ನಾಪೋಕ್ಲು: ಬಲ್ಲಮಾವಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪೇರೂರು ಗ್ರಾಮದ ಈ ಜಲಪಾತಕ್ಕೆ ಸ್ಥಳೀಯರು ಇಟ್ಟ ಹೆಸರು ಲಾಫಿಂಗ್ ಫಾಲ್ಸ್. ಏಕೆಂದರೆ, ಇದು ಇನ್ನಿತರ ಜಲಪಾತದಂತೆ ಎತ್ತರದಿಂದ ಧುಮ್ಮಿಕ್ಕದೇ ನಗುನಗುತ್ತಲೇ ಹರಿಯುವಂತಿದೆ.
ಮಳೆಗಾಲದಲ್ಲಿ ಈ ಜಲಪಾತದ ಸೌಂದರ್ಯವನ್ನು ಖುಷಿಯಿಂದ ಆಸ್ವಾದಿಸಬಹುದು. ಬೆಟ್ಟ ಶ್ರೇಣಿಗಳಿಂದ ಇಳಿದು ಬರುವ ಜಲಧಾರೆ ಇಲ್ಲಿ ಹಸಿರು ಸರಿಯ ನಡುವೆ ಬಂಡೆಗಳ ನಡುವೆ ನರ್ತಿಸುತ್ತಾ ಸಾಗುತ್ತದೆ. ಈ ಜಲಧಾರೆ ಗ್ರಾಮೀಣರಿಗೆ ಅಚ್ಚುಮೆಚ್ಚು.
ಬಲ್ಲಮಾವಟಿ ಗ್ರಾಮದಿಂದ ಪೇರೂರು ಗ್ರಾಮದತ್ತ ಸಾಗುವಾಗ ರಸ್ತೆಯಂಚಿಗೆ ಲಾಫಿಂಗ್ ಫಾಲ್ಸ್ ಕಾಣ ಸಿಗುತ್ತದೆ. ಇಲ್ಲಿ ಹರಿಯುವ ನೀರಿಗೆ ಅಡ್ಡಲಾಗಿ ಸೇತುವೆ ನಿರ್ಮಿಸಲಾಗಿದೆ. ಸೇತುವೆಯ ಬಳಿ ನಿಂತು ಜಲಪಾತದ ಅಂದ ಚಂದವನ್ನು ಸವಿಯಬಹುದು.
ಸೌಂದರ್ಯ ರಾಶಿಯನ್ನೇ ಮೈತುಂಬಿಕೊಂಡ ಈ ಜಲಪಾತ ಸೇತುವೆಯಲ್ಲಿ ನಿಂತು ನೋಡಲು ಆಕರ್ಷಕವಾಗಿದೆ. ಇಲ್ಲಿ ಹರಿವ ನೀರಿನ ಬದಿಯಲ್ಲಿ ಸಾಗಿ ಜಲಪಾತದ ಬುಡ ತಲುಪಬಹುದು. ಉದ್ದಕ್ಕೂ ಹಾಸಿದಂತಿರುವ ಬಂಡೆಕಲ್ಲುಗಳಲ್ಲಿ ಮೆಲ್ಲನೆ ಹೆಜ್ಜೆ ಇಡುತ್ತಾ ಸಾಗಿದರೆ ಜಲಪಾತದ ತಳ ತಲುಪಬಹುದು. ಈ ಜಲಪಾತ ಹೆಚ್ಚು ಎತ್ತರದಿಂದ ಧುಮುಕುವುದಿಲ್ಲ. ಆದರೆ, ಕಪ್ಪು ಬಂಡೆಗಳ ಮೇಲೆ ಇಳಿದು ಹಾಲಿನ ಹೊಳೆಯಂತೆ ಸಾಗುವ ಇದರ ಹರಿವು ಮಾತ್ರ ಮನಸ್ಸಿಗೆ ಹಿತ ನೀಡುತ್ತದೆ.
ಹೊರ ಜಿಲ್ಲೆಯ ಮತ್ತು ಇತರ ಭಾಗದ ಪ್ರವಾಸಿಗರಿಗೆ ‘ಲಾಫಿಂಗ್ ಫಾಲ್ಸ್’ ಅಷ್ಟೊಂದು ಪರಿಚಿತವಲ್ಲ. ಆದರೆ, ಈ ಭಾಗದ ಜನರು ಮಾತ್ರ ಮಳೆಗಾಲದಲ್ಲಿ ಜಲಪಾತವನ್ನು ವೀಕ್ಷಿಸಲು ತುದಿಗಾಲಿನಲ್ಲಿ ನಿಲ್ಲುತ್ತಾರೆ. ಬಲ್ಲಮಾವಟಿ, ಪೇರೂರು ಗ್ರಾಮದ ಮಂದಿ ತಮ್ಮಲ್ಲಿಗೆ ಬರುವ ಅತಿಥಿಗಳನ್ನು ‘ಲಾಫಿಂಗ್ ಫಾಲ್ಸ್’ ತೋರಿಸಲು ಕರೆದೊಯ್ಯುತ್ತಾರೆ.
ಬಲ್ಲಮಾವಟಿ ಗ್ರಾಮದಿಂದ ಸುಮಾರು 4 ಕಿಲೋಮೀಟರ್ ಎತ್ತರಕ್ಕೆ ಸ್ವಂತ ವಾಹನದಲ್ಲಿ ಪ್ರಯಾಣಿಸಬೇಕು. ರಸ್ತೆ ಸೌಕರ್ಯವಿದೆ. ಆದರೆ, ರಸ್ತೆಗಳು ಉತ್ತಮವಾಗಿಲ್ಲ. ಡಾಂಬರು ಕಿತ್ತು ಹೋದ ರಸ್ತೆಗಳಲ್ಲಿಯೇ ಸಾಗಬೇಕು. ಅಲ್ಲೇ ಎತ್ತರದಲ್ಲಿ ನಿಸರ್ಗ ಸಿರಿಯ ನಡುವೆ ಬಂಡೆಗಳ ಮೇಲೆ ಜುಳು ಜುಳು ನಿಧಾನದೊಂದಿಗೆ ಹರಿಯುವ ‘ಲಾಫಿಂಗ್ ಫಾಲ್ಸ್’ ವೀಕ್ಷಣೆಗೆ ಖುಷಿ ಕೊಡುತ್ತದೆ. ಜಲಪಾತದ ತಟದವರೆಗೂ ಹೋಗಿ ಜಲಧಾರೆಯ ಸೊಬಗು ಆಸ್ವಾದಿಸಲು ಸಾಧ್ಯವಿದೆ.
ಜಲಪಾತದ ವೀಕ್ಷಣೆಯ ಭರದಲ್ಲಿ ಎಚ್ಚರಿಕೆಯ ಹೆಜ್ಜೆ ಇಡುವ ಅಗತ್ಯವಿದೆ. ಬಲ್ಲಮಾವಟಿ ಗ್ರಾಮ ಪಂಚಾಯಿತಿ ವತಿಯಿಂದ ಸೇತುವೆಯ ಪಕ್ಕದಲ್ಲಿ ಎಚ್ಚರಿಕೆಯ ಫಲಕಗಳನ್ನು ಹಾಕಲಾಗಿದೆ. ಮಳೆಗಾಲದಲ್ಲಿ ಸೌಂದರ್ಯದ ಗಣಿಯಾಗುವ ‘ಲಾಫಿಂಗ್ ಫಾಲ್ಸ್’ ನಂತರದ ದಿನಗಳಲ್ಲಿ ನಿಸ್ತೇಜವಾಗುತ್ತದೆ. ಆದರೆ, ಬೇಸಿಗೆಯಲ್ಲೂ ಬಂಡೆಗಲ್ಲುಗಳ ಮೇಲೆ ನೀರು ಹರಿಯುವುದು ನಿಲ್ಲುವುದಿಲ್ಲ. ಕ್ಷೀಣವಾಗಿ ಹರಿಯುವ ಜಲಧಾರೆ ಮತ್ತೆ ಮುಂದಿನ ಮಳೆಗಾಲದಲ್ಲಿ ಮೈತುಂಬಿಕೊಳ್ಳುತ್ತದೆ.
ಬಲ್ಲಮಾವಟಿಯಿಂದ 4 ಕಿ.ಮೀ ಎತ್ತರದಲ್ಲಿದೆ ಈ ಜಲಪಾತ ತಲುಪುವ ರಸ್ತೆ ಗುಂಡಿಗಳಿಂದ ಕೂಡಿದೆ ಜಲಪಾತ ವೀಕ್ಷಿಸಲು ಇಡಬೇಕಿದೆ ಎಚ್ಚರಿಕೆಯ ಹೆಜ್ಜೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.