ADVERTISEMENT

ನಾಪೋಕ್ಲು: ಗುಡಿ ಪುಟ್ಟದಾದರೂ ಭಕ್ತಿ, ಸಂಭ್ರಮ ಅಪಾರ

ನಾಪೋಕ್ಲುವಿನಲ್ಲಿದೆ ಗಣೇಶನಿಗೆ ಪುಟ್ಟ ಗುಡಿ, ವಿವಿಧ ದೇವಾಲಯಗಳಲ್ಲಿ  ಗಣೇಶೋತ್ಸವ ಸಂಭ್ರಮ

ಸಿ.ಎಸ್.ಸುರೇಶ್
Published 1 ಸೆಪ್ಟೆಂಬರ್ 2024, 6:53 IST
Last Updated 1 ಸೆಪ್ಟೆಂಬರ್ 2024, 6:53 IST
ನಾಪೋಕ್ಲು ಪಟ್ಟಣದಲ್ಲಿರುವ ರಾಮ ಮಂದಿರ ಬಳಿಯ ಗಣಪತಿ ದೇವಾಲಯ.
ನಾಪೋಕ್ಲು ಪಟ್ಟಣದಲ್ಲಿರುವ ರಾಮ ಮಂದಿರ ಬಳಿಯ ಗಣಪತಿ ದೇವಾಲಯ.   

ನಾಪೋಕ್ಲು: ಗೌರಿ ಗಣೇಶೋತ್ಸವಕ್ಕೆ ಜಿಲ್ಲೆ ಸಜ್ಜಾಗುತ್ತಿರುವಂತೆ ನಾಲ್ಕುನಾಡಿನಲ್ಲೂ ಉತ್ಸವದ ಸಂಭ್ರಮ ಗರಿಗೆದರಿದೆ.

ವಿವಿಧ ದೇವಾಲಯಗಳಲ್ಲಿ ಗಣೆಶೋತ್ಸವಕ್ಕೆ ಭರ್ಜರಿ ಸಿದ್ಧತೆಗಳಾಗುತ್ತಿವೆ. ಆದರೆ, ನಾಲ್ಕುನಾಡು ವ್ಯಾಪ್ತಿಯಲ್ಲಿ ವಿನಾಯಕನಿಗೆ ದೇವಾಲಯವೇ ಇಲ್ಲ. ಪಟ್ಟಣದ ರಾಮಮಂದಿರ ಬಳಿ ಇರುವ ಪುಟ್ಟ ಗುಡಿಯೊಂದನ್ನು ಬಿಟ್ಟರೆ ಉಳಿದಂತೆ ವಿವಿಧ ದೇವಾಲಯಗಳಲ್ಲಿ ವಿಘ್ನ ನಾಶಕ ವಿನಾಯಕನಿಗೆ ಪೂಜೆ ಸಲ್ಲಿಸಲಾಗುತ್ತಿದೆ.

ನಾಪೋಕ್ಲು ಪಟ್ಟಣದ ಐದು ದೇವಾಲಯಗಳಲ್ಲಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಲು ಸಿದ್ಧತೆಗಳಾಗುತ್ತಿವೆ. ಐದು ವಿವಿಧ ದೇವಾಲಯಗಳ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಒಂದು ವಾರಗಳ ಕಾಲ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬಳಿಕ ಕಾವೇರಿ ನದಿಯಲ್ಲಿ ಪ್ರತಿಷ್ಠಾಪಿಸಿದ ಮೂರ್ತಿಗಳನ್ನು ವಿಸರ್ಜಿಸಲಾಗುತ್ತಿದೆ. ಸಮೀಪದ ಮೂರ್ನಾಡು, ಹೊದ್ದೂರು, ಪಾಲೂರು ಗ್ರಾಮಗಳಲ್ಲೂ ಗಣೇಶೋತ್ಸವಕ್ಕೆ ಸಿದ್ದತೆಗಳನ್ನು ಭಕ್ತರು ಕೈಗೊಳ್ಳುತ್ತಿದ್ದಾರೆ.

ADVERTISEMENT

ವಿಜೃಂಭಣೆಯ ಉತ್ಸವಕ್ಕೆ ಅಣಿಯಾಗುತ್ತಿರುವ ನಾಪೋಕ್ಲುವಿನಲ್ಲಿ ಭವ್ಯವಾದ ಗಣಪತಿ ದೇವಾಲಯ ಇಲ್ಲ. ಪಟ್ಟಣದ ಶ್ರೀರಾಮ ಮಂದಿರ, ಹಳೆ ತಾಲ್ಲೂಕಿನ ನಾಡು ಭಗವತಿ ದೇವಾಲಯ, ಕಕ್ಕುಂದಕಾಡು ವೆಂಕಟೇಶ್ವರ ದೇವಾಲಯಗಳಲ್ಲಿ ಗಣಪತಿ ವಿಗ್ರಹಗಳನ್ನು ಪ್ರತಿಷ್ಠಾಪಿಸಿ ಉತ್ಸವವನ್ನು ಆಚರಿಸಲಾಗುತ್ತಿದೆ. ಇಲ್ಲಿನ ವಿವೇಕಾನಂದ ನಗರದ ವಿನಾಯಕ ಸೇವಾ ಸಮಿತಿಯೂ ಗಣೇಶೋತ್ಸವವನ್ನು ಹಲವು ವರ್ಷಗಳಿಂದ ವಿಜೃಂಭಣೆಯಿಂದ ಆಚರಿಸುತ್ತಿದೆ. ಶ್ರೀರಾಮ ಮಂದಿರದ ಬಳಿ ಪುಟ್ಟದಾದ ಗಣಪತಿ ಗುಡಿಯೊಂದಿದ್ದು ಪಟ್ಟಣದ ಎತ್ತರದ ಸ್ಥಳದಲ್ಲಿರುವ ಈ ಗುಡಿ ನಾಲ್ಕುನಾಡಿನ ಏಕೈಕ ಗಣಪತಿ ದೇವಾಲಯವಾಗಿದೆ.

ನಾಪೋಕ್ಲುವಿನಲ್ಲಿ ಗಣೇಶ ಉತ್ಸವ ಪ್ರಾರಂಭವಾದದ್ದು 43 ವರ್ಷಗಳ ಹಿಂದೆ. ಆಗ ದೇವಾಲಯಗಳಿದ್ದರೂ ಗಣೇಶೋತ್ಸವದ ಆಚರಣೆ ರೂಢಿಗೆ ಬಂದಿರಲಿಲ್ಲ. 1980ರಲ್ಲಿ ಊರಿನ ಭಕ್ತರು ಸೇರಿಕೊಂಡು ಗಣೇಶೋತ್ಸವ ಆರಂಭಿಸಿದರು. ಅಲ್ಲಿಂದ ಕೆಲವು ವರ್ಷಗಳ ಒಂದೇ ಗಣೇಶ ಮೂರ್ತಿಯ ಮೆರವಣಿಗೆ ನಡೆಯುತ್ತಿತ್ತು. ನಂತರದ ವರ್ಷಗಳಲ್ಲಿ ನಾಲ್ಕು ಮಂಟಪಗಳು ಸೇರ್ಪಡೆಗೊಂಡು ಐದು ಮಂಟಪಗಳ ಶೋಭಾಯಾತ್ರೆ ಜನಮನ ಸೆಳೆಯುತ್ತಿದೆ.

1981ರಲ್ಲಿ ಶ್ರೀರಾಮ ಟ್ರಸ್ಟ್ ಆಶ್ರಯದಲ್ಲಿ ಗಣಪತಿ ಗುಡಿ ಸ್ಥಾಪಿಸಲಾಯಿತು. ಶ್ರೀರಾಮ ಮಂದಿರದ ಬಳಿ ಇರುವ ಗಣಪತಿ ಗುಡಿಯಲ್ಲಿ ಪ್ರತಿದಿನ ಪೂಜೆ ಸಲ್ಲಿಸಲಾಗುತ್ತಿದೆ. ಉಳಿದಂತೆ, ನಾಡು ಭಗವತಿ ದೇವಾಲಯ, ಪೊನ್ನುಮುತ್ತಪ್ಪ ದೇವಾಲಯ, ಕಕ್ಕುಂದ ಕಾಡು ವೆಂಕಟೇಶ್ವರ ದೇವಾಲಯಗಳಲ್ಲಿ ಗಣೇಶ ಮೂರ್ತಿಯನ್ನು ಹಬ್ಬದ ಸಂದರ್ಭದಲ್ಲಿ ತಾತ್ಕಾಲಿಕವಾಗಿ ಪ್ರತಿಷ್ಠಾಪಿಸಿ ಮೆರವಣಿಗೆಯಲ್ಲಿ ವಿಸರ್ಜಿಸಲಾಗುತ್ತದೆ.

ನಾಪೋಕ್ಲು ಪಟ್ಟಣದಲ್ಲಿರುವ ರಾಮ ಮಂದಿರ.

15ನೇ ವರ್ಷದ ಅದ್ದೂರಿ ಗಣೇಶೋತ್ಸವ

ಶ್ರೀ ಪೊನ್ನುಮುತ್ತಪ್ಪ ವಿನಾಯಕ ಸೇವಾ ಸಮಿತಿ ವತಿಯಿಂದ 15ನೇ ವರ್ಷದ ಅದ್ದೂರಿ ಗಣೇಶೋತ್ಸವಕ್ಕೆ ಸಿದ್ದತೆಗಳಾಗುತ್ತಿವೆ. ಸೆಪ್ಟಂಬರ್ 7ರಂದು ಶನಿವಾರ ಗಣಪತಿ ಹೋಮದೊಂದಿಗೆ ಗೌರಿ ಗಣೇಶ ಮೂರ್ತಿಯ ಪ್ರತಿಷ್ಠಾಪನೆ ಮಾಡಲಾಗುವುದು. ಅಂದು ವಾದ್ಯಗೋಷ್ಠಿಯೊಂದಿಗೆ ಗಣೇಶೋತ್ಸವ ಮೂರ್ತಿಯ ಮೆರವಣಿಗೆ ನಡೆಯಲಿದೆ. ದೇವಾಲಯದಲ್ಲಿ ಪ್ರತಿಷ್ಠಾಪನೆ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ನಡೆಯಲಿದೆ. ಸೆಪ್ಟಂಬರ್ 11 ರಂದು ಬುಧವಾರ ಭವ್ಯ ಮಂಟಪದಲ್ಲಿ ಪಟ್ಟಣದಲ್ಲಿ ಮೆರವಣಿಗೆ ನಡೆಸಿ ಪವಿತ್ರ ಕಾವೇರಿ ನದಿಯಲ್ಲಿ ವಿಸರ್ಜಿಸಲಾಗುತ್ತದೆ.

ನಾಪೋಕ್ಲು ಸಮೀಪದ ಹಳೆತಾಲೂಕಿನಲ್ಲಿರುವ ಪೊನ್ನು ಮುತ್ತಪ್ಪ ದೇವಾಲಯದಲ್ಲಿ 15 ನೇ ವರ್ಷದ ಗಣೆಶೋತ್ಸವಕ್ಕೆ ಸಿದ್ದತೆಗಳಾಗುತ್ತಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.