ನಾಪೋಕ್ಲು: ಈಚೆಗೆ ಸುರಿದ ಧಾರಾಕಾರ ಮಳೆಯಿಂದ ಕಾಫಿ ಫಸಲಿಗೆ ಧಕ್ಕೆ ಉಂಟಾಗಿದೆ. ಹೋಬಳಿ ವ್ಯಾಪ್ತಿಯ ಕಕ್ಕಬೆ, ಯವಕಪಾಡಿ, ನಾಲಡಿ ವಿಭಾಗಗಳಲ್ಲಿ ಕಾಫಿ ಉದುರಲು ಆರಂಭಿಸಿದೆ. ಹಲವು ತೋಟಗಳಲ್ಲಿ ಕಾಫಿಯ ಗಿಡಗಳಲ್ಲಿನ ಮಿಡಿಗಳು ಕಳಚತೊಡಗಿವೆ. ಇದು ಬೆಳೆಗಾರರನ್ನು ಆತಂಕಕ್ಕೀಡು ಮಾಡಿದೆ. ನಿರಂತರವಾಗಿ ಸುಳಿಯುತ್ತಿರುವ ಮಳೆಯಿಂದಾಗಿ ಕೊಳೆ ರೋಗ ಪ್ರಾರಂಭವಾಗಿದೆ. ಅಧಿಕ ಪ್ರಮಾಣದಲ್ಲಿ ಕಾಫಿ ಪಸಲು ನಷ್ಟವಾಗುತ್ತಿದೆ ಎಂದು ಬೆಳಗಾರರು ಆತಂಕ ವ್ಯಕ್ತಪಡಿಸಿದ್ದಾರೆ.
ಭಾಗಮಂಡಲ, ನಾಪೋಕ್ಲು, ಕಕ್ಕಬ್ಬೆ, ಯವಕಪಾಡಿ, ನಾಲಡಿ ಗ್ರಾಮಗಳಲ್ಲಿ ಅಧಿಕ ಮಳೆಯಾಗುತ್ತಿದೆ. ಪ್ರತಿವರ್ಷ ನಿರಂತರವಾಗಿ ಸುರಿಯುವ ಮಳೆಯಿಂದ ಭೂಮಿಯಲ್ಲಿ ತೇವಾಂಶ ಹೆಚ್ಚಿ ಕಾಫಿ ಕಾಯಿಗಳ ಉದುರುವಿಕೆಗೆ ಕಾರಣವಾಗುತ್ತದೆ. ಕೆಲವು ಬೆಳೆಗಾರರು ನಡುನಡುವೆ ರಾಸಾಯನಿಕ ಗೊಬ್ಬರ ಬಳಕೆ ಮಾಡುತ್ತಾರೆ. ಇದರಿಂದ ಕಾಫಿ ಕಾಯಿಗಳ ಉದುರುವಿಕೆ ಗಣನೀಯವಾಗಿವಾಗಿ ಕಡಿಮೆಯಾಗುತ್ತದೆ. ರಾಸಾಯನಿಕ ಗೊಬ್ಬರಗಳ ಬೆಲೆ ಅಧಿಕವಿರುವುದರಿಂದ ಬಹುತೇಕ ಬೆಳೆಗಾರರು ಕಡಿಮೆ ಪ್ರಮಾಣದ ರಾಸಾಯನಿಕ ಗೊಬ್ಬರ ಬಳಸುತ್ತಾರೆ. ಇದರಿಂದ ಉದುರುವಿಕೆ ಹೆಚ್ಚುತ್ತದೆ ಎನ್ನುತ್ತಾರೆ ಬೆಳೆಗಾರರು. ಕಾಫಿಯ ತೋಟಗಳಲ್ಲಿ ಕಳೆ ನಿರ್ಮೂಲನೆ ಮಾಡಿ ತೇವಾಂಶ ಹೆಚ್ಚದಂತೆ ನೋಡಿಕೊಂಡರೆ ಕಾಫಿ ಕಾಯಿಗಳು ಉದುರದಂತೆ ಮಾಡಬಹುದಾಗಿದೆ.
ಕಕ್ಕಬೆಯ ಕಾಫಿ ಬೆಳೆಗಾರ ಪಾಂಡಂಡ ನರೇಶ್ ಮಾತನಾಡಿ, ಕಳೆದ ವರ್ಷ 77 ಸೆ.ಮೀ ಮಳೆ ಸುರಿದಿತ್ತು. ಇದೀಗ ಜುಲೈ ತಿಂಗಳಲ್ಲೇ 104 ಸೆ.ಮೀ ಮಳೆಯಾಗಿದೆ. ಸುರಿಯುವ ಮಳೆಯ ಪ್ರಮಾಣ ಹೆಚ್ಚಿದಷ್ಟೂ ಕಾಫಿ ಕಾಯಿಗಳು ಉದುರಿ ನಷ್ಟ ಸಂಭವಿಸುತ್ತದೆ. ಅಧಿಕವಾಗಿ ಸುರಿಯುತ್ತಿರುವ ಮಳೆ ಗಾಳಿಯಿಂದಾಗಿ ಗಿಡದ ರೆಂಬೆಗಳು ಮುರಿದಿವೆ. ಕಾಫಿ ಕಾಯಿಗಳು ಉದುರುತ್ತಿವೆ. ಕಾಫಿ ನಷ್ಟವನ್ನು ತಡೆಗಟ್ಟಲು ಕಾಫಿ ಮಂಡಳಿ ಅಧಿಕಾರಿಗಳು ಸೂಕ್ತ ಪರಿಹಾರವನ್ನು ಬೆಳೆಗಾರರಿಗೆ ನೀಡಬೇಕು ಎಂದು ಒತ್ತಾಯಿಸಿದರು.
ಕಾಫಿ ನಷ್ಟವನ್ನು ತಡೆಗಟ್ಟಲು ಕಾಫಿ ಮಂಡಳಿ, ಸಂಶೋಧನಾ ತಜ್ಞರು, ಅಧಿಕಾರಿಗಳು ತೋಟಗಳಿಗೆ ಭೇಟಿ ನೀಡಿ ಬೆಳೆಗಾರರೊಂದಿಗೆ ಸಂವಾದ ನಡೆಸಿ ಸೂಕ್ತ ಪರಿಹಾರವನ್ನು ಬೆಳೆಗಾರರಿಗೆ ನೀಡಬೇಕು. ಮಾತ್ರವಲ್ಲದೆ ರೈತರಿಗೆ ಬೇಕಾದ ರಸಗೊಬ್ಬರ, ಕೀಟನಾಶಕ, ಪರಿಕರಗಳನ್ನು ಹೆಚ್ಚಿನ ರಿಯಾಯಿತಿ ದರದಲ್ಲಿ ನೀಡಬೇಕು ಎನ್ನುತ್ತಾರೆ ಅವರು.
ನೆಲಜಿ ಗ್ರಾಮದ ಕಾಫಿ ಬೆಳೆಗಾರ ಮಣವಟ್ಟಿರ ಜಗದೀಶ ಮಾತನಾಡಿ, 10 ದಿನದಿಂದ ಜೋರು ಮಳೆ ಆಗುತ್ತಿದೆ. ಕಾಫಿ ಗಿಡದಲ್ಲಿ ಕೊಳೆತು ಅಪಾರ ಪ್ರಮಾಣದ ನಷ್ಟ ಉಂಟಾಗುತ್ತಿದೆ. ಸರ್ಕಾರ ಬೆಳೆಗಾರರಿಗೆ ಪರಿಹಾರ ಕೊಡಬೇಕು ಎಂದು ಒತ್ತಾಯಿಸಿದರು.
ಹಾನಿಗೀಡಾದ ಪ್ರದೇಶಗಳಲ್ಲಿ ಕಾಫಿ ಮಂಡಳಿ ಸಮೀಕ್ಷೆ ಮಾಡಿ ಬೆಳೆಗಾರರಿಗೆ ಸೂಕ್ತ ಪರಿಹಾರ ಒದಗಿಸಿಕೊಡಬೇಕುಡಾ.ಸಣ್ಣುವಂಡ ಕಾವೇರಪ್ಪ, ಕಾಫಿ ಬೆಳೆಗಾರ,ನಾಪೋಕ್ಲು
ಕಾಫಿ ಹಾಗೂ ಕಾಳುಮೆಣಸಿಗೂ ಕೊಳೆರೋಗ ಬಾಧಿಸುತ್ತಿದೆ. ಸರ್ಕಾರ ಬೆಳೆಗಾರರ ಸಮಸ್ಯೆಯನ್ನು ಪರಿಹರಿಸಿ, ಪರಿಹಾರ ಕೊಡಬೇಕುಮಣವಟ್ಠಿರ ಜಗದೀಶ್, ಕಾಫಿ ಬೆಳೆಗಾರ,ನೆಲಜಿ
ಮಳೆಯಿಂದಾಗಿ ಕಾಫಿ ಉದುರುವುದರ ಜೊತೆಗೆ ಕೊಳೆ ರೋಗವು ಗಿಡಗಳಿಗೆ ಹಬ್ಬಿದ್ದು ಕಾಫಿ ಬೆಳೆಗಾರರು ನಷ್ಟ ಅನುಭವಿಸುವಂತಾಗಿದೆಚೇನಂಡ ಗಿರೀಶ್ ಪೂಣಚ್ಚ, ಕಾಫಿ ಬೆಳೆಗಾರ, ಕೋಕೇರಿ ಗ್ರಾಮ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.