ನಾಪೋಕ್ಲು: ಎಲ್ಲಿ ಭೂರಮೆ ದೇವ ಸನ್ನಿಧಿ ಬಯಸಿ ಬಿಮ್ಮನೆ ಬಂದಳೋ! ಎಲ್ಲಿ ಮೋಹನ ಗಿರಿಯ ಬೆಡಗಿನ ರೂಪಿನಿಂದಲಿ ನಿಂದಳೋ!...
ಇದು ಪಂಜೆ ಮಂಗೇಶರಾಯರ ಹುತ್ತರಿ ಹಾಡಿನಲ್ಲಿ ಬರುವ ಸಾಲುಗಳು. ನಾಲ್ಕುನಾಡಿನ ಪರ್ವತ ಶ್ರೇಣಿಗಳು ಇದೀಗ ಹಸಿರ ಸೆರಗು ಹೊದ್ದು, ನಳನಳಿಸುವಾಗ ಹುತ್ತರಿ ಹಾಡಿನ ಸಾಲುಗಳು ನೆನಪಿಗೆ ಬರುತ್ತವೆ. ಹುತ್ತರಿ ಹಾಡು ಮೂಲಕ ಕೊಡಗಿನ ಸೃಷ್ಟಿಯ ಬಗ್ಗೆ ಕವಿ ಪಂಜೆ ಮಂಗೇಶರಾಯರು ಹಾಡಿದ್ದು ಇಲ್ಲಿನ ಪ್ರಕೃತಿ ಸೌಂದರ್ಯಕ್ಕೆ ಹಿಡಿದ ಕೈಗನ್ನಡಿ. ದೃಷ್ಟಿ ಹಾಯಿಸಿದುದ್ದಕ್ಕೂ ಹಸಿರಿನ ಪ್ರಕೃತಿ, ಎಲ್ಲಿ ನೋಡಿದರಲ್ಲಿ ಬೆಟ್ಟ ಗುಡ್ಡಗಳು, ಇವುಗಳ ಇಳಿಜಾರಿನಲ್ಲಿ ಫಲವತ್ತಾದ ಕಾಫಿ ತೋಟಗಳ ವೈಭವ. ಬತ್ತ ಏಲಕ್ಕಿ, ಕಿತ್ತಳೆಗಳ ಸಂಗಮ. ತಂಪಾದ ಹವಾಮಾನ ಮಂಜಿನ ಮುಸುಕಾಟ, ಹುತ್ತರಿಯ ತೆನೆದಾಟ, ಮಾತೆ ಕಾವೇರಿಯ ಉಗಮದ ಸ್ಥಳ. ಇವೆಲ್ಲವೂ ಜಿಲ್ಲೆಯ ವಿಶೇಷಣಗಳು.
ಮೊನ್ನೆ, ಮೊನ್ನೆಯವರೆಗೆ ಬಿಸಿಲ ಬೇಗೆಯಿಂದ ತತ್ತರಿಸಿ ಚಾರಣದಿಂದ ದೂರ ಉಳಿದಿದ್ದ ಚಾರಣಾಸಕ್ತರನ್ನು ಇದೀಗ ಬೆಟ್ಟ-ಗುಡ್ಡಗಳು ಕೈಬೀಸಿ ಕರೆಯುತ್ತಿವೆ. 10-15 ದಿನಗಳಿಂದ ಸುರಿಯುತ್ತಿರುವ ಮಳೆ ಇಳೆಗೆ ಹೊಸಕಳೆ ತಂದಿದೆ. ಮುಂಗಾರು ಪೂರ್ವ ಮಳೆಯ ಆಗಮನದಿಂದಾಗಿ ಬಿಸಿಲ ಬೇಗೆಯಿಂದ ತತ್ತರಿಸಿ ಚಾರಣದಿಂದ ದೂರ ಉಳಿದ ಮಂದಿಗೆ ಈಗ ಚಾರಣ ಖುಷಿ ಕೊಡುತ್ತಿದೆ.
ಮೋಡಗಳ ಚೆಲ್ಲಾಟ, ತಂಪು ಹವೆ, ಹಸಿರಿನಿಂದ ಕಂಗೊಳಿಸುವ ಬೆಟ್ಟ ಈಗ ಸಂತಸದ ಚಿಲುಮೆ ಉಕ್ಕಿಸುತ್ತವೆ. ಮಳೆ ಬಿರುಸುಗೊಳ್ಳುವ ಮುನ್ನ ಚಾರಣದ ಖುಷಿ ಅನುಭವಿಸಬಹುದು. 5 ತಾಲ್ಲೂಕುಗಳ, ಗಿರಿಕಂದರಗಳ ಈ ಜಿಲ್ಲೆಯಲ್ಲಿ ಚಾರಣಕ್ಕೆ, ಸೌಂದರ್ಯೋಪಾಸನೆಗೆ ಹತ್ತು ಹಲವು ತಾಣಗಳಿವೆ. ಸೂಕ್ತ ತಯಾರಿಯೊಂದಿಗೆ, ಮಾರ್ಗದರ್ಶಕರ ನೆರವಿನೊಂದಿಗೆ ಈ ತಾಣಗಳಿಗೆ ಭೇಟಿ ನೀಡಿ ಚೆಲುವನ್ನು ಆಸ್ವಾದಿಸಬಹುದು.
ಕೊಡಗು ಜಿಲ್ಲೆಯಲ್ಲಿ ಚಾರಣಕ್ಕೆ ತೆರಳುವ ಮಂದಿಗೆ ಸವಾಲು ನೀಡುವ ಮೇಲಿನ ಗಿರಿಶಿಖರಗಳ ಜೊತೆಯಲ್ಲಿ ತಲಕಾವೇರಿ ಬಳಿಯ ಬ್ರಹ್ಮಗಿರಿ, ಭಾಗಮಂಡಲ ಬಳಿಯ ತಾವೂರು ಬೆಟ್ಟ, ಕೋಪಟ್ಟಿ ಬೆಟ್ಟ, ಇರ್ಪು ಬಳಿಯ ಬ್ರಹ್ಮಗಿರಿ ಶಿಖರ, ದಕ್ಷಿಣ ಕನ್ನಡ ಜಿಲ್ಲೆಯ ಗಡಿಗೆ ಹೊಂದಿಕೊಂಡಂತಿರುವ ಕೋಳಿಕ್ಕಮಲೆ, ಚೇಲಾವರ ಬಳಿಯ ಕಬ್ಬೆ ಬೆಟ್ಟ, ಮಡಿಕೇರಿ-ಗಾಳಿಬೀಡು ಬಳಿಯ ನಿಶಾನೆಮೊಟ್ಟೆ, ಕಕ್ಕಬ್ಬೆ ಬಳಿಯ ಇಗ್ಗುತ್ತಪ್ಪ ಬೆಟ್ಟ ಇವು ಮತ್ತಿತರ ಚಾರಣ ತಾಣಗಳಾಗಿವೆ. ಇಲ್ಲಿ ಕಾಣುವ ನಿಸರ್ಗ ದೃಶ್ಯಗಳು ಮನಮೋಹಕ. ಎಲ್ಲವೂ ಒಂದು ದಿನದಲ್ಲಿ ಕೈಗೊಳ್ಳಬಹುದಾದ ಚಾರಣತಾಣಗಳು. 5-6 ಗಂಟೆಗಳಲ್ಲಿ ಶಿಖರದ ತುದಿ ತಲುಪಿ ಸೌಂದರ್ಯಾಸ್ವಾದನೆ ಮಾಡಬಹುದು.
ನಾಲ್ಕುನಾಡು ವ್ಯಾಪ್ತಿಯಲ್ಲಿ ತಡಿಯಂಡಮೋಳ್ ಶಿಖರ ನಿಸರ್ಗಸೌಂದರ್ಯಕ್ಕೆ, ಚಾರಣದ ಸವಾಲುಗಳಿಗೆ ಪ್ರಸಿದ್ದವಾದುದು. ಬೋಳು ಬೆಟ್ಟಗಳ ಏರುಹಾದಿಯಲ್ಲಿ ಸಾಗಿ ಶಿಖರವನ್ನೇರಿ ನಿಂತು ನೋಡಿದಾಗ ಅದ್ಭುತ ಪ್ರಕೃತಿ ಸೌಂದರ್ಯ ಚಾರಣಿಗರ ಆಯಾಸವನ್ನು ಮರೆಸುತ್ತದೆ. ದೂರದ ಸಮುದ್ರತೀರ, ಸುತ್ತಲಿನ ಮನಮೋಹಕ ನಿಸರ್ಗಸೌಂದರ್ಯ, ದೃಷ್ಟಿಗೆ ನಿಲುಕದಷ್ಟು ಆಳ, ಅಗಲವಾದ ಹಸಿರು ಪರ್ವತ ಶ್ರೇಣಿಗಳು, ಎತ್ತರ ತಗ್ಗಿನ ರುದ್ರರಮಣೀಯ ದೃಶ್ಯಗಳು ಮನಸೆಳೆಯುತ್ತವೆ. ಇನ್ನು ಚೇಲಾವರದ ಕಬ್ಬೆಬೆಟ್ಟವೂ ಮಳೆ ಸುರಿದು ತಂಪಾದ ಈ ದಿನಗಳಲ್ಲಿ ಮನಮೋಹಕವಾಗಿ ಕಂಗೊಳಿಸುತ್ತಿದೆ. ಈ ಬೆಟ್ಟದಿಂದ ಕಾಣಸಿಗುವ ನಿಸರ್ಗ ರಮ್ಯ ದೈಶ್ಯಗಳು ಚೇತೋಹಾರಿ. ಮಂಜು-ಮೋಡಗಳ ತೂಗುಯ್ಯಾಲೆ ಇಲ್ಲಿ ಕಣ್ಮನ ತಣಿಸುತ್ತವೆ.
ಬಿಸಿಲಿನಿಂದ ಒಣಗಿ ಬರಡಾಗಿದ್ದ ಬೆಟ್ಟದ ಹಾದಿಯಲ್ಲಿ ಮಳೆಯಿಂದಾಗಿ ಹಸಿರು ನಳನಳಿಸುತ್ತಿವೆ. ತಂಪಾದ ವಾತಾವರಣದಲ್ಲಿ ಚಾರಣಾಸಕ್ತರಿಗೆ ಇದೀಗ ಬೆಟ್ಟವೇರಲು ಸುಸಂದರ್ಭ. ಮಳೆಗಾಲ ಹೆಜ್ಜೆಯೂರುವ ಮುನ್ನ ಚಾರಣದ ಖುಷಿ ಅನುಭವಿಸಲು ಇದು ಸಕಾಲ. ಈಗ ಬಿಟ್ಟರೆ ಚಾರಣಕ್ಕೆ ಮಳೆಗಾಲ ವಿರಾಮದ ದಿನಗಳು.
ಕೊಡಗಿನ ಬೆಟ್ಟಗಳಲ್ಲಿ ಅತ್ಯಂತ ಎತ್ತರದ ಬೆಟ್ಟವಾಗಿ ತಡಿಯಂಡಮೋಳ್ 1717ಮೀನಷ್ಟು ಇದ್ದರೆ 2ನೇ ಸ್ಥಾನ 1714ಮೀ. ಎತ್ತರವಿರುವ ಪುಷ್ಪಗಿರಿಗೆ ಸಲ್ಲುತ್ತದೆ. 1639ಮೀ. ಎತ್ತರವಿರುವ ಕೋಟೆ ಬೆಟ್ಟ ಕೊಡಗಿನ ಎತ್ತರದ ಪರ್ವತಗಳಲ್ಲಿ ತೃತೀಯ ಸ್ಥಾನ ಹೊಂದಿದೆ.
ಕೊಡಗು ಜಿಲ್ಲೆಯಲ್ಲಿ ಚಾರಣಕ್ಕೆ ತೆರಳುವ ಮಂದಿಗೆ ಸವಾಲು ನೀಡುವ ಮೇಲಿನ ಗಿರಿಶಿಖರಗಳ ಜೊತೆಯಲ್ಲಿ ತಲಕಾವೇರಿ ಬಳಿಯ ಬ್ರಹ್ಮಗಿರಿ ಭಾಗಮಂಡಲ ಬಳಿಯ ತಾವೂರು ಬೆಟ್ಟ ಕೋಪಟ್ಟಿ ಬೆಟ್ಟ ಇರ್ಪು ಬಳಿಯ ಬ್ರಹ್ಮಗಿರಿ ಶಿಖರ ದಕ್ಷಿಣ ಕನ್ನಡ ಜಿಲ್ಲೆಯ ಗಡಿಗೆ ಹೊಂದಿಕೊಂಡಂತಿರುವ ಕೋಳಿಕ್ಕಮಲೆ ಚೇಲಾವರ ಬಳಿಯ ಕಬ್ಬೆಬೆಟ್ಟ ಮಡಿಕೇರಿ-ಗಾಳಿಬೀಡು ಬಳಿಯ ನಿಶಾನೆಮೊಟ್ಟೆ ಕಕ್ಕಬ್ಬೆ ಬಳಿಯ ಇಗ್ಗುತ್ತಪ್ಪ ಬೆಟ್ಟ ಇವು ಮತ್ತಿತರ ಚಾರಣ ತಾಣಗಳಾಗಿವೆ. ಇಲ್ಲಿ ಕಂಡುಬರುವ ನಿಸರ್ಗ ದೃಶ್ಯಗಳು ಮನಮೋಹಕ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.