ADVERTISEMENT

ಫುಟ್‌ಬಾಲ್‌ ತಂಡದ ನಾಯಕ ಪಿಡಿಒ

ಒಡಿಶಾದಲ್ಲಿ ನಡೆಯುವ ರಾಷ್ಟ್ರಮಟ್ಟದ ನಾಗರಿಕ ಸೇವಾ ಫುಟ್‌ಬಾಲ್‌ ಟೂರ್ನಿಯಲ್ಲಿ ಭಾಗಿ

ಸುನಿಲ್ ಎಂ.ಎಸ್.
Published 15 ಮಾರ್ಚ್ 2023, 4:51 IST
Last Updated 15 ಮಾರ್ಚ್ 2023, 4:51 IST
ಬಿ.ಎಚ್.ವೇಣುಗೋಪಾಲ್
ಬಿ.ಎಚ್.ವೇಣುಗೋಪಾಲ್   

ಸುಂಟಿಕೊಪ್ಪ: ಒಡಿಶಾ ರಾಜ್ಯದ ಭುವನೇಶ್ವರದ ಕಳಿಂಗ ಸ್ಟೇಡಿಯಂ ಸ್ಪೋರ್ಟ್ಸ್ ಕಾಂಪ್ಲೆಕ್ಸ್‌ನಲ್ಲಿ ಮಾರ್ಚ್ 18ರಿಂದ 23ರವರೆಗೆ ನಡೆಯಲಿರುವ 2022-23ನೇ ಸಾಲಿನ ರಾಷ್ಟ್ರಮಟ್ಟದ ನಾಗರಿಕ ಸೇವಾ ಫುಟ್‌ಬಾಲ್‌ ಟೂರ್ನಿಗೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ತಂಡದ ನಾಯಕನಾಗಿ ಇಲ್ಲಿನ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬಿ.ಎಚ್.ವೇಣುಗೋಪಾಲ್ ಆಯ್ಕೆಯಾಗಿದ್ದು, ಸುಂಟಿಕೊಪ್ಪಕ್ಕೆ ಮಾತ್ರವಲ್ಲ ಕೊಡಗಿಗೆ ಹೆಮ್ಮೆಯ ವಿಷಯ.

ಸಣ್ಣ ವಯಸ್ಸಿನಲ್ಲಿಯೇ ಫುಟ್‌ಬಾಲ್‌ ಆಟವೆಂದರೆ ಇವರಿಗೆ ಅಚ್ಚುಮಚ್ಚು. ಟಿ.ವಿಯಲ್ಲಿ ಪ್ರಸಾರವಾಗುತ್ತಿದ್ದ ಫುಟ್‌ಬಾಲ್‌ ಟೂರ್ನಿ ವೀಕ್ಷಿಸಿ ತಾನು‌ ಒಬ್ಬ ಉತ್ತಮ ಫುಟ್‌ಬಾಲ್‌ ಆಟಗಾರನಾಗಬೇಕೆಂಬ ಆಸೆ ಮೂಡಿತು. ಗೌಡಳ್ಳಿ ಪ್ರಾಥಮಿಕ ಶಾಲೆಯಲ್ಲಿ ಇವರ ಆಟವನ್ನು‌ ಕಂಡ ಶಿಕ್ಷಕರು ಇನ್ನಷ್ಟು ಪ್ರೋತ್ಸಾಹ ‌ನೀಡಿ ಶಾಲಾ ಮಟ್ಟದಲ್ಲಿಯೇ ಹೋಬಳಿ, ತಾಲ್ಲೂಕುಮಟ್ಟದಲ್ಲಿ ಆಟವಾಡುವ ಅವಕಾಶ ನೀಡಿದರು. ಅಂದಿನಿಂದ‌ ಆ ಕ್ರೀಡೆಯನ್ನೇ ತಮ್ಮ ಜೀವಾಳ ಮಾಡಿಕೊಂಡ ವೇಣುಗೋಪಾಲ್ ಹಿಂತಿರುಗಿ ನೋಡದೆ ತನ್ನ ಸಾಧನೆಯನ್ನು ಮುಂದುವರೆಸಿ ಪ್ರೌಢ ಮತ್ತು ಪಿಯುಸಿ ಹಂತದಲ್ಲಿ ಮಿಂಚಿದರು.

ಮೈಸೂರಿನ ಯುವರಾಜ ಕಾಲೇಜಿನಲ್ಲಿ ವಿಜ್ಞಾನ ಪದವಿ ಪಡೆದುಕೊಂಡ ನಂತರ ಮೊದಲ ವರ್ಷ ಅಂತರ ಕಾಲೇಜು ಮಟ್ಟದ ಫುಟ್‌ಬಾಲ್‌ ಟೂರ್ನಿಯಲ್ಲಿ ಆಟವಾಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು. ಈ ಹಂತದಲ್ಲಿ ಅವರ ಆಟವನ್ನು ವೀಕ್ಷಿಸಿ ಹೆಚ್ಚಿ‌ನ‌ ತರಬೇತಿ ನೀಡಲು 15 ದಿನಗಳ ಶಿಬಿರಕ್ಕೆ ಆಹ್ವಾನಿಸಲಾಗಿತ್ತು. ಆದರೆ, ವಿದ್ಯಾಭ್ಯಾಸಕ್ಕೆ ತೊಂದರೆಯಾಗಬಹುದು ಎಂದು ಅವರು ಅದರಲ್ಲಿ ಭಾಗಿಯಾಗಲಿಲ್ಲ. ಮೈಸೂರು ವಿಶ್ವವಿದ್ಯಾಲಯದಲ್ಲಿ ಎಂ.ಎಸ್ಸಿ ಪದವಿಗೆ ಸೇರ್ಪಡೆಗೊಂಡ ನಂತರ ವಿಶ್ವವಿದ್ಯಾಲಯ ಮಟ್ಟದ ಫುಟ್‌ಬಾಲ್‌ ಟೂರ್ನಿಯಲ್ಲಿ ಮುನ್ನಡೆ ಆಟಗಾರನಾಗಿ ಮಿಂಚಿ ಹಲವು ಪದಕಗಳನ್ನು ಪಡೆದರು.

ADVERTISEMENT

ಬೆಂಗಳೂರು ಬಯೋಕಾನ್ ಕಂಪನಿಯಲ್ಲಿ ಉದ್ಯೋಗಕ್ಕೆ ಸೇರಿದ ವೇಣುಗೋಪಾಲ್ ಅಲ್ಲಿಯೂ ಕಾರ್ಪೋರೇಟ್ ಪಂದ್ಯಾವಳಿಯಲ್ಲಿ ಪಾಲ್ಗೊಂಡು ರಾಷ್ಟ್ರಮಟ್ಟದ ಕಂಪನಿಗಳ ಪ್ರಶಂಸೆಗೆ ಪಾತ್ರರಾದರು.

ಬೀಟಿಕಟ್ಟೆ ಗೋಲ್ಡನ್ ಗೈಸ್ ಕ್ಲಬ್‌ನೊಂದಿಗೆ ಸೇರಿಕೊಂಡ ವೇಣು ಮುನ್ನಡೆ ಆಟಗಾರನಾಗಿ ಕೊಡಗು ಸೇರಿದಂತೆ ಬೆಂಗಳೂರು, ಮೈಸೂರು, ಮಂಗಳೂರು, ಹಾಸನ, ದಾವಣಗೆರೆ ಸೇರಿದಂತೆ ಹಲವು ಕಡೆಗಳಲ್ಲಿ ಆಟವಾಡಿ ತಂಡ ಜಯಗಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಸೋಮವಾರಪೇಟೆ, ಸುಂಟಿಕೊಪ್ಪ, ನಂಜನಗೂಡು, ಮೈಸೂರು ತಂಡಗಳ ಜೊತೆಯಲ್ಲಿಯೂ ವೇಣುಗೋಪಾಲ್ ಆಟವಾಡಿದ್ದಾರೆ.

2010ರಲ್ಲಿ ಪಿಡಿಒ ಆಗಿ ನೇಮಕಗೊಂಡ ಬಳಿಕವೂ ಫುಟ್‌ಬಾಲ್ ಆಟವನ್ನು ಅವರು ಬಿಡಲಿಲ್ಲ. 2019ರಲ್ಲಿ ಧಾರವಾಡದಲ್ಲಿ ನಡೆದ ರಾಜ್ಯಮಟ್ಟದ ಟೂರ್ನಿಯಲ್ಲಿ ಕೊಡಗು ಸರ್ಕಾರಿ ನೌಕರರ ಸಂಘದ ಫುಟ್‌ಬಾಲ್‌ ನಾಯಕರಾಗಿದ್ದ ಇವರು, ತಂಡ ಪ್ರಶಸ್ತಿ ಗಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. 2021ರಲ್ಲಿ ದೆಹಲಿಯಲ್ಲಿ ನಡೆದ ಫುಟ್‌ಬಾಲ್‌ ಟೂರ್ನಿಯಲ್ಲೂ ಕರ್ನಾಟಕ ತಂಡವನ್ನು ಪ್ರತಿನಿಧಿಸಿ‌ದ್ದರು. 2022ರಲ್ಲಿ ಬೆಂಗಳೂರಿನಲ್ಲಿ‌ ನಡೆದ ರಾಜ್ಯಮಟ್ಟದ ಫುಟ್‌ಬಾಲ್‌ ಟೂರ್ನಿಯಲ್ಲಿ 2ನೇ ಬಾರಿಗೆ ಕೊಡಗಿಗೆ ಪ್ರಶಸ್ತಿಯನ್ನು ತಂದು ಕೊಡುವಲ್ಲಿ ವೇಣುಗೋಪಾಲ್ ಅವರ ಪರಿಶ್ರಮ ಹೆಚ್ಚಿತ್ತು.

ವೇಣುಗೋಪಾಲ್ ಅವರ ನೇತೃತ್ವದ ಕರ್ನಾಟಕ ಸರ್ಕಾರಿ ನೌಕರರ 20 ಸದಸ್ಯರ ತಂಡ ಮಾರ್ಚ್ 18 ರಿಂದ ನಡೆಯಲಿರುವ ರಾಷ್ಟ್ರಮಟ್ಟದ ಫುಟ್‌ಬಾಲ್ ಟೂರ್ನಿಗೆ ಬುಧವಾರ ಒಡಿಶಾಕ್ಕೆ ಪ್ರಯಾಣ ಬೆಳೆಸಲಿದೆ.

ಕೇವಲ ತಾವು ಆಡುವುದು ಮಾತ್ರವಲ್ಲ ಆಯೋಜನೆ ಮಾಡುವವರಿಗೂ ಸಹಕಾರ ನೀಡುತ್ತಾ, ಬಡ ಆಟಗಾರರಿಗೆ ಶೂ ನೀಡುವ ಮೂಲಕ ಅವರನ್ನು ಪ್ರೋತ್ಸಾಹಿಸುವ ಕೆಲಸ ಮಾಡು‌ತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.