ಮಡಿಕೇರಿ: ‘ಹಲೋ ಸರ್ ನಮಸ್ತೆ, ಏನು ಮಾಡುತ್ತಿರುವಿರಿ’ ಎಂದು ಕಳೆದ ರಾತ್ರಿ ನಾನು ಕರೆ ಮಾಡಿ ಕೇಳಿದ ಬಹುತೇಕ ಮಂದಿ ಹೇಳಿದ್ದು ರೇಡಿಯೊ ಕೇಳುತ್ತಿದ್ದೇನೆ ಎಂದು. ವಿಶೇಷವಾಗಿ ಕೊಡಗಿನಲ್ಲಿ ಸಂಜೆಯ ನಂತರ ತೋಟದ ಮನೆಗಳಲ್ಲಿ, ಲೈನ್‌ಮನೆಗಳಲ್ಲಿ, ಕಾಡಂಚಿನ ಪ್ರದೇಶಗಳಲ್ಲಿ, ಹಾಡಿಗಳಲ್ಲಿ ಸಾಮಾನ್ಯವಾಗಿ ಜನರು ರೇಡಿಯೊ ಕೇಳುತ್ತಾರೆ. ವಿದ್ಯುತ್ ಕಡಿತಗೊಂಡರಂತೂ ಬಹುತೇಕ ಎಲ್ಲರೂ ರೇಡಿಯೊಗೆ ಕಿವಿಗೊಡುತ್ತಾರೆ.
ಬೆಳಿಗ್ಗೆಯಿಂದ ಸಂಜೆಯವರೆಗೆ ತೋಟಗಳಲ್ಲಿ ಕೆಲಸ ಮಾಡುವವರು ಸಹ ಜೇಬಿನಲ್ಲಿ ಪಾಕೆಟ್ ರೇಡಿಯೊ ಇಟ್ಟುಕೊಂಡು ಕೇಳುವುದುಂಟು. ಇದು ಕೊಡಗಿನ ವಿಶೇಷಗಳಲ್ಲಿ ಒಂದು.
ಪ್ರತಿ ನಿತ್ಯ ಜಿಲ್ಲೆಯ ಒಂದಿಲ್ಲೊಂದು ಕಡೆ ನಡೆಯುವ ಸಂತೆಗಳಲ್ಲಿ ರೇಡಿಯೊಗಳ ಮಾರಾಟ ಭರ್ಜರಿಯಾಗಿ ನಡೆಯುತ್ತಿದೆ. ಜೇಬಿನಲ್ಲಿ ಹಾಕಿಕೊಳ್ಳಬಹುದಾದ ಗಾತ್ರದ ರೇಡಿಯೊನಿಂದ ಹಿಡಿದು, ಕೈಯಲ್ಲಿ ಹಿಡಿದುಕೊಳ್ಳಬಹುದಾದಷ್ಟು ಗಾತ್ರದ ರೇಡಿಯೊಗಳು ಸಂತೆಗಳಲ್ಲಿ ಖರೀದಿಗೆ ಲಭ್ಯವಿವೆ.
ಕೆಲವೊಂದು ಮನೆಗಳಲ್ಲಿ ಈಗಲೂ ಹಳೆಯ ಕಾಲದ ದೊಡ್ಡ ರೇಡಿಯೊಗಳೂ ಇವೆ. ಗ್ರಾಮಾಂತರ ಪ್ರದೇಶಗಳಲ್ಲಿ ರೇಡಿಯೊ ಇಲ್ಲದ ಮನೆಯೇ ಇಲ್ಲ ಎನ್ನುವ ವಾತಾವರಣ ಕೊಡಗಿನಲ್ಲಿದೆ.
ಕೊಡಗಿನ ಮಡಿಕೇರಿ ಆಕಾಶವಾಣಿ ಇಂದಿಗೂ ತನ್ನ ಪ್ರಸ್ತುತತೆ ಉಳಿಸಿಕೊಂಡಿದೆ. ಮಾತ್ರವಲ್ಲ, ರಾಜ್ಯದ ಬೇರೆ ಜಿಲ್ಲೆಯ ಆಕಾಶವಾಣಿ ಕೇಂದ್ರಗಳಿಗಿಂತಲೂ ಭಿನ್ನವಾಗಿ ಕಾರ್ಯ ನಿರ್ವಹಿಸುತ್ತಿದೆ. ಮುಖ್ಯವಾಗಿ, ಈ ಆಕಾಶವಾಣಿ ಕೇಂದ್ರ ಸ್ಥಳೀಯ ಜನರ ಆಶೋತ್ತರಗಳಿಗೆ ಸ್ಪಂದಿಸುತ್ತಿದೆ.
ರೇಡಿಯೊ ಮಹತ್ವ ಕೊಡಗಿನಲ್ಲಿ ಗೊತ್ತಾಗಿದ್ದು, 2018 ಮತ್ತು 2019ರ ಭೂಕುಸಿತದ ಸಮಯದಲ್ಲಿ. ಅಂತಹ ಕರಾಳ ದಿನಗಳಲ್ಲಿ ಕೂಪದಿರ ಶಾರದಾ ನಂಜಪ್ಪ, ಸುಬ್ರಾಯ ಸಂಪಾಜೆ ಹಾಗೂ ಅವರೊಂದಿಗೆ ಸಿಬ್ಬಂದಿ ಹಗಲು ರಾತ್ರಿ ದುಡಿದಿದ್ದಾರೆ. ಮಳೆ, ಭೂಕುಸಿತದಿಂದ ವಿದ್ಯುತ್ ಇಲ್ಲದೇ ತಮ್ಮ ಪಕ್ಕದ ಊರಿನಲ್ಲಿ ಏನಾಗುತ್ತಿದೆ ಎಂಬುದೂ ತಿಳಿಯದೇ ಸಂಕಷ್ಟಕ್ಕೀಡಾಗಿದ್ದ ಜನರಿಗೆ ರೇಡಿಯೊ ಮೂಲಕ ನಿರಂತರವಾಗಿ ಸುದ್ದಿ ಮುಟ್ಟಿಸಿದ್ದು ಇದೇ ಆಕಾಶವಾಣಿ. ಮಾತ್ರವಲ್ಲ, ಸಂಕಷ್ಟಕ್ಕೀಡಾಗಿದ್ದ ಜನರ ಕಷ್ಟವನ್ನು ಕೇಳಿ ಅದನ್ನು ಸಂಘ, ಸಂಸ್ಥೆಗಳಿಗೆ, ಸರ್ಕಾರಕ್ಕೆ ತಲುಪಿಸುವ ಸೇತುವೆಯಂತೆ ಆಕಾಶವಾಣಿ ಕಾರ್ಯ ನಿರ್ವಹಿಸಿದ್ದನ್ನು ಬಹುತೇಕ ಮಂದಿ ಇಂದಿಗೂ ನೆನಪಿಸಿಕೊಳ್ಳುತ್ತಾರೆ.
ಕೊಡಗಿನ ಬಹುತೇಕ ಮಂದಿ ರೇಡಿಯೊ ಕೇಳುವುದಕ್ಕೆ ಮಡಿಕೇರಿ ಆಕಾಶವಾಣಿಯಲ್ಲಿ ಪ್ರಸಾರವಾಗುವ ನಿಧನ ಸುದ್ದಿಯೂ ಪ್ರಮುಖ ಕಾರಣ ಎನಿಸಿದೆ. ಇಂದಿಗೂ ಜಿಲ್ಲೆಯಲ್ಲಿ ವಿವಿಧ ಕಾರಣಗಳಿಗೆ ನಿಧನರಾದವರ ಸುದ್ದಿಯನ್ನು ನಿತ್ಯ ಬೆಳಿಗ್ಗೆ ಬಿತ್ತರಿಸಲಾಗುತ್ತಿದೆ.
ಇಂತಹದ್ದೊಂದು ಸುದ್ದಿ ಬಿತ್ತರವಾಗಲು ಆರಂಭಿಸಿದ ಗಳಿಗೆಯನ್ನು ಕೇಂದ್ರ ನಿವೃತ್ತ ಉದ್ಘೋಷಕಿ ಕೂಪದಿರ ಶಾರದಾ ನಂಜಪ್ಪ ‘ಪ್ರಜಾವಾಣಿ’ಯೊಂದಿಗೆ ಹಂಚಿಕೊಂಡರು.
‘ಚೇರಂಡ ನಂದಾ ಸುಬ್ಬಯ್ಯ ಅವರ ಸಲಹೆ ಮೇರೆಗೆ ಆಗಿನ ನಿರ್ದೇಶಕಿಯಾಗಿದ್ದ ಇಂದಿರಾ ಯೇಸುಪ್ರಿಯ ಗಜರಾಜ್ ಅವರು ಮಡಿಕೇರಿ ಆಕಾಶವಾಣಿಯಲ್ಲಿ ಸಾವಿನ ಸುದ್ದಿಯನ್ನು ಪ್ರಸಾರ ಮಾಡಲು ಆರಂಭಿಸಿದರು. ಬೇರೆ ಆಕಾಶವಾಣಿಯಲ್ಲಿ ಇಲ್ಲದ ಇಂತಹ ವ್ಯವಸ್ಥೆಗೆ ಅಧಿಕೃತ ಮುದ್ರೆ ಬೀಳುವಂತೆ ಮಾಡುವುದಕ್ಕೆ ನಾವೆಲ್ಲರೂ ಅಪಾರ ಶ್ರಮಪಟ್ಟೆವು. ಈ ಸಾವಿನ ಸುದ್ದಿ ಪ್ರಸಾರ ಮಾಡುವ ಅಗತ್ಯತೆ ಹಾಗೂ ಅನಿವಾರ್ಯತೆಯನ್ನು ಕುರಿತು ವಿಶೇಷ ಆಸ್ಥೆ ವಹಿಸಿ ಕಡತ ರೂಪಿಸಲಾಯಿತು. ಈ ಕಡತದ ಆಧಾರದ ಮೇರೆಗೆ ಹಾಗೂ ಡಾ.ಸಣ್ಣುವಂಡ ಕಾವೇರಪ್ಪ ಅವರ ಒತ್ತಾಯದ ಮೇರೆಗೆ ಪ್ರಸಾರ ಭಾರತಿಯ ಸದಸ್ಯೆಯಾಗಿದ್ದ ಪ್ರೇಮಾ ಕಾರ್ಯಪ್ಪ ಅದನ್ನು ಸಂಬಂಧಪಟ್ಟ ಇಲಾಖೆಯಿಂದ ಅಧಿಕೃತ ಆದೇಶ ತರಿಸುವಲ್ಲಿ ಸಫಲರಾದರು. ಇದೀಗ ಅಸ್ಸಾಂ ರಾಜ್ಯದಲ್ಲೂ ಸಾವಿನ ಸುದ್ದಿ ಪ್ರಸಾರ ಮಾಡುವ ಪರಿಪಾಠವನ್ನು ಅನುಸರಿಸಲಾಗುತ್ತಿದೆ’ ಎಂದು ಅವರು ನೆನಪಿಸಿಕೊಂಡರು.
ಇನ್ನುಳಿದಂತೆ, ಮಡಿಕೇರಿ ಆಕಾಶವಾಣಿಯು ಇಲ್ಲಿಯ ಸ್ಥಳೀಯ ಭಾಷೆಗಳಾದ ಕೊಡವ ಮತ್ತು ಅರೆಭಾಷೆಗಳಲ್ಲೂ ವಾರ್ತಾ ಪ್ರಸಾರ ಮಾಡುತ್ತಿದೆ. ಈ ಹಿಂದೆ ಪ್ರಸಾರವಾಗುತ್ತಿದ್ದ ಬ್ಯಾರಿ ಭಾಷೆಯ ವಾರ್ತಾ ಪ್ರಸಾರ ಈಗ ನಿಂತಿದೆ.
ಹಲವು ವಿಶೇಷ ಒಳಗೊಂಡಿರುವ ಮಡಿಕೇರಿ ಆಕಾಶವಾಣಿ ಎಫ್.ಎಂ ರೇಡಿಯೊದಲ್ಲಿ 103.1 ಮೆಗಾ ಹರ್ಟ್ಸ್‌ನಲ್ಲಿ ಲಭ್ಯ ‘ನ್ಯೂಸ್‌ಆನ್‌ಏರ್’ ಆ್ಯಪ್‌ನಲ್ಲೂ ಕೇಳಬಹುದು
ಆಧುನಿಕ ಯುಗದ ಎಲ್ಲ ಬಗೆಯ ಮನರಂಜನಾ ಸಾಧನಗಳು ಸಾಮಾಜಿಕ ಮಾಧ್ಯಮಗಳ ನಡುವೆಯೂ ಮಡಿಕೇರಿ ಆಕಾಶವಾಣಿ ತನ್ನದೇ ಆದ ಪ್ರಸ್ತುತತೆ ಉಳಿಸಿಕೊಂಡಿದೆ. ಮಾತ್ರವಲ್ಲ ಇದು ಕೊಡಗಿನ ಅಸ್ಮಿತೆಯಾಗಿಯೂ ಇದೆ.ಪಿ.ಎಂ.ಜಗದೀಶ್ ಕಾರ್ಯಕ್ರಮ ನಿರ್ವಾಹಕರು ಮಡಿಕೇರಿ ಆಕಾಶವಾಣಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.