ADVERTISEMENT

ಕೊಡಗು: ನರರೋಗ ತಜ್ಞರ ನೇಮಕಾತಿ ಯಾವಾಗ?

ಕೊಡಗಿನಲ್ಲಿ 7 ತಿಂಗಳುಗಳಿಂದ ಕಾರ್ಯನಿರ್ವಹಿಸುತ್ತಿದೆ ಸುಸಜ್ಜಿತ ಮಿದುಳು ಆರೋಗ್ಯ ಚಿಕಿತ್ಸಾಲಯ

ಕೆ.ಎಸ್.ಗಿರೀಶ್
Published 29 ಅಕ್ಟೋಬರ್ 2024, 4:27 IST
Last Updated 29 ಅಕ್ಟೋಬರ್ 2024, 4:27 IST
ಮಡಿಕೇರಿಯಲ್ಲಿರುವ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗೆ ಸೇರಿದ ಆಸ್ಪತ್ರೆ (ಜಿಲ್ಲಾಸ್ಪತ್ರೆ)ಯಲ್ಲಿ ಮಿದುಳು ಆರೋಗ್ಯ ಕ್ಲಿನಿಕ್‌ನಲ್ಲಿ ವಿವಿಧ ಬಗೆಯ ಥೆರಪಿಗಳನ್ನು ನೀಡುತ್ತಿರುವುದು
ಮಡಿಕೇರಿಯಲ್ಲಿರುವ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗೆ ಸೇರಿದ ಆಸ್ಪತ್ರೆ (ಜಿಲ್ಲಾಸ್ಪತ್ರೆ)ಯಲ್ಲಿ ಮಿದುಳು ಆರೋಗ್ಯ ಕ್ಲಿನಿಕ್‌ನಲ್ಲಿ ವಿವಿಧ ಬಗೆಯ ಥೆರಪಿಗಳನ್ನು ನೀಡುತ್ತಿರುವುದು   

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಕಳೆದ 7 ತಿಂಗಳುಗಳಿಂದ ಸುಸಜ್ಜಿತವಾದ ‘ಮಿದುಳು ಆರೋಗ್ಯ ಕ್ಲಿನಿಕ್’ ಕಾರ್ಯನಿರ್ವಹಿಸುತ್ತಿದ್ದರೂ, ನರರೋಗ ತಜ್ಞರ ನೇಮಕಾತಿ ಇನ್ನೂ ಆಗಿಲ್ಲ. ಇದರಿಂದ ಪಾರ್ಶ್ವವಾಯುವಿಗೆ ಒಳಗಾದ ರೋಗಿಗಳು ಅತ್ಯಾಧುನಿಕ ಚಿಕಿತ್ಸೆಗಾಗಿ ಮೈಸೂರು, ಬೆಂಗಳೂರು ಇಲ್ಲವೇ ಮಂಗಳೂರಿಗೆ ಹೋಗುತ್ತಿದ್ದು, ಆದಷ್ಟು ಶೀಘ್ರ ಒಬ್ಬ ನರರೋಗ ತಜ್ಞ ವೈದ್ಯನ್ನಾದರೂ ನೇಮಕ ಮಾಡಿ ಎಂದು ರೋಗಿಗಳು ಒತ್ತಾಯಿಸುತ್ತಿದ್ದಾರೆ.

ಮದ್ಯಪಾನ, ದೂಮಪಾನ, ಅನಿಯಂತ್ರಿತ ರಕ್ತದೊತ್ತಡ, ಮಧುಮೇಹ, ಕೊಲೆಸ್ಟ್ರಾಲ್ ಸೇರಿದಂತೆ ಇನ್ನಿತರ ಕಾರಣಗಳಿಂದ ದಿನದಿಂದ ದಿನಕ್ಕೆ ಪಾರ್ಶ್ವವಾಯುವಿಗೆ ಒಳಗಾದವರ ಸಂಖ್ಯೆ ಜಿಲ್ಲೆಯಲ್ಲಿ ಹೆಚ್ಚುತ್ತಿದೆ. ಹಿಂದೆ ವಯಸ್ಸಾದವರಲ್ಲಿ ಹೆಚ್ಚಾಗಿ ಪಾರ್ಶ್ವವಾಯು ಕಂಡು ಬರುತ್ತಿತ್ತು. ಆದರೆ, ಈಗ ಮಧ್ಯವಯಸ್ಸಿನವರು ಮಾತ್ರವಲ್ಲ ಯುವಕರಲ್ಲೂ ಹೆಚ್ಚಾಗಿ ಪಾರ್ಶ್ವವಾಯು ಕಾಣಿಸಿಕೊಳ್ಳುತ್ತಿದೆ.

ಪಾರ್ಶ್ವವಾಯುವಿಗೆ ಅತ್ಯಾಧುನಿಕ ಚಿಕಿತ್ಸೆ ನೀಡುವಂತಹ ನರರೋಗತಜ್ಞರು ಜಿಲ್ಲೆಯಲ್ಲಿಲ್ಲ. ಆದರೆ, ಸುಸಜ್ಜಿತವಾದ ‘ಮಿದುಳು ಆರೋಗ್ಯ ಚಿಕಿತ್ಸಾಲಯ’ವು ಕಳೆದ 7 ತಿಂಗಳುಗಳಿಂದ ಇಲ್ಲಿನ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗೆ ಸೇರಿದ ಆಸ್ಪತ್ರೆ (ಜಿಲ್ಲಾಸ್ಪತ್ರೆ)ಯಲ್ಲಿ ಕಾರ್ಯನಿರ್ವಹಣೆ ಮಾಡುತ್ತಿದೆ.

ADVERTISEMENT

ಇಲ್ಲಿ ಸದ್ಯ ಜಿಲ್ಲಾ ಸಂಯೋಜಕರು, ಮನಶಾಸ್ತ್ರಜ್ಞರು, ಭೌತಿಕ ಚಿಕಿತ್ಸಕರು, ವಾಕ್ ಮತ್ತು ಶ್ರವಣ ಚಿಕಿತ್ಸಕರು, ಶೂಶ್ರೂಷಕರು ಇದ್ದಾರೆ. ನರರೋಗ ತಜ್ಞರನ್ನೊಬ್ಬರನ್ನು ಬಿಟ್ಟು ಉಳಿದೆಲ್ಲ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಸದ್ಯ, ಪಾರ್ಶ್ವವಾಯುವಿಗೆ ಒಳಗಾದವರಿಗೆ ಫಿಜಿಶಿಯನ್ ಚಿಕಿತ್ಸೆ ನೀಡುತ್ತಿದ್ದಾರೆ.

ಹೆಚ್ಚಿನ ಮಂದಿ ಪಾರ್ಶ್ವವಾಯುವಿಗೆ ಒಳಗಾದವರು ಆಸ್ಪತ್ರೆಗೆ ಬಾರದೇ ಮೈಸೂರು ಮತ್ತು ಮಂಗಳೂರಿಗೆ ಹೋಗುತ್ತಿದ್ದಾರೆ. ಅಲ್ಲಿ ನರರೋಗತಜ್ಞರು ಇರುವುದರಿಂದ ಸಹಜವಾಗಿಯೇ ‘ಬ್ರೇನ್ ಆ್ಯಂಜಿಯೊಗ್ರಾಂ’ ಸೇರಿದಂತೆ ಇತರ ಅತ್ಯಾಧುನಿಕ ಚಿಕಿತ್ಸೆಗಳು ಲಭ್ಯವಿವೆ. ಆದರೆ, ಕೊಡಗಿನಲ್ಲಿ ಈ ಬಗೆಯ ಅತ್ಯಾಧುನಿಕ ಚಿಕಿತ್ಸೆಗಳು ಲಭ್ಯವಿಲ್ಲ.

ಆದಾಗ್ಯೂ, ಇಲ್ಲಿಯೇ ಸ್ಕ್ಯಾನಿಂಗ್ ಮಾಡಿ ಪಾರ್ಶ್ವವಾಯುವಿನ ಪ್ರಮಾಣವನ್ನು ನಿರ್ಧರಿಸಬಹುದು. ಅದಕ್ಕೆ ಅನುಗುಣವಾಗಿ ಫಿಜಿಶಿಯನ್‌ ಚಿಕಿತ್ಸೆ ನೀಡುತ್ತಿದ್ದಾರೆ. ಒಂದು ವೇಳೆ ತೀವ್ರತರವಾದ ಪಾರ್ಶ್ವವಾಯು ಆಗಿದ್ದರೆ ಅವರನ್ನು ಹೆಚ್ಚಿನ ಚಿಕಿತ್ಸೆಗೆ ಹೊರ ಜಿಲ್ಲೆಗೆ ಕಳುಹಿಸುತ್ತಿದ್ದಾರೆ. ಕೂಡಲೇ ನರರೋಗತಜ್ಞರೊಬ್ಬರನ್ನಾದರೂ ಜಿಲ್ಲೆಗೆ ನೀಡಬೇಕು ಎಂಬ ಒತ್ತಾಯ ಸಾರ್ವಜನಿಕರಿಂದ ವ್ಯಕ್ತವಾಗಿದೆ.

ಇಂತಹ ಕೊರತೆಗಳ ಮಧ್ಯೆಯೂ ಆಸ್ಪತ್ರೆಯಲ್ಲಿ ಮಿದುಳು ಆರೋಗ್ಯ ಕ್ಲಿನಿಕ್ ಪಾರ್ಶ್ವವಾಯುವಿಗೆ ಒಳಗಾದವರಿಗೆ ವಿವಿಧ ಬಗೆಯ ಥೆರಪಿಗಳನ್ನು ನೀಡುತ್ತಿದೆ.

ಕರ್ನಾಟಕ ಮಿದುಳು ಆರೋಗ್ಯ ಉಪಕ್ರಮದ ಅಂಗವಾಗಿ 7 ತಿಂಗಳ ಹಿಂದೆ ಜಿಲ್ಲಾಸ್ಪತ್ರೆಯಲ್ಲಿ ಶುರುವಾಗಿರುವ ಮಿದುಳು ಆರೋಗ್ಯ ಕ್ಲಿನಿಕ್ ಪಾರ್ಶ್ವವಾಯು ಸೇರಿದಂತೆ ಮೂರ್ಛೆರೋಗ, ಮರೆವು ಮತ್ತು ತಲೆನೋವಿಗೆ ವಿವಿಧ ಬಗೆಯ ಥೆರಪಿಗಳನ್ನು ನೀಡುತ್ತಿದೆ.

ಸಾಮಾನ್ಯವಾಗಿ ಪಾರ್ಶ್ವವಾಯುವಿಗೆ ಒಳಗಾದವರಿಗೆ ಅತ್ಯಾಧುನಿಕ ಚಿಕಿತ್ಸೆಯ ನಂತರ ನಿರಂತರವಾಗಿ ವಿವಿಧ ಬಗೆಯ ಥೆರಪಿಗಳು ಬೇಕಾಗುತ್ತವೆ. ‘ಸ್ಪೀಚ್ ಥೆರಪಿ’, ‘ಫಿಸಿಯೋಥೆರಪಿ’ ಸೇರಿದಂತೆ ಇನ್ನಿತರ ಬಗೆಯ ಥೆರಪಿಗಳು ಇಲ್ಲಿ ಲಭ್ಯವಿವೆ.

ಮಿದುಳು ಆರೋಗ್ಯ ಕ್ಲಿನಿಕ್ ಶುರುವಾಗುವುದಕ್ಕೂ ಮುನ್ನ ಇಂತಹ ಥೆರಪಿಗಾಗಿ ಪಾರ್ಶ್ವವಾಯುಪೀಡಿತರು ಹೊರಜಿಲ್ಲೆಗಳಿಗೆ ಹೋಗಬೇಕಿತ್ತು. ಆದರೆ, ಇದು ಕಾರ್ಯನಿರ್ವಹಿಸುತ್ತಿರುವುದರಿಂದ ರೋಗಿಗಳು ದೂರಪ್ರಯಾಣ ಮಾಡಬೇಕಾದ ಅನಿವಾರ್ಯತೆ ಇಲ್ಲ.

‘ಇಷ್ಟು ಮಾತ್ರವಲ್ಲ ಒಳರೋಗಿಗಳನ್ನಾಗಿ ದಾಖಲಿಸಿಕೊಂಡು ಅವರಿಗೆ ಥೆರಪಿಗಳನ್ನೂ ನೀಡಲಾಗುತ್ತಿದೆ’ ಎಂದು ಕರ್ನಾಟಕ ಮಿದುಳು ಆರೋಗ್ಯ ಉಪಕ್ರಮದ ಜಿಲ್ಲಾ ಸಂಯೋಜಕ ವಿಕ್ರಂ ‘ಪ್ರಜಾವಾಣಿ’ಗೆ ತಿಳಿಸಿದರು.

ಸದ್ಯ, ಶೇ 70ರಷ್ಟು ಈ ಕೇಂದ್ರ ಕಾರ್ಯನಿರ್ವಹಿಸುತ್ತಿದ್ದು, ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಣೆ ಮಾಡಲು ನರರೋಗತಜ್ಞರ ನೇಮಕಾತಿ ಆಗಬೇಕಿದೆ.

ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗೆ ಸೇರಿದ ಮಡಿಕೇರಿಯಲ್ಲಿರುವ ಆಸ್ಪತ್ರೆ (ಜಿಲ್ಲಾಸ್ಪತ್ರೆ)ಯಲ್ಲಿ ಮಿದುಳು ಆರೋಗ್ಯ ಕ್ಲಿನಿಕ್‌ನಲ್ಲಿ ಥೆರಪಿಗಳು ಲಭ್ಯವಿವೆ
ಡಾ.ಎ.ಜೆ.ಲೋಕೇಶ್, ನೂತನ ಡೀನ್ ನಿರ್ದೇಶಕ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ
ಎಲ್ಲರೂ ಉತ್ತಮವಾದ ಆರೋಗ್ಯ ಶೈಲಿಯನ್ನು ಅಳವಡಿಸಿಕೊಳ್ಳಬೇಕು. ಮಧುಮೇಹ ರಕ್ತದೊತ್ತಡ ಕೊಲೆಸ್ಟ್ರಾಲ್‌ಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬೇಕು.
ಡಾ.ಕೆ.ಎಂ.ಸತೀಶ್‌ಕುಮಾರ್, ಕೊಡಗು ಜಿಲ್ಲಾ ಆರೋಗ್ಯಾಧಿಕಾರಿ
ಮಿದುಳು ಆರೋಗ್ಯ ಕ್ಲಿನಿಕ್‌ನಲ್ಲಿ ಪಾರ್ಶ್ವವಾಯು ಮೂರ್ಛೆರೋಗ ಮರೆವು ಹಾಗೂ ತಲೆನೋವಿಗ ಥೆರಪಿಗಳನ್ನು ನೀಡಲಾಗುತ್ತಿದೆ.
ವಿಕ್ರಂ, ಜಿಲ್ಲಾ ಸಂಯೋಜಕರು, ಕರ್ನಾಟಕ ಮಿದುಳು ಆರೋಗ್ಯ ಉಪಕ್ರಮ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.