ಶನಿವಾರಸಂತೆ/ಸುಂಟಿಕೊಪ್ಪ: ಶನಿವಾರಸಂತೆ ಹಾಗೂ ಸುಂಟಿಕೊಪ್ಪ ಪಟ್ಟಣ ಸೇರಿದಂತೆ ಹೋಬಳಿ ವ್ಯಾಪ್ತಿಗಳಲ್ಲಿ ಮಂಗಳವಾರ ಮಳೆ ಆರ್ಭಟಿಸಿತು. ಸುಂಟಿಕೊಪ್ಪದಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿತು.
ಸುಂಟಿಕೊಪ್ಪದಲ್ಲಿ ಬೆಳಿಗ್ಗೆಯಿಂದ ಬಿರುಬಿಸಿಲಿನಿಂದ ಕೂಡಿದ್ದ ವಾತಾವರಣ ಸಂಜೆ 3.45 ರ ಸುಮಾರಿಗೆ ಸಂಪೂರ್ಣ ಕತ್ತಲೆ ಆವರಿಸಿ ಸಾಧಾರಣ ಮಳೆ ಸುರಿಯಿತು.
ನಂತರ ಸಂಜೆ 4.30ರ ವೇಳೆಗೆ ಗುಡುಗು, ಮಿಂಚಿನ ಆರ್ಭಟದೊಂದಿಗೆ ರಭಸವಾಗಿ ಮಳೆ ಸುರಿಯಿತು. ಶಾಲೆ ಬಿಡುವ ಸಮಯವಾದ್ದರಿಂದ ಮಕ್ಕಳು ನೆನೆಯುತ್ತಾ ಮನೆಯತ್ತ ಸಾಗಿದರು.
ಅಂಗಡಿ, ಮನೆಗಳಿಗೆ ನೀರು ನುಗ್ಗಿದ್ದರಿಂದ ಮನೆಮಂದಿ ನೀರು ಹೊರ ಹಾಕುವಲ್ಲಿ ಶ್ರಮ ಪಡಬೇಕಾಯಿತು. ಸಿಡಿಲು, ಮಳೆಯ ಆರ್ಭಟಕ್ಕೆ ಬೆಚ್ಚಿದ ಜನ ಅಕ್ಕ ಪಕ್ಕದ ಅಂಗಡಿಗಳಲ್ಲಿ ಆಶ್ರಯ ಪಡೆದರು. ದ್ವಿಚಕ್ರ ವಾಹನ ಸವಾರರಂತೂ ಮಳೆಯ ಹೊಡೆತಕ್ಕೆ ಹೈರಣಾದರು. ಏಳನೇ ಹೊಸಕೋಟೆ, ಕೊಡಗರಹಳ್ಳಿ, ಗದ್ದೆಹಳ್ಳ ಬಾಳೆಕಾಡು ಸೇರಿದಂತೆ ಹಲವೆಡೆ ರಭಸದ ಮಳೆಯಾಗಿದೆ.
ಮಳೆ, ಗಾಳಿಗೆ ಮಾದಾಪುರ ರಸ್ತೆಯಲ್ಲಿರುವ ಸ್ವಸ್ಥ ಶಾಲೆಯ ಬಳಿ 2 ಮರಗಳು ಧರೆಗುರುಳಿದವು. ಬೆಳಿಗ್ಗೆ ಕೆಲ ಸಮಯ ವಾಹನ ಸಂಚಾರಕ್ಕೆ ಅಡ್ಡಿಯಾಗಿತ್ತು. ಸಾರ್ವಜನಿಕರು ಮರಗಳನ್ನು ಕತ್ತರಿಸಿ ತೆರವುಗೊಳಿದರು.
ಶನಿವಾರ ಸಂತೆ ಹೋಬಳಿಯ ವ್ಯಾಪ್ತಿಯಲ್ಲಿ ಮಂಗಳವಾರ ಮುಂಜಾನೆ ವೇಳೆಯಲ್ಲಿ ಉತ್ತಮ ಮಳೆ ಸುರಿಯಿತು. ನಂತರ ಬಿಡುವು ಕೊಟ್ಟ ಮಳೆ ಮಧ್ಯಾಹ್ನದ ನಂತರದಲ್ಲಿ ಪ್ರಾರಂಭವಾಯಿತು. ಸಂಜೆಯವರೆಗೆ ಹೋಬಳಿಯ ಗೌಡಳ್ಳಿ, ಆಲೂರು ಸಿದ್ದಾಪುರ, ದುಂಡಳ್ಳಿ, ಬ್ಯಾಡ ಗೊಟ್ಟ, ಕೊಡ್ಲಿಪೇಟೆ ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿ ಉತ್ತಮ ಮಳೆಯಾಗಿದೆ. ಕಾಫಿ ಬೆಳೆಗಾರರು ಕಾಫಿ ತೋಟಕ್ಕೆ ರಸಗೊಬ್ಬರ ಸಿಂಪಡಣೆ ಮಾಡಿದರು. ಈ ವೇಳೆಯ ಮಳೆ ಅವಶ್ಯಕತೆ ಇತ್ತು. ಈಗ ಬಂದಿರುವ ಮಳೆ ರೈತರ ಮುಖದಲ್ಲಿ ಮಂದಹಾಸ ಮೂಡಿದೆ. ಮಳೆ ಮುಂದಿನ ದಿನಗಳಲ್ಲಿ ಮುಂದುವರೆ ಭತ್ತದ ಪೈರಿಗೆ ಬಂದಿರುವ ಕೀಟಬಾಧೆಯನ್ನು ದೂರವಾಗುತ್ತದೆ ಎಂದು ರೈತರು ಅಭಿಪ್ರಾಯಪಟ್ಟಿದ್ದಾರೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.