ADVERTISEMENT

ಸಿಕಲ್‌ ಸೆಲ್‌ ಅನಿಮಿಯಾ ನಿರ್ಮೂಲನೆ | 3 ಜಿಲ್ಲೆಗಳಲ್ಲಿ ‘ಪ್ರಾಜೆಕ್ಟ್ ಚಂದನ’

ಸಿಕಲ್‌ ಸೆಲ್‌ ಅನಿಮಿಯಾ (ಕುಡುಗೋಲು ರಕ್ತಹೀನತೆ) ನಿರ್ಮೂಲನೆಗೆ ನಾಳೆಯಿಂದ ಯೋಜನೆ ಶುರು

ಕೆ.ಎಸ್.ಗಿರೀಶ್
Published 18 ಜೂನ್ 2024, 6:45 IST
Last Updated 18 ಜೂನ್ 2024, 6:45 IST
<div class="paragraphs"><p>ಸಾಂಕೇತಿಕ ಚಿತ್ರ&nbsp;</p></div>

ಸಾಂಕೇತಿಕ ಚಿತ್ರ 

   

ಮಡಿಕೇರಿ: ಆದಿವಾಸಿಗಳಲ್ಲಿ ಹೆಚ್ಚು ಕಾಣಿಸಿಕೊಳ್ಳುವ ಸಿಕಲ್‌ ಸೆಲ್‌ ಅನಿಮಿಯಾ (ಕುಡುಗೋಲು ರಕ್ತಹೀನತೆ ) ನಿರ್ಮೂಲನೆಗಾಗಿ ರೂಪಿಸಿರುವ ‘ಪ್ರಾಜೆಕ್ಟ್ ಚಂದನ’ ಕಾರ್ಯಕ್ರಮಕ್ಕೆ ರಾಜ್ಯದಲ್ಲಿ ಮೈಸೂರು, ಚಾಮರಾಜನಗರ ಹಾಗೂ ಕೊಡಗು ಜಿಲ್ಲೆ ಆಯ್ಕೆಯಾಗಿದೆ.

ಆರೋಗ್ಯ ಇಲಾಖೆ, ಸಮಗ್ರ ಬುಡಕಟ್ಟು ಅಭಿವೃದ್ಧಿ ಯೋಜನೆ, ಅಂಗವಿಕಲರ ಅಭಿವೃದ್ಧಿ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಸಮಾಜ ಕಲ್ಯಾಣ ಇಲಾಖೆ ಸಹಭಾಗಿತ್ವದಲ್ಲಿ ಯೋಜನೆ ಜಾರಿಯಾಗುತ್ತಿದೆ.

ADVERTISEMENT

ಕಳೆದ ವರ್ಷವಷ್ಟೇ ಕೇಂದ್ರ ಸರ್ಕಾರ ದೇಶದ 17 ರಾಜ್ಯಗಳಲ್ಲಿ ಸಿಕಲ್‌ ಸೆಲ್‌ ಅನಿಮಿಯಾ ನಿರ್ಮೂಲನಾ ಕಾರ್ಯಕ್ರಮವನ್ನು ಜಾರಿಗೊಳಿಸಿತ್ತು. ಅದರಲ್ಲಿ ರಾಜ್ಯದ ಕೊಡಗು, ಚಾಮರಾಜನಗರ, ಚಿಕ್ಕಮಗಳೂರು, ಮೈಸೂರು, ಉಡುಪಿ, ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳು ಆಯ್ಕೆಯಾಗಿದ್ದವು. ಆ ಬಳಿಕ ಪರೀಕ್ಷಾ ಕಾರ್ಯಗಳು ಹೆಚ್ಚು ನಡೆದು, ಕಾಯಿಲೆ ಪತ್ತೆಯಾಗಿತ್ತು.

ಸಿಕೆಲ್‌ ಸೆಲ್ ಅನಿಮಿಯಾ ನಿರ್ಮೂಲನಾ ದಿನವಾದ ಜೂನ್ 19ರಂದು ಯೋಜನೆಗೆ ಮೈಸೂರಿನಲ್ಲಿ ಆರೋಗ್ಯ ಸಚಿವ ದಿನೇಶ ಗುಂಡೂರಾವ್ ಚಾಲನೆ ನೀಡಲಿದ್ದಾರೆ. ಅದಕ್ಕಾಗಿ ತರಬೇತಿ ಕಾರ್ಯಕ್ರಮಗಳು ನಡೆದಿವೆ.

ಭಾರತೀಯ ವಿಜ್ಞಾನ ಸಂಸ್ಥೆ ಹಾಗೂ ಇಂಡಿಯನ್ ಆಯಿಲ್ ಕಾರ್ಪೋರೇಷನ್ ರೂಪಿಸಿರುವ ಯೋಜನೆಯನ್ನು ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ 2 ವರ್ಷ ಅವಧಿಗೆ ಜಾರಿಗೊಳಿಸಲಾಗುತ್ತಿದೆ. ಸಿಕಲ್‌ ಸೆಲ್ ಅನಿಮಿಯಾ ರೋಗದ ಪತ್ತೆ, ಜಾಗೃತಿ ಹಾಗೂ ಚಿಕಿತ್ಸೆ ನೀಡುವುದು ಗುರಿ.

ಈವರೆಗೆ ಮೈಸೂರಿನಲ್ಲಿ 14,500 ಮಂದಿಯನ್ನು ಪರೀಕ್ಷಿಸಲಾಗಿದ್ದು, 86 ಮಂದಿಯಲ್ಲಿ ಕಾಯಿಲೆ ಪತ್ತೆಯಾಗಿದೆ. ಚಾಮರಾಜನಗರದಲ್ಲಿ 11,500 ಮಂದಿಯನ್ನು ಪರೀಕ್ಷಿಸಿದ್ದು, 70 ಮಂದಿಯಲ್ಲಿ ಹಾಗೂ ಕೊಡಗು ಜಿಲ್ಲೆಯಲ್ಲಿ 10,500 ಮಂದಿಯನ್ನು ಪರೀಕ್ಷಿಸಿದ್ದು 31 ಮಂದಿಯಲ್ಲಿ ಕಾಯಿಲೆ ಪತ್ತೆಯಾಗಿದೆ. ಯೋಜನೆ ಮೂಲಕ ಇನ್ನಷ್ಟು ಮಂದಿಯನ್ನು ಪರೀಕ್ಷಿಸುವ ಗುರಿ ಹೊಂದಲಾಗಿದೆ.

‘ಸ್ಥಳೀಯ ಮುಖಂಡರು, ವೈದ್ಯಾಧಿಕಾರಿ, ಆರೋಗ್ಯ ಸುರಕ್ಷಾಧಿಕಾರಿ, ಸಮುದಾಯ ಆರೋಗ್ಯ ಅಧಿಕಾರಿ, ಆಶಾ ಕಾರ್ಯಕರ್ತೆಯರನ್ನು ಒಳಗೊಂಡ ತಂಡಗಳನ್ನು ರಚಿಸಿದ್ದು, ಅವರಿಗೆ ಪರೀಕ್ಷಾ ಕಿಟ್ ಸಹ ನೀಡಲಾಗಿದೆ’ ಎಂದು ಕೊಡಗು ಜಿಲ್ಲಾ ಕ್ಷಯ ರೋಗ ನಿಯಂತ್ರಣಾಧಿಕಾರಿ ಡಾ.ಆನಂದ್ ‘ಪ್ರಜಾವಾಣಿ’ಗೆ ತಿಳಿಸಿದರು.

’ಕಿಟ್‌ ಬಳಸಿ ಸ್ಥಳದಲ್ಲೇ ಪರೀಕ್ಷಿಸಿ, ರೋಗವನ್ನು ಪತ್ತೆ ಹಚ್ಚಬಹುದು. ನಂತರ ಜಾಗೃತಿ, ಚಿಕಿತ್ಸೆಯೂ ನಡೆಯಲಿದೆ’ ಎಂದು ಹೇಳಿದರು

ಏನಿದು ಸಿಕಲ್‌ ಸೆಲ್ ಅನಿಮಿಯಾ?

ಸಿಕಲ್‍ ಸೆಲ್ ರಕ್ತಹೀನತೆಯು ಅನುವಂಶೀಯ ಕಾಯಿಲೆ. ಕೆಂಪು ರಕ್ತ ಕಣಗಳು ಕುಡುಗೋಲಿನ ಆಕಾರಕ್ಕೆ ಬದಲಾಗುವುದರಿಂದ ಸಿಕಲ್ ಸೆಲ್‌ ಎನ್ನಲಾಗುತ್ತದೆ. ಆರೋಗ್ಯವಂತರಲ್ಲಿ ಸಾಮಾನ್ಯವಾಗಿ 120 ದಿನ ಬದುಕುವ ಕೆಂಪು ರಕ್ತಕಣಗಳು ಕಾಯಿಲೆಪೀಡಿತರಲ್ಲಿ 10ರಿಂದ 12 ದಿನಗಳಲ್ಲೇ ನಾಶವಾಗುತ್ತದೆ. ಅದರಿಂದ ರಕ್ತಹೀನತೆ, ಗಂಭೀರ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.

ದೇಹಕ್ಕೆ ಆಮ್ಲಜನಕ ಸಾಗಿಸುವ ‌ರಕ್ತಕಣಗಳ ಆಕಾರ ಬದಲಾಗಿ, ಪೂರೈಕೆಯೂ ಕಡಿಮೆಯಾಗಿ ಅಂಗಾಂಗ ವೈಫಲ್ಯ ಉಂಟಾಗಬಹುದು. ಬಹುತೇಕರು ಕಾಯಿಲೆ ಇದೆಯೆಂದು ಗೊತ್ತಾಗದೇ ಮೃತಪಡುತ್ತಿದ್ದಾರೆ.

‘ಇದನ್ನು ಸಂಪೂರ್ಣ ಗುಣಪಡಿಸಲು ಸಾಧ್ಯವಿಲ್ಲ. ನಿಯಂತ್ರಣವನ್ನಷ್ಟೇ ಮಾಡಬಹುದು. ಮದುವೆ ಸಮಯದಲ್ಲಿ ಜೆನೆಟಿಕ್‌ ಕೌನ್ಸೆಲಿಂಗ್ ಮಾಡುವ ಮೂಲಕ ನಿಯಂತ್ರಿಸಬಹುದು’ ಎಂದು ಡಾ.ಆನಂದ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.