ವಿರಾಜಪೇಟೆ: ಕದನೂರು ಗ್ರಾಮ ಪಂಚಾಯಿತಿಯ ಅರಮೇರಿ ಗ್ರಾಮದಲ್ಲಿ ಕಲ್ಲಿನ ಕ್ರಶರ್ ಘಟಕ ಸ್ಥಾಪನೆಯಾದರೆ ಗ್ರಾಮದ ಕೆಲವು ಮನೆಗಳಿಗೆ ಸಮಸ್ಯೆಯಾಗಲಿದೆ ಎಂದು ಕೆಲ ಗ್ರಾಮಸ್ಥರು ಮಾಡುತ್ತಿರುವ ಆರೋಪ ಪೂರ್ವಗ್ರಹ ಪೀಡಿತವಾಗಿದೆ ಎಂದು ಅರಮೇರಿಯ ಮೂಕೈರಿರ ಕುಟುಂಬದ ಸುಜಯ್ ಕಾರ್ಯಪ್ಪ ಹೇಳಿದರು.
'ಅರಮೇರಿ ಗ್ರಾಮದಲ್ಲಿ 17.64 ಎಕರೆ ಖಾಸಗಿ ಜಾಗ ಮೂಕೈರಿರ ಕುಟುಂಬಕ್ಕೆ ಸೇರಿದ್ದಾಗಿದೆ. ಈ ಜಾಗವು ಸಂಪೂರ್ಣ ಕಲ್ಲು ಬಂಡೆಗಳಿಂದ ಕೂಡಿರುವುದರಿಂದ ವ್ಯವಸಾಯ ಸೇರಿದಂತೆ ಇನ್ನಿತರ ಯಾವುದೇ ಆರ್ಥಿಕ ಚಟುವಟಿಕೆ ನಡೆಸಲು ಸಾಧ್ಯವಿಲ್ಲ. ಆದ್ದರಿಂದ ಈ ಜಾಗದ ಒಂದು ಎಕರೆಯಲ್ಲಿ ಕಾನೂನಿನ ಅನ್ವಯ ಸರ್ಕಾರ ಮತ್ತು ಗಣಿ ಮತ್ತು ಭೂವಿಜ್ಞಾನ ಇಲಾಖೆ ನಿಯಮಾನುಸಾರ ಅನುಮತಿ ಪಡೆದು ಸಾರ್ವಜನಿಕರಿಗೆ ತೊಂದರೆಯಾಗದಂತೆ ಕಲ್ಲಿನ ಕ್ರಷರ್ ಘಟಕ ಸ್ಥಾಪನೆ ಮಾಡಲು ಮುಂದಾಗಿದ್ದೇವೆ. ಆದರೆ ನಮ್ಮ ಏಳಿಗೆಯನ್ನು ಸಹಿಸದ ಗ್ರಾಮದ ಕೆಲವರು ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ’ ಎಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಕಡಂಗಮೂರೂರು ಗ್ರಾಮಸ್ಥ ಬಲ್ಲಚಂಡ ಗೌತಮ್ ಮಾತನಾಡಿ, ‘ಆತ್ಯಾಧುನಿಕ ರೀತಿಯಲ್ಲಿ ಕಲ್ಲು ಗಣಿಗಾರಿಕೆ ನಡೆಸುವುದರಿಂದ ಗ್ರಾಮಸ್ಥರಿಗೆ ಯಾವುದೇ ಸಮಸ್ಯೆಯಾಗುವುದಿಲ್ಲ. ಗ್ರಾಮದ ಕೆಲವರಲ್ಲಿ ಅಭಿವೃದ್ಧಿ ಕಾರ್ಯಗಳನ್ನು ವಿರೋಧಿಸುವ ಮನೋಭಾವನೆಯಿದೆ. ಕೆಲ ಪಟ್ಟಭದ್ರ ಹಿತಾಸಕ್ತಿಗಳು ತಾಲ್ಲೂಕು ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆಯನ್ನು ಮುಂದಿಟ್ಟುಕೊಂಡು ಗ್ರಾಮದಲ್ಲಿ ಅಶಾಂತಿ ಮೂಡಿಸುವ ಸಲುವಾಗಿ ಈ ಕುರಿತು ಇಲ್ಲಸಲ್ಲದ ಆರೋಪಗಳನ್ನು ನಡೆಸುತ್ತಿರುವುದು ಹಾಸ್ಯಸ್ಪದವಾಗಿದೆ’ ಎಂದರು.
ಕಾಕೋಟುಪರಂಬು ಗ್ರಾಮ ಪಂಚಾಯಿತಿಯ ಮಾಜಿ ಸದಸ್ಯ ಮಂಡೇಟಿರ ಅನಿಲ್ ಮಾತನಾಡಿ, ‘ಇದೇ ಸ್ಥಳದಲ್ಲಿ 40 ವರ್ಷಗಳಿಂದ ಕಲ್ಲು ಗಣಿಗಾರಿಗೆ ನಡೆಸಲಾಗುತ್ತಿತ್ತು. ಆ ಸಂದರ್ಭ ಆಕ್ಷೇಪ ವ್ಯಕ್ತಪಡಿಸಿರಲಿಲ್ಲ. ಗ್ರಾಮದಲ್ಲಿ ಹಲವಾರು ಕಾನೂನು ಬಾಹಿರ ಚಟುವಟಿಕೆಗಳು ನಡೆಯುತ್ತಿರುವುದನ್ನು ಪ್ರಶ್ನಿಸದೆ ಕಾನೂನು ರೀತಿಯಲ್ಲಿ ಗಣಿಗಾರಿಕೆಯ ನಡೆಸಲು ಹೊರಟಿರುವುದಕ್ಕೆ ವಿರೋಧ ವ್ಯಕ್ತ ಪಡಿಸುತ್ತಿರುವುದು ಸರಿಯಲ್ಲ ಎಂದರು.
ಅರಮೇರಿ ಗ್ರಾಮಸ್ಥ ಕುಂಬೇಯಂಡ ಗಣೇಶ್ ಮಾತನಾಡಿ, ‘ವಿರಾಜಪೇಟೆ ಭಾಗಕ್ಕೆ ಕೇರಳ ಹಾಗೂ ಕುಶಾಲನಗರದಿಂದ ಎಂ. ಸ್ಯಾಂಡ್ ಮತ್ತು ಜಲ್ಲಿ ಕಲ್ಲುಗಳು ಬರುತ್ತಿದ್ದು, ಲೋಡ್ ಒಂದಕ್ಕೆ ಸುಮಾರು ₹14,000 ನೀಡಬೇಕಿದೆ. ಆದರೆ ಗ್ರಾಮದಲ್ಲಿ ಕ್ರಶರ್ ಸ್ಥಾಪನೆಯಾದರೆ ₹8,000 ದೊರೆಯುತ್ತದೆ. ಜನಸಾಮಾನ್ಯರಿಗೆ ಉಪಯೋಗವಾಗುವ ಅಭಿವೃದ್ಧಿ ಕಾರ್ಯಗಳನ್ನು ವಿರೋಧಿಸುವುದು’ ಸರಿಯಲ್ಲ ಎಂದರು.
ಗೋಷ್ಠಿಯಲ್ಲಿ ಗ್ರಾಮಸ್ಥರಾದ ಕುಂಞಿರ ಸುನು ಸುಬ್ಬಯ್ಯ, ಮೂಕೈರಿರ ಕವನ್ ದೇವಯ್ಯ, ಚಟ್ಟಕುಟ್ಟಡ ಕಾರ್ತಿಕ್ ಮೊಣ್ಣಪ್ಪ, ಬೋಡುಕುಟ್ಟಡ ಯತೀಶ್, ಲಾರಿ ಮಾಲೀಕ ಮಥಾಯಿಸ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.