ADVERTISEMENT

ಮಡಿಕೇರಿಯಲ್ಲಿ 23ರಂದು ಕವಿಗೋಷ್ಠಿ

ಅಖಿಲ ಭಾರತೀಯ ಸಾಹಿತ್ಯ ಪರಿಷದ್ ವತಿಯಿಂದ ಆಯೋಜನೆ

​ಪ್ರಜಾವಾಣಿ ವಾರ್ತೆ
Published 15 ಜೂನ್ 2024, 7:18 IST
Last Updated 15 ಜೂನ್ 2024, 7:18 IST

ಮಡಿಕೇರಿ: ಇಲ್ಲಿನ ಭಾರತೀಯ ವಿದ್ಯಾಭವನದ ಸಭಾಂಗಣದಲ್ಲಿ ಜೂನ್ 23ರಂದು ಬೆಳಿಗ್ಗೆ 10.30ಕ್ಕೆ ಅಖಿಲ ಭಾರತೀಯ ಸಾಹಿತ್ಯ ಪರಿಷದ್‌ನ ಕೊಡಗು ಜಿಲ್ಲಾ ಘಟಕದ ವತಿಯಿಂದ ಜಿಲ್ಲಾಮಟ್ಟದ ಸಾರ್ವಜನಿಕ ಕವಿಗೋಷ್ಠಿಯನ್ನು ಏರ್ಪಡಿಸಲಾಗಿದೆ.

‘ಮಕ್ಕಳಲ್ಲಿ ಮತ್ತು ಸಾರ್ವಜನಿಕರಲ್ಲಿ ಸಾಹಿತ್ಯಾಭಿರುಚಿ ಬೆಳೆಸಲು ಈ ಕವಿಗೋಷ್ಠಿಯನ್ನು ನಡೆಸಲಾಗುತ್ತಿದ್ದು, ಮಕ್ಕಳಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು’ ಎಂದು ಪರಿಷತ್ತಿನ ಗೌರವಾಧ್ಯಕ್ಷೆ ಕಸ್ತೂರಿ ಗೋವಿಂದಮ್ಮಯ್ಯ ಇಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಇಂಟರ್‌ನೆಟ್‌, ಮೊಬೈಲ್‌ಗಳು ಮಕ್ಕಳನ್ನು ದಾರಿ ತಪ್ಪಿಸುತ್ತಿವೆ’ ಎಂದು ಆತಂಕ ವ್ಯಕ್ತಪಡಿಸಿದ ಅವರು, ‘ಮಕ್ಕಳಲ್ಲಿ ಸಾಹಿತ್ಯಾಭಿರುಚಿಯನ್ನು ಬೆಳೆಸುವ ಉದ್ದೇಶದಿಂದ ಕವಿಗೋಷ್ಠಿಯನ್ನು ಆಯೋಜಿಸಲಾಗುತ್ತಿದೆ. ಕನ್ನಡದಲ್ಲಿ ವಿಫುಲ ಸಾಹಿತ್ಯವಿದೆ. ಒಳ್ಳೆಯ ಹಾಡುಗಳಿವೆ. ಅವುಗಳನ್ನು ಓದಿ, ಆಲಿಸಬೇಕು’ ಎಂದು ಹೇಳಿದರು.

ADVERTISEMENT

ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಸಿ.ಎಸ್.ಸುರೇಶ್‌ ಮಾತನಾಡಿ, ‘ಆನ್‌ಲೈನ್‌ನಲ್ಲಿ ವಿವಿಧ ಕಾರ್ಯಕ್ರಮಗಳನ್ನು ರೂಪಿಸುತ್ತಿದ್ದ ಸಂಘಟನೆ ಇದೀಗ ಆಫ್‌ಲೈನ್‌ನಲ್ಲೂ ಕಾರ್ಯಕ್ರಮ ಆಯೋಜನೆಗೆ ಮುಂದಾಗಿದೆ’ ಎಂದರು.

ಪರಿಷತ್ತಿನ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಬಬ್ಬಿರ ಸರಸ್ವತಿ ಮಾತನಾಡಿ, ‘ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಪರಿಸರ ವಿಷಯದ ಕುರಿತು ಆಯೋಜಿಸಲಾಗುತ್ತಿರುವ ಈ ಕವಿಗೋಷ್ಠಿಗೆ ಜೂನ್ 22ರ ಒಳಗೆ ನೋಂದಣಿ ಮಾಡಿಕೊಳ್ಳಬಹುದು. ಮುಖ್ಯ ಅತಿಥಿಯಾಗಿ ಕಿಗ್ಗಾಲು ಗಿರೀಶ್ ಭಾಗವಹಿಸಲಿದ್ದಾರೆ’ ಎಂದು ಹೇಳಿದರು.

ಕವಿಗೋಷ್ಠಿಯ ನಿಯಮಗಳ ಕುರಿತು ಮಾಹಿತಿ ನೀಡಿದ ಪರಿಷತ್ತಿನ ಮಾಧ್ಯಮ ಪ್ರಮುಖ್ ವಿನೋದ್ ಮೂಡಗದ್ದೆ, ‘ಸ್ವರಚಿತ 20 ಸಾಲಿ‌ನ ಒಳಗಿರುವ, ಕೃತಿಚೌರ್ಯವಲ್ಲದ ಕನ್ನಡ ಭಾಷೆಯ ಕವನಗಳಿಗೆ ಮಾತ್ರ ಅವಕಾಶವಿದೆ. ಕವನವು ಯಾವುದೇ ಜಾತಿ, ಧರ್ಮ, ರಾಜಕೀಯ ಪಕ್ಷಗಳು ಹಾಗೂ ಯಾರ ಭಾವನೆಗಳನ್ನೂ ಘಾಸಿಗೊಳಿಸುವಂತಿರಬಾರದು. 30 ಜನರಿಗೆ ಮಾತ್ರ ಅವಕಾಶವಿದ್ದು, ಯಾವುದೇ ವಯೋಮಿತಿ ಇಲ್ಲ’ ಎಂದು ತಿಳಿಸಿದರು.

ಪರಿಷತ್ತಿನ ಜಿಲ್ಲಾ ಸಹ ಕಾರ್ಯದರ್ಶಿ ಚಂದನ್ ನಂದರಬೆಟ್ಟು ಮಾತನಾಡಿ, ‘ಅತ್ಯುತ್ತಮವಾದ 3 ಕವನಗಳಿಗೆ ಸ್ಮರಣಿಕೆ ಹಾಗೂ ಪ್ರಶಂಸನಾ ಪತ್ರ ನೀಡಲಾಗುವುದು. ಕವನ ವಾಚಿಸಿದ ಎಲ್ಲರಿಗೂ ಪ್ರಶಂಸನಾ ಪತ್ರ ನೀಡಲಾಗುವುದು. ನೋಂದಣಿಗೆ ಮೊ: 9483645664, 9743353597 ಸಂಪರ್ಕಿಸಬಹುದು’ ಎಂದು ಹೇಳಿದರು.

ಸಂಘಟನೆಯ ಮಕ್ಕಳ ಪ್ರಕಾರ ಪ್ರಮುಖ್ ಹೇಮಂತ್ ಪಾರೇರ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.