ನಾಪೋಕ್ಲು: ಸ್ಥಳಿಯ ಗ್ರಾಮದ ಕೂರುಳಿ ಸಮೀಪ ವಾಸವಾಗಿರುವ ಕೂಲಿ ಕಾರ್ಮಿಕ ಭೀಮಯ್ಯ ಎಂಬವರ ಮನೆಯ ಮೇಲೆ ಭಾರಿ ಗಾತ್ರದ ಮರ ಬಿದ್ದು ಹಾನಿ ಸಂಭವಿಸಿದೆ. ಗಾಳಿ ಮಳೆಗೆ ಗುರುವಾರ ನಸುಕಿನಲ್ಲಿ ಮನೆಯ ಸಮೀಪವಿರುವ ಕೊಂಬಂಡ ಗೀತಾ ಎಂಬವರ ಕಾಫಿ ತೋಟದಲ್ಲಿದ್ದ ಭಾರಿ ಗಾತ್ರದ ಮರ ಸೇರಿ ಮೂರು ಮರಗಳು ಬಿದ್ದು ಭೀಮಯ್ಯ ಅವರ ವಾಸದ ಮನೆ ಒಂದು ಭಾಗ, ಬಚ್ಚಲು ಮನೆ ಮತ್ತು ಕೋಳಿಗೂಡಿಗೆ ಹಾನಿಯಾಗಿದೆ. ಈ ಸಂದರ್ಭ ಭೀಮಯ್ಯ ಮತ್ತು ಪತ್ನಿ ಮಕ್ಕಳು ಮನೆಯೊಳಗಿದ್ದು ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪಾರಾಗಿದ್ದಾರೆ.
ಗಾಳಿ-ಮಳೆಯಿಂದ ಎಡಪಾಲ ಗ್ರಾಮದಲ್ಲೂ ಹಾನಿ ಸಂಭವಿಸಿದೆ. ಗ್ರಾಮದ ಜುನೈದ್ ಅವರ ಮನೆಯ ಗೋಡೆಗಳು ಮಳೆಯಿಂದಾಗಿ ಕುಸಿದಿವೆ.
ಗ್ರಾಮ ಪಂಚಾಯಿತಿ ಸದಸ್ಯರಾದ ಪ್ರತೀಪ ಬಿ.ಎಂ, ಶಿವಚಾಳಿಯಂಡ ಜಗದೀಶ್, ಗ್ರಾಮಸ್ಥರಾದ ಪಾಡಿಯಮ್ಮoಡ ಮನು ಮಹೇಶ್ , ಕಂಗಂಡ ಜಾಲಿ ಪೂವಪ್ಪ,ಕುಂಬಂಡ ತಿಮ್ಮಯ್ಯ, ಕೊಂಬಂಡ ಧನಂಜಯ, ಪ್ರಕಾಶ್, ದರ್ಶನ್ ಇನ್ನಿತರರು ಮಳೆಯನ್ನು ಲೆಕ್ಕಿಸದೆ ಮನೆಗೆ ಬಿದ್ದ ಮರಗಳ ರೆಂಬೆ ಕೊಂಬೆಗಳನ್ನು ಕತ್ತರಿಸಿ ಸ್ವಚ್ಛಗೊಳಿಸಿದರು. ನಂತರ ಚಾವಣಿಗೆ ಶೀಟ್ ಹೊದಿಕೆ ಅಳವಡಿಸಿ ಮಾನವೀಯತೆ ಮೆರೆದರು. ಉಪತಹಶೀಲ್ದಾರ್ ಸುನಿಲ್ ಕುಮಾರ್, ಕಂದಾಯ ಪರಿವೀಕ್ಷಕ ರವಿಕುಮಾರ್, ಗ್ರಾಮ ಲೆಕ್ಕಿಗೆ ಅಮೃತ ಭೇಟಿ ನೀಡಿ ಪರಿಶೀಲಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.