ADVERTISEMENT

‘ಆಸ್ಪತ್ರೆ ಮೂಲ ವ್ಯವಸ್ಥೆಗೆ ಸಕಲ ಸಿದ್ಧತೆ’

ಸಾರ್ವಜನಿಕ ಆಸ್ಪತ್ರೆಯಲ್ಲಿ ನಡೆದ ರಕ್ಷಾ ಸಮಿತಿ ಸಭೆಯಲ್ಲಿ ಶಾಸಕ ಡಾ.ಮಂತರ್ ಗೌಡ

​ಪ್ರಜಾವಾಣಿ ವಾರ್ತೆ
Published 9 ಜುಲೈ 2024, 6:10 IST
Last Updated 9 ಜುಲೈ 2024, 6:10 IST
ಸೋಮವಾರಪೇಟೆ ಸಾರ್ವಜನಿಕ ಆಸ್ಪತ್ರೆಯ ಸಭಾಂಗಣದಲ್ಲಿ ನಡೆದ ಆರೋಗ್ಯ ರಕ್ಷಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಶಾಸಕ ಡಾ.ಮಂತರ್ ಗೌಡ ಮಾತನಾಡಿದರು. ಡಾ.ಸತೀಶ್ ಕುಮಾರ್, ಡಾ.ಇಂದೂಧರ್ ಭಾಗವಹಿಸಿದ್ದರು
ಸೋಮವಾರಪೇಟೆ ಸಾರ್ವಜನಿಕ ಆಸ್ಪತ್ರೆಯ ಸಭಾಂಗಣದಲ್ಲಿ ನಡೆದ ಆರೋಗ್ಯ ರಕ್ಷಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಶಾಸಕ ಡಾ.ಮಂತರ್ ಗೌಡ ಮಾತನಾಡಿದರು. ಡಾ.ಸತೀಶ್ ಕುಮಾರ್, ಡಾ.ಇಂದೂಧರ್ ಭಾಗವಹಿಸಿದ್ದರು   

ಸೋಮವಾರಪೇಟೆ: ‘ಮುಂಬರುವ ದಿನಗಳಲ್ಲಿ ತಾಲ್ಲೂಕು ಸರ್ಕಾರಿ ಆಸ್ಪತ್ರೆಗೆ ಮೂಲ ವ್ಯವಸ್ಥೆ ಕಲ್ಪಿಸಲು ಸಕಲ ಸಿದ್ಧತೆ ನಡೆಸಿದ್ದು, ಜಿಲ್ಲಾ ಕೇಂದ್ರ ಮತ್ತು ಹೊರ ಜಿಲ್ಲೆಗೆ ರೋಗಿಗಳು ತೆರಳುವ ಅವಶ್ಯಕತೆ ಇರುವುದಿಲ್ಲ’ ಎಂದು ಶಾಸಕ ಡಾ.ಮಂತರ್ ಗೌಡ ಹೇಳಿದರು.

ಇಲ್ಲಿನ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಸಭಾಂಗಣದಲ್ಲಿ ಸೋಮವಾರ ನಡೆದ ಆರೋಗ್ಯ ರಕ್ಷಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಆಸ್ಪತ್ರೆಯಲ್ಲಿ ₹40 ಲಕ್ಷ ವೆಚ್ಚದಲ್ಲಿ ಆಧುನಿಕ ಶಸ್ತ್ರಚಿಕಿತ್ಸಾ ಕೊಠಡಿ ನಿರ್ಮಿಸಲು ಸರ್ಕಾರ ಅನುಮೋದನೆ ನೀಡಿದೆ. ಆಸ್ಪತ್ರೆಗೆ ಬಹು ಮುಖ್ಯ ವಿಭಾಗಗಳಿಗೆ ಅಗತ್ಯವಿರುವ ವೈದ್ಯರನ್ನು ತಾತ್ಕಾಲಿಕವಾಗಿ ನೇಮಿಸಲಾಗಿದೆ. ಶಸ್ತ್ರಚಿಕಿತ್ಸಾ ಕೊಠಡಿ ಪ್ರಾರಂಭವಾದರೆ, ತಾಲ್ಲೂಕಿನ ಗ್ರಾಮೀಣ ಭಾಗದ ಜನರಿಗೆ ಹೆಚ್ಚಿನ ಅನುಕೂಲವಾಗಲಿದೆ. ಶೀಘ್ರದಲ್ಲಿಯೇ ಅರವಳಿಕೆ ತಜ್ಞರನ್ನೂ ಕೂಡ ನೇಮಕ ಮಾಡಲಾಗುವುದು’ ಎಂದು ತಿಳಿಸಿದರು.

ADVERTISEMENT

‘ಆಸ್ಪತ್ರೆಗೆ ನೇಮಕಗೊಂಡ ವೈದ್ಯರನ್ನು ಇಲ್ಲಿಯೇ ಉಳಿಸಿಕೊಳ್ಳುವುದು ಸಾರ್ವಜನಿಕರ ಜವಾಬ್ದಾರಿ ಆಗಿದೆ. ವೈದ್ಯರೂ ಸಹ ಒತ್ತಡದಲ್ಲಿ ಕೆಲಸ ಮಾಡುತ್ತಿರುತ್ತಾರೆ. ಇಂತಹ ಸಂದರ್ಭ ಯಾವುದೋ ಅನವಶ್ಯಕ ಕಾರಣ ನೀಡಿ, ಅವರ ವಿರುದ್ಧ ಮಾತನಾಡುವುದು ನಿಲ್ಲಿಸಬೇಕು. ಅನಗತ್ಯ ಗೊಂದಲ ಸೃಷ್ಟಿ ಮಾಡಬಾರದು’ ಎಂದರು.

‘ಆಸ್ಪತ್ರೆಯಲ್ಲಿದ್ದ ವ್ಯವಸ್ಥೆ ಮುಂದಿನ ದಿನಗಳಲ್ಲಿ ಬದಲಾಗಲಿದೆ. ಭ್ರಷ್ಟಾಚಾರಕ್ಕೆ ಅವಕಾಶ ನೀಡುವುದಿಲ್ಲ. ಸಾರ್ವಜನಿಕರಿಗೆ ಉತ್ತಮ ಸೇವೆ ದೊರಕುವಂತಾಗಬೇಕು. ನೂತನವಾಗಿ ನೇಮಕಗೊಂಡ ಆರೋಗ್ಯ ರಕ್ಷಾ ಸಮಿತಿಯ ಸದಸ್ಯರು ಸಾರ್ವಜನಿಕರು ಮೆಚ್ಚುವ ರೀತಿಯಲ್ಲಿ ಸೇವೆ ಮಾಡಬೇಕು’ ಎಂದು ಹೇಳಿದರು.

‘ಆಸ್ಪತ್ರೆಯಲ್ಲಿ ಹಾಸಿಗೆಗಳ ಶುಚಿತ್ವ ಕಾಪಾಡುತ್ತಿಲ್ಲ. ಮಳೆಗಾಲ ಆದ್ದರಿಂದ ಬಟ್ಟೆಗಳು ಒಣಗುವುದಿಲ್ಲ. ಆಸ್ಪತ್ರೆಗೆ ಬಟ್ಟೆ ಒಣಗಿಸಲು ಡ್ರೈಯರ್ ಯಂತ್ರ ಖರೀದಿಸಬೇಕೆಂದು ಸಮಿತಿ ಸದಸ್ಯರಾದ ಕೆ.ಪಿ.ರವೀಶ್ ಮನವಿ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು, ನೂತನ ಡ್ರೈಯರ್ ಯಂತ್ರವನ್ನು ಖರೀದಿಗೆ ಟೆಂಡರ್ ಆಹ್ವಾನಿಸಲು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಇಂದೂಧರ್ ಅವರಿಗೆ ಸೂಚಿಸಿದರು.

ಇದೇ ಸಂದರ್ಭ ಶಸ್ತ್ರಚಿಕಿತ್ಸಾ ವಿಭಾಗಕ್ಕೆ ಅರವಳಿಕೆ ಯಂತ್ರ ಖರೀದಿಸಲು, ಎನ್‌ಬಿಎಸ್‌ಯು ವಿಭಾಗಕ್ಕೆ ಅಗತ್ಯವಿರುವ ಔಷಧ ಮತ್ತು ಉಪಕರಣ, ತುರ್ತು ಔಷಧ ಮತ್ತು ರಾಸಾಯನಿಕಗಳು, ಕ್ಷಕಿರಣ ಯಂತ್ರೋಪಕರಣಗಳ ಬ್ಯಾಟರಿ ದುರಸ್ತಿ, ಜನರೇಟರ್‌ಗೆ ಅಗತ್ಯವಿರುವ ಸಾಮಾಗ್ರಿ, ಕಚೇರಿಗೆ ಕಂಪ್ಯೂಟರ್ ಖರೀದಿ, ರಕ್ತನಿಧಿ ಘಟಕದ ಯಂತ್ರೋಪಕರಣಗಳ ಸರ್ವೀಸ್‌ಗಾಗಿ ಅನುದಾನ ನೀಡುವಂತೆ ಸಭೆಯಲ್ಲಿ ಚರ್ಚಿಸಲಾಯಿತು.

ಸಭೆಯಲ್ಲಿ ಡಿಎಚ್ಒ ಡಾ.ಸತೀಶ್ ಕುಮಾರ್, ಆಡಳಿತ ವೈದ್ಯಾಧಿಕಾರಿ, ಆರೋಗ್ಯ ರಕ್ಷಾ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಆಸ್ಪತ್ರೆಗೆ ಹೆಚ್ಚಿನ ವೈದ್ಯರ ನೇಮಕ’ ‘

ಆಸ್ಪತ್ರೆಯಲ್ಲಿ ಯಾವುದೇ ಸಕಾರಾತ್ಮಕ ಉತ್ತರ ದೊರೆಯದಿದ್ದರೆ ನೇರವಾಗಿ ನನ್ನ ಗಮನಕ್ಕೆ ತಂದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಮುಂದಿನ ಒಂದು ವಾರದಲ್ಲಿ ರಾಜ್ಯದಲ್ಲಿ ವೈದ್ಯರ ನೇಮಕಾತಿಗಾಗಿ ಕೌನ್ಸಿಲಿಂಗ್ ನಡೆಯಲಿದ್ದು ಕೊಡಗು ಜಿಲ್ಲೆಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಜಿಲ್ಲೆಗೆ ಭೇಟಿ ನೀಡಿದ್ದ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ ಪ್ರಕಾಶ ಪಾಟೀಲ ತಿಳಿಸಿದ್ದಾರೆ. ಸೋಮವಾರಪೇಟೆ ಆಸ್ಪತ್ರೆಗೂ ಹೆಚ್ಚಿನ ವೈದ್ಯರ ನೇಮಕವಾಗಲಿದೆ’ ಎಂದು ಶಾಸಕ ಡಾ.ಮಂತರ್ ಗೌಡ ಹೇಳಿದರು. ವೈದ್ಯರು ಸಹಕರಿಸಬೇಕು: ಸರ್ಕಾರದಿಂದ ವಿತರಣೆಯಾಗುವ ಎಲ್ಲಾ ಔಷಧ ಹಾಗೂ ಮಾತ್ರೆ ರೋಗಿಗಳಿಗೆ ವಿತರಿಸಬೇಕು. ಅನಗತ್ಯವಾಗಿ ಹೊರಗಿನ ಔಷಧಾಲಯಕ್ಕೆ ಚೀಟಿ ಬರೆದು ಕೊಡಬಾರದು. ಸಾರ್ವಜನಿಕರು ಆಸ್ಪತ್ರೆಯ ಪ್ರಯೋಗಾಲಯದಲ್ಲಿಯೇ ರಕ್ತ ಪರೀಕ್ಷೆ ಮಾಡಲು ವೈದ್ಯರು ಸೂಚಿಸಬೇಕು. ಆಸ್ಪತ್ರೆಯ ಸುತ್ತ 200 ಮೀ ವ್ಯಾಪ್ತಿಯಲ್ಲಿ ಯಾರೂ ಖಾಸಗಿ ಪ್ರಯೋಗಾಲಯ ನಡೆಸಬಾರದು ಎಂದು ಸರ್ಕಾರದ ಆದೇಶ ಇದೆ. ವೈದ್ಯರು ಕೂಡ ಸಹಕರಿಸಬೇಕು ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.