ಮಡಿಕೇರಿ: ಅದು ಆಗಸ್ಟ್ 16, 17ರ ಸಮಯ. ಸದಾ ತಣ್ಣಗೆ ಹರಿಯುತ್ತಿದ್ದ ‘ಪಯಸ್ವಿನಿ ನದಿ’ ಅಂದು ರೌದ್ರನರ್ತನ ತಾಳಿತ್ತು. ದಿಢೀರ್ ಆಗಿ ಪ್ರವಾಹ ಬಂದು ಅಕ್ಕಪಕ್ಕದ ಮನೆ, ತೋಟ, ಗದ್ದೆಗಳೆಲ್ಲವನ್ನೂ ಕೊಚ್ಚಿಕೊಂಡು ಹೋಗುತ್ತಿತ್ತು. ನೋಡ ನೋಡುತ್ತಿದ್ದಂತೆಯೇ ಉಕ್ಕೇರಿದ್ದ ನದಿ ನೀರಿನಲ್ಲಿ ಸ್ಥಳೀಯರಿಗೆ ಜೀವ ಉಳಿಸಿಕೊಳ್ಳುವುದೇ ತ್ರಾಸದಾಯಕ ಆಗಿತ್ತು. ಕೆಲವು ಕುಟುಂಬಗಳು ಸುರಕ್ಷಿತ ಪ್ರದೇಶಕ್ಕೆ ಓಡಿಬಂದು ರಕ್ಷಣೆ ಪಡೆದರೆ, ಮತ್ತೆ ಕೆಲವರಿಗೆ ಮನೆಯಿಂದ ಹೊರಬರಲೂ ಸಾಧ್ಯವಾಗದ ಪರಿಸ್ಥಿತಿಯಿತ್ತು.
ಇಂತಹ ಕಠಿಣ ಪರಿಸ್ಥಿತಿಯಲ್ಲೂ ವೃದ್ಧೆಯರಿಬ್ಬರು ಮೂಕಪ್ರಾಣಿಗಳಿಗಾಗಿ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಮನೆಯಲ್ಲಿ ಉಳಿದಿದ್ದ ಮಾನವೀಯ ಕತೆಯಿದು. ಅವರೇ ಮಡಿಕೇರಿ ತಾಲ್ಲೂಕಿನ ಕೊಯನಾಡು ಗ್ರಾಮದ ಆಯೇಷಾ (65) ಹಾಗೂ ಸೈನಬಾ (60). ಇಬ್ಬರೂ ಸಹೋದರಿಯರು.
ಸೈನಬಾ ಅವರ ಮಗಳನ್ನು ಕೇರಳಕ್ಕೆ ಮದುವೆ ಮಾಡಿಕೊಡಲಾಗಿದೆ. ಅದೇ ಸಂದರ್ಭದಲ್ಲಿ ಅಲ್ಲಿಯೂ ಪ್ರವಾಹ. ಪುತ್ರಿಯೇ ಪ್ರವಾಹದ ಸಂಕಷ್ಟದಲ್ಲಿದ್ದಾಗ ತಮ್ಮ ಕುಟುಂಬದ ಸಂಕಷ್ಟವೂ ಆಕೆಗೆ ತಿಳಿದಿರಲಿಲ್ಲ. ಮನೆಯಲ್ಲಿ ಇಬ್ಬರೇ ವಾಸವಿದ್ದರು.
ಕೊಯನಾಡಿನಲ್ಲಿ ಹರಿಯವ ಪಯಸ್ವಿನಿ ನದಿಯ ಪಕ್ಕವೇ ಈ ವೃದ್ಧೆಯರ ಮನೆಯಿದ್ದು, 20 ಗುಂಟೆ ಜಾಗದಲ್ಲಿ 100 ಅಡಿಕೆ ಗಿಡ, ಅಲ್ಪಸ್ವಲ್ಪ ಕಾಫಿ ತೋಟ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಆಯೇಷಾ ಅಂಗವಿಕಲರಾಗಿರುವ ಕಾರಣ, ಸೈನಬಾ ಅವರೇ ಕುಟುಂಬದ ನಿರ್ವಹಣೆಗೆ ಆಧಾರ. ಪಕ್ಕದ ರಬ್ಬರ್ ತೋಟಕ್ಕೆ ಕೂಲಿಗೆ ತೆರಳಿ ಅದರಿಂದ ಬರುತ್ತಿದ್ದ ಹಣದಿಂದ ಇಬ್ಬರೂ ದೈನಂದಿನ ಬದುಕು ಸಾಗಿಸುತ್ತಿದ್ದರು. ಆದರೆ, ಮಹಾಮಳೆಯಿಂದ ನದಿ ಉಕ್ಕೇರಿ ಬದುಕನ್ನೇ ಕಸಿದುಕೊಂಡಿದೆ. ಅಡಿಕೆ ತೋಟ ತುಂಬೆಲ್ಲಾ ನಾಲ್ಕೈದು ಅಡಿ ಹೂಳು ತುಂಬಿ ಭವಿಷ್ಯದ ಬದುಕಿಗೆ ಬರೆ ಬಿದ್ದಿದೆ.
ಸಾಕುಪ್ರಾಣಿ ಮೇಲಿನ ಪ್ರೀತಿ: ಇಬ್ಬರೂ ವೃದ್ಧೆಯರು ಎರಡು ಹಸುಗಳನ್ನು ಸಾಕಿಕೊಂಡಿದ್ದರು. ಆ.16 ಸಂಜೆ ಸುರಿಯೋ ಮಳೆಯ ನಡುವೆ ಗದ್ದೆಯಿಂದ ಬಂದಿದ್ದ ಹಸುಗಳು ಕೊಟ್ಟಿಗೆ ಸೇರಿದ್ದವು. ಅತ್ತ ನದಿಯ ನೀರು ಏರುತ್ತಿತ್ತು. ಅಡಿಕೆಯ ತೋಟದತ್ತ ನೀರು ಒಮ್ಮೆಲ್ಲೇ ನುಗ್ಗುತ್ತಿತ್ತು. ಪ್ರವಾಹಕ್ಕೆ ಹೆದರಿ ಇಡೀ ಊರಿಗೆ ಊರೇ ಖಾಲಿ... ಸಂಪಾಜೆಯ ಭಗವಾನ್ ಸ್ವಯಂ ಸೇವಾ ಸಂಘದ ಯುವಕರು ಸುರಕ್ಷಿತ ಪ್ರದೇಶಕ್ಕೆ ಬರುವಂತೆ ಕೋರಿದ್ದರೂ, ಮನೆಯಲ್ಲಿದ್ದ ಎರಡು ಹಸು ಹಾಗೂ ಕರುಗಳಿಗಾಗಿ ಮನೆ ತೊರೆಯಲು ಅವರಿಬ್ಬರೂ ಒಪ್ಪಿರಲಿಲ್ಲ.ಮನೆಬಿಟ್ಟು ಹೋದರೆ ಪ್ರವಾಹದಲ್ಲಿ ಹಸುಗಳು ಕೊಚ್ಚಿಹೋಗಲಿವೆ ಎನ್ನುವ ಆತಂಕ ಇಬ್ಬರು ಮುಸ್ಲಿಂ ಮಹಿಳೆಯರದ್ದು. ಮನೆಯ ಮೆಟ್ಟಿಲು ತನಕ ನೀರು ನಿಂತಿದ್ದರೂ ಅವರಿಬ್ಬರೂ ಕದಲಿಲ್ಲ.
ಈ ಬಗ್ಗೆ ಅವರನ್ನೇ ಪ್ರಶ್ನಿಸಿದರೆ, ‘ಮೂಕಪ್ರಾಣಿಗಳನ್ನು ನಾವೇ ಪ್ರೀತಿಯಿಂದ ಸಾಕಿದ್ದೆವು. ನಾವು ಆಪತ್ತಿನಲ್ಲಿದ್ದೇವೆಂದು ಹೊರಟರೆ ಅವುಗಳಿಗೆ ಯಾರು ಆಧಾರ? ಎರಡು ದಿನಗಳ ಕಾಲ ಮನೆಯ ಸುತ್ತಲ್ಲಿದ್ದ ಪ್ರವಾಹ ನಡುವೆ ಕಾಲ ಕಳೆದವು. ಮನೆ ತೊರೆದಿದ್ದರೆ ಮೂಕಪ್ರಾಣಿಗಳು ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದವು’ ಎಂದು ಸೈನಬಾ ಕಣ್ಣೀರು ಸುರಿಸಿದರು.
ಪ್ರವಾಹದ ಬಳಿಕ ಕೊಯನಾಡು ಗ್ರಾಮದಲ್ಲಿ ಸಾಮರಸ್ಯ ಬೆಸುಗೆ ಕಾಣಿಸುತ್ತಿದ್ದೆ. ನೋವಿನಲ್ಲಿದ್ದವರಿಗೆ ಪರಸ್ಪರ ನೆರವು ನೀಡುವ ಕೆಲಸ ನಡೆಯುತ್ತಿದೆ. ಅದರಲ್ಲೂ ಸಂಪಾಜೆಯ ಭಗವಾನ್ ಸೇವಾ ಸಂಘದ ಸದಸ್ಯರು, ವಯೋವೃದ್ಧರ ನೆರವಿಗೆ ನಿಂತಿದ್ದಾರೆ. ಮನೆ ಎದುರು ಕುಡಿಯುವ ನೀರಿಗೆ ಆಧಾರವಾಗಿದ್ದ ತೆರೆದ ಬಾವಿ ತುಂಬೆಲ್ಲಾ ಮಣ್ಣು ತುಂಬಿ ಜಲಮೂಲವೇ ಕಣ್ಮರೆ ಆಗಿತ್ತು. ಭಾನುವಾರ ಸ್ಥಳಕ್ಕೆ 22 ಮಂದಿಯ ಯುವಕರು ಹೂಳು ತೆಗೆದು ಬಾವಿ ಶುಚಿಗೊಳಿಸಿದ್ದಾರೆ. ಅಗತ್ಯ ನೆರವು ನೀಡುವ ಮೂಲಕ ವೃದ್ಧರಿಬ್ಬರ ಬಾಳಲ್ಲಿ ಬೆಳಕು ಮೂಡಿಸಲು ಪ್ರಯತ್ನಿಸುತ್ತಿರುವ ಕಾರ್ಯಕ್ಕೆ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.