ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ 2018ರಲ್ಲಿ ಆದ ಪ್ರಕೃತಿ ವಿಕೋಪದ ಕಹಿ ಘಟನೆಯನ್ನು ಮರೆತು, 2019 ಅನ್ನು ಕಾವೇರಿ ನಾಡಿನ ಜನರು ಸಂಭ್ರಮದಿಂದ ಸ್ವಾಗತಿಸಿದ್ದಾರೆ. ಹಳೆಯ ನೆನಪು ಮರೆತು ಹೊಸ ಬದುಕಿನತ್ತ ಚಿತ್ತಹರಿಸಿದ್ದಾರೆ. ಅನ್ನದಾತರು ಕಳೆದುಕೊಂಡಿದ್ದನ್ನು ಈ ವರ್ಷ ಗಳಿಸುವ ಉತ್ಸಾಹದಲ್ಲಿದ್ದಾರೆ. ಶಿಕ್ಷಕರು, ವಿದ್ಯಾರ್ಥಿಗಳು, ಉದ್ದಿಮೆದಾರರು ಹೊಸವರ್ಷದಲ್ಲಿ ಹಲವು ಸಂಕಲ್ಪ ಮಾಡಿದ್ದಾರೆ. ಹೊಸ ವರ್ಷದ ಸಂಕಲ್ಪ ತಿಳಿಸುವಂತೆ ‘ಪ್ರಜಾವಾಣಿ’ ನೀಡಿದ್ದ ಕರೆಗೆ ಅಭೂತಪೂರ್ವ ಸ್ಪಂದನೆ ವ್ಯಕ್ತವಾಗಿತ್ತು. ಅದರಲ್ಲಿ ಆಯ್ದ ಬರಹಗಳನ್ನು ಪ್ರಕಟಿಸಲಾಗಿದೆ.
ಸಾಹಿತ್ಯ ಕೃಷಿಯಲ್ಲಿ ತೊಡಗುವೆ...
ನಾನು ವೃತ್ತಿಯಲ್ಲಿ ಲಾಭ-ನಷ್ಟಗಳ ಲೆಕ್ಕಾಚಾರದಲ್ಲಿ ಮುಳುಗಿರುವ ‘ವ್ಯಾಪಾರಿ’ ಆಗಿದ್ದರೂ, ಮನಸ್ಸಿನಲ್ಲಿ ಸದಾ ಕಾಲ 'ಸಾಹಿತ್ಯ ಕೃಷಿ' ಮಾಡುವ ಬಡ 'ಬರ'ಹಗಾರ ರೈತ!
ಜೀವನದಲ್ಲಿ ಎದುರಾಗುವ ಕೆಲವೊಂದು ಸಮಸ್ಯೆ, ಒತ್ತಡದಿಂದ ಕೆಲವು ವಷ೯ಗಳಿಂದ ಸಾಹಿತ್ಯ ಕೃಷಿ ಹೆಚ್ಚಿನ ‘ಫಸಲು’ ನೀಡುತ್ತಿರಲಿಲ್ಲ. ಆದರೆ, 2019ರ ಹೊಸ ವಷ೯ದಿಂದ ನಾನು ಎಲ್ಲ ಸಾಹಿತ್ಯ ವಿಭಾಗಗಳಲ್ಲಿಯೂ ಸಕ್ರಿಯವಾಗಿ ತೊಡಗಬೇಕೆಂದು ಧೃಢ ನಿಧಾ೯ರ ಮಾಡಿರುವೆ.
ನನ್ನ ಲೇಖನಿಗೆ ಹೊಸ ವಷ೯ದಿಂದ 'ಬಿಡುವು' ನೀಡುವುದಿಲ್ಲ ಎಂದು ಮನಸ್ಸಿನಲ್ಲಿ ಸಂಕಲ್ಪ ಮಾಡಿರುವ ಕಾರಣ, ಕತೆ, ಕವನ, ಹಾಸ್ಯ ಬರಹ, ಚಿತ್ರ- ಲೇಖನ... ಹೀಗೆ ಎಲ್ಲವೂ ಕೊಡಗಿನ ಮಧುರ ಚಳಿಯಲ್ಲಿಯೂ ಮೆಲ್ಲನೆ ಅರಳ ತೊಡಗಲಿವೆ, ಹೊಸ ಹೊಸ ಕನಸುಗಳೊಂದಿಗೆ.
ಐಗೂರು ಮೋಹನ್ ದಾಸ್, ಸೋಮವಾರಪೇಟೆ
**
ಕನ್ನಡದಲ್ಲಿ ಸಾಹಿತ್ಯಾಭ್ಯಾಸವವೇ ನನ್ನ ನಿರ್ಧಾರ
ಹೊಸವರ್ಷದ ಬಗೆಗಿನ ನನ್ನ ಯೋಜನೆ ಅಥವಾ ಯೋಚನೆ ಹವ್ಯಾಸವಾದ ಕನ್ನಡದಲ್ಲಿ ಸಾಹಿತ್ಯಾಭ್ಯಾಸ, ಸಾಹಿತ್ಯ ಸೃಷ್ಟಿಯಲ್ಲಿ ಕೊಂಚ ಆಸಕ್ತಿ ಹೊಂದಬೇಕೆಂಬುದು. ಈ ವರುಷ ನಾನು ಪ್ರಥಮ ಪಿಯುಸಿ ಕಲಾ ವಿಭಾಗದ ವಿಧ್ಯಾರ್ಥಿ. ಆದ್ದರಿಂದ, ಮುಂಬರುವ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಓದಿ ಹೆಚ್ಚಿನ ಅಂಕಗಳಿಸಬೇಕು. ಅದಕ್ಕಾಗಿ ಹೆಚ್ಚಿನ ಪ್ರಯತ್ನದಲ್ಲಿ ಮುಳುಗಬೇಕೆಂಬುದು ಯೋಚನೆ.
– ಪಟ್ಟಡ ದೀಕ್ಷಿ ಪ್ರಕಾಶ್, ಕೊಡಗು
**
ಪಿಯುಸಿಯಲ್ಲಿ ಅತ್ಯುನ್ನತ ಶ್ರೇಣಿ
ಹೊಸವರ್ಷ 2019 ಅನ್ನು ಸಂಭ್ರಮದಿಂದ ಸ್ವಾಗತಿಸಲು ಸಿದ್ಧವಾಗಿರುವೆ. ಕಳೆದವರ್ಷ ನಡೆದ ಕಹಿ ಘಟನೆ ಮರೆತು ಮುಂದಿನ ಹೊಸವರ್ಷದಲ್ಲಿ ಒಳಿತಾಗುವುದು ಎಂಬ ಆಶಾಭಾವ ಹೊಂದಿದ್ದೇನೆ. ನಾನು ಈಗ ದ್ವಿತೀಯ ಪಿಯುಸಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಇದು ನನ್ನ ಭವಿಷ್ಯ ರೂಪಿಸುವ ಪ್ರಮುಖ ಘಟ್ಟ. ಪೋಷಕರೂ ನನ್ನ ಮೇಲೆ ಅತಿಯಾದ ವಿಶ್ವಾಸವನ್ನು ಹೊಂದಿದ್ದಾರೆ. ನಾನು ಕಷ್ಟಪಟ್ಟು ಓದಿ ಪಿಯುಸಿಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಬೇಕೆಂಬ ಮಹಾದಾಸೆ ಹೊಂದಿರುವೆ. ಇದು ನನ್ನ ಹೊಸವರ್ಷದ ಗುರಿ.
ಪೂಜಾ, ವಿದ್ಯಾರ್ಥಿ, ಸರ್ಕಾರಿ ಪದವಿ ಪೂರ್ವ ಕಾಲೇಜು, ಕುಶಾಲನಗರ.
**
ಕ್ರೀಡಾ ಕ್ಷೇತ್ರದಲ್ಲಿ ಸಾಧನೆಯ ಬಯಕೆ
2018 ತೆರೆಮರೆಗೆ ಸರಿಯುತ್ತಿದ್ದು, ನನ್ನ ಅನೇಕ ನೆನಪುಗಳಿಗೆ ವೇದಿಕೆಯಾಗಿತ್ತು. ಕಳೆದ ವರ್ಷ ನನ್ನ ಜೀವನದಲ್ಲಿ ನಡೆದ ಕಹಿ ಹಾಗೂ ಸಿಹಿ ಘಟನೆ ಮೆಲುಕು ಹಾಕುತ್ತಾ 2019 ಹೊಸತು ತರುತ್ತದೆ ಎಂಬ ಮನದಾಸೆ. ನಾನು ಗ್ರಾಮೀಣ ಪ್ರದೇಶದಿಂದ ಬಂದ ವಿದ್ಯಾರ್ಥಿ. ಅಲ್ಲದೇ ಕಬಡ್ಡಿ ಪಟು.
ನಾನು ಓದಿನೊಂದಿಗೆ ಕ್ರೀಡಾ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಬೇಕು ಎಂಬ ಗುರಿ ಹೊಂದಿದ್ದೇನೆ. ಜತೆಗೆ ಗ್ರಾಮೀಣ ಪ್ರದೇಶದಲ್ಲಿ ಎಲೆಮರೆ ಕಾಯಿಯಂತೆ ಇರುವ ಪ್ರತಿಭೆಗಳನ್ನು ಗುರುತಿಸಿ, ಅವರಿಗೆ ತರಬೇತಿ ನೀಡುವ ಮೂಲಕ ಸೂಕ್ತ ವೇದಿಕೆ ಕಲ್ಪಿಸಬೇಕೆಂಬ ಉದ್ದೇಶ ಹೊಂದಿರುವೆ.
ಪ್ರಮೋದ್, ದ್ವಿತೀಯ ಪಿಯುಸಿ, ಸರ್ಕಾರಿ ಪಿಯು ಕಾಲೇಜು, ಕುಶಾಲನಗರ
**
ಮನುಷ್ಯತ್ವ ಮರೆಯಬಾರದೆನ್ನುವ ಸಂಕಲ್ಪ
ಸಂಕಲ್ಪಕ್ಕೇನು ಸ್ವಾಮಿ, ಏನು ಬೇಕಾದ್ರೂ ಮಾಡಬಹುದು. ರಾಜಕಾರಣಿಗಳು ನೋಡಿ. ಸಂಕಲ್ಪ ಯಾತ್ರೆನೇ ಮಾಡಿ ಬಿಡ್ತಾರೆ. ಆದರೆ, ಈ ಸಂಕಲ್ಪ ಯಾವತ್ತಾದ್ರೂ ನೆರವೇರಿದ್ಯಾ? ನಾನೂ ಅಷ್ಟೇ ಏನೇನೊ ಸಂಕಲ್ಪ ಮಾಡಬೇಕೆಂದು ಅಂದ್ಕೊಳ್ತೀನಿ.
ಸಮಾಜವನ್ನು ಬದಲಾಯಿಸಬೇಕು, ಭ್ರಷ್ಟಾಚಾರ ನಿರ್ಮೂಲನೆ, ಗ್ರಾಮ ಸ್ವಚ್ಛ ಮಾಡಬೇಕಂತ... ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತೆ. ನಾನೇ ಬದಲಾಗದೇ ಸಮಾಜ ಬದಲಾಗುತ್ತದೆಯೇ? ಯಾರೂ ನೋಡ್ತಾ ಇಲ್ಲವೆಂದು ಬಸ್‌ನ ಕಿಟಕಿಯಿಂದಾಚೆ ಪ್ಲಾಸ್ಟಿಕ್ ಎಸೆದು ಸ್ವಚ್ಛತೆ ಅಂತ ಬೊಗಳೆ ಬಿಟ್ರೆ? ಕಚೇರಿಲಿ ಕೆಲಸ ಆಗಿಲ್ಲ ಅಂತ ಗುಮಾಸ್ತ ಬೇಡಬೇಡ ಅಂತ ಹೇಳಿದ್ರೂ ಅವನ ಕೈಯಲ್ಲಿ ನೋಟು ತುರುಕಿ ಭ್ರಷ್ಟಾಚಾರ ನಿರ್ಮೂಲನೆ ಮಾಡಬೇಕಂದ್ರೆ? ಆದ್ದರಿಂದ, ಈಗ ಅದೆಲ್ಲ ಬಿಟ್ಟು ಹೊಸ ವರ್ಷದ ಹೊಸ್ತಿಲಲ್ಲಿ ನಿಂತು ಯಾವುದೇ ಸಂದರ್ಭದಲ್ಲೂ ಮನುಷ್ಯತ್ವ ಮರೆಯಬಾರದೆನ್ನುವ ಸಂಕಲ್ಪ ಮಾಡಿದ್ದೇನೆ. ಮತ್ತೆ ನೀವು??
– ವನು ವಸಂತ, ಶಿಕ್ಷಕಿ, ಬಲ್ಲಮಾವಟಿ
**
ಸಂಗೀತ ನನ್ನ ಒಲವು
ಸಂಗಿತಕ್ಕೆ ಎಲ್ಲರನ್ನೂ ಹಿಡಿದಿಡುವ ಶಕ್ತಿಯಿದೆ. ಸಂಗೀತಕ್ಕೆ ಎಲ್ಲ ನೋವನ್ನು ಮರೆಸುವ ಶಕ್ತಿಯಿದೆ. ಆದ್ದರಿಂದ ಸಂಗೀತಕ್ಕೆ ನನ್ನ ಒಲವು.
ಹೊಸವರ್ಷದ ನನ್ನ ಸಂಕಲ್ಪವೂ ಅದೇ– ಸಂಗೀತಗಾರಳಾಗುವುದು. ಅದಕ್ಕೇ ಸಂಗೀತಕ್ಕೆ ಹೆಚ್ಚು ಆದ್ಯತೆ ಕೊಡುತ್ತೇನೆ. ಪ್ರೌಢಶಾಲಾ ಹಂತದಲ್ಲಿ ಸಂಗೀತ ಅಭ್ಯಾಸ ಮಾಡುತ್ತಿದ್ದೆ. ಇದೀಗ ಅದನ್ನು ಮುಂದುವರೆಸಬೇಕು ಎನ್ನುವ ಹಂಬಲದಲ್ಲಿ ಹತ್ತಿರದ ಕಾಲೇಜಿಗೆ ಸೇರಿದ್ದೇನೆ. ಪ್ರೋತ್ಸಾಹ ಸಿಕ್ಕಿದೆ. ಜನರ ಹಾರೈಕೆಯೂ ಇದೆ. ಭವಿಷ್ಯ ಮುಂದಿದೆ.
ರಕ್ಷಾ, ವಿದ್ಯಾರ್ಥಿನಿ, ಪದವಿಪೂರ್ವ ಕಾಲೇಜು, ಮೂರ್ನಾಡು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.