ADVERTISEMENT

ಸಮಸ್ಯೆಗಳ ಅಗರ ಮಾದಾಪುರ ಪಂಚಾಯಿತಿ; ಗ್ರಾಮಸ್ಥರ ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 16 ಜೂನ್ 2024, 4:47 IST
Last Updated 16 ಜೂನ್ 2024, 4:47 IST
ಮಾದಾಪುರ ಗ್ರಾಮ ಪಂಚಾಯಿತಿ ಕಚೇರಿ
ಮಾದಾಪುರ ಗ್ರಾಮ ಪಂಚಾಯಿತಿ ಕಚೇರಿ   

ಸುಂಟಿಕೊಪ್ಪ: ಸಮೀಪದ ಮಾದಾಪುರ ಗ್ರಾಮ ಪಂಚಾಯಿತಿ ಸಮಸ್ಯೆಗಳ ಆಗರವಾಗಿದ್ದು, ಅಭಿವೃದ್ಧಿ ಕಾರ್ಯಗಳು ಕುಂಠಿತಗೊಂಡಿದೆ.

ಜಿಲ್ಲೆಯ ಎಲ್ಲಾ ಪಂಚಾಯಿತಿಯಲ್ಲಿ ನೂತನ ಅಧ್ಯಕ್ಷತೆ ಆಯ್ಕೆಯಾದ ಗ್ರಾಮಸಭೆ ನಡೆದಿವೆ. ಆದರೆ, ಮಾದಾಪುರ ಗ್ರಾಮ ಪಂಚಾಯಿತಿಯ 2ನೇ ಅವಧಿಯ ಅಧ್ಯಕ್ಷರ ಆಯ್ಕೆಯಾಗಿ 1 ವರ್ಷ ಸಮೀಪಿಸುತ್ತಾ ಬಂದರೂ ಗ್ರಾಮಸಭೆ ಇನ್ನೂ ನಡೆದಿಲ್ಲ. ಆಡಳಿತ ಮಂಡಳಿಗೆ ಸಮಯಾವಕಾಶ ಕೂಡಿ ಬಂದಂತೆ ಕಾಣುತ್ತಿಲ್ಲ.

ಆಗಾಗ್ಗೆ ಮಾದಾಪುರ ಗ್ರಾಮ ಪಂಚಾಯಿತಿಯ ಪಿಡಿಒಗಳು ವರ್ಗಾವಣೆಯಾಗುತ್ತಿರುವುದು ಈ ಎಲ್ಲ ಸಮಸ್ಯೆಗಳಿಗೆ ಕಾರಣವಾಗಿದೆ. ಈಗ ಅಧಿಕಾರಿ ವಹಿಸಿಕೊಂಡಿರುವ ಪಿಡಿಒ ಬಾಲಕೃಷ್ಣ ಅವರಿಗೆ ಐಗೂರು ಹಾಗೂ ಮಾದಾಪುರ ಪಂಚಾಯಿತಿಯ ಹೆಚ್ಚುವರಿ ಜವಾಬ್ದಾರಿ ನೀಡಿರುವುದರಿಂದ ಜನರ ಸಮಸ್ಯೆಗಳಿಗೆ ಸ್ಪಂದನೆ ಸಿಗುತ್ತಿಲ್ಲ ಎನ್ನಲಾಗಿದೆ.

ADVERTISEMENT

ಜಂಬೂರು ಗ್ರಾಮದಲ್ಲಿ ಜಲ ಮಿಷನ್ ಯೋಜನೆಯ ಕಾಮಗಾರಿ ಅರ್ಧದಲ್ಲೇ ಸ್ಥಗಿತಗೊಂಡಿರುವುದರಿಂ‌ದ ಕುಡಿಯುವ ನೀರಿನ ಸಮಸ್ಯೆ ಜ್ವಲಂತವಾಗಿ ಉಳಿದಿದೆ. ಜಲಜೀವನ್ ಯೋಜನೆ ಗುತ್ತಿಗೆ ಪಡೆದವರು ಅರ್ಧದಲ್ಲಿಯೇ ಕೆಲಸ ನಿಲ್ಲಿಸಿ ಪಲಾಯನವಾಗಿದ್ದರೂ ಈ ಬಗ್ಗೆ ಗ್ರಾಮ ಪಂಚಾಯಿತಿ ಏನು ಕ್ರಮಕೈಗೊಂಡಿಲ್ಲ.

ಜಂಬೂರು ಫೀಲ್ಡ್ ಮಾರ್ಷಲ್ ಬಡಾವಣೆಯ ನಿವಾಸಿಗಳಿಗೆ ಕಟ್ಟಿಸಿಕೊಟ್ಟಿರುವ ಮನೆಯ ಕಾಮಗಾರಿ ಅವೈಜ್ಞಾನಿಕವಾಗಿದೆ. ಸೆಪ್ಟಿಕ್ ಟ್ಯಾಂಕ್‌ನ ನೀರು ಚರಂಡಿಯಲ್ಲಿ ನಿಂತು ದುರ್ವಾಸನೆ ಬೀರುತ್ತಿದೆ. ಜನರು ಮೂಗು ಮುಚ್ಚಿಕೊಂಡು ಬದುಕು ದೂಡುತ್ತಿದ್ದಾರೆ. ಕಸವಿಲೇವಾರಿ ಸಮಸ್ಯೆಗೆ ಪರಿಹಾರವೇ ಸಿಕ್ಕಿಲ್ಲ. ತೋಟಗಾರಿಕೆ ಇಲಾಖೆ ಜಾಗದಲ್ಲಿ ತಾತ್ಕಾಲಿಕವಾಗಿ ಕಸ ವಿಲೇವಾರಿ ಮಾಡುತ್ತಿದ್ದು, ಇಲ್ಲಿಯೂ ಜನರು ವಿರೋಧ ವ್ಯಕ್ತಪಡಿಸಿದ್ದಾರೆ.

ಮೂವತೋಕ್ಲುವಿನಲ್ಲಿ ಕಸವಿಲೇವಾರಿ ಪೈಸಾರಿ ಜಾಗ ಗುರುತಿಸಿದ್ದರೂ, ಪಂಚಾಯಿತಿ ಖಾತೆಗೆ ಇನ್ನೂ ದಾಖಲಿಸಿಕೊಳ್ಳದೆ ಸಮಸ್ಯೆಯಾಗಿದೆ. ಈ ಜಾಗದಲ್ಲಿ ನಿವೇಶನ ರಹಿತರಿಗೂ 2 ಎಕರೆ ಜಾಗ ಗುರುತಿಸಲಾಗಿದ್ದು, ಅದು ಕಾರ್ಯರೂಪಕ್ಕೆ ಬಂದಿಲ್ಲ ಮನೆ ಇಲ್ಲದೆ ನೂರಾರು ಮಂದಿ ಪಂಚಾಯಿತಿಗೆ ಅರ್ಜಿ ಸಲ್ಲಿಸಿ ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ.

ಜನರ ಸಮಸ್ಯೆಗಳಿಗೆ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ಪರಿಹಾರ ನೀಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.