಯದ ಭೂರಾಜಕೀಯ ಸ್ವಾಯತ್ತತೆ ಘೋಷಣೆ ಮತ್ತು ಕೊಡವರಿಗೆ ಎಸ್ ಟಿ ಟ್ಯಾಗ್ ನೀಡುವುದು ಅಗತ್ಯವಾಗಿದೆ. ಇದಕ್ಕಾಗಿ ವ್ಯಾಪಕ ಜನಜಾಗೃತಿ ಮತ್ತು ಜಿಲ್ಲೆಯಾದ್ಯಂತ ಶಾಂತಿಯುತ ಮಾನವ ಸರಪಳಿ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ ಎಂದರು.
ಮುದ್ದಿಯಡ ಲೀಲಾವತಿ, ಮಾಳೇಟಿರ ವಿಮಲ, ನೆಲ್ಲಮಕ್ಕಡ ಯಶೋಧ, ಪೊನ್ನಕಚ್ಚಿರ ಶೈಲಾ, ಮಳವಂಡ ಕವಿತಾ, ಪೊರ್ಕೊಂಡ ದಕ್ಷ, ಪೊರ್ಕೊಂಡ ನಿಶಾ, ಮಾಚೆಟ್ಟಿರ ಚೋಟು ಕಾವೇರಪ್ಪ, ಕಾಳೆಂಗಡ ರಮೇಶ್, ಬುಟ್ಟಿಯಂಡ ಸೋಮಣ್ಣ ಭಾಗವಹಿಸಿದ್ದರು.
ಬಿಜೆಪಿ ವಿರುದ್ಧ ಅರೆಬೆತ್ತಲೆ ಪ್ರತಿಭಟನೆ
ಮಡಿಕೇರಿ: ಮುಡಾ ಪ್ರಕರಣದಲ್ಲಿ ಸಿದ್ದರಾಮಯ್ಯ ಅವರ ಸರ್ಕಾರವನ್ನು ಅಸ್ಥಿರಗೊಳಿಸಲು ಬಿಜೆಪಿ ಮತ್ತು ಜೆಡಿಎಸ್ ಹವಣಿಸುತ್ತಿವೆ ಎಂದು ಆರೋಪಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ಕೊಡಗು ಜಿಲ್ಲಾ ಸಮಿತಿಯ ಮುಖಂಡರು ನಗರದಲ್ಲಿ ಬುಧವಾರ ಅರೆಬೆತ್ತಲೆ ಪ್ರತಿಭಟನೆ ನಡೆಸಿದರು. ಇಲ್ಲಿನ ಜನರಲ್ ತಿಮ್ಮಯ್ಯ ವೃತ್ತದಿಂದ ಮೆರವಣಿಗೆ ಹೊರಟ ಅವರು ಜಿಲ್ಲಾಧಿಕಾರಿ ಕಚೇರಿಯ ಮುಂದೆ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಜಿಲ್ಲಾಧಿಕಾರಿ ಕಚೇರಿಗೆ ಮನವಿ ಪತ್ರ ಸಲ್ಲಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.