ADVERTISEMENT

ಸುಂಟಿಕೊಪ್ಪ | ಘಟಕದಿಂದ ಅಶುದ್ಧ ನೀರು? ಸಾರ್ವಜನಿಕರ ದೂರು-ಪಿಡಿಒ ಸಮರ್ಥನೆ

ಸುನಿಲ್ ಎಂ.ಎಸ್.
Published 9 ನವೆಂಬರ್ 2024, 4:52 IST
Last Updated 9 ನವೆಂಬರ್ 2024, 4:52 IST
ಸುಂಟಿಕೊಪ್ಪದ ಮಾದಾಪುರ ರಸ್ತೆಯಲ್ಲಿರುವ ಶುದ್ದ ಕುಡಿಯುವ ನೀರಿನ ಘಟಕದಲ್ಲಿ ಅಶುದ್ಧ ನೀರು ದೊರೆಯುತ್ತಿರುವುದು
ಸುಂಟಿಕೊಪ್ಪದ ಮಾದಾಪುರ ರಸ್ತೆಯಲ್ಲಿರುವ ಶುದ್ದ ಕುಡಿಯುವ ನೀರಿನ ಘಟಕದಲ್ಲಿ ಅಶುದ್ಧ ನೀರು ದೊರೆಯುತ್ತಿರುವುದು   

ಸುಂಟಿಕೊಪ್ಪ: ಇಲ್ಲಿನ ಮಾದಾಪುರ ರಸ್ತೆಯಲ್ಲಿರುವ ಜಿಎಂಪಿ ಶಾಲಾ ಮೈದಾನದ ಪಕ್ಕದಲ್ಲಿನ ಶುದ್ಧ ಕುಡಿಯುವ ನೀರಿನ ಘಟಕದಿಂದ ಬರುತ್ತಿರುವ ನೀರಿನ ವಾಸನೆ ಬದಲಾವಣೆಯಾಗಿದ್ದು, ಈ ಕುರಿತು ಗ್ರಾಮ ಪಂಚಾಯಿತಿ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಈ ಮೊದಲು ಶಾಸಕರಾಗಿ ಆಯ್ಕೆಯಾದ ಡಾ.ಮಂತರ್‌ಗೌಡ ಅವರು ಮೊದಲಿಗೆ ಉದ್ಘಾಟನೆ ಮಾಡಿದಾಗ ಅತ್ಯಂತ ಶುದ್ಧವಾಗಿ ಬರುತ್ತಿದ್ದ ನೀರು, ಈಚೆಗೆ ಸುಮಾರು 2 ತಿಂಗಳಿನಿಂದ ವಾಸನೆಯುಕ್ತವಾಗಿ ಹೊರಬರುತ್ತಿದೆ. ಇದು ಅಶುದ್ಧಗೊಂಡಿರಬಹುದೇ ಎಂಬ ಅನುಮಾನ ಜನರನ್ನು ಕಾಡುತ್ತಿದೆ. ಇದೀಗ ಸುತ್ತಮುತ್ತಲ ಪ್ರದೇಶಗಳಲ್ಲಿ ಹೆಚ್ಚುತ್ತಿರುವ ಅನಾರೋಗ್ಯಕ್ಕೂ ಈ ನೀರೇ ಕಾರಣ ಇರುಬಹುದೇ ಎಂಬ ಶಂಕೆಯೂ ವ್ಯಕ್ತವಾಗುತ್ತಿದೆ. ಕೂಡಲೇ ಗ್ರಾಮ ಪಂಚಾಯಿತಿ ನೀರನ್ನು ಪರೀಕ್ಷಿಸಬೇಕು ಎಂಬುದು ಸ್ಥಳೀಯರ ಆಗ್ರಹವಾಗಿದೆ.

ಇದಕ್ಕೆ ಪುಷ್ಟಿ ನೀಡುವಂತೆ ಸ್ಥಳೀಯ ನಿವಾಸಿ ಸತೀಶ್ ಶೇಟ್ ಅವರು ನೀರನ್ನು ಪರೀಕ್ಷಿಸಿದ್ದು, ಅದು ಅಶುದ್ಧ ಎಂಬ ವರದಿ ಬಂದಿದೆ.

ADVERTISEMENT

ಈ ಕುರಿತು ಮಾತನಾಡಿದ ಅವರು, ‘ನಾನು ಯಂತ್ರದಲ್ಲಿ ಇತರೆ 2 ನೀರಿನ ಮಾದರಿಗಳೊಂದಿಗೆ ಪರೀಕ್ಷಿಸಿದಾಗ ಈ ನೀರು ಅಶುದ್ಧ ಎಂಬ ವರದಿ ಬಂದಿದೆ. ಕೂಡಲೇ ಫಿಲ್ಟರ್ ಬದಲಾಯಿಸಿ ಸಮರ್ಪಕವಾಗಿ ನಿರ್ವಹಣೆ ಮಾಡಬೇಕು’ ಎಂದು ಒತ್ತಾಯಿಸಿದರು.

ಈ ಬಗ್ಗೆ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿಯ ಗಮನಕ್ಕೆ ತಂದಿದ್ದರೂ, ಯಾವುದೇ ಪರಿಹಾರ ಕಂಡುಬಂದಿಲ್ಲ ಎಂದು ಹಲವು ಮಂದಿ ದೂರಿದ್ದಾರೆ. ಗ್ರಾಮ ಪಂಚಾಯಿತಿ ಅಧಿಕಾರಿ ಲೋಕೇಶ್ ಸಹ ಕ್ರಮಕೈಗೊಂಡಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಘಟಕದ ಫಿಲ್ಟರ್ ಅನ್ನು ಬದಲಾಯಿಸಿ ಇಲ್ಲವೇ ‌ಅ ಘಟಕವನ್ನು ಸ್ಥಗಿತಗೊಳಿಸಿ‌ ಎಂದು ಸಾರ್ವಜನಿಕರು ಮನವಿ ಮಾಡಿಕೊಂಡಿದ್ದಾರೆ.

ಸ್ಥಗಿತಗೊಂಡ ಮತ್ತೊಂದು ನೀರಿನ ಘಟಕ

ಇಲ್ಲಿನ ಕಂದಾಯ ಇಲಾಖೆಯ ಸಮೀಪದಲ್ಲಿ ಕಳೆದ ಹಲವು ವರ್ಷಗಳ ಹಿಂದೆ ಕಾರ್ಡ್ ಬಳಸಿ ಶುದ್ಧ ಕುಡಿಯುವ ನೀರನ್ನು ಪಡೆಯುವ ಘಟಕವನ್ನು ಸ್ಥಾಪಿಸಲಾಗಿತ್ತು. ಆದರೆ, ಇದೀಗ ಸಮರ್ಪಕವಾದ ನಿರ್ವಹಣೆ ಇಲ್ಲದೆ ಕಳೆದ ಎರಡು ವರ್ಷದಿಂದ ಸ್ಥಗಿತಗೊಂಡಿರುವುದು ಹಣ ನೀಡಿ ಕಾರ್ಡು ಪಡೆದುಕೊಂಡ ಗ್ರಾಹಕರಿಗೆ ನಿರಾಸೆಯಾಗಿದೆ. ₹ 5 ನಾಣ್ಯ ಬಳಸಿ ಶುದ್ಧ ನೀರನ್ನು ಪಡೆಯುವ ಘಟಕ ಸ್ಥಾಪನೆಯ ಮುನ್ನವೇ ಈ ಘಟಕದ ನಿರ್ವಹಣೆಯನ್ನು ಮಾಡದೆ ನಿರ್ಲಕ್ಷ್ಯದಿಂದ ಸ್ಥಗಿತಗೊಂಡಿತ್ತು. ಈ ಬಗ್ಗೆ ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆಯಲ್ಲೂ ಚರ್ಚೆಗೆ ಬಂದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಕೂಡಲೇ ಈ ಘಟಕವನ್ನು ಸರಿಸರಿಪಡಿಸಿ ಸಾರ್ವಜನಿಕರ ಸೇವೆಗೆ ಬಳಕೆಯಾಗುವ ರೀತಿಯಲ್ಲಿ ನೀಡಬೇಕೆಂದು ಸಾರ್ವಜನಿಕರು ಮನವಿ ಮಾಡಿಕೊಂಡಿದ್ದಾರೆ.

ಸುಂಟಿಕೊಪ್ಪದ ಕಂದಾಯ ಇಲಾಖೆಯ ಬಳಿ ಇರುವ ಶುದ್ಧ ನೀರಿನ ಘಟಕ ಹಲವು ವರ್ಷಗಳಿಂದ ಸ್ಥಗಿತಗೊಂಡಿದೆ.
ಸಾರ್ವಜನಿಕರ ಬಳಕೆಗಾಗಿಯೇ ಎರಡು ಶುದ್ದ ನೀರಿನ ಘಟಕವನ್ನು ಪ್ರಾರಂಭಿಸಿದ್ದರೂ ಕೂಡ ಗ್ರಾಮ ಪಂಚಾಯಿತಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಈ ರೀತಿಯ ದುರಾವಸ್ಥೆ ಕಂಡು ಬಂದಿದೆ
-ಪ್ರಸಾದ್ ಕೊಟ್ಟಪ್ಪ, ಗ್ರಾಮ ಪಂಚಾಯತಿ ಸದಸ್ಯ.
ಸುಂಟಿಕೊಪ್ಪ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನೀರಿನ ಪರೀಕ್ಷೆಯನ್ನು ಮಾಡಿಸಿದ್ದು ಕುಡಿಯಲು ಯೋಗ್ಯವಾಗಿದೆ ಎಂದು ವೈದ್ಯರು ಪ್ರಮಾಣ ಪತ್ರ ನೀಡಿದ್ದಾರೆ. ಹಳೆಯ ನೀರಿನ ಘಟಕ ಸಂಪೂರ್ಣ ಹಾಳಾಗಿದ್ದು ಅದನ್ನು ದುರಸ್ತಿಪಡಿಸುವುದಕ್ಕಿಂತ ಹೊಸದಾದ ಘಟಕವನ್ನು ಆ ಹಣದಲ್ಲಿ ಪ್ರಾರಂಭಿಸಬಹುದು.
-ಲೋಕೇಶ್ ಸುಂಟಿಕೊಪ್ಪ, ಗ್ರಾಮ ಪಂಚಾಯಿತಿ ಅಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.