ADVERTISEMENT

ಜಿಲ್ಲೆಯ ಬಾಲಭವನಕ್ಕಿಲ್ಲ ಸೂರು

ಜಿಲ್ಲಾಡಳಿತ ಕೊಟ್ಟಿರುವುದು ಕೇವಲ 50 ಸೆಂಟ್ ಜಾಗ; ಹೆಚ್ಚುವರಿ ಸ್ಥಳಕ್ಕಾಗಿ ಪ್ರಸ್ತಾವ ಸಲ್ಲಿಕೆ

ಕೆ.ಎಸ್.ಗಿರೀಶ್
Published 14 ನವೆಂಬರ್ 2022, 8:48 IST
Last Updated 14 ನವೆಂಬರ್ 2022, 8:48 IST
ಶಿಶು ಕಲ್ಯಾಣ ಸಂಸ್ಥೆಯಲ್ಲಿ ಈಚೆಗೆ ನಡೆದ ವಿವಿಧ ಸ್ಪರ್ಧಾ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಭಾಗವಹಿಸಿದ್ದರು
ಶಿಶು ಕಲ್ಯಾಣ ಸಂಸ್ಥೆಯಲ್ಲಿ ಈಚೆಗೆ ನಡೆದ ವಿವಿಧ ಸ್ಪರ್ಧಾ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಭಾಗವಹಿಸಿದ್ದರು   

ಮಡಿಕೇರಿ: ಮಕ್ಕಳ ಶ್ರೇಯೋಭಿವೃದ್ಧಿ ಗಾಗಿ ಕೆಲಸ ಮಾಡುವ ಬಾಲಭವನಕ್ಕೆ ಒಂದು ಸೂರೂ ಸಹ ಕೊಡಗು ಜಿಲ್ಲೆಯಲ್ಲಿಲ್ಲ. ಸದ್ಯ, ಬಾಲಭವನ ಎಂದು ಕರೆಯಲಾಗುವ ಬಸ್‌ ನಿಲ್ದಾಣದ ಸಮೀಪ ಇರುವ ಕೇಂದ್ರವು ಕೊಡಗು ಜಿಲ್ಲಾ ಶಿಶು ಕಲ್ಯಾಣ ಸಂಸ್ಥೆಯದ್ದಾಗಿದೆ. ಬಾಲಭವನ ಸೊಸೈಟಿಗೆಂದೇ ಪ್ರತ್ಯೇಕ ಕಟ್ಟಡ ಇನ್ನೂ ನಿರ್ಮಿಸಲಾಗಿಲ್ಲ.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಡಿ ಬಾಲಭವನ ಸೊಸೈಟಿಯನ್ನು ಸೇರಿಸಲಾಗಿದೆ. ಇದರ ಸಮಿತಿ ಅಧ್ಯಕ್ಷರಾಗಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಇರುತ್ತಾರೆ. ಹಾಗಿದ್ದರೂ ಸ್ವಂತ ಕಟ್ಟಡವೂ ಇಲ್ಲ, ಬಾಡಿಗೆ ಕಟ್ಟಡವೂ ಇಲ್ಲದಾಗಿದೆ. ಕಾರ್ಯಕ್ರಮ ನಡೆಸಬೇಕಿದ್ದರೆ ಬೇರೆ ಸಭಾಂಗಣಗಳನ್ನು ಬಾಡಿಗೆಗೆ ಪಡೆಯಬೇಕಾದ ಅನಿವಾರ್ಯತೆ ಇದೆ.

ಬಾಲಭವನ ನಿರ್ಮಾಣಕ್ಕೆಂದೇ ಜಿಲ್ಲಾಡಳಿತ ಸಂಪಿಗೆಕಟ್ಟೆ ಸಮೀಪ 50 ಸೆಂಟ್ ಜಾಗ ನೀಡಿದೆ. ಆದರೆ, ಇಷ್ಟು ಚಿಕ್ಕ ಜಾಗದಲ್ಲಿ ಮಕ್ಕಳಿಗೆ ಯಾವುದೇ ಕ್ರಿಯಾತ್ಮಕ ಚಟುವಟಿಕೆಗಳನ್ನು ಹಮ್ಮಿಕೊಳ್ಳಲು ಸಾಧ್ಯವಾಗುವುದಿಲ್ಲ. ಹಾಗಾಗಿ, ಮತ್ತೆ 50 ಸೆಂಟ್ ಜಾಗವನ್ನು ಹೆಚ್ಚುವರಿಯಾಗಿ ಬೇಕು ಎಂಬ ಪ್ರಸ್ತಾವ ಸಲ್ಲಿಸಲಾಗಿದೆ.

ADVERTISEMENT

‌ನಿಯಮಿತವಾಗಿ ಪ್ರತಿ ವರ್ಷವೂ ಬಾಲಭವನ ಸೊಸೈಟಿಯು ಸ್ವಾತಂತ್ರ್ಯ ದಿನಾಚರಣೆ, ಮಹಾತ್ಮ ಗಾಂಧಿ ಜಯಂತಿ, ಕರ್ನಾಟಕ ರಾಜ್ಯೋತ್ಸವ, ವಾರಾಂತ್ಯ ಕಾರ್ಯಾಗಾರಗಳು, ಬೇಸಿಗೆ ಶಿಬಿರ, ಅಭಿರಂಗ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಇವೆಲ್ಲವನ್ನು ಬಸ್‌ ನಿಲ್ದಾಣ ಸಮೀಪ ಇರುವ ಶಿಶು ಕಲ್ಯಾಣ ಸಂಸ್ಥೆಯ ಜಾಗದಲ್ಲಿ ಅಥವಾ ಬೇರೆಡೆ ಬಾಡಿಗೆ ನೀಡಿ ಮಾಡಲಾಗುತ್ತಿದೆ.

ಅಸಾಧಾರಣ ಸಾಧನೆ ಮಾಡಿದ ಮಕ್ಕಳನ್ನು ಗುರುತಿಸುವ ಕೆಲಸವನ್ನೂ ಬಾಲಭವನ ಸೊಸೈಟಿ ನಿರ್ವಹಿಸುತ್ತಿದೆ. ಜಿಲ್ಲಾಮಟ್ಟದ ಪ್ರತಿಭಾ ಪುರಸ್ಕಾರವನ್ನು ಒಟ್ಟು 8 ಮಕ್ಕಳಿಗೆ ಪ್ರತಿ ಗಣರಾಜ್ಯೋತ್ಸವದಲ್ಲಿ ನೀಡಲಾಗುತ್ತಿದೆ.

ತಾಲ್ಲೂಕು ಮಟ್ಟದ ಬಾಲ ಭವನ ಸೊಸೈಟಿಗಳಿದ್ದು, ಇವುಗಳಿಗೆ ಉಪ ವಿಭಾಗಾಧಿಕಾರಿ ಅಧ್ಯಕ್ಷ ರಾಗಿರುತ್ತಾರೆ. ಇಲ್ಲೂ ಪ್ರತ್ಯೇಕ ಕಟ್ಟಡ ಇಲ್ಲವಾಗಿದೆ.

ಮಕ್ಕಳಿಗೆ ಬೇಕಾಗುವಂತಹ ಕ್ರೀಡಾ ಪರಿಕರಗಳುಳ್ಳ, ಮಕ್ಕಳ ಬೌದ್ಧಿಕ, ದೈಹಿಕ, ಮಾನಸಿಕ ವಿಕಾಸಕ್ಕೆ ಪೂರಕವಾದ ಕಾರ್ಯಕ್ರಮಗಳನ್ನು ಆಯೋಜಿಸಲು, ಮಕ್ಕಳ ಪ್ರತಿಭಾ ಪ್ರದರ್ಶನಕ್ಕೆ ಅವಕಾಶವಾಗುವಂತಹ ಕಾರ್ಯಕ್ರಮಗಳಿಗೆ ಬಾಲಭವನ ನಿರ್ಮಾಣವಾಗ ಬೇಕಿದೆ. ಈ ಹಿಂದೆ ಜಿ.ಪಂ ಸಿಇಒ ಆಗಿದ್ದ ಭಂವರ್‌ಸಿಂಗ್ ಮೀನಾ ಮಕ್ಕಳ ಗ್ರಾಮಸಭೆ ಮಾಡುವ ಇಂಗಿತ ವ್ಯಕ್ತಪಡಿಸಿದ್ದರು. ಆದರೆ, ಅವರು ಅದನ್ನು ಅನುಷ್ಠಾನಕ್ಕೆ ತರುವಷ್ಟ ರಲ್ಲಿ ವರ್ಗಾವಣೆಗೊಂಡಿದ್ದಾರೆ. ಭವನಕ್ಕೆ ಇನ್ನೂ ಹೆಚ್ಚಿನ ಜಾಗ ನೀಡಿ, ಸುಸಜ್ಜಿತ ಬಾಲಭವನ ನಿರ್ಮಿಸಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.