ADVERTISEMENT

ಮಡಿಕೇರಿ: ಬೇಕಿದೆ ಇನ್ನಷ್ಟು ವಸ್ತುಸಂಗ್ರಹಾಲಯಗಳು

ಕೆ.ಎಸ್.ಗಿರೀಶ್
Published 18 ಮೇ 2024, 7:32 IST
Last Updated 18 ಮೇ 2024, 7:32 IST
   

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಸೇರಿದ ತಲಾ ಒಂದೊಂದು ವಸ್ತುಸಂಗ್ರಹಾಲಯಗಳು ಮಾತ್ರವೇ ಇವೆ. ಅಳಿದು ಹೋಗುತ್ತಿರುವ ಪಾರಂಪರಿಕ ವಸ್ತುಗಳನ್ನು ರಕ್ಷಿಸಲು ಇನ್ನಷ್ಟು ಸಂಗ್ರಹಾಲಯಗಳ ಅಗತ್ಯ ಇದೆ.

ಇಲ್ಲಿನ ಕೋಟೆ ಆವರಣದಲ್ಲಿರುವ ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಗೆ ಸೇರಿದ ವಸ್ತುಸಂಗ್ರಹಾಲಯದ ಕಟ್ಟಡವೇ ಅತಿ ಪುರಾತನವಾದುದು. 1855ರಲ್ಲಿ ಬ್ರಿಟಿಷರು ತಮ್ಮ ಪ್ರಾರ್ಥನೆಗಾಗಿ ಕಟ್ಟಿದ ಸೇಂಟ್ ಮಾರ್ಕ್ಸ್‌ ಚರ್ಚ್ ಇದಾಗಿದ್ದು, ಸ್ವಾತಂತ್ರ್ಯ ನಂತರ ಬ್ರಿಟಿಷರೆಲ್ಲರೂ ಇಂಗ್ಲೆಂಡ್‌ಗೆ ತೆರಳಿದ ಬಳಿಕ ಇದನ್ನು ಇಲಾಖೆ ತನ್ನ ಸುಪರ್ದಿಗೆ ತೆಗೆದುಕೊಂಡು ವಸ್ತುಸಂಗ್ರಹಾಲಯವನ್ನಾಗಿ ಸ್ಥಾಪಿಸಿತು.

ತೀರಾ ಚಿಕ್ಕದಾಗಿರುವ ಈ ಕಟ್ಟಡದಲ್ಲಿ ಒಂದು ಸಾವಿರಕ್ಕೂ ಅಧಿಕ ವಸ್ತುಗಳು ಇವೆ. ಶಾಸನಗಳು, ವೀರಗಲ್ಲುಗಳು, ಸತಿಕಲ್ಲುಗಳು, ಪುರಾತನ ಆಯುಧಗಳು, ಫಿರಂಗಿಗಳು, ನಾಣ್ಯಗಳು ಸೇರಿದಂತೆ ಹಲವು ಬಗೆಯ ಶಿಲ್ಪಗಳು ಇಂದಿಗೂ ಸಾವಿರಾರು ಪುಟಗಳ ಇತಿಹಾಸ ಹೇಳುತ್ತಿವೆ.

ADVERTISEMENT

ಇವುಗಳ ಪೈಕಿ 9ನೇ ಶತಮಾನದ ಗಂಗರ ಕಾಲದ ಅತಿ ಹಳೆಯ ಶಾಸನ ಇಲ್ಲಿದೆ. ಚೆಂಗಾಳ್ವರ ಕಾಲದ ಹಾಗೂ ಹೊಯ್ಸಳರ ಕಾಲದ ಅತಿ ಹಳೆಯ ಅಪರೂಪದ ಶಿಲ್ಪಗಳೂ ಇಲ್ಲಿವೆ. ಚರ್ಚ್‌ನ ಆವರಣವೇ ಒಂದು ವೀರಗಲ್ಲುಗಳ ತೋಟದಂತಿದೆ. ಕೋಟೆಗೆ ಮಾತ್ರವಲ್ಲ, ಕೊಡಗು ಜಿಲ್ಲೆಗೆ ಈ ವಸ್ತುಸಂಗ್ರಹಾಲಯ ಪ್ರಧಾನ ಆಕರ್ಷಣೆ ಎನಿಸಿದೆ.

ವಸ್ತುಸಂಗ್ರಹಾಲಯದಲ್ಲಿ ನೇಪಾ
ಳದ್ದು ಎನ್ನಲಾದ ಶಿವಪಾರ್ವತಿಯರ ವಿಗ್ರಹಗಳೂ ಇವೆ. ಜತೆಗೆ, ವೃತ್ತಾಕಾರದ ಪೀಠದ ಶಿವನು ತನ್ನ ಮೇಲೆ ಎಡತೊಡೆಯ ಮೇಲೆ ಪಾರ್ವತಿಯನ್ನು (ಕಾಮಕಾಮೇಶ್ವರಿ) ಕುಳ್ಳಿರಿಸಿಕೊಂಡಿರುವ ಅಪರೂಪದ ವಿಗ್ರಹವೂ ಇದೆ.

ಕೋಣನ ತಲೆಯ ಮೇಲೆ ಕಾಲನ್ನಿರಿಸಿಕೊಂಡು ವಜ್ರಪರ್ಯಂಕ ಮುದ್ರೆಯಲ್ಲಿ ಕುಳಿತಿರುವ ಕಾಳಿಯ ವಿಗ್ರಹ ಹಾಗೂ ಇದಕ್ಕಿರುವ ಕಲಾತ್ಮಕವಾದ ಪ್ರಭಾವಳಿಗಳು ನೋಡುಗರ ಕಣ್ಮನ ಸೆಳೆಯುತ್ತಿವೆ.

ಇಲ್ಲಿ ಅನೇಕ ಬ್ರಿಟಿಷ್ ಅಧಿಕಾರಿಗಳ ಸೇವೆ ಮತ್ತು ಅವರ ಜೀವಿತಾವಧಿಗಳನ್ನು ಕೆತ್ತಿರುವ ಸ್ಮರಣ ಫಲಕಗಳೂ ಇಲ್ಲಿವೆ. ಕ್ರಿ.ಶ. 12ರಿಂದ 15ನೇ ಶತಮಾನಕ್ಕೆ ಸೇರಿದ ಜೈನ ತೀರ್ಥಂಕರರ ಕಲ್ಲಿನ ಶಿಲ್ಪಗಳು, ಕಂಚಿನ ವಿಗ್ರಹಗಳು, ದೊರೆ ರಾಜೇಂದ್ರ ಅವರ ಕಾಲದ ಒಡಿಕತ್ತಿಗಳು, ಶತಮಾನಕ್ಕೂ ಹಳೆಯದಾದ ಕೋವಿಗಳು, ಯುದ್ಧಗತ್ತಿಗಳು ಇಲ್ಲಿವೆ. ಸದ್ಯ, ಇದರ ನವೀಕರಣ ಕಾರ್ಯ ಭರದಿಂದ ನಡೆಯುತ್ತಿದ್ದು, ಕೆಲವೇ ದಿನಗಳಲ್ಲಿ ಸಾರ್ವಜನಿಕರ ವೀಕ್ಷಣೆಗೆ ಅವಕಾಶ ಸಿಗಲಿದೆ.

ಆದರೆ, ಇದು ತೀರಾ ಚಿಕ್ಕದಾಗಿದ್ದು, ಇದರಲ್ಲಿ ಒಂದು ಸಾವಿರಕ್ಕೂ ಅಧಿಕ ವಸ್ತುಗಳು, ಪುಸ್ತಕಗಳನ್ನಿಡಲಾಗಿದೆ. ಮತ್ತೊಂದು ದೊಡ್ಡ ಕಟ್ಟಡದ ಅಗತ್ಯವಿದ್ದು, ಆಗ ಅಳಿದು ಹೋಗುತ್ತಿರುವ ಕೊಡಗು ಜಿಲ್ಲೆಗೆ ಸಂಬಂಧಿಸಿದ ವಸ್ತುಗಳನ್ನು ಇರಿಸಲು
ಅವಕಾಶ ಸಿಗಲಿದೆ.

ಸೂಜಿಗಲ್ಲಿನಂತೆ ಸೆಳೆಯುವ ಜನರಲ್ ತಿಮ್ಮಯ್ಯ ವಸ್ತು
ಸಂಗ್ರಹಾಲಯ: ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಸೇರಿದ ಜನರಲ್ ತಿಮ್ಮಯ್ಯ ವಸ್ತುಸಂಗ್ರಹಾಲಯವು ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿದೆ. ಭಾರತದಲ್ಲೇ ಸೇನಾಧಿಕಾರಿಯೊಬ್ಬರ ಹೆಸರಿನಲ್ಲಿ ಇರುವ ಏಕೈಕ ಮ್ಯೂಸಿಯಂ ಎಂಬ ಹೆಗ್ಗಳಿಕೆ ಇದಕ್ಕಿದೆ.

ಇಲ್ಲಿ ಸೇನೆಗೆ ಸಂಬಂಧಿಸಿದ ವಸ್ತುಗಳು, ಯುದ್ಧ ಟ್ಯಾಂಕರ್‌ಗಳು ಸೇರಿದಂತೆ ಅನೇಕ ವಸ್ತುಗಳಿವೆ. ಜನರಲ್ ತಿಮ್ಮಯ್ಯ ಅವರು ಹುಟ್ಟಿದಾಗಿನಿಂದ ಅವರು ಸೇನೆಯಲ್ಲಿ ವಿವಿಧ ಹಂತಗಳಲ್ಲಿ ಸಲ್ಲಿಸಿದ ಸೇವೆಯನ್ನು ಕಣ್ಣಿಗೆ ಕಟ್ಟುವಂತೆ ವಿವರಿಸುವಂತಹ ವ್ಯವಸ್ಥೆ ಇಲ್ಲಿದೆ. ರಾಷ್ಟ್ರಪತಿಯಾಗಿದ್ದ ರಾಮನಾಥ ಕೋವಿಂದ್​ ಅವರು 2021ರಲ್ಲಿ ಇಲ್ಲಿಗೆ ಬಂದು ಈ ವಸ್ತುಸಂಗ್ರಹಾಲಯವನ್ನು ಉದ್ಘಾಟಿಸಿದ್ದರು.

ಸಂರಕ್ಷಣೆ ಕೆಲಸ ತುರ್ತಾಗಿ ನಡೆಯಲಿ

ಕೊಡಗಿನಲ್ಲಿ ಇನ್ನಷ್ಟು ವಸ್ತುಸಂಗ್ರಹಾಲಯಗಳ ಅಗತ್ಯ ಇದೆ. ಜನರಲ್ ಕಾರ್ಯಪ್ಪ ಅವರ ನಿವಾಸವನ್ನೂ ವಸ್ತುಸಂಗ್ರಹಾಲಯವನ್ನಾಗಿ ಮಾಡಬೇಕು ಎನ್ನುವ ಬೇಡಿಕೆಯೂ ಇದೆ.

ಕೊಡಗಿನ ವಿಶಿಷ್ಟ ಪರಂಪರೆಯನ್ನು ಸಾರುವ ಅನೇಕ ವಸ್ತುಗಳು ಇಂದು ತೆರೆಮರೆಗೆ ಸರಿಯುತ್ತಿವೆ. ಅವುಗಳನ್ನೆಲ್ಲ ಸಂರಕ್ಷಿಸಬೇಕಾದ ತುರ್ತು  ಅಗತ್ಯ ಇದೆ. ಕೆಲವೊಂದು ಸಭೆ, ಸಮಾರಂಭಗಳು ಆದಾಗ ಇಂತಹ ಅಪೂರ್ವ ವಸ್ತುಗಳ ಪ್ರದರ್ಶನಗಳನ್ನು ಏರ್ಪಡಿಸಲಾಗುತ್ತದೆ. ಆಗ ಪ್ರದರ್ಶನಕ್ಕಿಟ್ಟ ವಸ್ತುಗಳನ್ನು ಕಂಡು ಹಿರಿಯರೂ ವಿಸ್ಮಯಗೊಳ್ಳುತ್ತಾರೆ. ಅಂತಹ ವಿಶಿಷ್ಟ ಹಾಗೂ ಅಪರೂಪ ಎನಿಸುವ ವಸ್ತುಗಳ ಸಂರಕ್ಷಣೆಗಾಗಿಯೇ ಸರ್ಕಾರ ಮತ್ತೊಂದು ವಸ್ತುಸಂಗ್ರಹಾಲಯ ತೆರೆಯಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.