ADVERTISEMENT

ಮಂಜಿನ ನಗರಿ ಕೊಡಗಿಗೆ ಮರಳಿದ ಗತವೈಭವ

ಸುರಿದ ಮಳೆಗೆ ತಂಪಾದ ಇಳೆ, ಶಮನವಾದ ಬಿರುಬೇಸಿಗೆಯ ಹವೆ

ಕೆ.ಎಸ್.ಗಿರೀಶ್
Published 29 ಮೇ 2024, 6:31 IST
Last Updated 29 ಮೇ 2024, 6:31 IST
ಮಡಿಕೇರಿಯ ಟಿ.ಜಾನ್ ಬಡಾವಣೆಯಲ್ಲಿ ಈಚೆಗೆ ಮುಸುಕಿದ್ದ ದಟ್ಟ ಮಂಜು
ಮಡಿಕೇರಿಯ ಟಿ.ಜಾನ್ ಬಡಾವಣೆಯಲ್ಲಿ ಈಚೆಗೆ ಮುಸುಕಿದ್ದ ದಟ್ಟ ಮಂಜು   

ಮಡಿಕೇರಿ: ಈಚೆಗೆ ಸುರಿದ ಮಳೆಯು ಮತ್ತೆ ಕೊಡಗಿಗೆ ಗತ ವೈಭವವನ್ನು ಮರಳಿಸಿತು. ಮಂಜಿನ ನಗರಿ ಎಂಬ ಹೆಸರನ್ನು ಮಡಿಕೇರಿಗೆ ಮರಳಿ ತಂದಿತು. ಹಿಂದೆಂದೂ ಕಂಡರಿಯದಂತಹ ಬಿರುಬೇಸಿಗೆಯ ಬಿಸಿಯನ್ನು ತಂಪಾಗಿಸಿತು.

ಗಿರಿಗಳನ್ನು ಸುತ್ತುವರೆದ ಮೋಡಗಳ ರಾಶಿ, ಹತ್ತಿಯ ಉಂಡೆಗಳಂತೆ ಸಾಗುವ ಮೋಡಗಳು, ಫಳಾರನೆ ಆಗಸದಿಂದ ಕಂಗೊಳಿಸುತ್ತಿದ್ದ ಕೋಲ್ಮಿಂಚುಗಳು, ಧೋ ಎಂದು ಸುರಿಯುವ ಮಳೆ, ಬೀಸುವ ಕುಳಿರ್ಗಾಳಿಗೆ ಮೈಯೊಡ್ಡಿದರೆ ಸ್ವರ್ಗವೇ ಇಳಿದಂತೆ ಭಾಸವಾಗುವಿಕೆ... ಹೀಗೆ ಸುರಿಯುತ್ತಿದ್ದ ಮಳೆಯು ಕೊಡಗಿನ ಹಿಂದಿನ ಪರಿಸರವನ್ನು ಮತ್ತೆ ಮರಳಿಸಿತು.

ಈ ಬಾರಿಯ ಬೇಸಿಗೆ ಹೇಗಿತ್ತೆಂದರೆ ಹಿಂದೆಂದೂ ಕಂಡರಿಯದಷ್ಟು ತಾಪಮಾನವನ್ನು ತಂದಿತ್ತು. ಬೇಸಿಗೆ ಬಿಸಿಲು ಬಯಲು ಸೀಮೆಯ ಬಿಸಿಲನ್ನು ನೆನಪಿಸುತ್ತಿತ್ತು. ಜನವರಿಯಿಂದ ಒಮ್ಮೆಯೂ ಇಣುಕಿಯೂ ನೋಡದ ಮಳೆಯಿಂದ ನೆಲವೆಲ್ಲ ಕಾದು ಕಾವಲಿಯಂತಾಗಿತ್ತು.

ADVERTISEMENT

ಫೈನ್‌ಗಳು ಮಾತ್ರವಲ್ಲ ತಂಪು ಹವೆಯನ್ನು ನೀಡುವ ಏರ್‌ಕೂಲರ್‌ಗಳನ್ನು ಜನರು ಖರೀದಿಸುವಂತಾಗಿತ್ತು. ಅಂಗಡಿಗಳ ಮಾಲೀಕರೂ ಇಂತಹ ಕೂಲರ್‌ಗಳನ್ನು ಖರೀದಿಸಿ ಬೇಸಿಗೆಯ ಕಾವನ್ನು ತಣಿಸಿಕೊಳ್ಳುತ್ತಿದ್ದರು. ವಿವಿಧ ಬಗೆಯ ಫೈನ್‌ಗಳು, ಏರ್‌ಕೂಲರ್‌ಗಳೂ ಹೆಚ್ಚು ಹೆಚ್ಚು ವ್ಯಾಪಾರವಾಗಿದ್ದವು.

ಇಷ್ಟು ವರ್ಷಗಳ ಕಾಲ ಜನವರಿಯಿಂದ ಮೇವರೆಗೆ ಆಗಾಗ್ಗೆ ಒಂದಷ್ಟು ಮಳೆ ಬೀಳುತ್ತಿತ್ತು. ನೆಲವೆಲ್ಲ ಒಣಗಿದೆ ಎನ್ನುವಷ್ಟರಲ್ಲಿ ಮತ್ತೊಮ್ಮೆ ಮಳೆ ಸುರಿದ ವಾತಾವರಣದ ಬಿಸಿ ಏರದಂತೆ ಮಾಡುತ್ತಿತ್ತು. ಇದೇ ಕಾರಣಕ್ಕೆ ಬೇಸಿಗೆಯಲ್ಲಿ ಪ್ರವಾಸಿಗರು ಕೊಡಗಿನತ್ತ ಹೆಚ್ಚು ಹೆಚ್ಚು ಬರುತ್ತಿದ್ದರು. ಆದರೆ, ಈ ಬಾರಿ ಬೇಸಿಗೆಯಲ್ಲಿ ಒಮ್ಮೆಯೂ ಮಳೆ ಸುರಿಯದೇ ಇದ್ದುದ್ದನ್ನು ಗಮನಿಸಿದ ಪ್ರವಾಸಿಗರು ಇದೇನೋ ಕೊಡಗೋ ಅಥವಾ ಬಿಸಿಲ ನಾಡೋ ಎಂದು ಉದ್ಘರಿಸುವಂತಹ ಸ್ಥಿತಿ ಏರ್ಪಟ್ಟಿತ್ತು.

ಈಗ ಒಂದೇ ಸಮನೆ ಸುರಿದ ಮಳೆಯು ಈ ಬಗೆಯ ಬಿಸಿಲಿನ ಬೇಗೆಯನ್ನು ತಣಿಸಿತು. ಮೂಲೆಯಲ್ಲಿದ್ದ ಕೊಡೆಯನ್ನು ಜನರು ಹುಡುಕುವಂತೆ ಮಾಡಿತು. ರೇನ್‌ಕೋಟ್‌ಗಳ ಖರೀದಿ ಕಡೆಗೆ ಗಮನ ಹರಿಸುವಂತೆ ಮಾಡಿತು.

ಮಡಿಕೇರಿಯಲ್ಲಿ ಮಂಜು ಮುಸುಕುವಿಕೆ ಮರೀಚಿಕೆ ಎಂಬಂತೆ ಆಗಿತ್ತು. ಮುಂಚಿನ ವರ್ಷಗಳಲ್ಲಿ ನಿತ್ಯವೂ  ಮುಸುಕುತ್ತಿದ್ದ ಮಂಜು ಏನಾಯಿತು ಎಂದು ಹುಡುಕುವಂತಹ ಸ್ಥಿತಿ  ಏರ್ಪಟ್ಟಿತು. ಆದರೆ, ಮೇ ತಿಂಗಳಿನಲ್ಲಿ ಮಳೆ ಸುರಿಯಲು ಆರಂಭಿಸಿದ ಬಳಿಕ ಸಹಜವಾಗಿಯೇ ಮಂಜು ಮುಸುಕುಲಾರಂಭಿಸಿತು. ಮಂಜಿನ ನಗರಿ ಎಂಬ ಹೆಸರು ಸಾರ್ಥಕ್ಯ ಪಡೆಯಿತು.

ಮಡಿಕೇರಿಯ ಡಾ.ಬಿ.ಆರ್.ಅಂಬೇಡ್ಕರ್ ಬಡಾವಣೆಯಲ್ಲಿ ಈಚೆಗೆ ಆವರಿಸಿದ್ದ ದಟ್ಟ ಮಂಜು

ಇಳಿಕೆಯಾದ ತಾಪಮಾನ

ಮೇ ತಿಂಗಳ ಆರಂಭದಲ್ಲಿ ಗರಿಷ್ಠ ತಾಪಮಾನ 35ರಿಂದ 36 ಡಿಗ್ರಿ ಸೆಲ್ಸಿಯೆಸ್‌ವರೆಗೂ ದಾಖಲಾಗುತ್ತಿತ್ತು. ಕನಿಷ್ಠ ತಾಪಮಾನ 26 ದಾಟುತ್ತಿತ್ತು. ಮಡಿಕೇರಿ ಬಿಟ್ಟು ಉಳಿದ ಭಾಗಗಳಲ್ಲಿ ತಾಪಮಾನ ಇದಕ್ಕೂ ಹೆಚ್ಚು ಇರುತ್ತಿತ್ತು. ಆದರೆ ಮಳೆ ಸುರಿಯಲು ಆರಂಭಿಸಿದ ನಂತರ ತಾಪಮಾನ ಇಳಿಯುತ್ತಾ ಹೋಯಿತು. ಅದರಲ್ಲೂ ಮೇ 20 ಮತ್ತು 25ರಂದು ಗರಿಷ್ಠ ತಾಪಮಾನ 30ಕ್ಕೂ ಕಡಿಮೆ ದಾಖಲಾಯಿತು. ಕನಿಷ್ಠ ತಾಪಮಾನವೂ ಇಳಿಕೆಯಾಯಿತು. ಮೇ 27ರಂದು ಗರಿಷ್ಠ ತಾಪಮಾನ 28.08 ಹಾಗೂ ಕನಿಷ್ಠ ತಾಪಮಾನ 20.07 ದಾಖಲಾಗಿತ್ತು. 26ರಂದು ಗರಿಷ್ಠ ತಾಪಮಾನ 26.09 ಹಾಗೂ ಕನಿಷ್ಠ ತಾಪಮಾನ 20.06ಕ್ಕೆ ಇಳಿಕೆಯಾಗಿತ್ತು. ಕಳೆದ ವರ್ಷ ಮೇ ತಿಂಗಳಿನಲ್ಲಿ ಗರಿಷ್ಠ ಮತ್ತು ಕನಿಷ್ಠ ತಾಪಮಾನ ಇಷ್ಟು ಇಳಿಕೆಯಾಗಿರಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.