ಮಡಿಕೇರಿ: ಕಾಫಿನಾಡಿನಲ್ಲಿ ಕೈಗಾರಿಕೆಗಳ ಸಂಖ್ಯೆ ಬೆರಳೆಣಿಕೆ. ಇದರಿಂದ ಇಲ್ಲಿನ ಯುವಜನರು ಉದ್ಯೋಗಕ್ಕಾಗಿ ಅಕ್ಕಪಕ್ಕದ ಜಿಲ್ಲೆಗಳಿಗೆ ವಲಸೆ ಹೋಗುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಈ ವಲಸೆ ಹೆಚ್ಚುತ್ತಲೇ ಇದೆ. ಬಹಳಷ್ಟು ಹಳ್ಳಿಗಳಲ್ಲಿ ಹಿರಿಯರು ಮಾತ್ರವೇ ಇದ್ದಾರೆ. ಈಗಲಾದರೂ ಕೊಡಗು ಜಿಲ್ಲೆಯ ಅಭಿವೃದ್ಧಿ ದೃಷ್ಟಿಕೋನ ಬದಲಾಗಿ ಪರಿಸರಕ್ಕೆ ಪೂರಕವಾದ ಕೈಗಾರಿಕೆಗಳು, ಉತ್ಪಾದನಾ ಘಟಕಗಳು ಸ್ಥಾಪನೆಯಾಗಲಿ ಎಂದು ಸಾರ್ವಜನಿಕರು ಒತ್ತಾಯಿಸುತ್ತಾರೆ.
ಬೆಟ್ಟಗುಡ್ಡಗಳು ಇರುವ ಕಡೆ, ಅರಣ್ಯದಂಚಿನಲ್ಲಿ ನಿಜಕ್ಕೂ ಕೈಗಾರಿಕೆಗಳ ಸ್ಥಾಪನೆ ಬೇಡ. ಆದರೆ, ಸಮತಟ್ಟು ಪ್ರದೇಶಗಳಲ್ಲಿ, ಅರಣ್ಯದಿಂದ ದೂರ ಉಳಿದಿರುವ ಪ್ರದೇಶಗಳಲ್ಲಿ ಕೈಗಾರಿಕೆಗಳು ಸ್ಥಾಪನೆಯಾಗಬೇಕಿದೆ. ಬಡಾವಣೆಗಳನ್ನು ನಿರ್ಮಿಸುವುದಕ್ಕಿಂತ ಕೈಗಾರಿಕೆಗಳನ್ನು ಪ್ರಸ್ತಾಪಿಸುವುದು ಒಳಿತು ಎಂಬುದು ಬಹುಜನರ ಅಭಿಪ್ರಾಯ.
ಸದ್ಯ ಜಿಲ್ಲೆಯಲ್ಲಿ ಇರುವುದು ಒಂದೇ ಕೈಗಾರಿಕಾ ಪ್ರದೇಶ. ಇರುವುದು ಒಂದೇ ಒಂದು ಬೃಹತ್ ಕೈಗಾರಿಕೆ. 3 ಮಧ್ಯಮ ಗಾತ್ರ ಕೈಗಾರಿಕೆ ಇದೆ. 7,562 ಅತೀ ಸಣ್ಣ ಮತ್ತು ಸಣ್ಣ ಕೈಗಾರಿಕಾ ಘಟಕಗಳು ನೋಂದಣಿಯಾಗಿವೆ. 2 ಕೈಗಾರಿಕಾ ವಸಾಹತು ಪ್ರದೇಶವಿದೆ. ಆದರೆ, ಇವುಗಳಲ್ಲಿ ಎಷ್ಟು ಕಾರ್ಯ ನಿರ್ವಹಿಸುತ್ತಿವೆ, ಎಷ್ಟು ಮುಚ್ಚಿವೆ, ಎಷ್ಟು ಜನರಿಗೆ ಉದ್ಯೋಗ ನೀಡಿವೆ ಎಂಬುದರ ಮಾಹಿತಿ ಇಲ್ಲಿನ ಕೈಗಾರಿಕಾ ಇಲಾಖೆಯಲ್ಲಿ ಇಲ್ಲ. 18 ವರ್ಷಗಳಿಂದಲೂ ಈ ಕುರಿತ ಸಮೀಕ್ಷೆಯೂ ನಡೆದಿಲ್ಲ. ಇದು ಜಿಲ್ಲೆಯ ಕೈಗಾರಿಕೆಗಳ ಚಿತ್ರಣ.
ಕುಶಾಲನಗರದಲ್ಲಿರುವ ಕೈಗಾರಿಕಾ ಪ್ರದೇಶದಲ್ಲಿ 117 ಕೈಗಾರಿಕಾ ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ. ಇಲ್ಲಿ ಕಾಫಿ ಬೀಜ ಸಂಸ್ಕರಣಾ ಘಟಕ, ಕಾಫಿ ತಯಾರಿಕಾ ಘಟಕ, ಹಿಟ್ಟಿನ ಗಿರಣಿ, ಜನರಲ್ ಎಂಜಿನಿಯರಿಂಗ್, ಮರ ಕೆತ್ತನೆ ಕೆಲಸ, ಟೈಲರಿಂಗ್, ಗಾರ್ಮೆಂಟ್ಸ್, ಆಟೊ ಮೊಬೈಲ್ ಸರ್ವಿಸ್ ಸ್ಟೇಷನ್ಸ್, ಬೇಕರಿ ಉತ್ಪನ್ನಗಳ ತಯಾರಿಕಾ ಘಟಕ ಮತ್ತಿತರ ಉದ್ದಿಮೆಗಳು ಸ್ಥಾಪನೆಯಾಗಿವೆ.
ಕೈಗಾರಿಕೆಗಳ ಸ್ಥಾಪನೆಗೆ ಇದೊಂದು ಪರಿಸರ ಸೂಕ್ಷ್ಮ ಜಿಲ್ಲೆ ಎಂಬ ಕಾರಣವನ್ನೇ ಅಧಿಕಾರಿಗಳು ಮುಂದಿಡುತ್ತಾರೆ. ಆದರೆ, ಬೆಟ್ಟಗುಡ್ಡಗಳನ್ನು ಅಗೆದು ನಿವೇಶನಗಳನ್ನಾಗಿ ಪರಿವರ್ತಿಸಲು, ರೆಸಾರ್ಟ್‌ಗಳನ್ನು ತೆರೆಯಲು, ಹೋಂಸ್ಟೇಗಳನ್ನು ಸ್ಥಾಪಿಸಲು ಇಲ್ಲದ ಪರಿಸರ ಕಾಳಜಿ ಕೇವಲ ಕೈಗಾರಿಕೆಗಳ ಸ್ಥಾಪನೆಗೆ ಏಕೆ ಎಂಬ ಪ್ರಶ್ನೆಯನ್ನೂ ಬಹುತೇಕರು ಕೇಳುತ್ತಿದ್ದಾರೆ.
ಕೈಗಾರಿಕೆಗಳ ಸ್ಥಾಪನೆಗೆ ಬೆಟ್ಟ, ಗುಡ್ಡಗಳನ್ನು ಅಗೆಯುವುದು ಬೇಡ, ಅರಣ್ಯದಂಚಿನಲ್ಲೂ ಯಾವುದೇ ಘಟಕಗಳೂ ಬೇಡ. ಆದರೆ ಕುಶಾಲನಗರ, ಶನಿವಾರಸಂತೆ, ಕೊಡ್ಲಿಪೇಟೆ ಭಾಗಗಳಲ್ಲಿ ನಿಜಕ್ಕೂ ಕೈಗಾರಿಕೆಗಳ ಸ್ಥಾಪನೆಯಿಂದ ಯಾವುದೇ ಕಾಡಾಗಲಿ, ಪರಿಸರವಾಗಲಿ ನಾಶವಾಗುವುದಿಲ್ಲ. ಇಲ್ಲಿನ ಭೂಮಿ ಶರವೇಗದಲ್ಲಿ ನಿವೇಶನಗಳಾಗಿ ಬದಲಾಗಿ, ರಿಯಲ್ ಎಸ್ಟೇಟ್ ಉದ್ಯಮ ದಾಂಗುಡಿ ಇಡುತ್ತಿದೆ. ಇದಕ್ಕೆ ಬದಲಾಗಿ ಇವುಗಳು ಕೈಗಾರಿಕಾ ವಸಾಹತುಗಳಾದರೆ, ಒಂದಷ್ಟು ಜನರಿಗೆ ಉದ್ಯೋಗವಾದರೂ ಲಭಿಸುತ್ತದೆ ಎಂಬುದು ಕೈಗಾರಿಕೋದ್ಯಮಿಗಳ ಮಾತು.
ಸದ್ಯ, ಮೈಸೂರು– ಕುಶಾಲನಗರ ಹೆದ್ದಾರಿ ವಿಸ್ತರಣೆ ಹಾಗೂ ಹೊಸ ರೈಲು ಮಾರ್ಗದ ನಂತರ ಕೈಗಾರಿಕಾ ಚಟುವಟಿಕೆಗಳು ಇಲ್ಲಿ ಗರಿಗೆದರುವ ನಿರೀಕ್ಷೆ ಇದೆ.
ಶನಿವಾರಸಂತೆ: ಇಲ್ಲಿನ ಪ್ರದೇಶದಲ್ಲಿ ಯಾವ ಕೈಗಾರಿಕೆಗಳೂ ಇಲ್ಲದಿರುವುದರಿಂದ ಜನರು ಶನಿವಾರಸಂತೆ ಮತ್ತು ಕೊಡ್ಲಿಪೇಟೆ ಹೋಬಳಿ ಬಯಲುಸೀಮೆ ಪ್ರದೇಶಕ್ಕೆ ಹೊಂದಿಕೊಂಡಿರುವ ಹಾಸನ ಜಿಲ್ಲೆಯ ಕೈಗಾರಿಕೆಗಳಿಗೆ ಕೆಲಸಕ್ಕೆ ಹೋಗುವುದು ಅನಿವಾರ್ಯವಾಗಿದೆ.
ಹಾಸನದ ಗಾರ್ಮೆಂಟ್ಸ್ ಕೆಲಸಕ್ಕೆ ಶನಿವಾರಸಂತೆಯ ಜನರು ನಿತ್ಯ ಮಿನಿ ಬಸ್ ವ್ಯವಸ್ಥೆ ತಾವೇ ಮಾಡಿಕೊಂಡು ಮುಂಜಾನೆ 6 ಗಂಟೆಗೆ ಹೊರಟು ರಾತ್ರಿ 8 ಗಂಟೆಗೆ ಮರಳುತ್ತಿದ್ದಾರೆ. ಕಾಫಿ ಬೆಳೆಯುವ ಹೆಚ್ಚು ಪ್ರದೇಶವಿದ್ದರೂ ಇಲ್ಲಿ ಯಾವ ಉದ್ಯಮಿಗಳೂ ಕಾಫಿ ಕ್ಯೂರಿಂಗ್ ವರ್ಕ್ ಆರಂಭಿಸಲು ಮುಂದಾಗುತ್ತಿಲ್ಲ. ಆಹಾರ ಪದಾರ್ಥ ತಯಾರಿಸುವ ಕೈಗಾರಿಕೆ ಅವಶ್ಯಕತೆ ಇದೆ. ಇಲ್ಲಿನ ರೈತರು ಹಸಿ ಮೆಣಸಿನಕಾಯಿ, ಶುಂಠಿ, ತರಕಾರಿ ಬೆಳೆ, ಜೇನು ಕೃಷಿ, ಹುಳಿ ಪದಾರ್ಥ, ಕಿತ್ತಳೆ ಹಣ್ಣು ಹೀಗೆ ಹೆಚ್ಚು ಕೃಷಿ ಮಾಡುತ್ತಾರೆ.
ಇಲ್ಲಿನ ಮಾರುಕಟ್ಟೆಯಲ್ಲಿ ಮಾರಾಟವಾಗಿ ಬೆಂಗಳೂರು ಮತ್ತು ಮೈಸೂರಿನ ಕೈಗಾರಿಕೆಗಳಿಗೆ ಸಾಗಿಸಲಾಗುತ್ತಿದೆ. ಈ ಪದಾರ್ಥಗಳಿಗೆ ಸಂಬಂಧಿಸಿದ ತಂಪು ಪಾನೀಯ, ಉಪ್ಪಿನಕಾಯಿ, ಖಾರದ ಪುಡಿ, ಶುಂಠಿ ಪದಾರ್ಥ ಕೈಗಾರಿಕೆ ಸ್ಥಾಪನೆ ಮಾಡಿದರೆ ಸ್ಥಳೀಯ ಜನರಿಗೆ ಉದ್ಯೋಗ ಸೃಷ್ಟಿಯಾಗುತ್ತದೆ.
ಕೈಗಾರಿಕೆ ಪ್ರದೇಶ ನಿರ್ಮಾಣ ಮಾಡಲು ಸರ್ಕಾರ ಶನಿವಾರಸಂತೆ ಮತ್ತು ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯ ಪೈಸಾರಿ ಜಾಗ ಗುರುತು ಮಾಡಬೇಕಿದೆ. ತಂತ್ರಜ್ಞಾನ ಆಧಾರಿತ ಕೈಗಾರಿಕೆಗಳು ಸ್ಥಾಪನೆಯದರೆ ವಿದ್ಯಾಭ್ಯಾಸ ಮಾಡಿದ ಮಕ್ಕಳಿಗೆ ಮನೆ ಹತ್ತಿರ ಉದ್ಯೋಗ ಸಿಗುತ್ತದೆ. ತಮ್ಮ ಕುಟುಂಬದ ಜೊತೆ ಜೀವನ ನಡೆಸಲು ಅನುಕೂಲವಾಗುತ್ತದೆ. ತಮ್ಮ ಮನೆಗಳಲ್ಲಿ ಇರುವ ತೋಟ, ಗದ್ದೆಗಳನ್ನು ನೋಡಿಕೊಳ್ಳಲು ಸಹಕಾರಿಯಾಗುತ್ತದೆ.
ಮೂಲ ಸೌಕರ್ಯಗಳಿಂದ ವಂಚಿತಗೊಂಡ ಬಡಾವಣೆ
ಕುಶಾಲನಗರ: ತಾಲ್ಲೂಕಿನ ಕೂಡ್ಲೂರು ಗ್ರಾಮದಲ್ಲಿ ಕೆಐಎಡಿಬಿಯಿಂದ ಕಳೆದ 4 ದಶಕಗಳ ಹಿಂದೆ ನಿರ್ಮಾಣಗೊಂಡ ಜಿಲ್ಲೆಯ ಪ್ರಥಮ ಹಾಗೂ ಏಕೈಕ ಕೈಗಾರಿಕಾ ಬಡಾವಣೆ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದೆ. ಈ ಬಡಾವಣೆ ಮೂಲ ಸೌಕರ್ಯಗಳಿಂದ ವಂಚಿತಗೊಂಡಿದ್ದು, ಕಾಯಕಲ್ಪದ ನಿರೀಕ್ಷೆಯಲ್ಲಿದೆ.
ಮಾಜಿ ಮುಖ್ಯಮಂತ್ರಿ ದಿ.ಆರ್.ಗುಂಡೂರಾವ್ ಅವರ ವಿಶೇಷ ಪ್ರಯತ್ನದಿಂದ 1984ರಲ್ಲಿ ಕೂಡ್ಲೂರಿನ ವಿಶಾಲ ಪ್ರದೇಶದಲ್ಲಿ ಕೈಗಾರಿಕಾ ಪ್ರದೇಶ ರೂಪುಗೊಂಡಿತು. ಕೊಡಗಿನ ಪ್ರಮುಖ ವಾಣಿಜ್ಯ ಬೆಳೆಯಾಗಿರುವ ಕಾಫಿ, ಕರಿಮೆಣಸಿಗೆ ಪೂರಕವಾದ ಕೈಗಾರಿಕೆಗಳು ಸೇರಿದಂತೆ ಇನ್ನಿತರ ಕೈಗಾರಿಕೆಗಳು ಇಲ್ಲಿ ಸ್ಥಾಪನೆಯಾಗಿವೆ. ಕೈಗಾರಿಕಾ ಬಡಾವಣೆಯಲ್ಲಿ 60ಕ್ಕೂ ಹೆಚ್ಚಿನ ಕೈಗಾರಿಕೆಗಳು ಕಾರ್ಯ ನಿರ್ವಹಿಸುತ್ತಿವೆ. ಈ ಪೈಕಿ ಶೇ 40ರಷ್ಟು ಕೈಗಾರಿಕೆಗಳು ಕಾಫಿ ಉದ್ಯಮಕ್ಕೆ ಸಂಬಂಧಿಸಿದವು. ಸಾಗಣೆ ಮತ್ತು ರಫ್ತು ಅಸಾಧ್ಯವಾಗಿರುವುದರಿಂದ ಉದ್ಯಮ ನಡೆಸುವುದೇ ಕಷ್ಟ ಎನ್ನುವ ವಾತಾವರಣ ನಿರ್ಮಾಣವಾಗಿದೆ.
ಆಹಾರೋದ್ಯಮ, ಐಸ್ ಕ್ರೀಂ, ಹಾಲೋಬ್ರಿಕ್ಸ್, ಇಟ್ಟಿಗೆ, ಪೀಠೋಪಕರಣ, ಕಬ್ಬಿಣದ ಉಪಕರಣ, ವಾಹನೋದ್ಯಮ ಸೇರಿದಂತೆ ಆನೇಕ ಸಣ್ಣ ಕೈಗಾರಿಕೆಗಳು ಇಲ್ಲಿ ಕಾರ್ಯ ನಿರ್ವಹಿಸುತ್ತಿವೆ.
‘ಕೇವಲ ಕಾಫಿಗೆ ಸಂಬಂಧಿಸಿದ ಉದ್ಯಮಗಳಿಂದಲೇ ಇಲ್ಲಿ ವಾರ್ಷಿಕ ₹ 5 ಸಾವಿರ ಕೋಟಿ ವಹಿವಾಟು ನಡೆಯುತ್ತಿದೆ’ ಎಂದು ಕೂಡ್ಲೂರು ಕೈಗಾರಿಕೋದ್ಯಮಿಗಳ ಸಂಘದ ಅಧ್ಯಕ್ಷ ಎ.ಎಸ್.ಪ್ರವೀಣ್ ತಿಳಿಸಿದರು.
ಕೈಗಾರಿಕಾ ಬಡಾವಣೆ ನಿರ್ಮಾಣದ ಸಂದರ್ಭದಲ್ಲಿ ಕೈಗೊಂಡ ಅಭಿವೃದ್ಧಿ ಕಾಮಗಾರಿಗಳನ್ನು ಹೊರತುಪಡಿಸಿದರೆ ನಂತರದ ವರ್ಷಗಳಲ್ಲಿ ಈ ಕೈಗಾರಿಕಾ ಬಡಾವಣೆ ಸಂಪೂರ್ಣ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ರಾಜ್ಯ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ ಸಹ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳದೇ ಇರುವುದರಿಂದ ಹತ್ತಾರೂ ಸಮಸ್ಯೆಗಳಿಂದ ಕೈಗಾರಿಕಾ ಬಡಾವಣೆ ನಲುಗಿ ಹೋಗಿತ್ತು.
ಕೈಗಾರಿಕೋದ್ಯಮಿಗಳ ಸಂಘ ಹಾಗೂ ಕೈಗಾರಿಕೋದ್ಯಮಿಗಳ ನಿರಂತರ ಒತ್ತಡ ಹಾಗೂ ಪ್ರಯತ್ನದಿಂದ ಇದೀಗ ಗುಂಡಿ ಬಿದ್ದಿದ್ದ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗಿದೆ.
ಕೂಡ್ಲೂರು ಕೈಗಾರಿಕಾ ಬಡಾವಣೆ ಅಭಿವೃದ್ಧಿಗೆ ಸರ್ಕಾರ ₹ 10 ಕೋಟಿ ಅನುದಾನ ಮಂಜೂರು ಮಾಡಿತ್ತು. ಈ ಅನುದಾನದಲ್ಲಿ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ಬಡಾವಣೆಯ ಎಲ್ಲಾ ರಸ್ತೆಗಳನ್ನು ಅಭಿವೃದ್ಧಿಪಡಿಸಿದೆ. ಮುಂದಿನ ದಿನಗಳಲ್ಲಿ ಅಗತ್ಯ ಮೂಲಸೌಕರ್ಯ ಕಲ್ಪಿಸಲು ಹಂತ ಹಂತವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಕೆಐಎಡಿಬಿ ಅಧಿಕಾರಿಗಳು ತಿಳಿಸಿದ್ದಾರೆ.
ಹಿಂದಳಿದ ಬಡಾವಣೆ
ಇಲ್ಲಿ ಸಾವಿರಾರು ಮಂದಿ ಮಹಿಳೆಯರು ಹಾಗೂ ಪುರುಷರು ಉದ್ಯೋಗ ಪಡೆದುಕೊಂಡಿದ್ದಾರೆ. ಆದರೆ ರಾಜ್ಯದ ಇತರೆ ಕೈಗಾರಿಕಾ ಬಡಾವಣೆಗಳಿಗೆ ಹೋಲಿಕೆ ಮಾಡಿದರೆ ಕೂಡ್ಲೂರು ಕೈಗಾರಿಕಾ ಬಡಾವಣೆ ಹಿಂದುಳಿದಿದ್ದು, ಅಭಿವೃದ್ಧಿಯ ನಿರೀಕ್ಷೆಯಲ್ಲಿದೆ.
ಕೂಡ್ಲೂರಿನ 250 ಎಕರೆ ಜಾಗವನ್ನು ಕೈಗಾರಿಕಾ ಪ್ರದೇಶಕ್ಕೆ ಸ್ವಾಧೀನ ಪಡಿಸಿಕೊಳ್ಳಲಾಯಿತು. ಇದರಲ್ಲಿ 100 ಎಕರೆ ಪ್ರದೇಶಕ್ಕೆ ಮಾತ್ರ ಖಾತೆಯಾಗಿದೆ. ಉಳಿದ 150 ಎಕರೆ ಪ್ರದೇಶಕ್ಕೆ ಇದುವರೆಗೂ ಖಾತೆಯಾಗಿಲ್ಲ. ಆದರೆ, ಈ ಜಾಗ ಕೆಐಎಡಿಬಿ ಹೆಸರಿಗೂ ಆಗಿಲ್ಲ. ಪರಿಣಾಮ ಇಲ್ಲಿನ ಕೈಗಾರಿಕೋದ್ಯಮಿಗಳ ಹೆಸರಿಗೂ ಅಧಿಕೃತವಾಗಿ ಮಾಲೀಕತ್ವದ ಹಕ್ಕು ದೊರೆಯದೇ ಸರ್ಕಾರದಿಂದ ಸಿಗುವ ಸಾಲ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ.
ಮುಖ್ಯರಸ್ತೆ ಹೊರತುಪಡಿಸಿದರೆ ಇತರೆ ಪ್ರದೇಶಗಳಲ್ಲಿ ಬೀದಿ ದೀಪದ ಕೊರತೆ ಇದೆ. ಇದರಿಂದ ರಾತ್ರಿ ವೇಳೆ ಸಂಚರಿಸಲು ಭಯಪಡುವ ಪರಿಸ್ಥಿತಿ ಇದೆ. ಅನೇಕ ಕೈಗಾರಿಕೆಗಳಲ್ಲಿ ಕಳ್ಳತನಗಳೂ ನಡೆದಿವೆ. ಯಾವುದೇ ಭದ್ರತೆ ಇಲ್ಲ. ರಸ್ತೆಯ ಇಕ್ಕೆಲಗಳಲ್ಲಿ ಹಾಗೂ ಖಾಲಿ ಜಾಗಗಳಲ್ಲಿ ಕುರುಚಲು ಕಾಡು ಬೆಳೆದು ನಿಂತಿದೆ. ಮಳೆ ಬಂದರೆ ನೀರು ರಸ್ತೆ ಮೇಲೆಯೇ ಹರಿಯುತ್ತದೆ.
ಕೊಡಗು ಜಿಲ್ಲೆಯಲ್ಲಿ ಇಎಸ್ಐ ಆಸ್ಪತ್ರೆ ಸ್ಥಾಪನೆ ಮಾಡಬೇಕು ಎಂದು ಸಂಸದ ಪ್ರತಾಪ್ ಸಿಂಹ ಅವರು ಹಿಂದಿನ ಸರ್ಕಾರದ ಕಾರ್ಮಿಕ ಸಚಿವರಿಗೆ ಮನವಿ ಮಾಡಿಕೊಂಡಿದ್ದರು. ಸಚಿವರೂ ಕೂಡ ಆಸ್ಪತ್ರೆ ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದರು. ಆಸ್ಪತ್ರೆಗೆ ಕೂಡ್ಲೂರು ಕೈಗಾರಿಕಾ ಬಡಾವಣೆಯಲ್ಲಿ ಜಾಗ ಕೂಡ ಗುರುತಿಸಲಾಗಿದೆ. ಆದರೆ ಆಸ್ಪತ್ರೆ ನಿರ್ಮಾಣದ ಪ್ರಕ್ರಿಯೆ ಇನ್ನೂ ಕೂಡ ಆರಂಭವಾಗಿಲ್ಲ.
ಏಕೈಕ ಕೈಗಾರಿಕಾ ಪ್ರದೇಶಕ್ಕೆ ಒತ್ತು ನೀಡಿ
ಕೂಡ್ಲೂರು ಕೈಗಾರಿಕಾ ಪ್ರದೇಶದಲ್ಲಿ ವಾರ್ಷಿಕ ₹ 5 ಸಾವಿರ ಕೋಟಿ ವಹಿವಾಟು ನಡೆಯುತ್ತಿದ್ದು, ಈ ಸಣ್ಣ ಕೈಗಾರಿಕಾ ಬಡಾವಣೆ ಅಭಿವೃದ್ಧಿಗೆ ಸರ್ಕಾರ ವಿಶೇಷ ಒತ್ತು ನೀಡಬೇಕು. ಹೆಚ್ಚಿನ ಅನುದಾನವನ್ನು ಬಡಾವಣೆ ಅಭಿವೃದ್ಧಿಗೆ ನೀಡಬೇಕು - ಎ.ಎಸ್.ಪ್ರವೀಣ್, ಅಧ್ಯಕ್ಷ, ಕೂಡ್ಲೂರು ಕೈಗಾರಿಕೋದ್ಯಮಿಗಳ ಸಂಘ.
ಬೃಹತ್ ಉದ್ಯಮಗಳು ಸ್ಥಾಪನೆಯಾಗಲಿ
ಕಾಫಿಗೆ ಸಂಬಂಧಿಸಿದ ಹಾಗೂ ಸಣ್ಣ ಕೈಗಾರಿಕೆಗಳು ಮಾತ್ರ ಸ್ಥಾಪನೆಯಾಗಿವೆ. ಜಿಲ್ಲೆಯ ನಿರುದ್ಯೋಗಿಗಳಿಗೆ ಉದ್ಯೋಗ ಸಿಗುವಂತ ಬೃಹತ್ ಕೈಗಾರಿಕೆಗಳ ಸ್ಥಾಪನೆ ಸರ್ಕಾರದ ಕ್ರಮ ಕೈಗೊಳ್ಳಬೇಕು. ಈ ಹಿನ್ನೆಲೆಯಲ್ಲಿ ಉದ್ಯೋಗ ಅರಸಿಕೊಂಡು ಯುವಜನರು ನಗರಗಳಿಗೆ ತೆರಳುತ್ತಿದ್ದಾರೆ. ಯುವಕರಿಗೆ ಇಲ್ಲಿಯೇ ಉದ್ಯೋಗ ಸಿಗುವಂತೆ ಆದರೆ ನಗರ ಪ್ರದೇಶಗಳಿಗೆ ವಲಸೆ ಹೋಗುವುದನ್ನು ತಪ್ಪಿಸಬಹುದು - ಕೆ.ವರದ, ಉದ್ಯಮಿ
ಪಂಚಾಯಿತಿಯಿಂದ ಅಗತ್ಯ ಕೆಲಸ
ಕೂಡ್ಲೂರು ಕೈಗಾರಿಕಾ ಬಡಾವಣೆಗೆ ಪಂಚಾಯಿತಿಯಿಂದ ಅಗತ್ಯ ಸೌಲಭ್ಯ ಕಲ್ಪಿಸಲಾಗಿದೆ. ಚರಂಡಿ ಸ್ವಚ್ಛತೆ, ರಸ್ತೆ ಬದಿ ಬೆಳೆದಿರುವ ಕುರುಚಲು ಗಿಡಗಳನ್ನು ತೆರವುಗೊಳಿಸುವ ಕಾರ್ಯ ಕೈಗೊಳ್ಳಲಾಗಿದೆ. ಪ್ಲಾಸ್ಟಿಕ್ ಮುಕ್ತ ಕೈಗಾರಿಕಾ ಬಡಾವಣೆಯಾಗಿ ರೂಪಿಸಲು ಒತ್ತು ನೀಡಲಾಗಿದೆ - ಭಾಸ್ಕರ್ ನಾಯಕ, ಅಧ್ಯಕ್ಷ, ಕೂಡುಮಂಗಳೂರು ಗ್ರಾಮ ಪಂಚಾಯತಿ.
ಯುವಕರಿಗೆ ಕೆಲಸ ಸಿಗಲಿ
ಎಸ್ಸೆಸ್ಸೆಲ್ಸಿ, ಪಿಯುಸಿ ವಿದ್ಯಾಭ್ಯಾಸ ಮಾಡಿದ ಮಕ್ಕಳು ತೋಟದ ಕೆಲಸಕ್ಕೆ ಬರಲು ಮನಸ್ಸು ಮಾಡಲ್ಲ. ಇದರಿಂದ ಮನೆಯಲ್ಲೇ ಕಾಲ ಕಳೆಯುತ್ತಾರೆ. ಕೈಗಾರಿಕೆ ಆರಂಭವಾದರೆ ಓದಿದ ಯುವಕರು ದುಡಿಯುವ ಹಾಗೆ ಆಗುತ್ತದೆ - ಮೂರ್ತಿ ಗಂಗಾವರ, ಅಂಕನಹಳ್ಳಿ ಗ್ರಾಮ.
ಆರ್ಥಿಕ ಅಭಿವೃದ್ಧಿಗೆ ಅಗತ್ಯ
ಉನ್ನತ ವಿದ್ಯಾಭ್ಯಾಸ ಮಾಡಿ ಕೆಲಸಕ್ಕೆ ನಗರಪ್ರದೇಶ ವಲಸೆ ಹೋಗುತಿದ್ದಾರೆ. ಇದರಿಂದ ತಂದೆ ತಾಯಿ ಮಾಡಿರುವ ಗದ್ದೆ ತೋಟ ಹಾಳುಬಿದ್ದು, ಕಾಡುಪ್ರಾಣಿಗಳ ಪಾಲಾಗಿ ಗ್ರಾಮಗಳಲ್ಲಿ ಕಾಡು ಪ್ರಾಣಿ ಹಾವಳಿ ಹೆಚ್ಚಾಗಿದೆ. ಕೈಗಾರಿಕೆ ನಮ್ಮ ಪ್ರದೇಶದಲ್ಲಿ ಇದ್ದರೆ ಕೆಲಸದ ಜೊತೆ ತಮ್ಮ ಗದ್ದೆ ತೋಟ ರಕ್ಷಣೆ ಮಾಡಿ ಆರ್ಥಿಕವಾಗಿ ಯುವಜನತೆ ಅಭಿವೃದ್ಧಿಯಾಗುತ್ತಾರೆ - ಕೂಗೂರು ಕುಟ್ಟಪ್ಪ, ಕಾಫಿ ಮತ್ತು ಕರಿಮೆಣಸು ವ್ಯಾಪಾರಿ, ಶನಿವಾರಸಂತೆ
ಸ್ಥಳೀಯವಾಗಿ ಉದ್ಯಮ ಅವಶ್ಯವಿದೆ
ನಮ್ಮ ಭಾಗದ ಜನರು ಕೈಗಾರಿಕೆ ಕೆಲಸಕ್ಕೆ ಪ್ರತಿದಿನ ಬೆಳಿಗ್ಗೆ ಹಾಸನ ಮತ್ತು ಕುಶಾಲನಗರದ ಗಾರ್ಮೆಂಟ್ಸ್ ಮತ್ತು ಇತರೆ ಕೈಗಾರಿಕೆಗಳಿಗೆ ಹೋಗಿ ಸಂಜೆ ಬರುತಿದ್ದಾರೆ. ತಮ್ಮ ಜೀವನ ಸಾಗಿಸಲು ದೊಡ್ಡ ಸಾಹಸ ಅವರದು ಆಗಿದೆ. ಸ್ಥಳೀಯವಾಗಿ ಕೈಗಾರಿಕೆ ಅವಶ್ಯಕತೆ ಇದೆ ಸರ್ಕಾರ ಇದರ ಬಗ್ಗೆ ಗಮನ ಹರಿಸಬೇಕು - ಆನಂದಸ್ವಾಮಿ, ನಿವೃತ್ತ ಶಿಕ್ಷಕ, ಮೂದರವಳ್ಳಿ, ಶನಿವಾರಸಂತೆ.
ಸ್ಥಾಪನೆಗೆ ಸ್ಥಳ ಹುಡುಕಾಟ
ಕೊಡಗು ಜಿಲ್ಲೆಯಲ್ಲಿ ಮತ್ತೊಂದು ಕೈಗಾರಿಕಾ ಪ್ರದೇಶ ನಿರ್ಮಿಸಲು ಸೂಕ್ತ ಸ್ಥಳಕ್ಕಾಗಿ ಹುಡುಕಾಟ ನಡೆದಿದೆ. ಆದಷ್ಟು ಶೀಘ್ರ ಮತ್ತೊಂದು ಕೈಗಾರಿಕಾ ಪ್ರದೇಶವನ್ನು ಅಭಿವೃದ್ಧಿಪಡಿಸಲಾಗುವುದ - ರಘು, ಉಪನಿರ್ದೇಶಕ, ಜಿಲ್ಲಾ ಕೈಗಾರಿಕಾ ಇಲಾಖೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.