ADVERTISEMENT

ಗದ್ದೆಗಳಲ್ಲಿ ಮರಳು ತೆಗೆಯುವ ವಿಚಾರ: ಗ್ರಾಮಸ್ಥರು, ಅಧಿಕಾರಿಗಳ ವಾಗ್ವಾದ 

ಕಾಲೂರು ಗ್ರಾಮದಲ್ಲಿ ನಡೆದ ಘಟನೆ

​ಪ್ರಜಾವಾಣಿ ವಾರ್ತೆ
Published 1 ಮೇ 2019, 13:20 IST
Last Updated 1 ಮೇ 2019, 13:20 IST
ಕಾಲೂರು ಗ್ರಾಮದಲ್ಲಿ ವಾಗ್ವಾದ
ಕಾಲೂರು ಗ್ರಾಮದಲ್ಲಿ ವಾಗ್ವಾದ   

ಮಡಿಕೇರಿ: ಪ್ರಕೃತಿ ವಿಕೋಪಕ್ಕೆ ತುತ್ತಾಗಿ ಇಂದಿಗೂ ಸಂಕಷ್ಟದಲ್ಲಿರುವ ಕಾಲೂರು ಗ್ರಾಮದ ಗದ್ದೆಗಳಲ್ಲಿ ಶೇಖರಣೆಗೊಂಡಿರುವ ಮರಳು ತೆಗೆದು ಸಾಗಿಸುವ ವಿಚಾರದಲ್ಲಿ ಬುಧವಾರ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ಹಾಗೂ ಗ್ರಾಮಸ್ಥರ ನಡುವೆ ಮಾತಿನ ಚಕಮಕಿ ನಡೆದಿದೆ.

ನಾಲ್ಕು ಲಾರಿಗಳ ಸಮೇತ ಬುಧವಾರ ಕಾಲೂರಿಗೆ ಬಂದಿದ್ದ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಇಬ್ಬರು ಮಹಿಳಾ ಅಧಿಕಾರಿಗಳಿಗೆ ಜನರು ತರಾಟೆಗೆ ತೆಗೆದುಕೊಂಡಿದ್ದಾರೆ.

‘ಪರಿಹಾರ ನೀಡದ ಹೊರತು ಮರಳು ತೆಗೆಯಲು ಅವಕಾಶ ನೀಡುವುದಿಲ್ಲ. ಮೊದಲು ಗದ್ದೆಯಲ್ಲಿ ಬಿದ್ದಿರುವ ಮಣ್ಣು ತೆರವು ಮಾಡಿಕೊಡಿ. ಆ ಮೇಲೆ ಮರಳು ಕೊಂಡೊಯ್ಯಿರಿ’ ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದರು.

ADVERTISEMENT

ಬಳಿಕ ಮಡಿಕೇರಿ ತಹಶೀಲ್ದಾರ್ ಸಹ ಸ್ಥಳಕ್ಕೆ ಭೇಟಿ ನೀಡಿ, ಕೆಲವರು ಸಂಗ್ರಹಿಸಿರುವ ಮರಳು ತೆಗೆಯಲು ಅವಕಾಶ ಮಾಡಿಕೊಡಿ, ಇಲ್ಲದಿದ್ದರೆ ಕಾನೂನು ಕ್ರಮ ಜಗುಗಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಅದಕ್ಕೂ ಬಗ್ಗದ ಗ್ರಾಮಸ್ಥರು, ಮೊದಲು ನಮಗೆ ಬೆಳೆ ಪರಿಹಾರ ನೀಡಿ, ಆಮೇಲೆ ಮರಳನ್ನ ತೆಗೆದುಕೊಂಡು ಹೋಗಿ ಎಂದು ಪಟ್ಟುಹಿಡಿದರು. ಕಾಲೂರಿನಲ್ಲಿ ಹರಿಯೋ ನದಿಗೆ ಸೇತುವೆ ನಿರ್ಮಿಸಿ ಕೊಡಲು ಸಾಧ್ಯವಾಗಿಲ್ಲ. ಮಳೆ ಬಂದರೆ ಒಂದು ಕಡೆಯಿಂದ ಮತ್ತೊಂದು ಕಡೆಗೆ ಹೋಗಲು ಸಾಧ್ಯವಿಲ್ಲ ಎಂದು ತಹಶೀಲ್ದಾರ್‌ಗೂ ಪರಿಸ್ಥಿತಿ ತಿಳಿಸಿಕೊಟ್ಟರು.

ಅಧಿಕಾರಿಗಳು ಎಷ್ಟೇ ಪ್ರಯತ್ನಿಸಿದರೂ ಗ್ರಾಮಸ್ಥರು ಮಾತ್ರ ಮರಳು ತೆಗೆಯಲು ಬಿಡಲಿಲ್ಲ. ಕಾರ್ಮಿಕರ ದಿನದ ರಜೆಯಲ್ಲೂ ದಾಳಿಗೆ ಕಾಲೂರಿಗೆ ಬಂದಿದ್ದ ಅಧಿಕಾರಿಗಳು ಬರಿಗೈಯಲ್ಲಿ ವಾಪಸ್ ಆಗಿದ್ದಾರೆ

‘ನೀವು ಕಾನೂನುಬಿಟ್ಟು ಗ್ರಾಮಕ್ಕೆ ಬಂದಿದ್ದೀರಾ ಹೋಗಿ ಮೇಡಂ. ನಾಳೆ ಕರ್ತವ್ಯಕ್ಕೆ ಅಡ್ಡಿಯೆಂದು ನಮ್ಮ ಮೇಲೆಯೇ ದೂರು ದಾಖಲು ಮಾಡುತ್ತೀರಾ’ ಎಂದು ವ್ಯಕ್ತಿಯೊಬ್ಬ ಪ್ರಶ್ನಿಸಿದ್ದಾರೆ.

‘ನಾವು ಸರ್ಕಾರಿ ಕೆಲಸದ ಮೇಲೆ ಬಂದಿದ್ದೇವೆ. ಕಾನೂನು ವ್ಯಾಪ್ತಿ ಬಿಟ್ಟು ಕೆಲಸ ಮಾಡುತ್ತಿದ್ದೀರಾ ಎಂದು ಹೇಳುವುದು ಸರಿಯಲ್ಲ. ನೀವು ಮಾಡುತ್ತಿರುವುದು ಅಕ್ರಮ ಅಲ್ಲವೇ’ ಎಂದು ಅಧಿಕಾರಿ ರೇಷ್ಮಾ ಆ ವ್ಯಕ್ತಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಕಳೆದ ವರ್ಷ ಪ್ರಕೃತಿ ವಿಕೋಪದ ವೇಳೆ ತತ್ತರಿಸಿ ಹೋಗಿದ್ದ 38 ಗ್ರಾಮಗಳಲ್ಲಿ ಕಾಲೂರೂ ಒಂದು. ಸಾಕಷ್ಟು ಗುಡ್ಡಗಳು ಕುಸಿದು, ನದಿಗಳು ಉಕ್ಕಿ ಹರಿದಿದ್ದ ಪರಿಣಾಮ ಗದ್ದೆಗಳಲ್ಲಿ ಸಂಗ್ರಹಗೊಂಡಿರುವ ಮರಳಿನ ಮೇಲೆ ಅಧಿಕಾರಿಗಳ ಕಣ್ಣು ಬಿದ್ದಿದೆ ಎನ್ನಲಾಗಿದೆ. ಈ ಭಾಗದಲ್ಲಿ ಸಾಕಷ್ಟು ನಷ್ಟವೂ ಉಂಟಾಗಿತ್ತು. ಕೆಲವರಿಗೆ ಇನ್ನೂ ಪರಿಹಾರ ಸಿಕ್ಕಿಲ್ಲ. ಬುಧವಾರ ಗ್ರಾಮಸ್ಥರ ಆಕ್ರೋಶದ ಕಟ್ಟೆ ಒಡೆದಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.