ನಾಪೋಕ್ಲು: ಹೋಬಳಿ ವ್ಯಾಪ್ತಿಯಲ್ಲಿ ಮೇ ತಿಂಗಳಲ್ಲಿ ಆಗೊಮ್ಮೆ ಈಗೊಮ್ಮೆ ಮಳೆ ಸುರಿದ ಪರಿಣಾಮ ಕಾಫಿ ತೋಟಗಳಲ್ಲಿ ಕಾಳುಮೆಣಸಿನ ಬಳ್ಳಿಗಳು ಚಿಗುರೊಡೆಯುತ್ತಿವೆ. ಜೂನ್ ತಿಂಗಳ ಎರಡು ವಾರ ಕಳೆದರೂ ಮುಂಗಾರು ಮಳೆ ಕಾಲಿರಿಸದ ಹಿನ್ನೆಲೆಯಲ್ಲಿ ಬೆಳೆಗಾರರು ಈ ವರ್ಷ ಇಳುವರಿ ಕುಂಠಿತಗೊಳ್ಳುವ ಆತಂಕ ವ್ಯಕ್ತಪಡಿಸುತ್ತಾರೆ.
ನಡುನಡುವೆ ಸಾಧಾರಣ ಮಳೆ ಸುರಿದರೆ ಬೆಳೆಗಾರರು ಕಾಳುಮೆಣಸಿನ ಕೃಷಿಯತ್ತ ಚಿತ್ತ ಹರಿಸುತ್ತಾರೆ. ಪ್ರತಿ ವರ್ಷ ಮುಂಗಾರು ಆರಂಭಗೊಳ್ಳುತ್ತಿದ್ದಂತೆ ಕಾಳುಮೆಣಸಿನ ಬಳ್ಳಿಗಳನ್ನು ನೆಡುವ ಕೆಲಸದಲ್ಲಿ ಬೆಳೆಗಾರರು ಮುಂದಾಗುತ್ತಿದ್ದರು. ಈ ವರ್ಷ ಬಳ್ಳಿಗಳಲ್ಲಿ ತೆನೆಗಳು ಬಿಡಲಾರಂಭಿಸಿವೆ. ಈ ಅವಧಿಯಲ್ಲಿ ಬಿಸಿಲು ಕಾದರೆ ಇಳುವರಿ ನಷ್ಟವಾಗಲಿದೆ ಎಂಬ ಆತಂಕ ಬೆಳೆಗಾರರದ್ದು.
ಕಳೆದ ವರ್ಷವೂ ಇಳುವರಿ ಕುಸಿತ ಉಂಟಾಗಿತ್ತು. ಈ ವರ್ಷ ಬೇಸಿಗೆ ಕೊನೆಯಲ್ಲಿ ಆಗಾಗ್ಗೆ ಮಳೆ ಆಗಿರುವುದರಿಂದ ಉತ್ತಮ ಇಳುವರಿ ದೊರಕುವ ನಿರೀಕ್ಷೆಯನ್ನು ಬೆಳೆಗಾರರು ಹೊಂದಿದ್ದರು. ಆದರೆ, ಈ ಬಾರಿ ಮುಂಗಾರು ಮಳೆ ಬಾರದೇ ಬಿಸಿಲು ಕಾಯುತ್ತಿರುವುದರಿಂದ ಕೃಷಿಕರು ಚಿಂತಿತರಾಗಿದ್ದಾರೆ.
ಬೆಳೆಗಾರರಿಗೆ ಕಾಫಿ ಇಳುವರಿಗಿಂತ ಉತ್ಪಾದನಾ ವೆಚ್ಚವೇ ಹೆಚ್ಚುತ್ತಿದ್ದು, ಉಪಬೆಳೆಯಾಗಿ ಬೆಳೆಯುತ್ತಿರುವ ಕಾಳುಮೆಣಸು ಆರ್ಥಿಕ ಸಬಲತೆ ನೀಡುತ್ತಿರುವುದರಿಂದ ಈ ಕೃಷಿಗೆ ಹೆಚ್ಚಿನ ಒತ್ತು ಕೊಡುತ್ತಿದ್ದಾರೆ.
‘ಹೋಬಳಿ ವ್ಯಾಪ್ತಿಯ ಹೊದ್ದೂರು, ನೆಲಜಿ, ಕಕ್ಕಬ್ಬೆ ಪಾಲೂರು ಗ್ರಾಮ ವ್ಯಾಪ್ತಿಯ ಹಲವು ತೋಟಗಳಲ್ಲಿ ಕಾಳುಮೆಣಸಿನ ಬಳ್ಳಿಗಳಲ್ಲಿ ತೆನೆಗಳು ಬಿಡಲಾರಂಭಿಸಿವೆ. ಖಾಲಿ ಮರಗಳಿಗೆ ಗಿಡಗಳನ್ನು ನೆಡುವ ಕೆಲಸ ತ್ವರಿತವಾಗಿ ಆಗಬೇಕು. ನರ್ಸರಿಗಳಲ್ಲಿ ಗಿಡಗಳು ಲಭಿಸುತ್ತಿದ್ದರೂ ಮಳೆಯಿಲ್ಲದ ಕಾರಣ ಬಳ್ಳಿ ನೆಡಲು ಹಿಂದೇಟು ಹಾಕುವಂತಾಗಿದೆ’ ಎಂದು ನೆಲಜಿ ಗ್ರಾಮದ ಕೃಷಿಕ ಅಪ್ಪಚ್ಚು ನಿರಾಸೆ ವ್ಯಕ್ತಪಡಿಸಿದರು.
ಸೊರಗು ರೋಗಕ್ಕೆ ತುತ್ತಾಗಿ ಅಲ್ಲಲ್ಲಿ ಬಳ್ಳಿಗಳು ನೆಲಕಚ್ಚುತ್ತಿದ್ದರೂ ‘ಕಪ್ಪುಬಂಗಾರ’ ಖ್ಯಾತಿಯ ಕಾಳುಮೆಣಸಿನ ಬಳ್ಳಿಗಳನ್ನು ಪ್ರತಿವರ್ಷ ನಿರಂತರವಾಗಿ ನೆಡುವ ಕೆಲಸವನ್ನು ಬೆಳೆಗಾರರು ಮಾಡುತ್ತಿದ್ದಾರೆ. ಈ ವರ್ಷ ಮಳೆ ಕೊರತೆಯಿಂದ ಬಳ್ಳಿಗಳನ್ನು ನೆಡಲು ಸಾಧ್ಯವಾಗುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.
‘ಮಳೆ ಕಡಿಮೆ ಇರುವುದರಿಂದ ಬೆಳೆಗಾರರು ಕಾಳುಮೆಣಸಿನ ಬಳ್ಳಿಗಳನ್ನು ಖರೀದಿಸಲು ಉತ್ಸಾಹ ತೋರುತ್ತಿಲ್ಲ, ನಿರೀಕ್ಷೆಯಂತೆ ಮಾರಾಟವಾಗುತ್ತಿಲ್ಲ. ಬಿಸಿಲಿನ ತಾಪ ಹೆಚ್ಚಿರುವುದರಿಂದ ಮಾರಾಟಕ್ಕೆ ತಂದ ಬಳ್ಳಿಗಳಿಗೆ ನೀರೆರೆದು ರಕ್ಷಿಸಿಕೊಳ್ಳಬೇಕಾಗಿದೆ’ ಎಂದು ಸ್ಥಳೀಯ ನರ್ಸರಿ ಮಾಲೀಕ ಹರೀಶ್ ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.