ಕುಶಾಲನಗರ: ಇಲ್ಲಿನ ಹಾರಂಗಿ ಜಲಾಶಯದ ಕೆಳಭಾಗದ ಸೇತುವೆಯಿಂದ ಪ್ರವಾಸಿಗರೊಬ್ಬರು ಜಾರಿ ಬಿದ್ದು ಮೃತಪಟ್ಟ ನಂತರ ಸೇತುವೆಯ ಸುರಕ್ಷತೆ ಕುರಿತೇ ಅನುಮಾನಗಳು ಮೂಡಲಾರಂಭಿಸಿವೆ. ಸೇತುವೆಗೆ ತಡೆಗೋಡೆ ಇದ್ದಿದ್ದರೆ ಸಾವು ಸಂಭವಿಸುತ್ತಿರಲಿಲ್ಲ ಎಂಬ ಅಭಿಪ್ರಾಯಗಳು ಕೇಳಿ ಬಂದಿವೆ.
ಹಾರಂಗಿ ಜಲಾಶಯದಿಂದ ಹೆಚ್ಚಿನ ನೀರನ್ನು ನದಿಗೆ ಬಿಡುಗಡೆ ಮಾಡಿದಾಗ ಕೆಳಸೇತುವೆ ಸಂಪೂರ್ಣ ಮುಳುಗಡೆಯಾಗಿ ಅಕ್ಕಪಕ್ಕದ ಹಳ್ಳಿಗಳಿಗೆ ಸಂಪರ್ಕ ಕಡಿತಗೊಳ್ಳುತ್ತದೆ. ನೀರು ಸ್ವಲ್ಪ ಇಳಿದ ನಂತರ ಪ್ರವಾಸಿಗರು ಹಾಗೂ ಸಾರ್ವಜನಿಕರು ಈ ಸೇತುವೆ ಮೇಲೆ ನಿಂತು ಜಲಾಧಾರೆಯನ್ನು ವೀಕ್ಷಣೆ ಮಾಡುವ ಜೊತೆಗೆ ಸೆಲ್ಫೀ ತೆಗದುಕೊಳ್ಳುವುದು ಸಾಮಾನ್ಯವಾಗಿ ಬಿಟ್ಟಿದೆ.
ಕೆಳ ಸೇತುವೆ ಮುಳುಗಡೆಯಾದಾಗ ಮಾತ್ರ ಇಲ್ಲಿಗೆ ಪ್ರವಾಸಿಗರನ್ನು ಹಾಗೂ ಸಾರ್ವಜನಿಕರನ್ನು ಬಾರದಂತೆ ತಡೆಯಲು ಪೊಲೀಸ್ ಭದ್ರತೆ ಒದಗಿಸಲಾಗುತ್ತದೆ.
ಕೆಳೆ ಸೇತುವೆ ಮುಳುಗಡೆಯಿಂದ ಹತ್ತಾರು ಹಳ್ಳಿಗಳ ಜನರಿಗೆ, ಕಾರ್ಮಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ತೊಂದರೆ ಉಂಟಾಗುತ್ತದೆ. ಸೋಮವಾರಪೇಟೆ, ಯಡವನಾಡು, ಹುದುಗೂರು ಗ್ರಾಮಗಳು ಸೇರಿದಂತೆ ಹತ್ತಾರು ಹಳ್ಳಿಗಳಿಗೆ ಹತ್ತಿರದ ಸಂಪರ್ಕದ ಕೊಂಡಿಯಾಗಿ ಈ ಸೇತುವೆ ಇದೆ.
ಕೂಡುಮಂಗಳೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಭಾಸ್ಕರ್ ನಾಯಕ ಪ್ರತಿಕ್ರಿಯಿಸಿ, ‘ಪ್ರತಿವರ್ಷ ಮಳೆಗಾಲದಲ್ಲಿ ಜಲಾಶಯದಿಂದ ನೀರು ನದಿಗೆ ಹರಿಬಿಟ್ಟ ಸಂದರ್ಭ ಕೆಳಸೇತುವೆ ಮುಳುಗಡೆಯಾಗಿ ಸಂಪರ್ಕ ಕಡಿತಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಎತ್ತರವಾದ ನೂತನ ಸೇತುವೆಯ ನಿರ್ಮಾಣ ಮಾಡಬೇಕು’ ಎಂದು ಒತ್ತಾಯಿಸಿದ್ದಾರೆ.
ಈ ಕುರಿತು ‘ಪ್ರಜಾವಾಣಿ‘ಗೆ ಪ್ರತಿಕ್ರಿಯಿಸಿದ ಕಾವೇರಿ ನೀರಾವರಿ ನಿಗಮದ ಕಾರ್ಯಪಾಲಕ ಎಂಜಿನಿಯರ್ ಪುಟ್ಟಸ್ವಾಮಿ, ‘ಮಳೆಗಾಲದಲ್ಲಿ ಪ್ರತಿ ವರ್ಷ ಈ ಸೇತುವೆ ಮುಳುಗಡೆಯಾಗಿ ಸಂಚಾರ ವ್ಯವಸ್ಥೆ ಬಂದ್ ಆಗುತ್ತದೆ. ಆದ್ದರಿಂದ ಇದೇ ಜಾಗದಲ್ಲಿ ₹ 50 ಲಕ್ಷ ವೆಚ್ಚದಲ್ಲಿ ಕಮಾನು ಸೇತುವೆ ನಿರ್ಮಾಣಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.