ADVERTISEMENT

ಬಂದಡ್ಕದಲ್ಲಿ 27ರಂದು ಪ್ರಥಮ ಗಡಿನಾಡ ಅರೆಭಾಷೆ ಸಂಸ್ಕೃತಿ ಉತ್ಸವ

ನ. 10ರಂದು ಚೆಯ್ಯಂಡಾಣೆಯಲ್ಲಿ, ಡಿ. 1ರಂದು ದಕ್ಷಿಣ ಕನ್ನಡ ಜಿಲ್ಲೆಯ ಗಡಿಭಾಗ ಮಂಡೆಕೋಲಿನಲ್ಲಿ ಆಯೋಜನೆ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2024, 18:16 IST
Last Updated 16 ಅಕ್ಟೋಬರ್ 2024, 18:16 IST
ಸದಾನಂದ ಮಾವಜಿ
ಅಧ್ಯಕ್ಷ, ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ 
ಸದಾನಂದ ಮಾವಜಿ ಅಧ್ಯಕ್ಷ, ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ    

ಮಡಿಕೇರಿ: ‘ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯು ಪ್ರಥಮ ಗಡಿನಾಡ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಉತ್ಸವವನ್ನು ಅ. 27ರಂದು ದಕ್ಷಿಣ ಕನ್ನಡ ಜಿಲ್ಲೆಯ ಗಡಿಭಾಗ ಬಂದಡ್ಕದಲ್ಲಿ ಹಾಗೂ 2ನೇ ಉತ್ಸವವನ್ನು ಕೊಡಗು ಜಿಲ್ಲೆಯ ಗಡಿಪ್ರದೇಶ ಚೆಯ್ಯಂಡಾಣೆಯಲ್ಲಿ ನ. 10ರಂದು ಆಯೋಜಿಸಿದೆ’ ಎಂದು ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ ತಿಳಿಸಿದರು.

ಮೂರನೆಯ ಕಾರ್ಯಕ್ರಮವನ್ನು ಅರೆಭಾಷೆ ಅಕಾಡೆಮಿಯ ಸ್ಥಾಪನೆಗೆ ಕಾರಣಕರ್ತರಾಗಿರುವ ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಅವರ ತವರೂರೂ ಆಗಿರುವ ದಕ್ಷಿಣ ಕನ್ನಡ ಜಿಲ್ಲೆಯ ಗಡಿಭಾಗ ಮಂಡೆಕೋಲಿನಲ್ಲಿ ಡಿ. 1ರಂದು ಹಮ್ಮಿಕೊಳ್ಳಲಾಗುವುದು ಎಂದು ಅವರು ಇಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಈ ಮೂರು ಕಡೆಗಳಲ್ಲಿ ಗಡಿನಾಡ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಉತ್ಸವವನ್ನು ನಡೆಸಲು ರೂಪು-ರೇಷೆಗಳನ್ನು ಸಿದ್ದಪಡಿಸಲಾಗುತ್ತಿದೆ ಎಂದರು.

ADVERTISEMENT

ಅಕಾಡೆಮಿಯು ಕೇವಲ ಬಂದಡ್ಕ, ಚೆಯ್ಯಂಡಾಣೆ ಹಾಗೂ ಮಂಡೆಕೋಲಿನಲ್ಲಿ ಮಾತ್ರವಲ್ಲ ಕೊಡಗು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಗಡಭಾಗಗಳಾದ ಕಲ್ಲಪ್ಪಳ್ಳಿ, ಭಾಗಮಂಡಲ ಹಾಗೂ ಕುಶಾಲನಗರದಲ್ಲಿ ನಡೆಸಲೂ ಉದ್ದೇಶಿಸಲಾಗಿದೆ ಎಂದು ಮಾಹಿತಿ ನೀಡಿದರು.

ಗಡಿನಾಡಿನಲ್ಲಿ ಅರೆಭಾಷಿಕರ ಹಾಗೂ ಅರೆಭಾಷೆಯ ಹುಮ್ಮಸ್ಸನ್ನು ಹೆಚ್ಚಿಸುವ ನಿಟ್ಟಿನಿಂದ ಅದ್ದೂರಿಯ ಉತ್ಸವಕ್ಕೆ ಈಗಾಗಲೇ ತಯಾರಿ ನಡೆದಿದೆ. ಕಾರ್ಯಕ್ರಮದ ಯಶಸ್ವಿಗಾಗಿ ವಿವಿಧ ಸಮಿತಿಗಳನ್ನು ರಚಿಸಲಾಗಿದ್ದು, ಸಾಂಸ್ಕೃತಿಕ, ಸಾಹಿತ್ಯ ಹಾಗೂ ಕ್ರೀಡಾ ಸ್ಪರ್ಧೆಗಳಿಗೆ ಚಾಲನೆ ನೀಡಲಾಗಿದೆ ಎಂದು ಹೇಳಿದರು.

ಎಲ್ಲ ಪ್ರದೇಶಗಳಲ್ಲಿ ಕಾರ್ಯಕ್ರಮಗಳು ಸ್ಥಳೀಯ ಅರೆಭಾಷಿಕರು ಮತ್ತು ಅರೆಭಾಷಾ ಅಭಿಮಾನಿಗಳು, ಮುಖಂಡರು ಮತ್ತು ಸಂಘ ಸಂಸ್ಥೆಗಳ ಸಹಯೋಗದಲ್ಲಿ ನಡೆಯಲಿದ್ದು, ಉತ್ಸವಗಳಲ್ಲಿ ಅರೆಭಾಷೆ ಸಂಸ್ಕೃತಿಯನ್ನು ಬಿಂಬಿಸುವ ಕಾರ್ಯಕ್ರಮಗಳಿಗೆ ಹೆಚ್ಚಿನ ಒತ್ತು ನೀಡಲಾಗುವುದು ಮತ್ತು ಅರೆಭಾಷೆ ಸಾಂಸ್ಕೃತಿಕ ತಂಡಗಳಿಗೆ ಅವಕಾಶ ನೀಡಲಾಗುವುದು. ಎಲ್ಲಾ ಕಡೆಗಳಲ್ಲೂ ಉತ್ಸವದ ಅಂಗವಾಗಿ ಸಾಂಸ್ಕೃತಿಕ, ಸಾಹಿತ್ಯ ಹಾಗೂ ಕ್ರೀಡಾ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಗಡಿ ಪ್ರದೇಶಗಳಲ್ಲಿ ಅರೆಭಾಷೆಯನ್ನು ಉಳಿಸಿ ಬೆಳೆಸಿ ಹಬ್ಬಿಸುವ ಹಾಗೂ ಭಾಷೆಯ ಮಹತ್ವವನ್ನು ಸಾರುವ ನಿಟ್ಟಿನಲ್ಲಿ ಈ ಮಹತ್ವಾಕಾಂಕ್ಷೆಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಗುಡ್ಡೆಮನೆ ಅಪ್ಪಯ್ಯ ಗೌಡರ ಸಂಸ್ಮರಣೆ ಕಾರ್ಯಕ್ರಮವನ್ನು ಅ.31ರಂದು ಮಡಿಕೇರಿಯಲ್ಲಿ ಅಯೋಜಿಸಲಾಗುವುದು ಎಂದು ಹೇಳಿದರು.

ಅರೆಭಾಷೆ ತ್ರೈಮಾಸಿಕ ಪತ್ರಿಕೆ ‘ಹಿಂಗಾರ’, ಪ್ರಕಟಗೊಳ್ಳದೆ ಉಳಿದಿರುವ 6 ಸಂಚಿಕೆಗಳ ಮುದ್ರಣ ಕಾರ್ಯಗಳನ್ನು ಶೀಘ್ರವಾಗಿ ಕೈಗೆತ್ತಿಕೊಳ್ಳಲಾಗುವುದು ಹಾಗೂ ಪುಸ್ತಕ ಪ್ರಕಟಣೆ, ಸಂಶೊಧನಾ ಗ್ರಂಥಗಳ ಮುದ್ರಣ ಕಾರ್ಯಗಳನ್ನು ಮುಂಬರುವ ದಿನಗಳಲ್ಲಿ ಮಾಡಲಾಗುವುದು ಎಂದರು.

ಅಕಾಡೆಮಿಯ ಸಹ-ಸದಸ್ಯರಾಗಿ ಕೊಡಗು ಗೌಡ ಸಮಾಜಗಳ ಒಕ್ಕೂಟದ ಉಪಾಧ್ಯಕ್ಷ ಮೋಹನ್ ಪೊನ್ನಚನ, ಜಾನಪದ ಕಲಾವಿದ ಕುದುಪಜೆ ಕೆ. ಪ್ರಕಾಶ್ ಹಾಗೂ ಸಾಹಿತಿ ಕೆ.ಸಿ.ಗೋಪಾಲಕೃಷ್ಣ ಅವರನ್ನು ನೇಮಕ ಮಾಡಿಕೊಳ್ಳಲಾಗಿದೆ. ಒಟ್ಟಾರೆ ಸಹ-ಸದಸ್ಯರು ಸೇರಿದಂತೆ ಕೊಡಗು ಜಿಲ್ಲೆಗೆ 7 ಮಂದಿ, ದಕ್ಷಿಣ ಕನ್ನಡ ಜಿಲ್ಲೆಗೆ ಅಧ್ಯಕ್ಷರು ಸೇರಿ 7 ಮಂದಿ ಅಕಾಡೆಮಿಯಲ್ಲಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಹೇಳಿದರು.

ಅಕಾಡೆಮಿಯ ಸದಸ್ಯರಾದ ಚಂದ್ರಶೇಖರ ಪೇರಾಲು, ಚಂದ್ರಾವತಿ ಬಡ್ಡಡ್ಕ, ವಿನೋದ ಮೂಡಗದ್ದೆ, ಸಂದೀಪ ಪೂಳಕಂಡ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.