ADVERTISEMENT

ಕೊಡವ ಸಂಸ್ಕೃತಿ ಉಳಿಸಲು ರಾಜಕೀಯ ಬೇಡ: ಉದ್ಯಮಿ ಕುಪ್ಪಂಡ ಛಾಯಾ

ವಿರಾಜಪೇಟೆ: ಉದ್ಯಮಿ ಕುಪ್ಪಂಡ ಛಾಯಾ ನಂಜಪ್ಪ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2024, 4:53 IST
Last Updated 30 ಸೆಪ್ಟೆಂಬರ್ 2024, 4:53 IST
ವಿರಾಜಪೇಟೆ ಕೊಡವ ಪೊಮ್ಮಕ್ಕಡ ಒಕ್ಕೂಟದ ವತಿಯಿಂದ ಕೈಲ್ ಪೋದ್ ಹಬ್ಬದ ಪ್ರಯುಕ್ತ ಈಚೆಗೆ ನಡೆದ ಒತ್ತೋರ್ಮೆ ಕೂಟದಲ್ಲಿ ಉದ್ಯಮಿ ಕುಪ್ಪಂಡ ಛಾಯಾ ನಂಜಪ್ಪ ಅವರನ್ನು ಸನ್ಮಾನಿಸಲಾಯಿತು.
ವಿರಾಜಪೇಟೆ ಕೊಡವ ಪೊಮ್ಮಕ್ಕಡ ಒಕ್ಕೂಟದ ವತಿಯಿಂದ ಕೈಲ್ ಪೋದ್ ಹಬ್ಬದ ಪ್ರಯುಕ್ತ ಈಚೆಗೆ ನಡೆದ ಒತ್ತೋರ್ಮೆ ಕೂಟದಲ್ಲಿ ಉದ್ಯಮಿ ಕುಪ್ಪಂಡ ಛಾಯಾ ನಂಜಪ್ಪ ಅವರನ್ನು ಸನ್ಮಾನಿಸಲಾಯಿತು.   

ವಿರಾಜಪೇಟೆ: ‘ಕೊಡವರು ತಮ್ಮ ಆಚಾರ-ವಿಚಾರ ಪದ್ಧತಿ ಪರಂಪರೆ ಉಳಿಸಿ ಬೆಳೆಸುವ ವಿಚಾರದಲ್ಲಿ ಎಲ್ಲೂ ರಾಜಕೀಯ ಬೆರೆಸಬಾರದು’ ಎಂದು ಉದ್ಯಮಿ ಕುಪ್ಪಂಡ ಛಾಯಾ ನಂಜಪ್ಪ ಅವರು ಕಿವಿಮಾತು ಹೇಳಿದರು.

ಪಟ್ಟಣದ ಕೊಡವ ಪೊಮ್ಮಕ್ಕಡ ಒಕ್ಕೂಟದಿಂದ ಪಟ್ಟಣದ ಕೊಡವ ಸಮಾಜದ ಆವರಣದಲ್ಲಿ ಕೈಲ್ ಪೋದ್ ಹಬ್ಬದ ಪ್ರಯುಕ್ತ ಈಚೆಗೆ ನಡೆದ ಒತ್ತೋರ್ಮೆ ಕೂಟದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.

‘ಕೊಡವರು ತಮ್ಮ ಸಂಸ್ಕೃತಿ, ಆಚಾರ, ವಿಚಾರ ಪದ್ಧತಿ ಪರಂಪರೆ ಉಳಿಸಿ ಬೆಳೆಸಬೇಕು. ಸ್ವಾಭಿಮಾನಿಗಳಾದ ಕೊಡವರು ಬದುಕಿನ ಪ್ರತಿ ಹೆಜ್ಜೆಯಲ್ಲೂ ಕೊಡವತನ ಮರೆಯಬಾರದು. ಈ ಜನಾಂಗದವರು ಅಭಿವೃದ್ಧಿ ಹೊಂದಿದರೆ ಮಾತ್ರ ಕೊಡವರ ಅಭಿವೃದ್ಧಿ ಸಾಧ್ಯ. ಕೊಡಗಿನ ಹಬ್ಬ ಹರಿದಿನಗಳನ್ನು ಎಲ್ಲರೂ ಒಗ್ಗಟ್ಟಾಗಿ ಆಚರಿಸುವಂತಾಗಬೇಕು’ ಎಂದು ಅಭಿಪ್ರಾಯಪಟ್ಟರು.

ADVERTISEMENT

 ಕೊಡವ ಪೊಮ್ಮಕ್ಕಡ ಒಕ್ಕೂಟದ ಅಧ್ಯಕ್ಷೆ ಮನೆಯಪಂಡ ಕಾಂತಿ ಸತೀಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ‘ಹಿಂದಿನಿಂದಲೂ ಮೂರು ದಿನಗಳ ಕಾಲ ಸಂಭ್ರಮದಿಂದ ಕೈಲ್ ಮುಹೂರ್ತ ಹಬ್ಬ ಆಚರಿಸುತ್ತಾ ಬಂದಿದ್ದೇವೆ. ಬೇಟೆ, ಗೆಡ್ಡೆ-ಗೆಣಸು ಸಂಗ್ರಹ, ಭತ್ತ ಕೃಷಿ ಹಿಂದಿನಿಂದಲೂ ನಮ್ಮ ಜೀವನ ಪದ್ಧತಿ. ಆದರೆ, ಈಚಿನ ದಿನಗಳಲ್ಲಿ ನಾಗರಿಕತೆ ಪ್ರಭಾವ ನಮ್ಮ ಸಂಪ್ರದಾಯಗಳ ಮೇಲೆ ಬೀರಿ ಹಿಂದಿನ ಸಂಭ್ರಮ ಇಂದು ಕೇವಲ ಸಾಂಕೇತಿಕವಾಗಿದೆ’ ಎಂದರು.

‘ಆಚಾರ ವಿಚಾರ, ಪದ್ಧತಿ ಉಳಿಸಿ ಬೆಳೆಸುವಲ್ಲಿ ಯುವ ಜನಾಂಗದ ಪಾತ್ರ ಬಹುಮುಖ್ಯ. ಮಕ್ಕಳಿಗೆ ಬಾಲ್ಯದಲ್ಲಿಯೇ ಸಂಸ್ಕಾರದ ಪಾಠವನ್ನು ಮನೆಯಲ್ಲಿ ತಾಯಿ ಕಲಿಸಿ ಕೊಡಬೇಕು’ ಎಂದು ಕಿವಿಮಾತನ್ನು ಹೇಳಿದರು.

ಒಕ್ಕೂಟದ ಕಾರ್ಯದರ್ಶಿ ಬಯವಂಡ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮಾಳೇಟಿರ ಸ್ವಾತಿ ನಾಯಕತ್ವದ ಬೋಜಕ್ಕ ತಂಡದ ಸದಸ್ಯರು ಸಭಾ ಕಾರ್ಯಕ್ರಮದ ಬಳಿಕ ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮವನ್ನು ಪ್ರದರ್ಶಿಸಿದರು.

ಈ ಸಂದರ್ಭ ಒಕ್ಕೂಟದ ಸದಸ್ಯರಿಗೆ ವಿವಿಧ ಸ್ಪರ್ಧೆ ಆಯೋಜಿಸಲಾಗಿತ್ತು. ಸ್ಪರ್ಧೆಯ ವಿಜೇತರಿಗೆ ಕೊನೆಯಲ್ಲಿ ಬಹುಮಾನ ವಿತರಿಸಲಾಯಿತು.

ವೇದಿಕೆಯಲ್ಲಿ ಒಕ್ಕೂಟದ ಉಪಾಧ್ಯಕ್ಷೆ ಅಮ್ಮಣಿಚಂಡ ಈಶ್ವರಿ ಗಂಗಮ್ಮ, ಸಲಹಾ ಸಮಿತಿ ಸದಸ್ಯರಾದ ಬಿದ್ದಂಡ ರಾಣಿ, ನಾಯಕಂಡ ಬೇಬಿ ಚಿಣ್ಣಪ್ಪ, ಖಜಾಂಚಿ ತಾತಂಡ ಯಶು ಕಬೀರ್ ಉಪಸ್ಥಿತರಿದ್ದರು. ಐನಂಡ ಜಮುನಾ, ಚೆಂದಂಡ ಮೀನಾ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.