ADVERTISEMENT

ನಾಪೋಕ್ಲು: ‘ಕಪ್ಪು ಬಂಗಾರ’ದತ್ತ ರೈತರ ಚಿತ್ತ...

ಚಿಗುರೊಡೆಯುತ್ತಿರುವ ಕಾಳು ಮೆಣಸಿನ ಬಳ್ಳಿ, ನರ್ಸರಿಗಳಲ್ಲೂ ಭರ್ಜರಿ ವ್ಯಾಪಾರ

ಸಿ.ಎಸ್.ಸುರೇಶ್
Published 15 ಜೂನ್ 2024, 5:54 IST
Last Updated 15 ಜೂನ್ 2024, 5:54 IST
ನಾಪೋಕ್ಲು ಹೊರವಲಯದ ಕಾಫಿ ತೋಟವೊಂದರಲ್ಲಿ ಕಾಳುಮೆಣಸಿನ ಬಳ್ಳಿಗಳು ಚಿಗುರೊಡೆಯುತ್ತಿವೆ.
ನಾಪೋಕ್ಲು ಹೊರವಲಯದ ಕಾಫಿ ತೋಟವೊಂದರಲ್ಲಿ ಕಾಳುಮೆಣಸಿನ ಬಳ್ಳಿಗಳು ಚಿಗುರೊಡೆಯುತ್ತಿವೆ.   

ನಾಪೋಕ್ಲು: ಕೊಡಗು ಜಿಲ್ಲೆಯಲ್ಲಿ ಮಳೆ ನಿತ್ಯವೂ ಬೀಳುತ್ತಿದ್ದು, ಕೃಷಿ ಚಟುವಟಿಕೆಗಳು ಗರಿಗೆದರಿವೆ. ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಮಳೆ ಸುರಿದ ಪರಿಣಾಮ ಕಾಫಿಯ ತೋಟಗಳಲ್ಲಿ ಕಾಳುಮೆಣಸಿನ ಬಳ್ಳಿಗಳು ಚಿಗುರುಡೆಯುತ್ತಿವೆ. ಜೂನ್ ತಿಂಗಳಲ್ಲಿ ಉತ್ತಮ ಮಳೆ ಸುರಿದರೆ ಕಾಳುಮೆಣಸು ಇಳುವರಿ ಅಧಿಕಗೊಳ್ಳುವ ಆಶಾಭಾವನೆಯನ್ನು ಬೆಳೆಗಾರರು ವ್ಯಕ್ತಪಡಿಸುತ್ತಿದ್ದಾರೆ.

ಉತ್ತಮ ದರ ಇರುವುದರಿಂದ ಹಾಗೂ ಉತ್ತಮ ಮಳೆಯಾಗುತ್ತಿರುವುದರಿಂದ ಬೆಳೆಗಾರರು ಕಾಳುಮೆಣಸಿನ ಕೃಷಿಯತ್ತ ಚಿತ್ತ ಹರಿಸಲು ಮುಂದಾಗಿದ್ದಾರೆ. ಪ್ರತಿವರ್ಷ ಮುಂಗಾರು ಆರಂಭಗೊಳ್ಳುತ್ತಿರುವಂತೆ, ಕಾಳುಮೆಣಸಿನ ಬಳ್ಳಿಗಳನ್ನು ನೆಡುವ ಕೆಲಸದಲ್ಲಿ ಬೆಳೆಗಾರರು ಮಗ್ನರಾಗುತ್ತಿದ್ದರು. ಈ ವರ್ಷ ಕಾಳುಮೆಣಸಿನ ಬಳ್ಳಿಗಳಲ್ಲಿ ತೆನೆಗಳು ಬಿಡಲಾರಂಭಿಸಿವೆ. ನಾಪೋಕ್ಲು ಹೋಬಳಿ ವ್ಯಾಪ್ತಿಯ ಹೊದ್ದೂರು, ನೆಲಜಿ, ಕಕ್ಕಬ್ಬೆಪಾಲೂರು ಗ್ರಾಮ ವ್ಯಾಪ್ತಿಯ ಹಲವು ತೋಟಗಳಲ್ಲಿನ ಕಾಳುಮೆಣಸಿನ ಬಳ್ಳಿಗಳಲ್ಲಿ ತೆನೆಗಳು ಬಿಡಲಾರಂಭಿಸಿದೆ.

‘ಖಾಲಿ ಮರಗಳಿಗೆ ಗಿಡಗಳನ್ನು ನೆಡುವ ಕೆಲಸ ತ್ವರಿತವಾಗಿ ಆಗಬೇಕು. ನರ್ಸರಿಗಳಲ್ಲಿ ಗಿಡಗಳು ಲಭಿಸುತ್ತಿವೆ. ಮಳೆಯಿಂದಾಗಿ ಬಳ್ಳಿಗಳ ನಾಟಿ ಕಾರ್ಯ ಸರಾಗವಾಗಿ ನಡೆಯುತ್ತಿದೆ’ ಎಂದು ಕಕ್ಕಬ್ಬೆಯ ಬೆಳೆಗಾರ ಮಾಚಯ್ಯ ಹೇಳಿದರು.

ADVERTISEMENT

ಬೇಸಿಗೆಯಲ್ಲಿ ಉಷ್ಣತೆ ಹೆಚ್ಚಳದಿಂದ ಬಳ್ಳಿಗಳು ಒಣಗಿ ಹೋಗಿದ್ದವು. ಸೊರಗಿದ ಬಳ್ಳಿಗಳು ಇದೀಗ ಸುರಿಯುತ್ತಿರುವ ಮಳೆಯಿಂದ ಹಸಿರಾಗುತ್ತಿವೆ, ತೆನೆಗಳು ಬಿಡಲಾರಂಭಿಸಿವೆ. ಈ ವರ್ಷ ಬೇಸಿಗೆಯ ಕೊನೆಯಲ್ಲಿ ಆಗಾಗ್ಗೆ ಮಳೆಯಾಗಿದ್ದರಿಂದ ಉತ್ತಮ ಇಳುವರಿ ದೊರಕುವ ನಿರೀಕ್ಷೆಯನ್ನು ಬೆಳೆಗಾರರು ಹೊಂದಿದ್ದಾರೆ. ಕಾಳುಮೆಣಸಿನ ಬೆಲೆಯೂ ಏರುಗತಿಯಲ್ಲಿದ್ದು, ಕೃಷಿಯತ್ತ ಬೆಳೆಗಾರರ ಒಲವು ಮತ್ತಷ್ಟೂ ಹೆಚ್ಚಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಕೆ.ಜಿ.ಕಾಳುಮೆಣಸಿಗೆ ₹ 630ಕ್ಕೂ ಅಧಿಕ ದರವಿದೆ.

ಉಪಬೆಳೆಯಾಗಿ ಬೆಳೆಯುತ್ತಿರುವ ಕಾಳುಮೆಣಸು ಆರ್ಥಿಕ ಸಬಲತೆ ನೀಡುತ್ತಿರುವುದರಿಂದ ಕಾಳುಮೆಣಸಿನ ಕೃಷಿಗೆ ಬೆಳೆಗಾರರು ಹೆಚ್ಚಿನ ಒತ್ತು ಕೊಡುತ್ತಿದ್ದಾರೆ. ಬಿಸಿಲಿನ ಝಳಕ್ಕೆ ಅಲ್ಲಲ್ಲಿ ಕಾಳುಮೆಣಸಿನ ಬಳ್ಳಿಗಳು ನೆಲಕಚ್ಚಿದ್ದರೂ, ಕಪ್ಪುಬಂಗಾರ ಎಂಬ ಖ್ಯಾತಿಯ ಕಾಳುಮೆಣಸಿನ ಬಳ್ಳಿಗಳನ್ನು ಪ್ರತಿವರ್ಷ ನಿರಂತರವಾಗಿ ನೆಡುವ ಕೆಲಸವನ್ನು ಬೆಳೆಗಾರರು ಮಾಡುತ್ತಿದ್ದಾರೆ.

‘ಕಳೆದ ವರ್ಷ ಮಳೆಯ ಕೊರತೆಯಿಂದ ಬಳ್ಳಿಗಳನ್ನು ನೆಡಲು ಸಾಧ್ಯವಾಗಿರಲಿಲ್ಲ. ಈ ವರ್ಷ ಗ್ರಾಮವ್ಯಾಪ್ತಿಯಲ್ಲಿ ಬಳ್ಳಿಗಳ ನಾಟಿ ಕಾರ್ಯ ಬಿರುಸಿನಿಂದ ಸಾಗುತ್ತಿದೆ’ ಎಂದು ನೆಲಜಿ ಗ್ರಾಮದ ಕೃಷಿಕ ಅಪ್ಪಚ್ಚು ಅಭಿಪ್ರಾಯಪಟ್ಟರು.

‘ಮಳೆ ಸುರಿಯುತ್ತಿರುವುದರಿಂದ ಕಾಳುಮೆಣಸಿನ ಬಳ್ಳಿಗಳನ್ನು ಖರೀದಿಸಲು ಬೆಳೆಗಾರರು ಉತ್ಸಾಹ ತೋರುತ್ತಿದ್ದಾರೆ. ಬಳ್ಳಿಗಳು ನಿರೀಕ್ಷೆಗಿಂತಲೂ ಅಧಿಕವಾಗಿ ಮಾರಾಟವಾಗುತ್ತಿವೆ’ ಎಂದು ಸ್ಥಳೀಯ ನರ್ಸರಿ ಮಾಲೀಕ ಹರೀಶ್ ಹೇಳಿದರು.

ಕಾಳುಮೆಣಸು
ಈಗ ಬೀಳುತ್ತಿರುವ ಮಳೆ ಕಾಳು ಮೆಣಸಿನ ಬಳ್ಳಿಗಳಿಗೆ ಸಹಕಾರಿಯಾಗಿವೆ. ಬೆಳೆಗಾರರು ತೋಟಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡಬೇಕಿದೆ.
ಡಾ.ಅಂಕೇಗೌಡ, ಭಾರತೀಯ ಸಾಂಬಾರ ಬೆಳೆಗಳ ಸಂಶೋಧನಾ ಸಂಸ್ಥೆಯ ಅಪ್ಪಂಗಳದ ಪ್ರಾದೇಶಿಕ ಕೇಂದ್ರದ ಮುಖ್ಯಸ್ಥ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.