ADVERTISEMENT

‘ಸಹಕಾರ ಕ್ಷೇತ್ರದಲ್ಲಿ ಹಸ್ತಕ್ಷೇಪ ಬೇಡ’

ಕೊಡಗು ಜಿಲ್ಲೆಯಲ್ಲಿ ಸಹಕಾರ ಸಪ್ತಾಹಕ್ಕೆ ಚಾಲನೆ, ಹಿರಿಯ ಸಹಕಾರಿ ಎಂ.ಸಿ.ನಾಣಯ್ಯ ಪ್ರತಿಪಪಾದನೆ

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2024, 6:12 IST
Last Updated 15 ನವೆಂಬರ್ 2024, 6:12 IST
ಮಡಿಕೇರಿ ನಗರದ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ಪಂದ್ಯಂಡ ಬೆಳ್ಯಪ್ಪ ಸಭಾಂಗಣದಲ್ಲಿ ಹಿರಿಯ ಸಹಕಾರಿ ಎಂ.ಸಿ.ನಾಣಯ್ಯ ಸಹಕಾರ ಸಪ್ತಾಹವನ್ನು ಉದ್ಘಾಟಿಸಿದರು. ಕೊಡಂದೇರ ಬಾಂಡ್ ಗಣಪತಿ, ಎಂ.ಎಂ.ಶ್ಯಾಮಲಾ ಭಾಗವಹಿಸಿದ್ದರು
ಮಡಿಕೇರಿ ನಗರದ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ಪಂದ್ಯಂಡ ಬೆಳ್ಯಪ್ಪ ಸಭಾಂಗಣದಲ್ಲಿ ಹಿರಿಯ ಸಹಕಾರಿ ಎಂ.ಸಿ.ನಾಣಯ್ಯ ಸಹಕಾರ ಸಪ್ತಾಹವನ್ನು ಉದ್ಘಾಟಿಸಿದರು. ಕೊಡಂದೇರ ಬಾಂಡ್ ಗಣಪತಿ, ಎಂ.ಎಂ.ಶ್ಯಾಮಲಾ ಭಾಗವಹಿಸಿದ್ದರು   

ಮಡಿಕೇರಿ: ‘ಸಹಕಾರ ಕ್ಷೇತ್ರದಲ್ಲಿ ಯಾವುದೇ ರೀತಿಯ ಹಸ್ತಕ್ಷೇಪ ಇರಬಾರದು ಹಾಗೂ ಸಹಕಾರ ಸಂಘಗಳು ಪಕ್ಷಾತೀತವಾಗಿ ಕಾರ್ಯನಿರ್ವಹಿಸಬೇಕು’ ಎಂದು ಹಿರಿಯ ಸಹಕಾರಿ ಎಂ.ಸಿ.ನಾಣಯ್ಯ ತಿಳಿಸಿದರು.

ನಗರದ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಆವರಣದಲ್ಲಿ ಸಹಕಾರ ಸಪ್ತಾಹದ ಧ್ವಜಾರೋಹಣ ನಂತರ ಪಂದ್ಯಂಡ ಬೆಳ್ಯಪ್ಪ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸಹಕಾರ ಸಂಘಗಳು ರಾಜಕೀಯ ರಹಿತವಾಗಿರಬೇಕು. ಸಹಕಾರ ಕ್ಷೇತ್ರ ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಅವಕಾಶ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.

ಯಾರೂ, ಯಾವುದೇ ಬಗೆಯಲ್ಲೂ ಹಸ್ತಕ್ಷೇಪ ನಡೆಸದೇ ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎಂಬ ಪರಿಕಲ್ಪನೆಯಡಿ ಎಲ್ಲರೂ ಕಾರ್ಯನಿರ್ವಹಿಸಿದರೆ ಸಹಕಾರ ಸಂಘಗಳ ಬಲವರ್ಧನೆ ಸಾಧ್ಯ ಎಂದು ಪ್ರತಿಪಾದಿಸಿದರು.

ADVERTISEMENT

ಸಹಕಾರ ಕ್ಷೇತ್ರದಲ್ಲಿ ಪ್ರಾಮಾಣಿಕತೆ ಮತ್ತು ದಕ್ಷತೆ ಇದ್ದಲ್ಲಿ ಮಾತ್ರ ಸಹಕಾರ ಸಂಘಗಳನ್ನು ಮತ್ತಷ್ಟು ಬಲಪಡಿಸಬಹುದಾಗಿದೆ. ಆ ನಿಟ್ಟಿನಲ್ಲಿ ಎಲ್ಲರೂ ಪ್ರಯತ್ನಿಸಬೇಕಿದೆ ಎಂದು ತಿಳಿಸಿದರು.

ಸಹಕಾರ ಸಂಘಗಳು ಆರ್ಥಿಕ ಪ್ರಗತಿಯನ್ನು ಮತ್ತಷ್ಟು ವೃದ್ಧಿಸಿಕೊಳ್ಳಬೇಕಿದೆ ಎಂದು ಅಭಿಪ್ರಾಯಪಟ್ಟ ಅವರು, ಕೃಷಿಕರು ಹಾಗೂ ಬಡವರಿಗೆ ಸಾಲ ಸೌಲಭ್ಯ ಕಲ್ಪಿಸಿ ಅವರ ಆರ್ಥಿಕ ಬೆಳವಣಿಗೆಗೆ ಸಹಕರಿಸಬೇಕು ಎಂದೂ ಸಲಹೆ ನೀಡಿದರು.

ಸಂಪತ್ತನ್ನು ಎಲ್ಲರೂ ಹಂಚಿಕೊಂಡು ಸಮಾನವಾಗಿ ಬದುಕುವ ಧ್ಯೇಯೋದ್ದೇಶ ಹೊಂದಿರುವ ಸಹಕಾರ ಸಂಘಗಳಿಗೆ ದೇಶದಲ್ಲಿ ತಮ್ಮದೇ ಆದ ಸ್ಥಾನವಿದೆ ಎಂದರು. ರಾಜ್ಯದಲ್ಲಿ 21 ಕೇಂದ್ರ ಸಹಕಾರ ಬ್ಯಾಂಕುಗಳು ಇದ್ದು, ಕೊಡಗು ಜಿಲ್ಲೆಯ ಸಹಕಾರ ಬ್ಯಾಂಕು ಅತ್ಯುತ್ತಮವಾಗಿ ಆರ್ಥಿಕ ಚಟುವಟಿಕೆ ನಡೆಸಿಕೊಂಡು ಹೋಗುತ್ತಿದೆ ಎಂದು ಶ್ಲಾಘಿಸಿದರು.‌

ಕರ್ನಾಟಕ ಇನ್‍ಸ್ಟಿಟ್ಯೂಟ್ ಆಫ್ ಕೋ-ಆಪರೇಟಿವ್ ಮ್ಯಾನೇಜ್‍ಮೆಂಟ್ ಸಂಸ್ಥೆಯ ನಿವೃತ್ತ ಪ್ರಾಂಶುಪಾಲರಾದ ಎಂ.ಎಂ.ಶ್ಯಾಮಲಾ ಮಾತನಾಡಿ, ‘ಸಹಕಾರ ಸಪ್ತಾಹದಲ್ಲಿ ಸಹಕಾರ ಸಂಘಗಳ ಪ್ರಗತಿ ಬಗ್ಗೆ ವಿಮರ್ಶೆಗಳು ನಡೆಯಬೇಕು’ ಎಂದು ಹೇಳಿದರು.

ಸಹಕಾರ ಚಳವಳಿಯನ್ನು ಬಲಪಡಿಸಿ ಸಾಮೂಹಿಕ ಪ್ರಯತ್ನದಿಂದ ಪ್ರಗತಿ ಸಾಧಿಸುವುದು ಸಹಕಾರದ ತತ್ವವಾಗಿದೆ. ಸಹಕಾರ ಕ್ಷೇತ್ರದ ಆರ್ಥಿಕ ಬೆಳವಣಿಗೆಗೆ ಸಾಕಷ್ಟು ಕಾರ್ಯಕ್ರಮ ರೂಪಿಸಲಾಗಿದೆ ಎಂದು ಅವರು ಹೇಳಿದರು.

ಸಹಕಾರ ಕ್ಷೇತ್ರದಲ್ಲಿ ಕೃಷಿ, ತೋಟಗಾರಿಕೆ, ಹೈನುಗಾರಿಕೆ, ಮೀನುಗಾರಿಕೆ ಹೀಗೆ ವಿವಿಧ ರೀತಿಯ ಉದ್ಯೋಗಾವಕಾಶಗಳು ದೊರೆಯಲಿವೆ. ಹೊಸ ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಸಹಕಾರ ಕ್ಷೇತ್ರವನ್ನು ಮತ್ತಷ್ಟು ಸುಧಾರಿಸಬೇಕು. ಮೂಲ ಸೌಲಭ್ಯ ಅಭಿವೃದ್ಧಿಗೆ ಒತ್ತು ನೀಡಬೇಕು ಎಂದರು.

ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಕೇಟೋಳಿರ ಎಸ್.ಪೂವಯ್ಯ, ನಿರ್ದೇಶಕರಾದ ಹೊಟ್ಟೆಂಗಡ ಎಂ.ರಮೇಶ್, ಹೊಸೂರು ಸತೀಶ್ ಕುಮಾರ್, ಕೆ.ಅರುಣ್ ಭೀಮಯ್ಯ, ಕಾಂಗೀರ ಎನ್.ಸತೀಶ್, ಪೂಳಂಡ ಪಿ.ಪೆಮ್ಮಯ್ಯ, ಎಚ್.ಕೆ.ಮಾದಪ್ಪ, ಎಸ್.ಸಿ.ಶರತ್‍ಶೇಖರ್, ಟಿ.ಆರ್.ಶರವಣ ಕುಮಾರ್, ಗುಮ್ಮಟ್ಟೀರ ಎಸ್.ಕಿಲನ್ ಗಣಪತಿ, ಜಲಜಾ ಶೇಖರ್, ವೃತ್ತಿಪರ ನಿರ್ದೇಶಕರಾದ ಮುಂಡಂಡ ಸಿ.ನಾಣಯ್ಯ, ಡಿಸಿಸಿ ಬ್ಯಾಂಕಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರವೀಣ್ ಬಿ ನಾಯಕ, ಪ್ರಧಾನ ವ್ಯವಸ್ಥಾಪಕಿ ಜಿ.ಎಂ.ಬೋಜಮ್ಮ ಭಾಗವಹಿಸಿದ್ದರು.

ಮಡಿಕೇರಿ ನಗರದ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ಪಂದ್ಯಂಡ ಬೆಳ್ಯಪ್ಪ ಸಭಾಂಗಣದಲ್ಲಿ ಗುರುವಾರ ನಡೆದ ಸಹಕಾರ ಸಪ್ತಾಹದಲ್ಲಿ ಹಿರಿಯ ಸಹಕಾರಿ ಎಂ.ಸಿ.ನಾಣಯ್ಯ ಮಾತನಾಡಿದರು
ಸಹಕಾರ ಸಪ್ತಾಹದಲ್ಲಿ ಭಾಗವಹಿಸಿದ್ದ ಸಭಿಕರು

ಶೂನ್ಯ ಬಡ್ಡಿದರದಲ್ಲಿ ಕೃಷಿಕರಿಗೆ ಸಾಲ;

ಕೊಡಂದೇರ ಬಾಂಡ್ ಗಣಪತಿ ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ಅಧ್ಯಕ್ಷ ಕೊಡಂದೇರ ಬಾಂಡ್ ಗಣಪತಿ ಮಾತನಾಡಿ ‘71ನೇ ಸಹಕಾರ ಸಪ್ತಾಹವನ್ನು ಆಚರಿಸಲಾಗುತ್ತಿದ್ದು ಕೊಡಗು ಡಿಸಿಸಿ ಬ್ಯಾಂಕ್ ವತಿಯಿಂದ ₹ 3 ರಿಂದ 5 ಲಕ್ಷದವರೆಗೆ ಶೂನ್ಯ ಬಡ್ಡಿ ದರದಲ್ಲಿ ಕೃಷಿಕರಿಗೆ ಸಾಲ ನೀಡಲಾಗುತ್ತಿದೆ’ ಎಂದು ಮಾಹಿತಿ ನೀಡಿದರು. ಸಹಕಾರ ಕಾಯ್ದೆ ತಿದ್ದುಪಡಿಯಿಂದ ಸಹಕಾರ ಸಂಘಗಳ ಬೆಳವಣಿಗೆ ಕಷ್ಟಸಾಧ್ಯ. ನೂತನ ಸಹಕಾರ ಕಾಯ್ದೆ ಜಾರಿಗೊಂಡಲ್ಲಿ ಸಹಕಾರ ಸಂಘಗಳು ಸ್ವಾಯತ್ತ ಸಂಸ್ಥೆಯಾಗಿ ಕಾರ್ಯನಿರ್ವಹಿಸಲು ಸಾಧ್ಯವಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು. ಕೊಡಗಿನ ಸಹಕಾರ ಕ್ಷೇತ್ರ ರಾಜ್ಯಕ್ಕೆ ಮಾದರಿ. ನಬಾರ್ಡ್ ಮೂಲಕ ಬರುವ ಸಾಲ ಸೌಲಭ್ಯ ಕಡಿಮೆಯಾಗಿರುವುದರಿಂದ ಕೃಷಿಕರಿಗೆ ಸಾಲ ಸೌಲಭ್ಯ ಒದಗಿಸುವುದು ಕಷ್ಟಸಾಧ್ಯವಾಗಿದೆ. ಆದ್ದರಿಂದ ನಮ್ಮ ಪಾಲನ್ನು ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.