ಕುಶಾಲನಗರ: ತಾಲ್ಲೂಕಿನ ಹಾರಂಗಿ ಹಿನ್ನೀರು ಪ್ರದೇಶ ವ್ಯಾಪ್ತಿಯ ಹಾದ್ರೆ, ಹೇರೂರು, ಕಲ್ಲೂರಿನಲ್ಲಿ ಬೃಹತ್ ಸಂಸ್ಕೃತಿಯ ಕಾಲಮಾನದ ನಿಲಸು ಗಲ್ಲು ಮತ್ತು ವೃತ್ತಾಕಾರದ ಸಮಾಧಿಗಳು ಪತ್ತೆಯಾಗಿವೆ.
ಚಿಕ್ಕ ಅಳುವಾರ ಕೊಡಗು ವಿಶ್ವವಿದ್ಯಾಲಯದ ಇತಿಹಾಸ ವಿಭಾಗದ ಉಪನ್ಯಾಸಕ ಡಾ. ಎಚ್.ಆರ್.ಅರುಣ್ ಕುಮಾರ್ ನೇತೃತ್ವದಲ್ಲಿ ನಡೆದ ಕ್ಷೇತ್ರ ಕಾರ್ಯದ ವೇಳೆ ಇವು ಪತ್ತೆಯಾಗಿವೆ.
ಬಸವನಹಳ್ಳಿ ಮುಖ್ಯ ರಸ್ತೆಯ ಅರಣ್ಯ ಪ್ರದೇಶದಿಂದ ಕೂಡಿರುವ ಈ ಪ್ರದೇಶದಲ್ಲಿ ರಸ್ತೆಯ ಬಲಭಾಗದಲ್ಲಿ ನಿಲಸುಗಲ್ಲು ಪತ್ತೆಯಾಗಿದ್ದು, 8 ಅಡಿ ಎತ್ತರವಾಗಿದ್ದು 12 ಅಗಲವಾಗಿದೆ. ಎತ್ತರಕ್ಕೆ ಹೋದಂತೆ ಚೂಪಾಗಿ ಮತ್ತು ದಪ್ಪವಾಗಿ ಭೂಮಿ ಒಳಗೆ ಹೂತ್ತಿಕೊಂಡಿದ್ದು ದೊಡ್ಡ ಗಾತ್ರದಲ್ಲಿ ಕಾಣುತ್ತದೆ. ಇದರಲ್ಲಿ ಯಾವುದೇ ಕೆತ್ತನೆಗಳು ಕಂಡು ಬಂದಿಲ್ಲ.
ಮುಂದೆ ಹೇರೂರು ಕಲ್ಲೂರು ಹಿನ್ನೀರಿನ ಪ್ರದೇಶದಲ್ಲಿ ಬೃಹತ್ ಪ್ರಮಾಣದ ವೃತ್ತಾಕಾರದ ಆರು ಸಮಾಧಿಗಳು ಮತ್ತು ಎಂಟು ನಿಲಸುಗಲ್ಲು ಕಂಡುಬಂದಿವೆ. ಈ ಸಮಾಧಿಗಳು ಮಧ್ಯೆ ಗಿಡ ಗಂಟೆಗಳು ಬೆಳೆದು ನಿಂತಿವೆ. ಒಂದು ಸಮಾಧಿಯು 30 ಅಡಿ ಅಗಲ ಇದೆ. 24 ಬೃಹತ್ ಉಂಡೆ ಕಲ್ಲುಗಳನ್ನು ಬಳಸಿ ಮಧ್ಯೆ ದೊಡ್ಡ ಪ್ರಮಾಣದ ಬೃಹತ್ ಬಂಡೆಯನ್ನು ಭೂಮಿಗೆ ಹೊಂದಿಕೊಂಡಂತೆ ವೃತ್ತಾಕಾರದ ಸಮಾಧಿಯನ್ನು ಮಾಡಿದ್ದಾರೆ.
ಕಲ್ಲು ಚಪ್ಪಡಿಗಳಿಂದ ಕೂಡಿ ಸಮಾಧಿಗಳನ್ನು ನಿರ್ಮಿಸಿದ್ದಾರೆ. ಅನೇಕ ಸಮಾಧಿಗಳು ನೈಸರ್ಗಿಕ ವಿಕೋಪದಿಂದ ಭೂಮಿಯಿಂದ ಕಲ್ಲುಗಳು ಹೊರಬಂದಿವೆ. ಈ ಪ್ರದೇಶವು ಬೃಹತ್ ಸಂಸ್ಕೃತಿಯ ಜನಾಂಗದ ನೆಲೆಯಾಗಿದ್ದು. ಈ ಪ್ರದೇಶ ಕಪ್ಪು ಮಣ್ಣಿನಿಂದ ಕೂಡಿದೆ. ವ್ಯವಸಾಯಕ್ಕೆ ಮತ್ತು ಮಡಿಕೆ ತಯಾರಿಕೆಗೆ ಯೋಗ್ಯವಾದ ಪ್ರದೇಶವಾಗಿದೆ. ನೀರಿನ ಸೌಲಭ್ಯವೂ ಸಿಗುತ್ತದೆ. ಈ ಸಂಸ್ಕೃತಿಯ ವಿಶೇಷವೆಂದರೆ ಕಬ್ಬಿಣ ಬಳಸಿ ಬೃಹತ್ ಬಂಡೆಗಳನ್ನು ಸೀಳಿ ಚಪ್ಪಡಿಗಳನ್ನು ತಯಾರಿಸಿ ಶವಗಳನ್ನು ಹೂಳುವ ಪದ್ಧತಿ ಇತ್ತು.
ಕಬ್ಬಿಣದ ಆಯುಧಗಳ ಬಳಕೆ, ಮಡಿಕೆಗಳ ತಯಾರಿಕೆಗಳು ಕಂಡುಬರುತ್ತವೆ. ಸ್ಥಳೀಯರು ಇವುಗಳನ್ನ ಪಾಂಡವರ ಕಲ್ಲು ದೇವರುಗಳ ಕಲ್ಲು ಎಂದು ಕರೆಯುತ್ತಾರೆ. ಪೂಜೆಯನ್ನು ಮಾಡುತ್ತಾರೆ. ಈ ಬೃಹತ್ ಶಿಲಾಯುಗದ ಸಂಸ್ಕೃತಿಯು ಕ್ರಿಸ್ತ ಪೂರ್ವ 700 ರಿಂದ 400 ಕಾಲಮಾನ ಎಂದು ಇಲಾಖೆ ಸಿಬ್ಬಂದಿ ತಿಳಿಸಿದ್ದಾರೆ.
ಕರ್ನಾಟಕದಲ್ಲಿ ಬೃಹತ್ ಶೀಲಾ ಯುಗದ ಸಮಾಧಿಯನ್ನು ಬ್ರಿಟಿಷ್ ಆಡಳಿತಕಾರಿ ರಾಬರ್ಟ್ ಬ್ರೂಸ್ ಬೂಟ್ ಅನೇಕ ನೆಲೆಗಳನ್ನು ಸಂಶೋಧನೆ ಮಾಡಿದ್ದಾರೆ. ಕರ್ನಾಟಕದಲ್ಲಿ ಇಂತ ನೆಲೆಗಳು ಸಂಗನಕಲ್ಲು ಮೈಸೂರು ಜಿಲ್ಲೆ, ಚಾಮರಾಜನಗರ ಜಿಲ್ಲೆ, ಕೊಡಗಿನ ಹೆಗ್ಗಡೆ ಹಳ್ಳಿ, ಕೊಪ್ಪ, ಚಿಕ್ಕ ಅಳುವಾರ, ತೊರೆನೂರು ಮುಂತಾದ ಪ್ರದೇಶಗಳಲ್ಲಿ ಕಂಡು ಬಂದಿವೆ.
ಆದರೆ ಕೊಡಗು ಜಿಲ್ಲೆಯಲ್ಲಿ ದೊಡ್ಡ ನಿಲಸುಗಲ್ಲು ಕಂಡುಬಂದಿರುವುದು ಈ ಪ್ರದೇಶದಲ್ಲಿ ಮಾತ್ರ. ಶಿಲಾಯುಗದ ಸಂಸ್ಕೃತಿಯ ಮಾನವರು ಯೋಗ್ಯವಾದ ಮಣ್ಣನ್ನು ಮತ್ತು ವಾಸ ಮಾಡುವುದಕ್ಕೆ ಯೋಗ್ಯವಾದ ಸ್ಥಳವನ್ನು ಹುಡುಕುತ್ತಿದ್ದರು. ಇದು ಅರಣ್ಯ ಪ್ರದೇಶವಾಗಿರುವುದರಿಂದ ಉತ್ತಮವಾದ ಹವಾಗುಣ ಇರುವುದರಿಂದ ಪ್ರದೇಶವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಇಂತಹ ಬೃಹತ್ ಶಿಲಾಯುಗ ಸಮಾಧಿಗಳನ್ನ ಕೊಡಗು ಜಿಲ್ಲೆಯ ಪುರತತ್ವ ಇಲಾಖೆ ಈ ಸ್ವಚ್ಛಗೊಳಿಸಿ. ಹಿನ್ನಿರಿನ ಪ್ರದೇಶ ಮತ್ತೆ ಪ್ರವಾಸಿ ತಾಣವಾಗಿ ಆಕರ್ಷಣೆ ಮಾಡಬೇಕಾಗಿದೆ, ಈ ಸಂಸ್ಕೃತಿಯ ಸಮಾಧಿಗಳನ್ನು ಉಳಿಸಬೇಕಾಗಿದೆ.
ಹೇಮಂತ್, ಪ್ರಸನ್ನ, ಮಂಜು ಕ್ಷೆತ್ರ ಕಾರ್ಯಕ್ಕೆ ಸಹಕರಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.