ADVERTISEMENT

ಪ್ರಜಾವಾಣಿ ಕೊರೊನಾ ಸೇನಾನಿಗಳು 2021: ಗ್ರಾಮೀಣ ಪ್ರದೇಶದ ಜನರ ಆರೋಗ್ಯದಾತರು...

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2020, 19:31 IST
Last Updated 31 ಡಿಸೆಂಬರ್ 2020, 19:31 IST
ಕೊಡಗು ಜಿಲ್ಲೆಯ ಕೊರೊನಾ ಸೇನಾನಿಗಳು
ಕೊಡಗು ಜಿಲ್ಲೆಯ ಕೊರೊನಾ ಸೇನಾನಿಗಳು   

ಕೊರೊನಾ ಸೋಂಕಿನ ಪ್ರಕರಣಗಳು ಗ್ರಾಮೀಣ ಪ್ರದೇಶಕ್ಕೂ ವ್ಯಾಪಿಸಿದ ಮೇಲೆ ಹಳ್ಳಿಹಳ್ಳಿ ಸುತ್ತಿ ಜಾಗೃತಿ ಮೂಡಿಸಿದ್ದರು. ಲಾಕ್‌ಡೌನ್‌ ವೇಳೆ ಉತ್ತಮ ಸೇವೆ ಸಲ್ಲಿಸಿದ್ದಾರೆ. ಜನರು ಯಾವೆಲ್ಲಾ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮೀಣ ಜನರಲ್ಲಿ ಜಾಗೃತಿ ಮೂಡಿಸಿದ್ದರು.

ಗ್ರಾಮೀಣ ಜನರ ಆರೋಗ್ಯದಾತೆ
ಮಡಿಕೇರಿ: ಕೊರೊನಾ ನಿಯಂತ್ರಣದಲ್ಲಿ ಕೊರೊನಾ ವಾರಿಯರ್ಸ್‌ ಆಗಿ ಮುಂಚೂಣಿಯಲ್ಲಿ ದುಡಿದವರು, ಮಡಿಕೇರಿ ತಾಲ್ಲೂಕಿನ ಕಾಲೂರು ಗ್ರಾಮದ ಕೃತಿಕಾರಾಣಿ. ಇವರು ವಿಲೇಜ್‌ ನರ್ಸ್‌ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕೊರೊನಾಕ್ಕೆ ಹೆದರದೆ ಗ್ರಾಮೀಣ ಪ್ರದೇಶದಲ್ಲಿ ಆರೋಗ್ಯ ಸೇವೆ ನೀಡುತ್ತಿದ್ದಾರೆ.

ಮೂಲತಃ ಭಾಗಮಂಡಲ ರಸ್ತೆ ಅಪ್ಪಂಗಳದ ಕೃತಿಕಾ, ಮದುವೆಯಾದ ಮೇಲೆ ಕಾಲೂರಿನ ಪತಿಯ ಮನೆಯಲ್ಲಿ ನೆಲೆಸಿದ್ದಾರೆ.
ಕೊರೊನಾ ಸೋಂಕಿನ ಪ್ರಕರಣಗಳು ಗ್ರಾಮೀಣ ಪ್ರದೇಶಕ್ಕೂ ವ್ಯಾಪಿಸಿದ ಮೇಲೆ ಹಳ್ಳಿಹಳ್ಳಿ ಸುತ್ತಿ ಜಾಗೃತಿ ಮೂಡಿಸಿದ್ದರು. ಲಾಕ್‌ಡೌನ್‌ ವೇಳೆ ಉತ್ತಮ ಸೇವೆ ಸಲ್ಲಿಸಿದ್ದಾರೆ. ಜನರು ಯಾವೆಲ್ಲಾ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮೀಣ ಜನರಲ್ಲಿ ಜಾಗೃತಿ ಮೂಡಿಸಿದ್ದರು.

ADVERTISEMENT

‘ನನ್ನ ಪತಿ ಸಹ 108 ಆಂಬುಲೆನ್ಸ್‌ನ ಚಾಲಕರಾಗಿ ಕೆಲಸ ಮಾಡುತ್ತಿದ್ದಾರೆ. ಅವರೂ ಕೊರೊನಾ ಸೋಂಕಿತರನ್ನು ಆಸ್ಪತ್ರೆಗೆ ಕರೆದೊಯ್ಯುವ ಕೆಲಸ ಮಾಡಿದ್ದರು. ನಮಗೆ ಪುಟ್ಟ ಮಗುವಿದೆ. ಹೀಗಾಗಿ, ಭಯ ಹೆಚ್ಚೇ ಇರುತ್ತಿತ್ತು. ಆದರೆ, ಈಗ ಭಯಬಿಟ್ಟು ಕೆಲಸ ಮಾಡುತ್ತಿದ್ದೆವು. ಆರಂಭಿಕ ದಿನಗಳಲ್ಲಿ ಆಸ್ಪತ್ರೆಗಳಲ್ಲಿಯೇ ಉಳಿದು ಕೆಲಸ ಮಾಡಿದ್ದೆವು’ ಎಂದು ಕೃತಿಕಾ ರಾಣಿ ಹೇಳುತ್ತಾರೆ.

‘ವಿದೇಶ, ಹೊರ ರಾಜ್ಯ, ಹೊರ ಜಿಲ್ಲೆಗಳಿಂದ ಕೊಡಗಿನ ಗ್ರಾಮೀಣ ಪ್ರದೇಶಕ್ಕೆ ಸಾಕಷ್ಟು ಜನರು ಬಂದಿದ್ದರು. ಅವರನ್ನು ಹೋಂ ಐಸೋಲೇಷನ್‌ನಲ್ಲಿ ಇರುವಂತೆ ನೋಡಿಕೊಳ್ಳುವುದೇ ಸವಾಲಿನ ಕೆಲಸವಾಗಿತ್ತು. ಬೆಟ್ಟಗೇರಿ, ಯರವನಾಡು ಗ್ರಾಮದಲ್ಲಿ ನಾನು ಕೆಲಸ ಮಾಡಿದ್ದೆ. ಲಾಕ್‌ಡೌನ್‌ನಲ್ಲಿ ಗ್ರಾಮಕ್ಕೆ ತೆರಳಲು ವಾಹನಗಳೂ ಇರಲಿಲ್ಲ. ಕಷ್ಟಪಟ್ಟು ಮನೆ ಮನೆಗೆ ಭೇಟಿ ನೀಡಿದ್ದೆವು. ನನ್ನಂತೆಯೇ ಜಿಲ್ಲೆಯಲ್ಲಿ ಸಾಕಷ್ಟು ನರ್ಸ್‌ಗಳೂ ಕೆಲಸ ಮಾಡಿದ್ದಾರೆ. ಕೊರೊನಾದಿಂದ ರಜೆಗಳೂ ಸಿಗುತ್ತಿಲ್ಲ’ ಎಂದು ಅವರು ಶ್ರಮದ ಹಿಂದಿನ ಕಥೆ ಹೇಳುತ್ತಾರೆ.

**
ನರಸಿಂಹಮೂರ್ತಿಯ ಸ್ವಚ್ಛತಾ ಸೇವೆ
ಎಲ್ಲ ಕ್ಷೇತ್ರಕ್ಕೂ ಕೊರೊನಾ ತಂದೊಡ್ಡಿದ ಸಂಕಷ್ಟವು ಅಷ್ಟಿಷ್ಟಲ್ಲ. ಪೌರ ಕಾರ್ಮಿಕರ ಮೇಲೂ ಕೊರೊನಾ ಕರಿನೆರಳು ಬೀರಿತ್ತು. ಮಾರ್ಚ್‌ ಕೊನೆಯಲ್ಲಿ ಕೊಡಗು ಜಿಲ್ಲೆಯ ಕೊಂಡಂಗೇರಿಯಲ್ಲಿ ಮೊದಲ ಕೊರೊನಾ ಸೋಂಕಿತ ಪ್ರಕರಣವು ಪತ್ತೆಯಾಗಿತ್ತು. ಆಗ ಜಿಲ್ಲೆಯಲ್ಲಿ ಸೋಂಕು ವ್ಯಾಪಿಸದಂತೆ ಜಿಲ್ಲಾಡಳಿತವು ಬಿಗಿ ಕ್ರಮ ಕೈಗೊಂಡಿತ್ತು. ಜೊತೆಗೆ, ಲಾಕ್‌ಡೌನ್‌ ಬೇರೆ. ಜನರು ಭಯ, ಆತಂಕದಿಂದ ಮನೆಯಲ್ಲೇ ಉಳಿದರೆ, ಪೌರ ಕಾರ್ಮಿಕರು ಮಾತ್ರ ರಸ್ತೆಗೆ ಬಂದು ಸ್ವಚ್ಛತಾ ಕೆಲಸ ಮಾಡಬೇಕಾದ ಅನಿವಾರ್ಯತೆಯಿತ್ತು. ಅದರಲ್ಲೂ ಮಡಿಕೇರಿಯಲ್ಲಿ ಪೌರ ಕಾರ್ಮಿಕರು ಶ್ರದ್ಧೆ, ಎಚ್ಚರಿಕೆಯಿಂದ ಕೆಲಸ ಮಾಡಿದ್ದರು. ಅಂಥವರಲ್ಲಿ ಪೌರ ಕಾರ್ಮಿಕ ಕೆ.ಎನ್‌.ನರಸಿಂಹಮೂರ್ತಿ ಒಬ್ಬರು.

ನಗರದ ದೇಚೂರು ಬಡಾವಣೆಯಲ್ಲಿ ಮೂರ್ತಿ ಅವರು ನೆಲೆಸಿದ್ದಾರೆ. ನೇರ ನೇಮಕಾತಿ ಮೂಲಕ ಪೌರ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ ಮೂರ್ತಿ. ಪತ್ನಿ ರಂಗಮ್ಮ ಅವರೂ ಕುಟುಂಬದ ನಿರ್ವಹಣೆಗೆ ಶ್ರಮಿಸುತ್ತಿದ್ದಾರೆ.

‘ಆರಂಭಿಕ ದಿನಗಳಲ್ಲಿ ರಸ್ತೆಯಂಚಿನಲ್ಲಿ ಮಾಸ್ಕ್‌ ಬಿದ್ದಿದ್ದರೆ ಜನರೇ ದೂರು ಓಡಿ ಹೋಗುತ್ತಿದ್ದರು. ಆದರೆ, ಪೌರ ಕಾರ್ಮಿಕರು ಅದನ್ನೇ ಸಂಗ್ರಹಿಸಿ ವಾಹನಗಳಲ್ಲಿ ತೆಗೆದುಕೊಂಡು ಹೋಗಿ ವಿಲೇವಾರಿ ಮಾಡಬೇಕಿತ್ತು. ಲಾಕ್‌ಡೌನ್‌ ಅವಧಿಯಲ್ಲಿ ಜನರು ಮನೆಯಲ್ಲಿ ಉಳಿದಿದ್ದ ಕಾರಣಕ್ಕೆ ಕಸವೂ ಹೆಚ್ಚು ಸಂಗ್ರಹವಾಗುತ್ತಿತ್ತು. ಎಷ್ಟು ಹೇಳಿದರು ಕಸದೊಂದಿಗೆ ಮಾಸ್ಕ್‌ ತಂದು ಹಾಕುತ್ತಿದ್ದರು. ಅದನ್ನು ವಿಲೇವಾರಿ ಮಾಡುವ ದೊಡ್ಡ ಜವಾಬ್ದಾರಿ ಪೌರ ಕಾರ್ಮಿಕರ ಮೇಲಿತ್ತು’ ಎಂದು ನರಸಿಂಹಮೂರ್ತಿ ಹೇಳಿದರು.

‘ನಗರಸಭೆಯಿಂದ ಹ್ಯಾಂಡ್‌ಗ್ಲೌಸ್, ಮಾಸ್ಕ್‌ ನೀಡಿದ್ದರು. ಎಲ್ಲ ಪೌರ ಕಾರ್ಮಿಕರಿಗೂ ಎರಡು ಬಾರಿ ಕೋವಿಡ್‌ ಪರೀಕ್ಷೆ ಮಾಡಿಸಿದ್ದರು. ಇನ್ನು ಕೆಲಸದ ವೇಳೆ ಕೆಲವರು ತಿಂಡಿ ಹಾಗೂ ಟೀ ನೀಡಿ ಪ್ರೋತ್ಸಾಹಿಸುತ್ತಿದ್ದರು’ ಎಂದು ತಿಳಿಸುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.