ADVERTISEMENT

ಭತ್ತದ ರೋಗ: ಬೀಜೋಪಚಾರವೇ ಮದ್ದು

ಗೋಣಿಕೊಪ್ಪ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳ ಸಲಹೆ

​ಪ್ರಜಾವಾಣಿ ವಾರ್ತೆ
Published 15 ಜೂನ್ 2023, 16:10 IST
Last Updated 15 ಜೂನ್ 2023, 16:10 IST
.
.   

ಮಡಿಕೇರಿ: ‘ಭತ್ತವನ್ನು ಸೂಕ್ತ ಬೀಜೋಪಚಾರ ಮಾಡಿ ಬಿತ್ತನೆ ಮಾಡುವುದರಿಂದ ಮುಂದೆ ಬರಬಹುದಾದ ಬೆಂಕಿರೋಗ, ಊದು ಬತ್ತಿರೋಗ, ಕಂದು ಎಲೆಚುಕ್ಕಿ ರೋಗ ಮತ್ತು ಹುಸಿಕಾಡಿಗೆ ರೋಗಗಳನ್ನು ತಡೆಗಟ್ಟಬಹುದು’ ಎಂದು ಗೋಣಿಕೊಪ್ಪಲು ಕೃಷಿ ವಿಜ್ಞಾನ ಕೇಂದ್ರದ ಸಸ್ಯ ಸಂರಕ್ಷಣಾ ವಿಜ್ಞಾನಿ ಡಾ.ಕೆ.ವಿ.ವೀರೇಂದ್ರಕುಮಾರ್ ತಿಳಿಸಿದ್ದಾರೆ.

‘ಬೀಜದಿಂದ ಪ್ರಸಾರವಾಗುವ ಅನೇಕ ರೋಗಗಳಲ್ಲಿ ಹಾನಿಕಾರಕ ರೋಗಾಣುಗಳಾದ ಶಿಲೀಂದ್ರ, ದುಂಡಾಣು ಮತ್ತು ನಂಜಾಣು ಸೂಕ್ಷ್ಮಜೀವಿಗಳು ಬೀಜಗಳ ಹೊರಮೈ ಹಾಗೂ ಒಳಮೈ ಆವರಿಸಿ ಬೀಜಗಳು ಮೊಳಕೆಯೊಡೆಯುವಾಗ ಸಸಿಗಳು ಬೆಳೆಯುವಾಗ ಜೊತೆಯಲ್ಲೆ ಇದ್ದು ಬೆಳೆಯ ವಿವಿಧ ಬೆಳವಣಿಗೆಯ ಹಂತದಲ್ಲಿ ರೋಗವು ಉಲ್ಬಣಿಸಿ ಬೆಳೆಯ ಹಾನಿಗೆ ಕಾರಣವಾಗುತ್ತವೆ. ಹಾಗಾಗಿ, ಅವುಗಳನ್ನು ಬೀಜ ಬಿತ್ತನೆಯಾಗುವ ಮೊದಲೇ ಸೂಕ್ತ ಬೀಜೋಪಚಾರದ ಮೂಲಕ ತಡೆಗಟ್ಟಬೇಕು’ ಎಂದು ಪ್ರಕಟಣೆಯಲ್ಲಿ ಹೇಳಿದ್ದಾರೆ.

‘ಪ್ರತಿ ಎಕರೆಗೆ ಶಿಫಾರಸ್ಸು ಮಾಡಿದ 25-30 ಕೆ.ಜಿ ಭತ್ತದ ಬೀಜವನ್ನು ತೆಗೆದುಕೂಂಡು 1:4 ಪ್ರಮಾಣದ ಉಪ್ಪಿನ ದ್ರಾವಣದಲ್ಲಿ (4 ಲೀಟರ್ ನೀರಿಗೆ 1 ಕೆ.ಜಿ ಉಪ್ಪು) ಅದ್ದಿ ಗಟ್ಟಿ ಮತ್ತು ಜೊಳ್ಳು ಬೀಜಗಳನ್ನು ಬೇರ್ಪಡಿಸಬೇಕು. ಗಟ್ಟಿಯಾದ ಬೀಜಗಳನ್ನು ಬೇರ್ಪಡಿಸಿದ ನಂತರ 2-3 ಬಾರಿ ತಣ್ಣೀರಿನಲ್ಲಿ ತೊಳೆದು ಸುಮಾರು 8 ಗಂಟೆಗಳ ಕಾಲ ಬಿತ್ತನೆ ಬೀಜವನ್ನು ನೀರಿನಲ್ಲಿ ನೆನಸಬೇಕು. ನೆನೆಸಿದ ಬೀಜಗಳನ್ನು ನೀರಿನಿಂದ ತೆಗೆದು ಎಕರೆಗೆ ಬೇಕಾದ 25-30 ಕೆ.ಜಿ ಬಿತ್ತನೆ ಬೀಜಕ್ಕೆ 100 ರಿಂದ 120 ಗ್ರಾಂ ಕಾರ್ಬೆಂಡೆಜಿಮ್ ಅಥವಾ 50 ರಿಂದ 60 ಗ್ರಾಂ ಕಾರ್ಬೆಂಡೆಜಿಮ್ + ಮ್ಯಾಂಕೊಜೆಬ್ ಅಥವಾ 50- 60 ಗ್ರಾಂ ಟ್ರೈಸೈಕ್ಲಜೋಲ್ ಎಂಬ ಶಿಲೀಂದ್ರನಾಶಕವನ್ನು ಚೆನ್ನಾಗಿ ಮಿಶ್ರಣ ಮಾಡಿ ನೆರಳಿನಲ್ಲಿ ಒಣಗಿಸಬೇಕು. ಈ ರೀತಿ ಬೀಜೋಪಚಾರ ಮಾಡಿದ ಬಿತ್ತನೆ ಬೀಜವನ್ನು ಒಂದು ಚೀಲದಲ್ಲಿ ಗಟ್ಟಿಯಾಗಿ ಕಟ್ಟಿ ಮೊಳಕೆಯೊಡೆಯಲು ಇಟ್ಟು ನಂತರ ಸಸಿಮಡಿಗೆ ಉಪಯೋಗಿಸಬೇಕು’ ಎಂದು ಅವರು ಸಲಹೆ ನೀಡಿದ್ದಾರೆ.

ADVERTISEMENT

ಅಝೋಸ್ಪೈರಿಲಂನಿಂದ ಬೀಜೋಪಚಾರ ಮಾಡುವ ವಿಧಾನ: ‘ಅಝೋಸ್ಪೈರಿಲಂ ಎನ್ನುವ ಏಕಾಣುಗಳು ಭತ್ತದ ಬೆಳೆಯ ಬೇರಿನ ಹೊರವಲಯದಲ್ಲಿ ಜೀವಿಸಿ, ಸಾರಜನಕ ಸ್ಥಿರೀಕರಣ ಮಾಡುತ್ತವೆ. ಅಝೋಸ್ಪೈರಿಲಂ ಜೀವಾಣು ಗೊಬ್ಬರ ಬಳಕೆಯಿಂದ ಬೆಳೆಗಳಿಗೆ ನೇರವಾಗಿ ಸಾರಜನಕ ಲಭ್ಯವಾಗುವುದರಿಂದ ಜೊತೆಗೆ ಈ ಏಕಾಣುಗಳು ಹಾರ್ಮೋನುಗಳನ್ನು ಉತ್ಪನ್ನಮಾಡಿ ಸಸ್ಯಗಳ ಬೆಳವಣಿಗೆಯನ್ನು ಹೆಚ್ಚಿಸುತ್ತವೆ’ ಎಂದು ಅವರು ಹೇಳಿದ್ದಾರೆ.

ಬೀಜೋಪಚಾರ ಮಾಹಿತಿ
ಶಿಫಾರಸ್ಸು ಮಾಡಿದ ಶಿಲೀಂದ್ರನಾಶಕವನ್ನು ನಿರ್ದಿಷ್ಟ ಪ್ರಮಾಣದಲ್ಲಿ ಉಪಯೋಗಿಸಿ ಬೀಜೋಪಚಾರ ಮಾಡಬೇಕು * ಬೀಜೋಪಚಾರ ಮಾಡಿದ ಬಿತ್ತನೆ ಬೀಜಗಳನ್ನು ಸುರಕ್ಷಿತ ಸ್ಥಳದಲ್ಲಿ ಇಡಬೇಕು. * ಎರಡು ಮೂರು ಶಿಲೀಂದ್ರನಾಶಕಗಳನ್ನು ಒಟ್ಟಿಗೆ ಮಿಶ್ರಣ ಮಾಡಿ ಬೀಜೋಪಚಾರ ಮಾಡಬಾರದು. * ಬಿತ್ತನೆ ಬೀಜಕ್ಕೆ ಬೀಜೋಪಚಾರ ಮಾಡುವ ಸಂಧರ್ಭದಲ್ಲಿ ಕೈಗಳಿಗೆ ಪ್ಲಾಸ್ಟಿಕ್ ಚೀಲ ಅಥವಾ ಗ್ಲೌಸ್‍ಗಳನ್ನು ಹಾಕಿಕೊಳ್ಳಬೇಕು

‘50 ಗ್ರಾಂ ಬೆಲ್ಲ ಅಥವಾ ಸಕ್ಕರೆಯನ್ನು ಅರ್ಧ ಲೀಟರ್ ನೀರಿನಲ್ಲಿ ಕರಗಿಸಿ 5 ನಿಮಿಷಗಳ ಕಾಲ ಕುದಿಸಿ ಅಂಟು ದ್ರಾವಣವನ್ನು ತಯಾರಿಸಬೇಕು. ತಣ್ಣಗಾದ ಬೆಲ್ಲ ಅಥವಾ ಸಕ್ಕರೆ ದ್ರಾವಣವನ್ನು 25 ಕೆ.ಜಿ ಬಿತ್ತನೆ ಬೀಜದ ಮೇಲೆ ಸಮನಾಗಿ ಲೇಪಿಸಿ ನಂತರ 400 ಗ್ರಾಂ ಅಝೋಸ್ಪೈರಿಲಂ ಎಂಬ ಜೈವಿಕ ಗೊಬ್ಬರದಿಂದ ಮಿಶ್ರಣ ಮಾಡಿ, ಅರ್ಧಗಂಟೆ ನೆರಳಿನಲ್ಲಿ ಒಣಗಿಸಿ ಸಸಿಮಡಿಗೆ ಉಪಯೋಗಿಸಬೇಕು’ ಎಂದು ಅವರು ತಿಳಿಸಿದ್ದಾರೆ.

800 ಗ್ರಾಂ ಅಝೋಸ್ಪೈರಿಲಂ ಜೈವಿಕ ಗೊಬ್ಬರವನ್ನು ಪುಡಿಮಾಡಿದ 10 ಕೆ.ಜಿ ಕೊಟ್ಟಿಗೆ ಗೊಬ್ಬರ ಮತ್ತು 10 ಕೆ.ಜಿ. ಮಣ್ಣಿನೊಡೆನೆ ಮಿಶ್ರಣಗೊಳಿಸಿ ಗದ್ದೆಗೆ ನಾಟಿ ಮಾಡುವ ಸಮಯದಲ್ಲಿ ಎರಚಬೇಕು ಎಂದು ಅವರು ಹೇಳಿದ್ದಾರೆ.

ಇನ್ನಷ್ಟು ಮಾಹಿತಿಗೆ ಪ್ರಧಾನ ವಿಜ್ಞಾನಿ ಮತ್ತು ಮುಖ್ಯಸ್ಥರು ಐ.ಸಿ.ಎ.ಆರ್-ಕೃಷಿ ವಿಜ್ಞಾನ ಕೇಂದ್ರ, ಗೋಣಿಕೊಪ್ಪಲು, ಕೊಡಗು ಜಿಲ್ಲೆ 08274-295274 ಇವರನ್ನು ಸಂಪರ್ಕಿಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.