ಮಡಿಕೇರಿ: ಡಿ.1ರಿಂದ ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿ ಪ್ರಕ್ರಿಯೆ ಜಿಲ್ಲೆಯ 5 ಕಡೆಗಳಲ್ಲಿ ಆರಂಭವಾಗಲಿದೆ.
ಮಡಿಕೇರಿ, ಕುಶಾಲನಗರ, ಗೋಣಿಕೊಪ್ಪ ಹಾಗೂ ಸೋಮವಾರಪೇಟೆಯ ಎಪಿಎಂಸಿ ಮಾರುಕಟ್ಟೆ ಆವರಣದಲ್ಲಿ ಹಾಗೂ ವಿರಾಜಪೇಟೆ ಪಟ್ಟಣದಲ್ಲಿ ಖರೀದಿ ಕೇಂದ್ರ ತೆರೆಯಲು ಇಲ್ಲಿ ಗುರುವಾರ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಪಡೆ ಸಮಿತಿ ಸಭೆ ನಿರ್ಧರಿಸಿತು.
ಸಾಮಾನ್ಯ ಭತ್ತ ಪ್ರತಿ ಕ್ವಿಂಟಲ್‌ಗೆ ₹ 2,300 ನಿಗದಿಪಡಿಸಲಾಗಿದ್ದು, ರಾಗಿ ಪ್ರತಿ ಕ್ವಿಂಟಲ್‌ಗೆ ₹ 4,290 ನಿಗದಿಪಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ವೆಂಕಟ್ ರಾಜಾ ಮಾಹಿತಿ ನೀಡಿದರು.
ಕೇಂದ್ರ ಸರ್ಕಾರದ ಆದೇಶದಂತೆ 2024-25ನೇ ಸಾಲಿಗೆ ರೈತರಿಂದ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಭತ್ತ ಮತ್ತು ರಾಗಿಯನ್ನು ಡಿ.1ರಿಂದ ಖರೀದಿ ಮಾಡಲಾಗುತ್ತಿದೆ. ಈ ಅವಕಾಶವನ್ನು ರೈತರು ಬಳಸಿಕೊಳ್ಳಬೇಕು ಎಂದು ಅವರು ಮನವಿ ಮಾಡಿದರು.
ಜಿಲ್ಲೆಗೆ ಭತ್ತ ಮತ್ತು ರಾಗಿ ಖರೀದಿಸಲು ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿಯನ್ನು ಖರೀದಿ ಏಜೆನ್ಸಿಯನ್ನಾಗಿ ಸರ್ಕಾರ ನೇಮಕ ಮಾಡಿದ್ದು, ಖರೀದಿ ಪ್ರಕ್ರಿಯೆಯು ಇವರ ಮುಖಾಂತರವೇ ನಡೆಯಲಿದೆ ಎಂದು ಅವರು ತಿಳಿಸಿದರು.
ರೈತರು ಸಂಬಂಧಪಟ್ಟ ನೋಂದಣಿ ಕೇಂದ್ರಗಳಲ್ಲಿಯೇ ತಮ್ಮ ಭತ್ತವನ್ನು ನೀಡಬಹುದು. ಬೇಡಿಕೆ ಇದ್ದಲ್ಲಿ ಅಗ್ಯತ್ಯಕ್ಕೆ ತಕ್ಕಂತೆ ಹೆಚ್ಚಿನ ಕೇಂದ್ರಗಳನ್ನು ತೆರೆಯಲು ಸಹ ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಜಂಟಿ ನಿರ್ದೇಶಕಿ ಕುಮುದಾ ಶರತ್ ಮಾತನಾಡಿ, ‘ಭತ್ತವನ್ನು ಮಾರಾಟ ಮಾಡಬೇಕಾದ ರೈತರು ಈಗಾಗಲೇ ‘ಪ್ರೂಟ್ಸ್’ ತಂತ್ರಾಂಶದಲ್ಲಿ ನೋಂದಣಿಯಾಗಿರಬೇಕು. ಒಂದು ವೇಳೆ ರೈತರು ನೋಂದಣಿ ಮಾಡದಿದ್ದಲ್ಲಿ ಫ್ರೂಟ್ಸ್ ತಂತ್ರಾಂಶದಲ್ಲಿ ನೋಂದಣಿ ಮಾಡಿಕೊಂಡು ತಾವು ಬೆಳೆದ ಭತ್ತವನ್ನು ಖರೀದಿ ಕೇಂದ್ರಗಳಲ್ಲಿ ಮಾರಾಟ ಮಾಡಬಹುದು ಎಂದರು.
ಖರೀದಿ ಕೇಂದ್ರಗಳಲ್ಲಿ ರೈತರಿಂದ ಖರೀದಿ ಮಾಡಿದ ಭತ್ತದ ಮೊತ್ತವನ್ನು ನೇರವಾಗಿ ರೈತರ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುತ್ತದೆ. ನೋಂದಣಿ ಕೇಂದ್ರದಲ್ಲಿ ರೈತರು ‘ಫ್ರೂಟ್ಸ್ ಐಡಿ’, ಆಧಾರ್ ಸಂಖ್ಯೆಗೆ ಜೋಡಣೆಯಾದ ತಮ್ಮ ಎನ್‍ಪಿಸಿಐ ಬ್ಯಾಂಕ್ ಖಾತೆಯ ವಿವರ ನೀಡಬೇಕಿದೆ ಎಂದು ಅವರು ತಿಳಿಸಿದರು.
ನೋಂದಣಿ ಕೇಂದ್ರದಲ್ಲಿ ಸಿಬ್ಬಂದಿ ಮತ್ತು ಡೇಟಾ ಎಂಟ್ರಿ ಆಪರೇಟರ್‌ಗಳ ನೇಮಕ, ಕಂಪ್ಯೂಟರ್, ಇಂಟರ್‌ನೆಟ್ ಸೌಲಭ್ಯ, ವಿದ್ಯುತ್ ಸಂಪರ್ಕ, ಕುಡಿಯುವ ನೀರಿನ ವ್ಯವಸ್ಥೆ ಮತ್ತಿತರ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ಹೇಳಿದರು.
ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಚಂದ್ರಶೇಖರ್, ತೂಕ ಮತ್ತು ಅಳತೆ ವಿಭಾಗದ ಸಹಾಯಕ ನಿಯಂತ್ರಕಿ ಸರಳಾ ನಾಯರ್, ಕರ್ನಾಟಕ ಕೃಷಿ ಮಾರಾಟ ಮಂಡಳಿಯ ವ್ಯವಸ್ಥಾಪಕ ಸೋಮಯ್ಯ, ಕರ್ನಾಟಕ ಕೃಷಿ ಉತ್ಪನ್ನ ಮಾರಾಟ ಸಮಿತಿಯ ಫರ್ನಾಂಡೀಸ್, ಉಗ್ರಾಣ ನಿಗಮದ ವ್ಯವಸ್ಥಾಪಕ ನಾಗ ನಾಯಕ್, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಾರ್ಯದರ್ಶಿ ಯಶೋಧಾ, ಆಹಾರ ಇಲಾಖೆ ನಿರೀಕ್ಷಕರಾದ ಸ್ವಾತಿ, ನಿಶಾನ್, ವೀಣಾ, ಯಶಸ್ವಿನಿ, ಕಿರಣ್, ನಾಗೇಂದ್ರ ಭಾಗವಹಿಸಿದ್ದರು.
ಖರೀದಿ ಕೇಂದ್ರದ ಮೂಲಕ ಮಾರಾಟ ಮಾಡಲು ‘ಫ್ರೂಟ್’ ಐಡಿ ಕಡ್ಡಾಯ ಖರೀದಿಸಿದ ಭತ್ತದ ಹಣ ರೈತರ ಬ್ಯಾಂಕ್ ಖಾತೆಗೆ ಜಮೆ ಕೃಷಿ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ ಜಿಲ್ಲಾಧಿಕಾರಿ
* ಸೂಕ್ತ ದಾಸ್ತಾನಿಗಾಗಿ ಭತ್ತ ಖರೀದಿ ಕೇಂದ್ರಗಳಲ್ಲಿ ಭತ್ತದ ಗುಣಮಟ್ಟವನ್ನು ಪರೀಕ್ಷಿಸಲು ಗ್ರೇಡರ್‌ಗಳನ್ನು ನಿಯೋಜಿಸಿಕೊಳ್ಳಬೇಕು
* ರೈತರ ನೋಂದಣಿಯಲ್ಲಿ ತಾಂತ್ರಿಕ ತೊಂದರೆಗಳು ಕಂಡು ಬಂದಲ್ಲಿ ಕೂಡಲೆ ಸರಿಪಡಿಸಬೇಕು
* ಭತ್ತದ ಖರೀದಿ ನೋಂದಣಿ ಕುರಿತು ಗ್ರಾಮೀಣ ಭಾಗದಲ್ಲಿ ರೈತರಿಗೆ ಹಾಗೂ ರೈತ ಮುಖಂಡರಿಗೆ ಹಾಗೂ ರೈತ ಸಂಪರ್ಕ ಕೇಂದ್ರಗಳ ಮೂಲಕ ಹೆಚ್ಚಿನ ಮಾಹಿತಿ ನೀಡಬೇಕು
* ರೈತರ ನೋಂದಣಿ ಕೇಂದ್ರಗಳು ಹಾಗೂ ಭತ್ತ ಖರೀದಿ ಕೇಂದ್ರಗಳ ಕುರಿತು ವಿವರಗಳನ್ನು ಖರೀದಿ ಏಜೆನ್ಸಿಯವರು ನೀಡಬೇಕು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.