ವಿರಾಜಪೇಟೆ: ಪಟ್ಟಣದ ಕಾವೇರಿ ಕಾಲೇಜಿನಲ್ಲಿ ಮಂಗಳವಾರ ಎನ್.ಎಸ್.ಎಸ್ ದಿನವನ್ನು ಆಚರಿಸಲಾಯಿತು.
ಕಾಲೇಜಿನ ಪ್ರಾಂಶುಪಾಲ ಬೆನಡಿಕ್ಟ್ ಆರ್ ಸಾಲ್ದಾನ ಅವರು ಧ್ವಜಾರೋಹಣ ನೆರವೇರಿಸಿ ಮಾತನಾಡಿ, ‘ಸೇವಾ ಮನೋಭಾವ ಪ್ರತಿಯೊಬ್ಬರಲ್ಲೂ ಇರಬೇಕು. ಅದರಲ್ಲೂ ಯುವಕರು ಪ್ರಕೃತಿಯನ್ನು ಆದಷ್ಟು ಮಾಲಿನ್ಯ ಮುಕ್ತ ಮಾಡುವುದರ ಕಡೆಗೆ ಗಮನಹರಿಸಬೇಕು’ ಎಂದರು.
‘ನನ್ನ ಮನೆ, ನನ್ನ ಕಾಲೇಜು, ನಮ್ಮನ್ನು ಯಾರೋ ಗಮನಿಸುತ್ತಿದ್ದಾರೆ ಎಂಬ ಕಾರಣಕ್ಕಾಗಿ ಶುಚಿತ್ವವನ್ನು ಕಾಪಾಡುವುದಲ್ಲ. ನಾವು ಎಲ್ಲೇ ಇದ್ದರೂ ನಮ್ಮ ಸುತ್ತಲಿನ ಪ್ರದೇಶವನ್ನು ಸದಾ ಸ್ವಚ್ಛವಾಗಿಡಬೇಕು’ ಎಂದು ಹೇಳಿದರು.
ಕಾಲೇಜಿನ ಐ.ಕ್ಯೂ.ಎ.ಸಿ ಸಂಚಾಲಕಿ ಪ್ರಿಯಾ ಮಾತನಾಡಿ, ‘ಸ್ವಚ್ಛತೆ ಎಂಬುದು ಮನಸ್ಸಿನಿಂದ ಆರಂಭವಾಗಬೇಕು. ನಾವು ದೇಹ ಸ್ವಚ್ಛತೆಗೆ ಎಷ್ಟು ಪ್ರಾಮುಖ್ಯತೆ ನೀಡುತ್ತೇವೋ ಅದೇ ರೀತಿ ನಮ್ಮ ಸುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಕೂಡ ಪ್ರತಿಯೊಬ್ಬರ ಕರ್ತವ್ಯವಾಗಬೇಕು. ಯುವಜನತೆ ಪರಿಸರವನ್ನು ಸ್ವಚ್ಛಗೊಳಿಸಿದರೆ, ಅವರನ್ನು ನೋಡಿ ಜನರೂ ಕಲಿಯುತ್ತಾರೆ. ಆದಷ್ಟು ಪ್ಲಾಸ್ಟಿಕ್ ಹಾಗೂ ಇನ್ನಿತರೆ ತ್ಯಾಜ್ಯಗಳ ಬಳಕೆ ಕಡಿಮೆ ಮಾಡಬೇಕಿದೆ. ಮುಂದಿನ ಪೀಳಿಗೆಗೆ ಉತ್ತಮ ಪರಿಸರವನ್ನು ಕೊಡುಗೆ ನೀಡೋಣ’ ಎಂದರು.
ನಂತರ ಕಾಲೇಜಿನ ಎಲ್ಲಾ ವಿದ್ಯಾರ್ಥಿಗಳು ‘ಸ್ವಚ್ಛತೆಯೇ ಸೇವೆ’ ಎಂಬ ಧ್ಯೇಯವಾಕ್ಯದ ಅಡಿಯಲ್ಲಿ ವಿರಾಜಪೇಟೆ-ಗೋಣಿಕೊಪ್ಪಲು ರಾಜ್ಯ ಹೆದ್ದಾರಿಯ ಎರಡು ಬದಿಯಲ್ಲಿದ್ದ ಪ್ಲಾಸ್ಟಿಕ್, ಖಾಲಿಬಾಟಲಿ ಸೇರಿದಂತೆ ಕಸ ಸಂಗ್ರಹಿಸಿ ಸ್ವಚ್ಛತಾ ಕಾರ್ಯಕೈಗೊಂಡರು.
ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನ ಸಂಘದ ಸಂಚಾಲಕ ನಾಗರಾಜು, ಎನ್.ಎಸ್.ಎಸ್ ಯೋಜನಾಧಿಕಾರಿ ಸುನಿಲ್ ಕುಮಾರ್ ಹಾಗೂ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.