ಸುಂಟಿಕೊಪ್ಪ: ಇಲ್ಲಿಗೆ ಸಮೀಪದ 7ನೇ ಹೊಸಕೋಟೆಯಲ್ಲಿ ಸೆಬಾಸ್ಟೀನ್‌ಯವರ ರೋಮನ್ ಕ್ಯಾಥೋಲಿಕ್ ಚರ್ಚ್ ನೂತನವಾಗಿ ನಿರ್ಮಾಣಗೊಂಡಿದ್ದು, ಏ. 30ರಂದು ಲೋಕಾರ್ಪಣೆಗೊಳ್ಳಲಿದೆ.
ಬೆಳ್ತಂಗಡಿ ಧರ್ಮಾಕ್ಷೇತ್ರದ ಅಧೀನದಲ್ಲಿ ಬರುವ ಸಿದ್ಧಾಪುರ ಕರಡಿಗೋಡುವಿನ ಸಂತ ಮೇರಿ ದೇವಾಲಯದ ನೇತೃತ್ವದಲ್ಲಿ ಸಂತ ಸೆಬಾಸ್ಟೀನ್ ಅವರ ರೋಮನ್ ಕ್ಯಾಥೋಲಿಕ್ ಚರ್ಚ್ 1982ರಲ್ಲಿ ಆರಂಭಗೊಂಡಿತ್ತು.
ಈ ದೇವಾಲಯದ ಧರ್ಮಗುರುಗಳಾಗಿ ರೆ.ಫಾದರ್ ಸೆಬಾಸ್ಟೀನ್ ಪೂವತ್ತಿಗಲ್ ಅವರು 9 ವರ್ಷಗಳ ಹಿಂದೆ ಅಧಿಕಾರ ವಹಿಸಿಕೊಂಡರು. ಕಾಲಕ್ರಮೇಣ ಚರ್ಚ್‌ನ ಜೀರ್ಣೋದ್ಧಾರ ಮತ್ತು ಅಭಿವೃದ್ಧಿಯನ್ನು ಮನಗಂಡ ಅವರು ಕರಡಿಗೋಡುವಿನ ಸಂತ ಮೇರಿ ದೇವಾಲಯದ ಮುಖ್ಯಸ್ಥರ ಮೂಲಕ ಬೆಳ್ತಂಗಡಿ ಧರ್ಮಾಕ್ಷೇತ್ರಕ್ಕೆ ವಿವರವಾದ ನೀಲನಕ್ಷೆಯನ್ನು ತಯಾರಿಸಿ ಕಳುಹಿಸಿಕೊಡಲಾಯಿತು. ಅಲ್ಲಿಂದ ಬಂದ ಆದೇಶದ ಪ್ರಕಾರ ದೇವಾಲಯದ ತಳ ಬಾಗದಲ್ಲಿ 2016ರ ಮೇ 22ರಲ್ಲಿ ನೂತನ ದೇವಾಲಯ ನಿರ್ಮಿಸುವ ಕಾರ್ಯಕ್ಕೆ ಆರ್ಶೀವಚನವನ್ನು ಬೆಳ್ತಂಗಡಿ ಧರ್ಮಾಕ್ಷೇತ್ರದ ಧರ್ಮಾಧ್ಯಕ್ಷ ಮಾರ್ ಲಾರೆನ್ಸ್ ಮುಕ್ಕಾಜಿ ನೀಡಿದರು.
ಅಂದಿನಿಂದ ನಿರಂತರವಾಗಿ ದೇವಾಲಯದ ಪುನರ್ ನಿರ್ಮಾಣ ಮತ್ತು ವಿಸ್ತರಣಾ ಕಾರ್ಯ ನಡೆದುಕೊಂಡು ಬಂದಿದೆ. ಈ ಸಮಿತಿಯಲ್ಲಿ ಇ.ಬಿ.ಜೋಸೆಫ್, ಜೋಣಿಪಾಲತ್, ಜೋಯಿ ಅರಕಲ್, ವಿಲಿ ಜೇಕಬ್ ಅವರು ಸದಸ್ಯರಾಗಿ ಕೆಲಸ ಮಾಡುತ್ತಿದ್ದಾರೆ.
ಏಫ್ರಿಲ್ 30 ರಂದು ಲೋಕಾರ್ಪಣೆ: ಈ ಭವ್ಯ ದೇವಾಲಯವನ್ನು ಏ.30ರಂದು ಮಂಗಳವಾರ ನಡೆಯುವ ಕಾರ್ಯಕ್ರಮದಲ್ಲಿ ಬೆಳ್ತಂಗಡಿ ಧರ್ಮಾಕ್ಷೇತ್ರದ ಧರ್ಮಾಧ್ಯಕ್ಷ ಬಿಷಪ್ ಮಾರ್‌ಲಾರೆನ್ಸ್ ಮುಕುಜಿ ಅವರು ಆಶೀರ್ವಚನ ನೀಡುವ ಮೂಲಕ ಲೋಕಾರ್ಪಣೆಗೊಳಿಸಲಿದ್ದಾರೆ. ಅವರ ಅಧ್ಯಕ್ಷತೆಯಲ್ಲಿ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಮಡಿಕೇರಿ ಶಾಸಕ ಡಾ.ಮಂತರ್‌ಗೌಡ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.
ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಬೆಳ್ತಂಗಡಿ ಧರ್ಮಕ್ಷೇತ್ರದ ಜೋಸೆಫ್ ವಲಿಯಪರಂಬಿಲ್, ಸಿದ್ದಾಪುರ ಸಂತ ಮೇರಿ ಚರ್ಚಿನ ವಲಯ ಧರ್ಮಗುರುಗಳಾದ ಜೋಜಿ ವಡಕ್ಕಿವೀಟಿ, ಮೈಸೂರಿನ ಸೆಂಟ್ ಪೌಲಸ್ ಪ್ರಾಂತ್ಯದ ಧರ್ಮಗುರು ಆಗಸ್ಟೀನ್ ಪಾಯಂಪಳ್ಳಿ, ತಲಚೇರಿಯ ಸಂತ ಜೋಸೆಫರ ಪ್ರಾಂತ್ಯದ ಧರ್ಮಗುರು ಡಾ.ತ್ರೇಸಾ ಪಾಲಕ್ಕಾಡ್, ಚೆರುಪುಜಾ ಪ್ರಾಂತ್ಯದ ಧರ್ಮಗುರು ಜೋಸ್ ವೆಲ್ಟಿಕಲ್, 7ನೇ ಹೊಸಕೋಟೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಇ.ಬಿ.ಜೋಸೆಫ್ ಪಾಲ್ಗೊಳ್ಳಲಿದ್ದಾರೆಂದು ಧರ್ಮಗುರು ಸೆಬಾಸ್ಟೀನ್ ಪೂವತ್ತಿಗಲ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.