ADVERTISEMENT

ಮಡಿಕೇರಿ | ಜಿಲ್ಲೆಗೆ 62 ಬಿಎಸ್‌ಎನ್‌ಎಲ್‌ ಹೊಸ ಟವರ್‌

‘ಕ್ರಿಟಿಕಲ್ ಕೇರ್ ಯೂನಿಟ್ ಆಸ್ಪತ್ರೆ’ ಶೀಘ್ರ ಕಾಮಗಾರಿ ಆರಂಭ: ಪ್ರತಾಪ್ ಸಿಂಹ

​ಪ್ರಜಾವಾಣಿ ವಾರ್ತೆ
Published 29 ಜುಲೈ 2023, 5:19 IST
Last Updated 29 ಜುಲೈ 2023, 5:19 IST
ಸಂಸದ ಪ್ರತಾಪಸಿಂಹ ಕ್ರಿಟಿಕಲ್ ಕೇರ್ ಯೂನಿಟ್ ಆಸ್ಪತ್ರೆ ಸಂಬಂಧ ಶುಕ್ರವಾರ ಮಡಿಕೇರಿಯಲ್ಲಿ ಸಭೆ ನಡೆಸಿದರು. ಜಿಲ್ಲಾಧಿಕಾರಿ ವೆಂಕಟ್‌ ರಾಜಾ ಇದ್ದಾರೆ
ಸಂಸದ ಪ್ರತಾಪಸಿಂಹ ಕ್ರಿಟಿಕಲ್ ಕೇರ್ ಯೂನಿಟ್ ಆಸ್ಪತ್ರೆ ಸಂಬಂಧ ಶುಕ್ರವಾರ ಮಡಿಕೇರಿಯಲ್ಲಿ ಸಭೆ ನಡೆಸಿದರು. ಜಿಲ್ಲಾಧಿಕಾರಿ ವೆಂಕಟ್‌ ರಾಜಾ ಇದ್ದಾರೆ   

ಮಡಿಕೇರಿ: ‘ಕೇಂದ್ರ ಸರ್ಕಾರದಿಂದ 62 ಹೊಸ 4ಜಿ ಬಿಎಸ್‌ಎನ್‌ಎಲ್‌ ಟವರ್‌ಗಳು ಕೊಡಗು ಜಿಲ್ಲೆಗೆ ಮಂಜೂರಾಗಿವೆ. ನವೆಂಬರ್ 1ರ ಒಳಗೆ ಹೊಸ ಟವರ್‌ಗಳನ್ನು ಅಳವಡಿಸುವ ಗುರಿಯನ್ನು ಅಧಿಕಾರಿಗಳಿಗೆ ನೀಡಲಾಗಿದೆ. ಜತೆಗೆ, ಆಗಸ್ಟ್ ಅಂತ್ಯಕ್ಕೆ ಮಳೆ ಕಡಿಮೆಯಾಗುತ್ತಿದ್ದಂತೆ ‘ಕ್ರಿಟಿಕಲ್ ಕೇರ್ ಯೂನಿಟ್ ಆಸ್ಪತ್ರೆ’ ನಿರ್ಮಾಣ ಕಾಮಗಾರಿಯೂ ಆರಂಭವಾಗಲಿದೆ’ ಎಂದು ಸಂಸದ ಪ್ರತಾಪಸಿಂಹ ತಿಳಿಸಿದರು.

ಕಳೆದ 4 ವರ್ಷಗಳಿಂದ ಕೋವಿಡ್ ಮತ್ತಿತ್ತರೆ ಕಾರಣಗಳಿಂದ ಹೊಸ ಟವರ್‌ಗಳು ಜಿಲ್ಲೆಗೆ ಬಂದಿರಲಿಲ್ಲ. ನೆಟ್‌ವರ್ಕ್‌ ಸಮಸ್ಯೆಯಿಂದ ಜನರು ಇಲ್ಲಿ ಪರದಾಡುತ್ತಿದ್ದರು. ಖಾಸಗಿ ಮೊಬೈಲ್ ಕಂಪನಿಗಳು ಇಲ್ಲಿ ಹೆಚ್ಚಿನ ಲಾಭ ಸಿಗುವುದಿಲ್ಲ ಎಂಬ ಕಾರಣಕ್ಕೆ ಟವರ್‌ಗಳ ಸಂಖ್ಯೆಯನ್ನು ಹೆಚ್ಚಿಸುತ್ತಿಲ್ಲ. ಇದನ್ನು ಮನಗಂಡ ಸರ್ಕಾರ ಬಿಎಸ್‌ಎನ್‌ಎಲ್‌ನ 62 4ಜಿ ಟವರ್‌ಗಳನ್ನು ಈ ವರ್ಷ ಜಿಲ್ಲೆಗೆ ನೀಡಿದೆ ಎಂದು ಅವರು ಇಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಹೊಸ ಟವರ್‌ಗಳಿಗೆ ಸಂಬಂಧಿಸಿದಂತೆ 16 ಕಡೆ ಮಾತ್ರ ಜಾಗ ಬೇಕಿದೆ. ಕೆಲವೆಡೆ ಅರಣ್ಯ ಇಲಾಖೆಯ ಅನುಮತಿಗಾಗಿ ಕಾಯಲಾಗುತ್ತಿದೆ. 8 ಕಡೆ ಅರಣ್ಯ ಇಲಾಖೆಯವರು ಅಭಿಪ್ರಾಯ ಕೊಡಬೇಕಿದೆ. ಈ ಕಾರ್ಯ ಬೇಗ ಮುಗಿಸುವಂತೆ ಸೂಚನೆ ನೀಡಿರುವೆ ಎಂದರು.

ADVERTISEMENT

ಚೆಂಬು, ಅರೆಕಲ್ಲು ಪೆರಾಜೆ ಗಾಳಿಬೀಡು ಬಾಡಗ ವ್ಯಾಪ್ತಿ ಸೇರಿದಂತೆ ಇನ್ನೂ 8 ಕಡೆ ಹೊಸ ಟವರ್‌ಗಳು ಬೇಕಿದೆ ಎಂಬ ಪ್ರಸ್ತಾವ ಬಂದಿದೆ. ಇದರೊಂದಿಗೆ ಇನ್ನೂ ಎಲ್ಲೆಲ್ಲಿ ಬೇಕು ಎಂಬ ಮಾಹಿತಿಯನ್ನು ಸಂಗ್ರಹಿಸಿ ಮತ್ತಷ್ಟು ಟವರ್‌ಗಳನ್ನು ಜಿಲ್ಲೆಯಲ್ಲಿ ಸ್ಥಾಪಿಸಲಾಗುವುದು ಎಂದು ಹೇಳಿದರು.

ಆಗಸ್ಟ್ ಅಂತ್ಯಕ್ಕೆ ‘ಕ್ರಿಟಿಕಲ್ ಕೇರ್ ಯೂನಿಟ್ ಆಸ್ಪತ್ರೆ’ ನಿರ್ಮಾಣ ಕಾಮಗಾರಿ

ಮಳೆ ಕಡಿಮೆಯಾಗುತ್ತಿದ್ದಂತೆ ಆಗಸ್ಟ್ ಅಂತ್ಯಕ್ಕೆ ‘ಕ್ರಿಟಿಕಲ್ ಕೇರ್ ಯೂನಿಟ್ ಆಸ್ಪತ್ರೆ’ ನಿರ್ಮಾಣ ಕಾಮಗಾರಿ ಆರಂಭಿಸುವಂತೆ ಗುತ್ತಿಗೆದಾರರಿಗೆ ಸೂಚನೆ ನೀಡಲಾಗಿದೆ ಎಂದರು.

ಹಿಂದಿನ ಶಾಸಕರಾಗಿದ್ದ ಕೆ.ಜಿ.ಬೋಪಯ್ಯ ಹಾಗೂ ಎಂ.ಪಿ.ಅಪ್ಪಚ್ಚುರಂಜನ್ ಅವರ ಪರಿಶ್ರಮದ ಫಲವಾಗಿ ಇಲ್ಲಿ 750 ಹಾಸಿಗೆಗಳ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣವಾಗುತ್ತಿದೆ. ಅದರ ಒಂದು ಬ್ಲಾಕ್‌ ನವೆಂಬರ್ ಅಂತ್ಯಕ್ಕೆ ಸಿದ್ಧವಾಗಲಿದೆ. ಮತ್ತೊಂದು ಬ್ಲಾಕ್‌ ನಿರ್ಮಾಣಕ್ಕೆ ₹ 72 ಕೋಟಿ ಹಣ ಬೇಕಿದ್ದು, ಪ್ರಸ್ತುತ ಇರುವ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಬೇಗನೇ ಹಣ ಮಂಜೂರು ಮಾಡಿಕೊಡಬೇಕು ಎಂದು ಒತ್ತಾಯಿಸಿದರು.

 ‘ಕ್ರಿಟಿಕಲ್ ಕೇರ್ ಯೂನಿಟ್ ಆಸ್ಪತ್ರೆಗೆ ಕೇಂದ್ರ ಸರ್ಕಾರ ಈಗಾಗಲೇ ₹ 29 ಕೋಟಿ ಹಣ ಬಿಡುಗಡೆ ಮಾಡಿದೆ. ವೈದ್ಯಕೀಯ ಉಪಕರಣಗಳಿಗಾಗಿ ₹ 7.12 ಕೋಟಿ ಹಣ ನೀಡಿದೆ. ಆಗಸ್ಟ್ ಅಂತ್ಯಕ್ಕೆ ಕಾಮಗಾರಿಯ ಆರಂಭಿಸಿ. 17 ತಿಂಗಳ ನೊಳಗೆ ಪೂರ್ಣಗೊಳಿಸಬೇಕು ಎಂಬ ಗುರಿ ನೀಡಲಾಗಿದೆ ಎಂದರು.

ಇದರೊಂದಿಗೆ ಐಶ್‌ ಔಟ್‌ ರೀಚ್‌ ಕೇಂದ್ರವನ್ನು ತೆರೆಯಲಾಗುವುದು. ಇದರಿಂದ ಕಿವಿ ಕೇಳಿಸದ ಹಾಗೂ ಮಾತು ಬಾರದ ಮಕ್ಕಳಿಗೆ ಸಹಾಯವಾಗಲಿದೆ ಎಂದು ಹೇಳಿದರು.

ವಕ್ತಾರ ಸುಬ್ರಹ್ಮಣ್ಯ ಉಪಾಧ್ಯಾಯ ಇದ್ದರು.

ವಿದ್ಯುತ್‌ ಇಲ್ಲದೆ ಸಿಗ್ನಲ್ ಇಲ್ಲ ಸಿಗ್ನಲ್ ಇಲ್ಲದೇ ವಿದ್ಯುತ್ ಇಲ್ಲ!

ಸುದ್ದಿಗೋಷ್ಠಿಗೂ ಮುನ್ನ ಸಂಸದ ಪ್ರತಾಪಸಿಂಹ ನಡೆಸಿದ ಅಧಿಕಾರಿಗಳ ಸಭೆಯಲ್ಲಿ ‘ಸಿಗ್ನಲ್ ಇಲ್ಲದೇ ವಿದ್ಯುತ್ ದುರಸ್ತಿ ತಡ ವಿದ್ಯುತ್ ಇಲ್ಲದೇ ಸಿಗ್ನಲ್ ಇಲ್ಲ’ ಎಂಬ ಅಂಶ ಪ್ರಸ್ತಾಪವಾಯಿತು. ‘ವಿದ್ಯುತ್ ಇಲ್ಲದೇ ಇರುವುದರಿಂದ ಬಿಎಸ್‌ಎನ್‌ಎಲ್‌ ಸಿಗ್ನಲ್ ಸಿಕ್ಕುವುದಿಲ್ಲ. ಹಾಗಾಗಿ ವಿದ್ಯುತ್ ಕೊರತೆಯಾಗದಂತೆ ನೋಡಿಕೊಳ್ಳಬೇಕು’ ಎಂದು ಬಿಎಸ್‌ಎನ್‌ಎಲ್ ಅಧಿಕಾರಿಗಳು ತಿಳಿಸಿದರು. ಇದಕ್ಕೆ ಪ್ರತಿಯಾಗಿ ಸೆಸ್ಕ್ ಕಾರ್ಯನಿರ್ವಾಹಕ ಎಂಜಿನಿಯರ್ ಅನಿತಾ ಬಾಯಿ ಅವರು ‘ಬಿಎಸ್‌ಎನ್‌ಎಲ್‌ ಸಿಗ್ನಲ್‌ ಸಿಗದೇ ನಮ್ಮ ಸಿಬ್ಬಂದಿ ಕಚೇರಿಯೊಂದಿಗೆ ಸಂವಹನ ನಡೆಸಲು ಸಿಗ್ನಲ್ ಇರುವ ಪ್ರದೇಶ ಹುಡುಕಬೇಕಿದೆ. ಸಿಗ್ನಲ್ ಸಿಗದೇ ಇರುವುದರಿಂದ ದುರಸ್ತಿ ಕಾರ್ಯ ತಡವಾಗುತ್ತಿದೆ’ ಎಂದು ಹೇಳಿದರು.

ಮಧ್ಯೆ ಪ್ರವೇಶಿಸಿದ ಪ್ರತಾಪಸಿಂಹ ‘ಟವರ್‌ಗಳಿಗೆ ಬ್ಯಾಟರಿ ಬ್ಯಾಕ್‌ ಅಪ್‌ ಇಟ್ಟುಕೊಂಡಿರಬೇಕಲ್ಲವೇ’ ಎಂದು ಪ್ರಶ್ನಿಸಿದರು. ಒಟ್ಟು 39 ಟವರ್‌ಗಳಲ್ಲಿ ಬ್ಯಾಟರಿಗಳು ಕೆಟ್ಟಿವೆ. ಅವುಗಳಲ್ಲಿ ಸದ್ಯ 13 ಮಾತ್ರ ಬಂದಿವೆ. ಇನ್ನುಳಿದವು ಬರಬೇಕಿದೆ. ಇದರಿಂದ ವಿದ್ಯುತ್ ಹೋದ ತಕ್ಷಣವೇ ಟವರ್‌ನಲ್ಲಿ ಸಿಗ್ನಲ್ ಸಹ ಹೋಗಲಿದೆ ಎಂದು ಬಿಎಸ್‌ಎನ್‌ಎಲ್‌ ಅಧಿಕಾರಿಗಳು ತಿಳಿಸಿದರು. ಆದಷ್ಟು ಬೇಗ ಬ್ಯಾಟರಿಗಳು ಬರುವಂತೆ ವ್ಯವಸ್ಥೆ ಮಾಡಲಾಗುವುದು ಎಂದು ಪ್ರತಾಪಸಿಂಹ ತಿಳಿಸಿದರು. ವೈದ್ಯಾಧಿಕಾರಿಗಳಿಗೆ ವಸತಿ ಗೃಹ ಕಲ್ಪಿಸಲು ಮನವಿ ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಕೆಲಸ ಮಾಡುವ ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿಗೆ ವಸತಿ ಗೃಹ ಕಲ್ಪಿಸುವಂತೆ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಸ್ಥಾನಿಕ ವೈದ್ಯಾಧಿಕಾರಿ ಡಾ.ಸತೀಶ್ ಅವರು ಮನವಿ ಮಾಡಿದರು.

ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ ವೈದ್ಯಾಧಿಕಾರಿಗಳಿಗೆ ವಸತಿ ಗೃಹ ಕಲ್ಪಿಸುವ ಸಂಬಂಧ ಜಾಗ ಒದಗಿಸಲಾಗುವುದು. ಈಗಾಗಲೇ ಮೂರ್ನಾಡು ರಸ್ತೆಯ ಪ್ರವಾಸಿ ಮಂದಿರ ವೈದ್ಯಕೀಯ ಕಾಲೇಜಿಗೆ ಆಗಿದ್ದು ಈ ಜಾಗದಲ್ಲಿ ವಸತಿ ಗೃಹ ನಿರ್ಮಾಣ ಮಾಡಬಹುದು ಎಂದು ಸಂಬಂಧಪಟ್ಟ ಎಂಜಿನಿಯರ್ ತಿಳಿಸಿದರು. ‘ಕ್ರಿಟಿಕಲ್ ಕೇರ್ ಯೂನಿಟ್ ಆಸ್ಪತ್ರೆ’ ನಿರ್ಮಾಣ ಕಾಮಗಾರಿ ಆಗಸ್ಟ್ ಅಂತ್ಯಕ್ಕೆ ಆರಂಭಿಸಬೇಕು 750 ಹಾಸಿಗೆ ಸಾಮರ್ಥ್ಯದ ಮಲ್ಟಿಸ್ಟೆಷಾಲಿಟಿ ಆಸ್ಪತ್ರೆಯ ಒಂದು ಬ್ಲಾಕ್‌ನ್ನು ನವೆಂಬರ್‌ ಅಂತ್ಯಕ್ಕೆ ‍ಪೂರ್ಣಗೊಳಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಬೋಧಕ ಆಸ್ಪತ್ರೆಗೆ ಆದ್ಯತೆ ಮೇಲೆ ಎಂಆರ್‌ಐ ಸ್ಕ್ಯಾನ್ ಯಂತ್ರ ಬೇಕಿದೆ. ಜೊತೆಗೆ ತಾಯಿ ಮತ್ತು ಮಕ್ಕಳ ಆಸ್ಪತ್ರೆಯು ವಿರಾಜಪೇಟೆಯಲ್ಲಿ ನಿರ್ಮಿಸಬೇಕಿದೆ ಎಂದರು. ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಮುಖ್ಯ ಆಡಳಿತಾಧಿಕಾರಿ ಸ್ವಾಮಿ ಪ್ರಭಾರ ನಿರ್ದೇಶಕ ನರಸಿಂಹ ರೈ ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ನಂಜುಂಡಯ್ಯ ಎಂಜಿನಿಯರ್‌ಗಳಾದ ಶ್ರೀನಿವಾಸ್ ಗೌಡ ನರಸಿಂಹಮೂರ್ತಿ ವೈದ್ಯಕೀಯ ವಿಜ್ಞಾನ ಸಂಸ್ಥೆಯ ದೀಪಕ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.