ADVERTISEMENT

ನೋಟಿಸ್ ಬಂದರೆ ಉತ್ತರಿಸುವೆ: ರಘುಪತಿ ಭಟ್

​ಪ್ರಜಾವಾಣಿ ವಾರ್ತೆ
Published 24 ಮೇ 2024, 14:34 IST
Last Updated 24 ಮೇ 2024, 14:34 IST
ರಘುಪತಿ ಭಟ್
ರಘುಪತಿ ಭಟ್   

ಮಡಿಕೇರಿ: ‘ನನಗೆ ಬಿಜೆಪಿಯಿಂದ ಯಾವುದೇ ನೋಟಿಸ್ ಬಂದಿಲ್ಲ. ಬಂದರೆ ವಿವರವಾದ ಉತ್ತರ ಕೊಡುವೆ. ಪಕ್ಷದ ಶಿಸ್ತು ಸಮಿತಿ ವಿಚಾರಣೆಗೆ ಕರೆದರೆ ಹಾಜರಾಗಿ ವಿವರಣೆ ಕೊಡುವೆ. ಕಣದಿಂದ ಯಾವುದೇ ಕಾರಣಕ್ಕೂ ಹಿಂದೆ ಸರಿಯುವುದಿಲ್ಲ’ ಎಂದು ನೈರುತ್ಯ ಪದವೀಧರರ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿ ಕೆ.ರಘುಪತಿ ಭಟ್‌ ಸ್ಪಷ್ಟಪಡಿಸಿದರು.

‘ನನಗೆ ಎರಡು ಬಾರಿ ಏಕೆ ಟಿಕೆಟ್ ಕೊಡಲಿಲ್ಲವೆಂದು ಗೊತ್ತಿಲ್ಲ. ಯಾರು ಟಿಕೆಟ್ ತಪ್ಪಿಸಿದರೆಂದೂ ಗೊತ್ತಿಲ್ಲ. ಯಾರೋ ನಾಯಕರು ತಪ್ಪಿಸಿದ್ದಂತೂ ಹೌದು’ ಎಂದು ಅವರು ಇಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಲಿಂಗಾಯತರಿಗೇ ಟಿಕೆಟ್ ಕೊಡಬೇಕೆನ್ನುವುದಾಗಿದ್ದರೆ, ಶಿವಮೊಗ್ಗದಲ್ಲಿ 35 ವರ್ಷಗಳ ಕಾಲ ಬಿಜೆಪಿ ಕಾರ್ಯಕರ್ತರಾಗಿರುವ ಗಿರೀಶ ಪಟೇಲ್ ಅವರಿಗೆ ಅಥವಾ ಬೇರೆ ಹಿರಿಯ ಕಾರ್ಯಕರ್ತರಿಗೆ ನೀಡಿದ್ದರೆ ನನಗೆ ಸಮಾಧಾನವಾಗುತ್ತಿತ್ತು. ಆದರೆ, ಹಿಂದೆ ಪಕ್ಷದ ವಿರುದ್ಧವೇ ಇದ್ದು, ಈಗಷ್ಟೇ ಸೇರ್ಪಡೆಯಾದವರಿಗೆ ಟಿಕೆಟ್ ನೀಡಿರುವುದು ಸರಿಯಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ADVERTISEMENT

‘ನಾನು ಯಾರನ್ನೋ ಸೋಲಿಸಲೆಂದೋ ಅಥವಾ ಗೆಲ್ಲಿಸಲೆಂದೋ ಚುನಾವಣೆಗೆ ಸ್ಪರ್ಧಿಸಿಲ್ಲ. ಗೆದ್ದೇ ಗೆಲ್ಲುವ ವಿಶ್ವಾಸದಲ್ಲಿ ಸ್ಪರ್ಧಿಸಿದ್ದೇನೆ. ಗೆದ್ದ ಮೇಲೆ ಪಕ್ಷಕ್ಕೆ ಬೆಂಬಲ ನೀಡುತ್ತೇನೆ’ ಎಂದರು.

‘ಹಿಂದುತ್ವ ಮತ್ತು ರಾಷ್ಟ್ರೀಯವಾದವನ್ನು ಪ್ರಬಲವಾಗಿ ಪ್ರತಿಪಾದಿಸಿದವರಿಗೆ ಪಕ್ಷದಲ್ಲಿ ಟಿಕೆಟ್ ತಪ್ಪುತ್ತಿದೆ ಎಂಬ ಭಾವನೆ ಬಲವಾಗುತ್ತಿದೆ. ಹಿಜಾಬ್ ವಿಷಯವನ್ನು ನಾನು ಸೃಷ್ಟಿಸಿದ್ದಲ್ಲ. ಕೆಲವು ಹೆಣ್ಣು ಮಕ್ಕಳನ್ನು ಕೆಲವು ಸಂಘಟನೆಗಳು ದಾರಿ ತಪ್ಪಿಸಿದವು. ನಾನು ಮುಸ್ಲಿಮರು ಮತ್ತು ಕ್ರೈಸ್ತರ ವಿರೋಧಿ ಅಲ್ಲ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.