ಶನಿವಾರಸಂತೆ: ಸಮೀಪದ ಮುಳ್ಳೂರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು 75ನೇ ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವ ಕಾರ್ಯಕ್ರಮವನ್ನು ಆನ್‌ಲೈನ್ ಮೂಲಕ ಮನೆಮನೆಯಲ್ಲಿಯೇ ಶಿಕ್ಷಕ ಸಿ.ಎಸ್.ಸತೀಶ್ ಅವರ ಮಾರ್ಗದರ್ಶನದಲ್ಲಿ ಆಚರಿಸಿ ದೇಶಭಕ್ತಿ ಮೆರೆದರು.
ವಿದ್ಯಾರ್ಥಿಗಳು ತಮ್ಮತಮ್ಮ ಮನೆಯಂಗಳದಲ್ಲಿ ಸುಂದರವಾದ ಭಾರತದ ಭೂಪಟಗಳನ್ನು ಹಾಕಿ ಅವುಗಳ ಮುಂದೆ ನಿಂತು ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವದ ಕುರಿತು ಮಾತನಾಡಿದ್ದು ವಿಶೇಷವಾಗಿತ್ತು.
ಬೆಳಿಗ್ಗೆ 7-30ರಿಂದ 8-30 ರವರೆಗೆ ಆನ್‌ಲೈನ್‌ನಲ್ಲಿ ಶಾಲಾ ಮುಖ್ಯಶಿಕ್ಷಕರು, ಶಿಕ್ಷಕರು, ಕ್ಲಸ್ಟರ್ ಗಳ ಸಂಪನ್ಮೂಲ ವ್ಯಕ್ತಿಗಳು, ಪೋಷಕರು, ವಿದ್ಯಾರ್ಥಿಗಳು ಕಾರ್ಯಕ್ರಮವನ್ನು ವೈಶಿಷ್ಟ್ಯಪೂರ್ಣವಾಗಿ ಆಚರಿಸಿದರು.
ಈ ಸಂಬಂಧ ಕ್ರಿಯಾಶೀಲ ಶಿಕ್ಷಕ ಸಿ.ಎಸ್.ಸತೀಶ್ ವಾರದಿಂದಲೇ ಪ್ರತಿನಿತ್ಯ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ವಿದ್ಯಾರ್ಥಿಗಳನ್ನು ತರಬೇತುಗೊಳಿಸಿದ್ದರು. ಭೂಪಟ, ರಾಷ್ಟ್ರ ನಾಯಕರ, ರಾಷ್ಟ್ರೀಯ ಚಿಹ್ನೆಗಳ ಚಿತ್ರ ಬಿಡಿಸುವುದು, ಮಾದರಿ ತಯಾರಿಸುವುದು, ದೇಶಭಕ್ತಿ ಗೀತೆಗಳನ್ನು ಹಾಡುವುದು, ಪ್ರಬಂಧ ಬರೆಯುವುದು ಇತ್ಯಾದಿ ಕಾರ್ಯಕ್ರಮಗಳನ್ನು ಆಯೋಜಿಸಿ ವಿದ್ಯಾರ್ಥಿಗಳಿಗೆ ದೇಶಪ್ರೇಮದ ಅರಿವು ಮೂಡಿಸಿದ್ದರು.
ವಿದ್ಯಾರ್ಥಿಗಳು ಸಹ ಅಷ್ಟೇ ಆಸಕ್ತಿಯಿಂದ ವಿವಿಧ ಚಟುವಟಿಕೆಗಳಲ್ಲಿ ಪಾಲ್ಗೊಂಡು ಕೋವಿಡ್ ನ ಸಂಕಷ್ಟ ಪರಿಸ್ಥಿತಿಯಲ್ಲೂ ಮನೆಮನೆಯಲ್ಲಿಯೇ ಸುರಕ್ಷಿತವಾಗಿ ಸ್ವಾತಂತ್ರ್ಯದ ಹಣತೆಯನ್ನು ಬೆಳಗಿಸಿ ದೇಶ ಪ್ರೇಮ ಮೆರೆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.