ADVERTISEMENT

ನಾಪೋಕ್ಲು | ಗಾಳಿ ಮಳೆಗೆ ವಿದ್ಯುತ್ ಸಂಪರ್ಕ ಕಡಿತ: ಕತ್ತಲಲ್ಲಿ ಮುಳುಗಿದ ಗ್ರಾಮಗಳು

ಸಿ.ಎಸ್.ಸುರೇಶ್
Published 27 ಜುಲೈ 2024, 5:16 IST
Last Updated 27 ಜುಲೈ 2024, 5:16 IST
ನಾಪೋಕ್ಲು ಸಮೀಪದ ಮರ೦ದೋಡ ಗ್ರಾಮದ ಕೆರೆತಟ್ಟು, ಬಿದ್ದಂಡತಟ್ಟು ಹಾಗೂ ಯವಕಪಾಡಿಯ ಅಡಿಯರ ಕಾಲೊನಿಗೆ ವಿದ್ಯುತ್ ಪೂರೈಕೆ ಮಾಡಲು ಗ್ರಾಮ ಪಂಚಾಯಿತಿ ಸದಸ್ಯ ಚೋಯಮಾದಂಡ ಹರೀಶ್ ಮೊಣ್ಣಪ್ಪ ನೇತೃತ್ವದಲ್ಲಿ ಗ್ರಾಮಸ್ಥರು ನೆರವು ನೀಡಿದರು
ನಾಪೋಕ್ಲು ಸಮೀಪದ ಮರ೦ದೋಡ ಗ್ರಾಮದ ಕೆರೆತಟ್ಟು, ಬಿದ್ದಂಡತಟ್ಟು ಹಾಗೂ ಯವಕಪಾಡಿಯ ಅಡಿಯರ ಕಾಲೊನಿಗೆ ವಿದ್ಯುತ್ ಪೂರೈಕೆ ಮಾಡಲು ಗ್ರಾಮ ಪಂಚಾಯಿತಿ ಸದಸ್ಯ ಚೋಯಮಾದಂಡ ಹರೀಶ್ ಮೊಣ್ಣಪ್ಪ ನೇತೃತ್ವದಲ್ಲಿ ಗ್ರಾಮಸ್ಥರು ನೆರವು ನೀಡಿದರು   

ನಾಪೋಕ್ಲು: ಹಾಂ ಬಂತು, ಹಾಂ ಹೋಯಿತು... ಮಳೆಗಾಲದಲ್ಲಿ ಇದೇನು ಗ್ರಾಮೀಣ ಜನರ ಆಟ ಎಂದುಕೊಳ್ಳಬೇಡಿ. ಇದು ವಿದ್ಯುತ್ ಕಣ್ಣುಮುಚ್ಚಾಲೆಯಾಟ.

ಮಳೆಗಾಲ ಆರಂಭವಾದಂದಿನಿಂದ ಗ್ರಾಮೀಣ ಪ್ರದೇಶಗಳಲ್ಲಿ ಜನರು ವಿದ್ಯುತ್ ಪೂರೈಕೆಯ ತೀವ್ರ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ನಿರಂತರ ವಿದ್ಯುತ್ ಪೂರೈಕೆ ಎನ್ನುವುದು ಇವರ ಕನಸಿನ ಮಾತಾಗಿದೆ. ಮೂರು- ನಾಲ್ಕು ದಿನಗಳಿಂದ ವ್ಯಾಪಕವಾಗಿ ಸುರಿಯುತ್ತಿರುವ ಗಾಳಿ ಮಳೆಯಿಂದಾಗಿ ನಾಪೋಕ್ಲು, ಕಕ್ಕಬ್ಬೆ ಮತ್ತು ಭಾಗಮಂಡಲ ವ್ಯಾಪ್ತಿಯಲ್ಲಿ ಹಲವೆಡೆ ಮರದ ರೆಂಬೆಗಳು ವಿದ್ಯುತ್ ಕಂಬಗಳ ಮೇಲೆ ಮುರಿದು ಬಿದು ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದರೆ ಮತ್ತೆ ಕೆಲವು ವಿದ್ಯುತ್ ಕಂಬಗಳಲ್ಲಿನ ವಿದ್ಯುತ್ ತಂತಿಗಳಲ್ಲಿ ನೀರು ಹರಿದು ತುಕ್ಕು ಹಿಡಿದು ವಿದ್ಯುತ್ ಪ್ರವಹಿಸುತ್ತಿಲ್ಲ. ಮತ್ತೆ ಕೆಲವೆಡೆ ವಿದ್ಯುತ್ ಪರಿವರ್ತಕಗಳು ಹಾಳಾಗಿವೆ. ಒಟ್ಟಿನಲ್ಲಿ ವಿದ್ಯುತ್ ಸಂಪರ್ಕವಿಲ್ಲದೆ ನಾಪೋಕ್ಲು, ಕಕ್ಕಬ್ಬೆ ಮತ್ತು ಭಾಗಮಂಡಲ ವ್ಯಾಪ್ತಿಯ ಜನರು ಕತ್ತಲಲ್ಲಿ ದಿನ ಕಳೆಯುವಂತಾಗಿದೆ.

ಒಂದು ದಿನದಲ್ಲಿ ಅದೆಷ್ಟು ಬಾರಿ ವಿದ್ಯುತ್ ಕಡಿತವಾಗುತ್ತದೋ ಎಣಿಕೆ ಮಾಡುವಂತಿಲ್ಲ. ಬಹುತೇಕ ದಿನಗಳಲ್ಲಿ ರಾತ್ರಿ ಕಡಿತಗೊಂಡ ವಿದ್ಯುತ್ ಮತ್ತೆ ಪೂರೈಕೆ ಆಗುವುದು ಮರುದಿನ ಸಂಜೆಗೆ. ಹಲವು ಗ್ರಾಮೀಣ ಭಾಗಗಳಲ್ಲಿ ಈ ಪರಿಸ್ಥಿತಿ ಇದೆ.

ADVERTISEMENT

ನಾಪೋಕ್ಲು ವ್ಯಾಪ್ತಿಯ ಎಮ್ಮೆಮಾಡು, ಬಲ್ಲಮಾವಟಿ, ಪುಲಿಕೋಟು, ಪೇರೂರು ಗ್ರಾಮಗಳ ಮಂದಿ ಕಳೆದ 10 ದಿನಗಳಿಂದ ನಿರಂತರ ವಿದ್ಯುತ್ ಪೂರೈಕೆಯ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಭಾಗಮಂಡಲ ಹೋಬಳಿಯಲ್ಲೂ ಇದೇ ಪರಿಸ್ಥಿತಿ ಇದೆ. ಭಾಗಮಂಡಲ ಪಟ್ಟಣ ಸೇರಿದಂತೆ ಚೇರಂಗಾಲ, ಕೋರಂಗಾಲ, ಸಣ್ಣಪುಲಿಕೋಟು ಭಾಗಗಳಲ್ಲಿ ನಿರಂತರವಾಗಿ ವಿದ್ಯುತ್ ಕಡಿತವಾಗುತ್ತಿದೆ.

ವಿದ್ಯುತ್ ಸಂಪರ್ಕ ಕಡಿತಗೊಂಡಾಗ ದುರಸ್ತಿಪಡಿಸಲು ಸೆಸ್ಕ್ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಇದೆ. ಗ್ರಾಮೀಣ ಭಾಗದಲ್ಲಿ ಜನರೇ ಮುರಿದು ಬಿದ್ದ ಮರಗಳ ರೆಂಬೆ ಕಡಿದು ಇಲಾಖೆಗೆ ಸಹಕರಿಸುತ್ತಿದ್ದಾರೆ. ಲೈನ್ ಮೆನ್‌ಗಳು ಬಂದು ದುರಸ್ತಿಪಡಿಸಿ ವಿದ್ಯುತ್ ಸಂಪರ್ಕ ಪೂರೈಕೆ ಮಾಡಿದ ಕೆಲವೇ ಕ್ಷಣದಲ್ಲಿ ವಿದ್ಯುತ್ ಕಡಿತವಾಗುತ್ತಿದೆ. ಲೈನ್‌ಮೆನ್‌ಗಳು ದುರಸ್ತಿಪಡಿಸಿ ಹಿಂತಿರುಗಿದ ಕೆಲವೇ ಕ್ಷಣಗಳಲ್ಲಿ ಬಿರುಸಿನ ಮಳೆ ಗಾಳಿಯಿಂದಾಗಿ ವಿದ್ಯುತ್ ಸಂಪರ್ಕ ಕಡಿತಗೊಂಡು ಮತ್ತೆ ಇಲಾಖೆಗೆ ಹಿಡಿ ಶಾಪ ಹಾಕುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ವಿದ್ಯುತ್ತನ್ನು ಬಳಸಿ ಕೆಲಸ ನಿರ್ವಹಿಸುವ ಗ್ರಾಮೀಣ ಭಾಗದ ಶಾಲೆ, ಗ್ರಾಮ ಪಂಚಾಯಿತಿ, ಬ್ಯಾಂಕ್, ಗ್ರಾಮ- 1 ಕೇಂದ್ರಗಳಲ್ಲಿ ಸರಿಯಾಗಿ ಕಾರ್ಯ ನಿರ್ವಹಿಸುವುದು ಸಾಧ್ಯವಾಗುತ್ತಿಲ್ಲ. ಪ್ರತಿದಿನ ಸಿಬ್ಬಂದಿ ಸಮಸ್ಯೆ ಎದುರಿಸುವಂತೆ ಆಗಿದೆ.

ಸಮೀಪದ ಕಕ್ಕಬ್ಬೆ-ಕುಂಜಿಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮರ೦ದೋಡ ಗ್ರಾಮದ ಕೆರೆತಟ್ಟು, ಬಿದ್ದಂಡತಟ್ಟು ಹಾಗೂ ಯವಕಪಾಡಿಯ ಅಡಿಯರ ಕಾಲೋನಿಗೆ ವಿಪರೀತ ಗಾಳಿ ಮಳೆಯಿಂದಾಗಿ ವಿದ್ಯುತ್ ಸಂಪರ್ಕ ಕಡಿತಗೊಂಡು ಹಲವು ದಿನಗಳಿಂದ ಸಮಸ್ಯೆ ಉಂಟಾಗಿತ್ತು. ಗ್ರಾಮ ಪಂಚಾಯಿತಿ ಸದಸ್ಯ ಚೋಯಮಾದಂಡ ಹರೀಶ್ ಮೊಣ್ಣಪ್ಪ ನೇತೃತ್ವದಲ್ಲಿ ಗ್ರಾಮಸ್ಥರು ಸೆಸ್ಕ್ ಸಿಬ್ಬಂದಿ ಜೊತೆಗೂಡಿ ವಿದ್ಯುತ್ ಸಂಪರ್ಕ ಕಲ್ಪಿಸುವಲ್ಲಿ ಸತತ ಪ್ರಯತ್ನ ಪಟ್ಟು ಗ್ರಾಮದ ಕೆರೆತಟ್ಟು, ಬಿದ್ದಂಡತಟ್ಟು ಹಾಗೂ ಯವಕಪಾಡಿಯ ಅಡಿಯರ ಕಾಲೊನಿಗಳಿಗೆ ವಿದ್ಯುತ್ ಸಂಪರ್ಕ ಪೂರೈಸಲಾಯಿತು.

ನಾಪೋಕ್ಲು ಸಮೀಪದ ಮರ೦ದೋಡ ಗ್ರಾಮದ ಕೆರೆತಟ್ಟು ಬಿದ್ದಂಡತಟ್ಟು ಹಾಗೂ ಯವಕಪಾಡಿಯ ಅಡಿಯರ ಕಾಲೊನಿಗೆ ವಿದ್ಯುತ್ ಪೂರೈಕೆ ಮಾಡಲು ಸೆಸ್ಕ್ ಸಿಬ್ಬಂದಿ ಕತ್ತಲಲ್ಲೂ ಶ್ರಮಿಸಿದರು
ಗಾಳಿ ಮಳೆಯಿಂದಾಗಿ ನಾಪೋಕ್ಲು ಸಮೀಪದ ಚೋನಕೆರೆ ಎಂಬಲ್ಲಿ ಈಚೆಗೆ ಬೃಹತ್ ಗಾತ್ರದ ಮರವೊಂದು ವಿದ್ಯುತ್ ಕಂಬಗಳ ಮೇಲೆ ಬಿದ್ದಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.