ADVERTISEMENT

ಕೆಲಸದ ಬಗ್ಗೆ ಪ್ರತಿಯೊಬ್ಬರಿಗೂ ಗೌರವ ಇರಲಿ

ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ ಪೊಲೀಸ್ ಸಿಬ್ಬಂದಿಗೆ ಟ್ರೋಫಿ ಪ್ರದಾನ

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2024, 3:20 IST
Last Updated 3 ಏಪ್ರಿಲ್ 2024, 3:20 IST
ಭಾಗಮಂಡಲ ಠಾಣೆಯ ಹೆಡ್‌ಕಾನ್‌ಸ್ಟೆಬಲ್ ಪಿ.ಎಂ.ಸುನಿಲ್‌ಕುಮಾರ್ ಅವರಿಗೆ 2024ನೇ ಸಾಲಿನ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಟ್ರೋಫಿಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಮಂಗಳವಾರ ಪ್ರದಾನ ಮಾಡಿದರು.
ಭಾಗಮಂಡಲ ಠಾಣೆಯ ಹೆಡ್‌ಕಾನ್‌ಸ್ಟೆಬಲ್ ಪಿ.ಎಂ.ಸುನಿಲ್‌ಕುಮಾರ್ ಅವರಿಗೆ 2024ನೇ ಸಾಲಿನ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಟ್ರೋಫಿಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಮಂಗಳವಾರ ಪ್ರದಾನ ಮಾಡಿದರು.   

ಮಡಿಕೇರಿ: ನಗರದಲ್ಲಿ ಬೆಳಿಗ್ಗೆಯೇ ಸುಡುತ್ತಿದ್ದ ಸೂರ್ಯನ ಬಿರು ಬಿಸಿಲಿನಲ್ಲಿ ನೂರಾರು ಪೊಲೀಸರು ಮೈದಾನದಲ್ಲಿ ದೂಳೆಬ್ಬಿಸುತ್ತಾ ಶಿಸ್ತುಬದ್ಧವಾದ ಪಥಸಂಚಲನ ನಡೆಸಿದರೆ, ಅವರ ಕುಟುಂಬದವರು, ಸಾರ್ವಜನಿಕರು ಈ ದೃಶ್ಯಗಳನ್ನು ಕಣ್ತುಂಬಿಕೊಂಡರು. ಪೊಲೀಸ್ ವಾದ್ಯವೃಂದ ಗೋಷ್ಠಿ ಇದಕ್ಕೊಂದು ಮೆರುಗು ನೀಡಿತು.

ಬಳಿಕ ನಡೆದ ಕಾರ್ಯಕ್ರಮದಲ್ಲಿ ಜಿಲ್ಲೆಯಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ ಇಬ್ಬರು ಪೊಲೀಸರಿಗೆ ಟ್ರೋಫಿಗಳನ್ನು ವಿತರಿಸಲಾಯಿತು. ಪೊಲೀಸರ ಕಲ್ಯಾಣ ಕಾರ್ಯಕ್ರಮಗಳಿಗೆ ದೇಣಿಗೆ ನೀಡಿದ ಪೊಲೀಸರು ಹಾಗೂ ಸಾರ್ವಜನಿಕರು ಸಾರ್ಥಕತೆ ಮೆರೆದರು. ಈ ಎಲ್ಲ ದೃಶ್ಯಗಳು ಇಲ್ಲಿನ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಮಂಗಳವಾರ ನಡೆದ ಪೊಲೀಸ್ ಧ್ವಜ ದಿನಾಚರಣೆಯಲ್ಲಿ ಕಂಡು ಬಂತು.

ಭಾಗಮಂಡಲ ಠಾಣೆಯ ಹೆಡ್‌ಕಾನ್‌ಸ್ಟೆಬಲ್ ಪಿ.ಎಂ.ಸುನಿಲ್‌ಕುಮಾರ್ ಅವರಿಗೆ 2024ನೇ ಸಾಲಿನ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಟ್ರೋಫಿ ಹಾಗೂ ವಿಶೇಷ ಘಟಕಗಳ ಉತ್ತಮ ಪೊಲೀಸ್ ಟ್ರೋಫಿಯನ್ನು ಡಿಎಆರ್ ಘಟಕದ ಎನ್. ಪ್ರದೀಪ್ ಅವರಿಗೆ ಇಲ್ಲಿನ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಪ್ರದಾನ ಮಾಡಲಾಯಿತು.

ADVERTISEMENT

ಈ ವೇಳೆ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ‘ಪೊಲೀಸ್ ಇಲಾಖೆಯಲ್ಲಿ ಪ್ರತಿಯೊಬ್ಬರಿಗೂ ಸಮುದಾಯವನ್ನು ಸುಧಾರಿಸುವ ಅವಕಾಶ ಇರುತ್ತದೆ. ಆದರೆ, ಎಲ್ಲರಿಗೂ ತಾವು ಮಾಡುವ ಕೆಲಸದ ಬಗ್ಗೆ ಗೌರವ ಇದ್ದಾಗ ಮಾತ್ರ ಅದು ಸಾಧ್ಯವಾಗುತ್ತದೆ’ ಎಂದು ಪ್ರತಿಪಾದಿಸಿದರು.

ಹಿರಿಯ ಅಧಿಕಾರಿಗಳು ಕೇವಲ ಮಾರ್ಗದರ್ಶನ ನೀಡಬಹುದಷ್ಟೇ. ಆದರೆ, ಅದನ್ನು ಕಾರ್ಯರೂಪಕ್ಕೆ ತರುವುದು ಕೆಳಹಂತದ ಅಧಿಕಾರಿಗಳು ಇಲ್ಲವೇ ಸಿಬ್ಬಂದಿ. ಹಾಗಾಗಿ, ಈ ಬಾರಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ ಇಬ್ಬರನ್ನು ಟ್ರೋಫಿಗೆ ಆಯ್ಕೆ ಮಾಡಲಾಗಿದೆ. ಹಾಗೆಂದು, ಇತರರು ಉತ್ತಮವಾಗಿ ಕೆಲಸ ಮಾಡಿಲ್ಲ ಎಂದು ಅರ್ಥ ಅಲ್ಲ. ಸಾಕಷ್ಟು ಪೊಲೀಸರು ಜಿಲ್ಲೆಯಲ್ಲಿ ಈ ವರ್ಷ ಅತ್ಯುತ್ತಮವಾಗಿಯೇ ಕಾರ್ಯನಿರ್ವಹಿಸಿದ್ದಾರೆ ಎಂದರು.

ಅತಿಥಿಯಾಗಿ ಬಂದಿದ್ದ ನಿವೃತ್ತ ಪೊಲೀಸ್ ಇನ್‌ಸ್ಪೆಕ್ಟರ್ ಶಿವಶಂಕರ್, ‘ತನ್ನವರ ಸೇವೆ ಮರೆತು ಸಾರ್ವಜನಿಕರ‌ ಸೇವೆ ಮಾಡುವ ಪೊಲೀಸರು ಮಾನಸಿಕ ಮತ್ತು ದೈಹಿಕ ಆರೋಗ್ಯ ಕಾಪಾಡಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಚೆನ್ನನಾಯಕ ಅವರ ನೇತೃತ್ವದಲ್ಲಿ ನಡೆದ ಪಥಸಂಚಲನದಲ್ಲಿ, ಸಿದ್ದೇಶ್ ಅವರ ನೇತೃತ್ವದ ಪೊಲೀಸ್ ವಾದ್ಯಗೋಷ್ಠಿಯೊಂದಿಗೆ, ಮಡಿಕೇರಿ, ವಿರಾಜಪೇಟೆ, ಸೋಮವಾರಪೇಟೆ ಉಪವಿಭಾಗದ ಪೊಲೀಸ್ ತಂಡಗಳು, ಸಂಚಾರ ಪೊಲೀಸ್ ತಂಡ ಹಾಗೂ ಮಹಿಳಾ ಪೊಲೀಸ್ ತಂಡಗಳು ಭಾಗಿಯಾದವು.

ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಂದರ್‌ರಾಜ್ ಭಾಗವಹಿಸಿದ್ದರು. ಕಾವೇರಮ್ಮ ಮತ್ತು ಫಾರೂಕ್ ಅವರ ನಿರೂಪಣೆ ಗಮನ ಸೆಳೆಯಿತು.

ವಿಶೇಷ ಘಟಕಗಳ ಉತ್ತಮ ಪೊಲೀಸ್ ಟ್ರೋಫಿಯನ್ನು ಡಿಎಆರ್ ಘಟಕದ ಎನ್. ಪ್ರದೀಪ್ ಅವರಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಮಂಗಳವಾರ ಪ್ರದಾನ ಮಾಡಿದರು.
ಮಡಿಕೇರಿಯ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಮಂಗಳವಾರ ನಡೆದ ಪೊಲೀಸ್ ಧ್ವಜ ದಿನಾಚರಣೆಯಲ್ಲಿ ಪೊಲೀಸರು ಪಥ ಸಂಚಲನ ನಡೆಸಿದರು
ಮಡಿಕೇರಿಯ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಮಂಗಳವಾರ ನಡೆದ ಪೊಲೀಸ್ ಧ್ವಜ ದಿನಾಚರಣೆಯಲ್ಲಿ ಪೊಲೀಸರು ರಾಷ್ಟ್ರಧ್ವಜ ಮತ್ತು ಪೊಲೀಸ್ ಧ್ವಜದೊಂದಿಗೆ ಮೈದಾನಕ್ಕೆ ಬಂದರು

ಸಾಧಕರ ಪರಿಚಯ

ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಟ್ರೋಫಿ ವಿಜೇತರಾದ ಭಾಗಮಂಡಲ ಠಾಣೆಯ ಹೆಡ್‌ಕಾನ್‌ಸ್ಟೆಬಲ್ ಪಿ.ಎಂ.ಸುನಿಲ್‌ ಕುಮಾರ್ ಅವರು 2021ರಲ್ಲಿ ಮಾದಕ ವಸ್ತು ಪ್ರಕರಣವೊಂದರ ತನಿಖೆಯಲ್ಲಿ ಪ್ರಧಾನ ಭೂಮಿಕೆ ನಿಭಾಯಿಸಿದ್ದರು. ಈ ಪ್ರಕರಣದಲ್ಲಿ ಒಟ್ಟು ಮೂವರಿಗೆ 10 ವರ್ಷಗಳ ಶಿಕ್ಷೆಯಾಗಿದೆ. ಈ ಪ್ರಕರಣದಲ್ಲಿ ತನಿಖೆಗೆ ಹೆಚ್ಚಿನ ಪಾಲು ಶ್ರಮ ವಹಿಸಿದ್ದರು ಹಾಗೂ ಇದರೊಂದಿಗೆ ಇನ್ನಿತರ ಪ್ರಕರಣಗಳ ತನಿಖೆಯಲ್ಲೂ ಉತ್ತಮವಾಗಿ ಕಾರ್ಯನಿರ್ವಹಿಸಿದ್ದರು ಎಂಬ ಕಾರಣಕ್ಕೆ ಟ್ರೋಫಿ ಪ್ರದಾನ ಮಾಡಲಾಯಿತು. ವಿಶೇಷ ಘಟಕಗಳ ಉತ್ತಮ ಪೊಲೀಸ್ ಟ್ರೋಫಿಯನ್ನು ಡಿಎಆರ್ ಘಟಕದ ಎನ್. ಪ್ರದೀಪ್ ಅವರು ನುರಿತ ತಂತ್ರಜ್ಞರಾಗಿದ್ದು ಇವರ ಕೆಲಸದಿಂದ ಇಲಾಖೆಯ ಲಕ್ಷಾಂತರ ರೂಪಾಯಿ ಉಳಿದಿದೆ. ಈ ಹಿಂದೆ ಅವರು ಭಾರತೀಯ ಸೇನೆಯಲ್ಲಿ ಎಲೆಕ್ಟ್ರಿಕ್ ಮತ್ತು ಮೆಕಾನಿಕಲ್ ಎಂಜಿನಿಯರಿಂಗ್‌ ವಿಭಾಗದಲ್ಲಿ ಕಾರ್ಯನಿರ್ವಹಿಸಿದ್ದರು. ಪೊಲೀಸ್ ಇಲಾಖೆಗೆ ಸೇರಿದ ನಂತರ ಸಾಮಾನ್ಯ ಪೊಲೀಸ್ ಕೆಲಸದೊಂದಿಗೆ ಉಪಕರಣಗಳ ದುರಸ್ತಿ ಕಾರ್ಯವನ್ನೂ ನಿರ್ವಹಿಸುತ್ತಿದ್ದಾರೆ. ವಾಹನ ತೊಳೆಯುವ ಯಂತ್ರ ಸುಜುಕಿ ಜಿಪ್ಸಿ ವಾಹನ ಜಿಪಿಎಸ್‌ಗಳ ನಿರ್ವಹಣೆ ಸೇರಿದಂತೆ ಅನೇಕ ಕಾರ್ಯಗಳನ್ನು ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.