ADVERTISEMENT

ಮಡಿಕೇರಿ: ಕಲ್ಲಿನ ಕ್ರಷರ್ ಘಟಕ ಸ್ಥಾಪನೆಗೆ ವಿರೋಧ

ಪ್ರತಿಭಟನೆ ಎಚ್ಚರಿಕೆ ನೀಡಿದ ಅರಮೇರಿ ಗ್ರಾಮಸ್ಥರು

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2024, 4:17 IST
Last Updated 19 ನವೆಂಬರ್ 2024, 4:17 IST

ಮಡಿಕೇರಿ: ಕದನೂರು ಗ್ರಾಮ ಪಂಚಾಯಿತಿಗೆ ಒಳಪಡುವ ಅರಮೇರಿ ಗ್ರಾಮದಲ್ಲಿ ಕಲ್ಲಿನ ಕ್ರಷರ್ ಘಟಕ ಸ್ಥಾಪನೆಗೆ ಯಾವುದೇ ಕಾರಣಕ್ಕೂ ಅನುಮತಿ ನೀಡಬಾರದು ಎಂದು ಅರಮೇರಿ ಗ್ರಾಮಸ್ಥ ಪೂಳಂಡ ಎಸ್.ಮಾಚಯ್ಯ ಒತ್ತಾಯಿಸಿದರು.

ಗ್ರಾಮಸ್ಥರ ವಿರೋಧದ ನಡುವೆಯೂ ಕಲ್ಲಿನ ಕ್ರಷರ್ ಘಟಕ ಸ್ಥಾಪನೆಗೆ ಕೆಲವು ಕಾಣದ ಕೈಗಳು ಕಾರ್ಯನಿರ್ವಹಿಸುತ್ತಿದ್ದು, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅನುಮತಿ ನೀಡಿದ್ದಲ್ಲಿ ಮುಂದಿನ ದಿನಗಳಲ್ಲಿ ತೀವ್ರವಾದ ಹೋರಾಟವನ್ನು ನಡೆಸುವುದಾಗಿ ಅವರು ಇಲ್ಲಿ ಸೋಮವಾರ ಎಚ್ಚರಿಕೆ ನೀಡಿದರು.

ಕಡಂಗಮರೂರು ಗ್ರಾಮ ಪಂಚಾಯಿತಿ ಮಾಜಿ ಸದಸ್ಯೆ ಕೋದಂಡ ಮಂಜುಳಾ ಅಯ್ಯಪ್ಪ ಮಾತನಾಡಿ, ‘ಕಡಂಗಮರೂರೂ ವಾರ್ಡ್ ಸಭೆಯಲ್ಲಿ ಹಾಗೂ ಕದನೂರು ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಎರಡೂ ಗ್ರಾಮಸ್ಥರು ಕ್ರಷರ್ ಘಟಕ ಸ್ಥಾಪನೆಗೆ ವಿರೋಧ ವ್ಯಕ್ತಪಡಿಸಿರುವುದರಿಂದ ಪಂಚಾಯಿತಿಯಿಂದ ನಿರಾಪೇಕ್ಷಣಾ ಪತ್ರ ನೀಡಲು ಸಾಧ್ಯವಿಲ್ಲವೆಂದು ಉಭಯ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿಗಳು ವಿರಾಜಪೇಟೆ ತಹಶೀಲ್ದಾರರಿಗೆ ಮಾಹಿತಿ ಪತ್ರ ನೀಡಿದ್ದಾರೆ’ ಎಂದರು.

ADVERTISEMENT

ಕ್ರಷರ್ ಘಟಕದಿಂದ ಹೊರಬರುವ ದೂಳು ಮತ್ತು ಬಳಸುವ ರಾಸಾಯನಿಕವು ಕಾಫಿ ತೋಟದ ಮೇಲೆಲ್ಲ ಅವರಿಸಿ ಫಸಲಿಗ ತೊಂದರೆಯಾಗುವ ಆತಂಕ ಇದೆ. ಜತೆಗೆ, ಪರಿಸರ ಮಾಲಿನ್ಯ, ಶಬ್ದ ಮಾಲಿನ್ಯ, ಜಾನುವರುಗಳಿಗೂ ಹಾಗೂ ಜಲ ಮೂಲಕ್ಕೂ ತೀವ್ರವಾದ ಹಾನಿ ಉಂಟಾಗಬಹುದು ಎಂದರು.

ಅರಮೇರಿ ಗ್ರಾಮಸ್ಥರಾದ ಟಿ.ಎನ್.ತುನುಜ್ ಕುಮಾರ್, ಕಾಕೋಟು ಪರಂಬು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಚೋಳಂಡ ಸುಗುಣ ಪೊನ್ನಪ್ಪ, ಕಡಂಗಮರೂರು ಗ್ರಾಮಸ್ಥರಾದ ಬಲ್ಯಂಡ ಸಿ.ನಂದಾ ಮುತ್ತಣ್ಣ, ಬಲ್ಲಟ್ಟಿಕಾಳಂಡ ಪಿ.ಮುದ್ದಯ್ಯ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.