ಮಡಿಕೇರಿ: ತಹಶೀಲ್ದಾರ್ ಬದಲಿಗೆ ಬಂದ ಶಿರಸ್ತೇದಾರರಿಗೆ ‘ಗೆಟ್ ಔಟ್’, ‘ನೀವು ಅಧಿಕಾರಿಯಾಗಲು ಅಸಮರ್ಥರು’, ಇಂತಹ ಕೆಟ್ಟ ವ್ಯವಸ್ಥೆ ನಾನೆಲ್ಲೂ ನೋಡಿಲ್ಲ, ಕಿಂಚಿತ್ತಾದರೂ ನಿಮಗೆ ಜವಾಬ್ದಾರಿ ಇದೆಯಾ...?
ಹೀಗೆ, ಇನ್ನೂ ಅನೇಕ ಕಟು ಶಬ್ದಗಳಿಂದ ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್.ಭೋಸರಾಜು ಅವರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಇಲ್ಲಿ ಮಂಗಳವಾರ ನಡೆದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಚಿವರ ಕೋಪಕಂಡು ಅಧಿಕಾರಿಗಳೆಲ್ಲ ಕಕ್ಕಾಬಿಕ್ಕಿಯಾದರು.
ಕಾವೇರಿ ನೀರಾವರಿ ನಿಗಮದ ಹಿರಿಯ ಅಧಿಕಾರಿಗಳು ಸಭೆಗೆ ಬಾರದಿರುವುದಕ್ಕೆ ಭೋಸರಾಜು ಕಿಡಿಕಾರಿದರು. ಸಭೆಗೆ ಬಂದಿದ್ದ ಇಲಾಖೆಯ ಕಿರಿಯ ಅಧಿಕಾರಿಯೊಬ್ಬರು ಕಾರ್ಯಪಾಲಕ ಎಂಜಿನಿಯರ್ ಹಾಗೂ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಅವರಿಗೆ ಬೆಂಗಳೂರಿನಲ್ಲಿ ಸಭೆ ಇತ್ತು ಎಂದು ಸಮಜಾಯಿಷಿ ನೀಡಿದರು. ಕೂಡಲೇ ಇಲಾಖೆಯ ವ್ಯವಸ್ಥಾಪಕ ನಿರ್ದೇಶಕರಿಗೆ ಫೋನ್ ಮಾಡಿ ಮಾತನಾಡಿದ ಸಚಿವರು, ಹಿರಿಯ ಅಧಿಕಾರಿಗಳ ವರ್ತನೆಗೆ ಆಕ್ಷೇಪ ವ್ಯಕ್ತಪಡಿಸಿದರು. ಗೈರಾದ ಎಲ್ಲ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಶಿಫಾರಸ್ಸು ಮಾಡಿ ಎಂದು ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರಿಗೆ ಸೂಚಿಸಿದರು.
ಪೊನ್ನಂಪೇಟೆ ತಹಶೀಲ್ದಾರ್ ಸಭೆಗೆ ಬಾರದಿರುವುದಕ್ಕೂ ಅಸಮಾಧಾನ ವ್ಯಕ್ತಪಡಿಸಿದ ಅವರು, ಒಂದು ಹಂತದಲ್ಲಿ ಶಿರಸ್ತೆದಾರ್ ಅವರಿಗೆ ‘ಗೆಟ್ ಔಟ್’ ಎಂದು ರೇಗಿದರು. ನಂತರವೂ ಶಿರಸ್ತೆದಾರ್ ಕುರ್ಚಿಯಲ್ಲಿ ಕೂರುತ್ತಿದ್ದಾಗ ಸಭೆಯಿಂದ ಹೊರ ಹೋಗಿ ಎಂದು ಜೋರುಧ್ವನಿಯಲ್ಲಿ ಅಬ್ಬರಿಸಿದರು.
ತಿತಿಮತಿ ವ್ಯಾಪ್ತಿಯಲ್ಲಿ ಹಾಡಿಗಳೇ ಇಲ್ಲ ಎಂದು ಅನುಪಾಲನಾ ವರದಿಯಲ್ಲಿ ಉಲ್ಲೇಖಿಸಿದ ಅರಣ್ಯ ಇಲಾಖೆಯ ಅಧಿಕಾರಿಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಅವರು, ‘ಈ ರೀತಿ ತಪ್ಪು ಮಾಹಿತಿ ಏಕಾದರೂ ಕೊಡುತ್ತೀರಿ. ನಿಮಗೆ ಜವಾಬ್ದಾರಿ ಇದೆಯೇ’ ಎಂದೂ ಪ್ರಶ್ನಿಸಿದರು.
‘ನಮ್ಮ ಕಡೆ ಅನೇಕ ಹಿಂದುಳಿದ ಜಿಲ್ಲೆಗಳಿವೆ. ಅಲ್ಲೂ ಸಹ ಇಂತಹ ಬೇಜವಾಬ್ದಾರಿ ಅಧಿಕಾರಿಗಳನ್ನು ನೋಡಿಲ್ಲ. ಇದೊಂದು ಕೆಟ್ಟ ವ್ಯವಸ್ಥೆ’ ಎಂದು ಹರಿಹಾಯ್ದರು.
ಮಡಿಕೇರಿಯ ಕೂಟುಹೊಳೆಯ ಜಲಾಗಾರದಲ್ಲಿ ಹೆಚ್ಚುವರಿ ಮೋಟಾರ್ ಅಳವಡಿಸಲು ಮರು ಟೆಂಡರ್ ಕರೆಯಲು ವಿಳಂಬ ಮಾಡಿದ ನಗರಸಭೆ ಕಮಿಷನರ್ ವಿಜಯ್ ಅವರನ್ನು ‘ನೀವು ಅಧಿಕಾರಿಯಾಗಲು ಅರ್ಹರಲ್ಲ’ ಎಂದು ಸಿಡಿಮಿಡಿಗೊಂಡರು.
ಕಳೆದ ಸಭೆಯಲ್ಲಿ ಸೂಚಿಸಿದ್ದ ಕ್ರಮಗಳ ಜಾರಿಯಾಗಿವೆಯಾ ಎಂಬುದರ ಕುರಿತು ಮಧ್ಯಾಹ್ನದವರೆಗೆ ಚರ್ಚಿಸಿದ ಅವರು, ಅಧಿಕಾರಿಗಳ ವರ್ತನೆಗೆ ಅತೃಪ್ತಿ ವ್ಯಕ್ತಪಡಿಸಿದರು.
ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯವಾಗದಂತೆ ಗಮನಹರಿಸಿ
ಮುಂದಿನ 6 ತಿಂಗಳಲ್ಲಿ ಜಿಲ್ಲೆಯ ಗ್ರಾಮೀಣ, ಪಟ್ಟಣ ಹಾಗೂ ನಗರ ಪ್ರದೇಶದಲ್ಲಿ ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗದಂತೆ ಗಮನಹರಿಸಬೇಕು ಎಂದು ಅಧಿಕಾರಿಗಳಿಗೆ ಭೋಸರಾಜು ನಿರ್ದೇಶನ ನೀಡಿದರು.
ಕುಡಿಯುವ ನೀರು ಪೂರೈಕೆಗೆ ಪ್ರಥಮ ಆದ್ಯತೆ ನೀಡಬೇಕು. ಜಿಲ್ಲೆಯ ಯಾವ ಭಾಗದಲ್ಲಿಯೂ ಕುಡಿಯುವ ನೀರು ಸರಬರಾಜಿನಲ್ಲಿ ಸಮಸ್ಯೆ ಇದೆ ಎಂಬ ಸಮಸ್ಯೆ ಕೇಳಿ ಬರಬಾರದು. ಜಾನುವಾರುಗಳಿಗೆ ಮೇವಿಗೆ ಕೊರತೆಯಾಗದಂತೆಯೂ ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.
ಶ್ರೀಮಂಗಲದಲ್ಲಿ ಕಾಡಾನೆ ಹಾವಳಿ ಹೆಚ್ಚಾಗಿದೆ. ಆನೆ ಹಾವಳಿ ತಡೆಯುವ ಶಾಶ್ವತ ಕಾಮಗಾರಿ ಒತ್ತಟ್ಟಿಗಿರಲಿ ತಕ್ಷಣಕ್ಕೆ ಸ್ಪಂದಿಸುವ ಕೆಲಸ ಅರಣ್ಯ ಇಲಾಖೆ ಅಧಿಕಾರಿಗಳಿಂದ ಆಗಬೇಕು.-ಎ.ಎಸ. ಪೊನ್ನಣ್ಣ, ವಿರಾಪೇಟೆ ಶಾಸಕ-
₹9 ಕೋಟಿ ಮೊತ್ತದ ಕಟ್ಟಡ ಕಟ್ಟಲು 9 ವರ್ಷ ಬೇಕಾ? ಸುವರ್ಣ ಕರ್ನಾಟಕ ಸಮುಚ್ಚಯ ಭವನ’ ಕಾಮಗಾರಿಗೆ ಹಣ ಬಿಡುಗಡೆಯಾಗಿದ್ದರೂ ಕಳೆದ 9 ವರ್ಷಗಳಿಂದ ಪೂರ್ಣಗೊಳ್ಳದಿರುವುದಕ್ಕೆ ಶಾಸಕ ಡಾ.ಮಂತರ್‌ಗೌಡ ತೀವ್ರ ಅತೃಪ್ತಿ ವ್ಯಕ್ತಪಡಿಸಿದರು. ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್ ಸಿದ್ದೇಗೌಡ ಅವರನ್ನು ಸಭೆಯಲ್ಲಿ ತರಾಟೆಗೆ ತೆಗೆದುಕೊಳ್ಳಲಾಯಿತು. ‘₹ 9 ಕೋಟಿ ಮೊತ್ತದ ಕಟ್ಟಡ ಕಟ್ಟಲು 9 ವರ್ಷ ಬೇಕಾ’ ಎಂದು ತರಾಟೆಗೆ ತೆಗೆದುಕೊಂಡ ಅವರು ‘ಸುಳ್ಳು ಹೇಳದೇ ಕೆಲಸ ಮಾಡಿ’ ಎಂದರು. ಈ ವೇಳೆ ಮಾಹಿತಿ ನೀಡಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಚಿನ್ನಸ್ವಾಮಿ ‘ಮೊದಲ ಕಂತಿನಲ್ಲಿ ₹ 3 ಕೋಟಿ 2ನೇ ಕಂತಿನಲ್ಲಿ ₹ 2.50 ಕೋಟಿ ಬಿಡುಗಡೆಯಾಗಿದ್ದು ಇನ್ನೂ ₹ 3 ಕೋಟಿ ಅನುದಾನ ಇದ್ದು ಕಾಮಗಾರಿ ಪ್ರಗತಿ ಸಾಧಿಸಬೇಕಿದೆ’ ಎಂದು ಸಚಿವರ ಗಮನಕ್ಕೆ ತಂದರು. ಇದನ್ನು ಕೇಳಿ ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್ ಸಿದ್ದೇಗೌಡ ಮೇಲೆ ಕೋಪಗೊಂಡ ಸಚಿವ ಭೋಸರಾಜು ‘ಇಲಾಖೆಯಿಂದ ಹಣ ಬಿಡುಗಡೆಯಾದರೂ ಕೆಲಸ ಮಾಡಿಲ್ಲ. ಇಂತಹ ಅಧಿಕಾರಿಗಳು ನಮಗೆ ಬೇಕಿಲ್ಲ. ನೀವು ಮಾಡುವ ತಪ್ಪು ಕೆಲಸದಿಂದ ರಾಜಕಾರಣಿಗಳಿಗೆ ಕೆಟ್ಟ ಹೆಸರು ಬರುತ್ತದೆ. ಕಳೆದ ಸಭೆಯಲ್ಲೂ ಇದೆ ಮಾತು ಈಗಲೂ ಇದೆ ಮಾತು ಹೇಳುತ್ತಿದ್ದೀರಿ. ನಿಮಗೆ ತೃಪ್ತಿ ತಂದಿದೆಯಾ’ ಎಂದು ನೇರವಾಗಿಯೇ ಕುಟುಕಿದರು. ಜಿಲ್ಲಾಧಿಕಾರಿ ತಡೆಗೋಡೆಗೆ ತಿಂಗಳಿಗೆ ಒಂದರಂತೆ ಹೊಸ ಟಾರ್ಪಲ್ ಹೊದ್ದಿಸುವ ಕೆಲಸ ಬಿಟ್ಟರೆ ಬೇರೇನೂ ಮಾಡುತ್ತಿಲ್ಲ ಎಂದೂ ಅಸಮಾಧಾನ ವ್ಯಕ್ತಪಡಿಸಿದರು. ‘ಭಾಗಮಂಡಲ ಮೇಲ್ಸೇತುವೆ ಕಾಮಗಾರಿ ಕುರಿತು 6 ತಿಂಗಳಿನಿಂದ ಹೇಳಿದ್ದನ್ನೇ ಹೇಳುತ್ತಿದ್ದೀರಿ. ಕೆಲಸ ಮಾಡಲು ಆಗುತ್ತದೆಯೇ ಇಲ್ಲವೇ ಎಂದು ಹೇಳಿ’ ಎಂದೂ ಕಿಡಿಕಾರಿದರು. ಕಾಮಗಾರಿ ಪೂರ್ಣಗೊಂಡಿದೆ ಎಂದು ಉಪ ಮುಖ್ಯಮಂತ್ರಿ ಹಾಗೂ ಬೃಹತ್ ನೀರಾವರಿ ಸಚಿವರ ಗಮನಕ್ಕೆ ತಪ್ಪು ಮಾಹಿತಿ ನೀಡಲಾಗಿದೆ ಎಂದು ಶಾಸಕ ಪೊನ್ನಣ್ಣ ಸಹ ಅಸಮಾಧಾನ ವ್ಯಕ್ತಪಡಿಸಿದರು.
11 ಕೊಡಗು ಜಿಲ್ಲೆಗೆ ಎರಡೇ ಹೊಸ ಬಸ್! ‘ಸರ್ಕಾರ ಹೊಸದಾಗಿ ಕೆಎಸ್‌ಆರ್‌ಟಿಸಿಯ ಪುತ್ತೂರು ವಿಭಾಗಕ್ಕೆ ನೀಡಿರುವ 13 ಬಸ್‌ಗಳ ಪೈಕಿ ಕೇವಲ ಎರಡು ಬಸ್‌ಗಳನ್ನು ಮಾತ್ರ ಕೊಡಗು ಜಿಲ್ಲೆಗೆ ಕೊಡಲಾಗುವುದು. ಉಳಿದೆಲ್ಲ ಬಸ್‌ಗಳು ಸುಳ್ಯ ಹಾಗೂ ಬಂಟ್ವಾಳ ತಾಲ್ಲೂಕಿಗೆ ನಿಯೋಜಿಸಲಾಗುವುದು’ ಎಂದು ಕೆಎಸ್‌ಆರ್‌ಟಿಸಿಯ ಪುತ್ತೂರು ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಜಯಕರ ಶೆಟ್ಟಿ ಅವರ ಹೇಳಿಕೆಗೆ ಶಾಸಕರಾದ ಡಾ.ಮಂತರ್‌ಗೌಡ ಹಾಗೂ ಎ.ಎಸ್.ಪೊನ್ನಣ್ಣ ಅತೃಪ್ತಿ ವ್ಯಕ್ತಪಡಿಸಿದರು. ಒಂದು ಹಂತದಲ್ಲಿ ಮಂತರ್‌ಗೌಡ ಅವರು ‘ಇದು ಅನ್ಯಾಯವಲ್ಲವೇ’ ಎಂದೂ ಪ್ರಶ್ನಿಸಿದರು. ಹೊಸ ಬಸ್‌ಗಳಿಗಾಗಿ ಸರ್ಕಾರಕ್ಕೆ ಪ್ರಸ್ತಾವ ಕಳುಹಿಸಲಾಗುವುದು ಎಂದು ಜಯಕರ ಶೆಟ್ಟಿ ತಿಳಿಸಿದರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.