ADVERTISEMENT

ಅಂತರರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ‘ಕೊಡಗ್‌ರ ಸಿಪಾಯಿ’ ಆಯ್ಕೆ

ಮೈಸೂರಿನ ಕೊಡವ ಸಮಾಜದಲ್ಲಿ ನಡೆದ ಚಲನಚಿತ್ರದ 51ನೇ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2019, 10:52 IST
Last Updated 27 ಅಕ್ಟೋಬರ್ 2019, 10:52 IST
ಮೈಸೂರಿನ ಕೊಡವ ಸಮಾಜದಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ‘ಕೊಡಗ್‌ರ ಸಿಪಾಯಿ’ ಚಲನಚಿತ್ರ ನಿರ್ದೇಶಕ ಕೊಟ್ಟುಕತ್ತಿರ ಪ್ರಕಾಶ್ ಕಾರ್ಯಪ್ಪ, ಅರ್ಜುನ್ ದೇವಯ್ಯ, ಪತ್ರಕರ್ತ ಕೆ.ಬಿ. ಗಣಪತಿ ಹಾಜರಿದ್ದರು
ಮೈಸೂರಿನ ಕೊಡವ ಸಮಾಜದಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ‘ಕೊಡಗ್‌ರ ಸಿಪಾಯಿ’ ಚಲನಚಿತ್ರ ನಿರ್ದೇಶಕ ಕೊಟ್ಟುಕತ್ತಿರ ಪ್ರಕಾಶ್ ಕಾರ್ಯಪ್ಪ, ಅರ್ಜುನ್ ದೇವಯ್ಯ, ಪತ್ರಕರ್ತ ಕೆ.ಬಿ. ಗಣಪತಿ ಹಾಜರಿದ್ದರು   

ಮಡಿಕೇರಿ: ಕೊಡವ ಚಲನಚಿತ್ರ ‘ಕೊಡಗ್‌ರ ಸಿಪಾಯಿ’ ಕೋಲ್ಕತ್ತಾದಲ್ಲಿ ನಡೆಯಲಿರುವ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳಲು ಆಯ್ಕೆಯಾಗಿದೆ.

ನಿರ್ಮಾಪಕ ಹಾಗೂ ನಿರ್ದೇಶಕ ಕೊಟ್ಟುಕತ್ತಿರ ಪ್ರಕಾಶ್ ಕಾರ್ಯಪ್ಪ ಅವರು ಮೈಸೂರಿನ ಕೊಡವ ಸಮಾಜದಲ್ಲಿ ನಡೆದ ಚಲನಚಿತ್ರದ 51ನೇ ಪ್ರದರ್ಶನದ ಸಂದರ್ಭದಲ್ಲಿ ಮಾಹಿತಿ ನೀಡಿ ಹರ್ಷ ವ್ಯಕ್ತಪಡಿಸಿದರು.

ಅಂತರರಾಷ್ಟ್ರೀಯ ಚಲನಚಿತ್ರೋತ್ಸವವು ಬೆಳ್ಳಿ ಮಹೋತ್ಸವದ ಸಂಭ್ರಮದಲ್ಲಿರುವಾಗಲೇ ಕೊಡವ ಚಲನಚಿತ್ರವೊಂದು ಪ್ರದರ್ಶನಕ್ಕೆ ಅವಕಾಶ ಪಡೆದಿರುವುದು ಹೆಮ್ಮೆಯ ವಿಚಾರ ಎಂದು ಹೇಳಿದರು.

ADVERTISEMENT

ನ. 8ರಿಂದ 15ರವರೆಗೆ ಕೋಲ್ಕತ್ತಾದಲ್ಲಿ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ನಡೆಯಲಿದ್ದು, ತಾವು ನಿರ್ಮಿಸಿದ ‘ಬಾಕೆಮನೆ’ ಕೊಡವ ಚಲನಚಿತ್ರ ಕೂಡ ಈ ಹಿಂದೆ ಅಂತರರಾಷ್ಟ್ರೀಯ ಚಲನ ಚಿತ್ರೋತ್ಸವದಲ್ಲಿ ಪ್ರದರ್ಶನ ಕಂಡಿತ್ತು. ಇದೀಗ ‘ಕೊಡಗ್‌ರ ಸಿಪಾಯಿ’ ಅವಕಾಶ ಪಡೆದಿರುವುದು ಅತ್ಯಂತ ಹರ್ಷದಾಯಕ ಎಂದು ಪ್ರಕಾಶ್ ಕಾರ್ಯಪ್ಪ ತಿಳಿಸಿದರು.

ಮೈಸೂರು ಕೊಡವ ಸಮಾಜದ ಅಧ್ಯಕ್ಷ ಕೇಕಡ ಬೆಳ್ಯಪ್ಪ ಅವರು, ಕೊಡಗ್‌ರ ಸಿಪಾಯಿ ಚಲನಚಿತ್ರ ನಿರ್ಮಾಣದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಪತ್ರಕರ್ತ ಕೆ.ಬಿ.ಗಣಪತಿ ಮಾತನಾಡಿ, ಸಿನಿಮಾ ರಂಗದ ಮೂಲಕವು ಕೊಡವ ಭಾಷೆ, ಸಾಹಿತ್ಯ ಹಾಗೂ ಸಂಸ್ಕೃತಿಯ ಬೆಳವಣಿಗೆ ಆಗುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.

ಕೊಡಗು ಪ್ರೆಸ್‌ಕ್ಲಬ್ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ, ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ. ಅಯ್ಯಪ್ಪ ಹಾಗೂ ಕೊಡಗ್‌ರ ಸಿಪಾಯಿ ಚಿತ್ರದ ನಾಯಕ ನಟ, ಅಥ್ಲೀಟ್ ಅರ್ಜುನ್ ದೇವಯ್ಯ ಮಾತನಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.