ADVERTISEMENT

7, 8ರಂದು ಅಂತರರಾಷ್ಟ್ರೀಯ ಸಮ್ಮೇಳನ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2023, 6:21 IST
Last Updated 5 ಡಿಸೆಂಬರ್ 2023, 6:21 IST

ಮಡಿಕೇರಿ: ಶಿವಮೊಗ್ಗದ ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯ ವ್ಯಾಪ್ತಿಗೆ ಬರುವ ಇಲ್ಲಿನ ಪೊನ್ನಂಪೇಟೆಯ ಅರಣ್ಯ ಮಹಾವಿದ್ಯಾಲಯದಲ್ಲಿ ಡಿ. 7 ಮತ್ತು 8ರಂದು ‘ಜೀವ ಸಂಕುಲಗಳ ಸಂರಕ್ಷಣೆ ಮತ್ತು ಸುಸ್ಥಿರ ಬಳಕೆ, ಅವುಗಳ ಪ್ರಸ್ತುತತೆ ಮತ್ತು ಭವಿಷ್ಯದ ನಿರೀಕ್ಷೆಗಳು’ ಕುರಿತು ಅಂತರರಾಷ್ಟ್ರೀಯ ಸಮ್ಮೇಳನವನ್ನು ಏರ್ಪಡಿಸಲಾಗಿದೆ.

‘ಈ ಸಮ್ಮೇಳನದಲ್ಲಿ ಒಟ್ಟು 150 ಸಂಶೋಧಕರು ಭಾಗವಹಿಸಲಿದ್ದು, ಅವರಲ್ಲಿ ಸುಮಾರು 50ಕ್ಕೂ ಅಧಿಕ ಸಂಶೋಧಕರು ವಿದೇಶಗಳಿಂದ ಆನ್‌ಲೈನ್‌ ಮೂಲಕ ಉಪನ್ಯಾಸ ನೀಡಲಿದ್ದಾರೆ. 90ಕ್ಕೂ ಅಧಿಕ ಮಂದಿ ದೇಶದ ವಿವಿಧ ರಾಜ್ಯಗಳಿಂದ ಬಂದು ಇಲ್ಲಿ ತಮ್ಮ ಸಂಶೋಧನಾ ಪ್ರಬಂಧಗಳನ್ನು ಮಂಡಿಸಲಿದ್ದಾರೆ’ ಎಂದು ಅರಣ್ಯ ಮಹಾವಿದ್ಯಾಲಯದ ಡೀನ್ ಡಾ.ಜಿ.ಎಂ.ದೇವಗಿರಿ ಇಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸಮ್ಮೇಳವನ್ನು 7ರಂದು ಬೆಳಿಗ್ಗೆ 9.30ಕ್ಕೆ ಪರಿಸರ ಮತ್ತು ಪರಿಸರ ವಿಜ್ಞಾನಗಳ ಇಲಾಖೆಯ ಪ್ರಧಾನ ಕಾರ್ಯದರ್ಶಿ ಬಿ.ಪಿ.ರವಿ ಉದ್ಘಾಟಿಸಲಿದ್ದು, ಶಿವಮೊಗ್ಗದ ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯ ಕುಲಪತಿ ಡಾ.ಆರ್.ಸಿ.ಜಗದೀಶ ಅವರು ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.

ADVERTISEMENT

ಜೀವ ವೈವಿಧ್ಯತೆಯ ಸಂರಕ್ಷಣೆ, ಮಾನವ ವನ್ಯಜೀವಿ ಸಂಘರ್ಷ, ಜೀವವೈವಿಧ್ಯ ರಕ್ಷಣೆಯಲ್ಲಿ ದೂರ ಸಂವೇದನೆ ಮತ್ತು ಭೌಗೋಳಿಕ ಮಾಹಿತಿ ವ್ಯವಸ್ಥೆಯ ಪಾತ್ರ, ಬಿದಿರಿನ ಸಂಪನ್ಮೂಲ ಮತ್ತು ಅದರ ಸುಸ್ಥಿರ ಬಳಕೆ, ಕೃಷಿ ಜೀವವೈವಿಧ್ಯತೆ, ಜಲಾನಯನ ಅಭಿವೃದ್ಧಿಯಲ್ಲಿ ಅರಣ್ಯಗಳ ಪಾತ್ರ ಮೊದಲಾದ ವಿಷಯಗಳನ್ನು ಕುರಿತು ತಜ್ಞರು ತಮ್ಮ ತಮ್ಮ ವಿಚಾರಗಳನ್ನು ಮಂಡಿಸಲಿದ್ದಾರೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.