ಕುಶಾಲನಗರ: ರಿಯಲ್ ಎಸ್ಟೇಟ್ ಉದ್ಯಮಿ ಸುರೇಶ್ ಹಾಗೂ ಅವರ ಪತ್ನಿ ಆತ್ಮಹತ್ಯೆಗೆ ಕಾರಣರಾದವರನ್ನು ಕೂಡಲೇ ಬಂಧಿಸುವಂತೆ ಒತ್ತಾಯಿಸಿ ಗುರುವಾರ ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದ ಶವಗಾರ ಮುಂದೆ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
ಪಿರಿಯಾಪಟ್ಟಣ ತಾಲೂಕಿನ ಬೈಲಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯ ದೊಡ್ಡಹೊನ್ನೂರ್ ಕಾವಲ್‌ನಲ್ಲಿ ಬುಧವಾರ ಸಂಜೆ ಕೊಪ್ಪ ನಿವಾಸಿ ಸುರೇಶ್ (40) ಹಾಗೂ ಅವರ ಪತ್ನಿ ಪಲ್ಲವಿ (28) ಆತ್ಮಹತ್ಯೆ ಮಾಡಿಕೊಂಡಿದ್ದು, ಶವ ಪರೀಕ್ಷೆಗಾಗಿ ಕುಶಾಲನಗರ ಆಸ್ಪತ್ರೆಗೆ ತರಲಾಗಿತ್ತು.
ರಿಯಲ್ ಎಸ್ಟೇಟ್ ಮಾಫಿಯಾ ಕಿರುಕುಳದಿಂದ ಆತ್ಮಹತ್ಯೆಗೆ ಶರಣಾಗಿರುವ ಬಗ್ಗೆ ಮೃತ ಸುರೇಶ್ ಡೆತ್ ನೋಟ್ ಬರೆದಿಟ್ಟಿದ್ದು ತನಗೆ ತೊಂದರೆ ನೀಡಿ ಆತ್ಮಹತ್ಯೆಗೆ ಕಾರಣರಾದವರ ಹೆಸರನ್ನು ಉಲ್ಲೇಖಿಸಿದ್ದಾರೆ. ಇವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನೆ ನಡೆಸಿ ಪೊಲೀಸ್ ಅಧಿಕಾರಿಗಳನ್ನು ಒತ್ತಾಯಿಸಿದರು.
ಮೃತ ಸುರೇಶ್ ಅವರ ಸ್ನೇಹಿತ ಕೆ.ಜಿ.ಮನು ಮಾತನಾಡಿ, ಸುರೇಶ್ ನಡೆಸುತ್ತಿದ್ದ ವ್ಯವಹಾರದಲ್ಲಿ ಕೆಲವರು ಮೂಗು ತೂರಿಸಿ ದ್ರೋಹ ಮಾಡಿದ್ದಾರೆ. ಕುಶಾಲನಗರ ಸರ್ಕಾರಿ ಪದವಿ ಕಾಲೇಜು ಬಳಿ ಬಡಾವಣೆ ನಿರ್ಮಾಣಕ್ಕೆ ಜಾಗವೊಂದನ್ನು ಅಭಿವೃದ್ದಿಪಡಿಸುತ್ತಿದ್ದ ಸುರೇಶ್ ವ್ಯವಹಾರಕ್ಕೆ ಅಡ್ಡಗಾಲು ಹಾಕಿದ ರಿಯಲ್ ಎಸ್ಟೇಟ್ ಮಾಫಿಯಾದ ಕೆಲವರು ಜಾಗದ ಮಾಲೀಕರಿಗೆ ಹೆಚ್ಚಿನ ಲಾಭದ ಆಮೀಷವೊಡ್ಡಿ ಆತನಿಂದ ವ್ಯವಹಾರ ಕಸಿದುಕೊಂಡಿದ್ದಾರೆ ಎಂದು ಆರೋಪಿಸಿದರು.
ಹೂಡಿದ ಹಣ ಕಳೆದುಕೊಂಡು, ಇತ್ತ ಜಾಗವೂ ಇಲ್ಲದೆ ಮನನೊಂದು, ಮಾಲೀಕರು ಸೂಕ್ತವಾಗಿ ಸ್ಪಂದಿಸದ ಹಿನ್ನಲೆಯಲ್ಲಿ ಕೊನೆಗೇ ಯಾವುದೇ ದಾರಿ ಕಾಣದೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ದೂರಿದರು. ಈತನ ಸಾವಿಗೆ ಕಾರಣರಾದ ಜಾಗ ಮಾಲೀಕರು ಹಾಗೂ ಸಂಬಂಧಿಸಿದವರ ಮೇಲೆ ಸೂಕ್ತ ಕಾನೂನು ಕ್ರಮ ಆಗಬೇಕಿದೆ ಎಂದು ಆಗ್ರಹಿಸಿದರು.
ಮುಖಂಡರಾದ ವಿ.ಪಿ.ಶಶಿಧರ್, ಎಂ.ಡಿ.ಕೃಷ್ಣಪ್ಪ, ನಂಜುಂಡಸ್ವಾಮಿ, ಶಿವಾನಂದ್, ಚೇತನ್ ಚಂದ್ರಶೇಖರ್ ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.