ADVERTISEMENT

ಸಾರ್ವಜನಿಕ ಹಿತಕ್ಕೆ ಭವಿಷ್ಯ ಬಲಿಕೊಟ್ಟ ಸುಬ್ಬಯ್ಯ: ರಮೇಶ್‌ ಕುಮಾರ್

ಶಾಸಕ ಕೆ.ಆರ್.ರಮೇಶ್ ಕುಮಾರ್ ಅಭಿಪ್ರಾಯ

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2020, 14:25 IST
Last Updated 26 ಆಗಸ್ಟ್ 2020, 14:25 IST
‘ಮರೆಯಲಾಗದ ಆದರ್ಶ ಎ.ಕೆ.ಸುಬ್ಬಯ್ಯ’ ವೆಬಿನಾರ್‌ನಲ್ಲಿ ಶಾಸಕ ಕೆ.ಆರ್.ರಮೇಶ್ ಕುಮಾರ್ ಮಾತನಾಡಿದರು 
‘ಮರೆಯಲಾಗದ ಆದರ್ಶ ಎ.ಕೆ.ಸುಬ್ಬಯ್ಯ’ ವೆಬಿನಾರ್‌ನಲ್ಲಿ ಶಾಸಕ ಕೆ.ಆರ್.ರಮೇಶ್ ಕುಮಾರ್ ಮಾತನಾಡಿದರು    

ಗೋಣಿಕೊಪ್ಪಲು (ಕೊಡಗು): ‘ರಾಜ್ಯ ರಾಜಕಾರಣದಲ್ಲಿ ಅಮರರಾಗಿರುವ ಎ.ಕೆ.ಸುಬ್ಬಯ್ಯ ಅವರು ತಮ್ಮ ರಾಜಕೀಯ ಭವಿಷ್ಯವನ್ನು ಬಲಿಕೊಟ್ಟು ಸಾರ್ವಜನಿಕ ಹಿತ ಕಾಪಾಡಲು ಶ್ರಮಿಸಿದ ಮಹಾನ್ ವ್ಯಕ್ತಿಯಾಗಿದ್ದರು’ ಎಂದು ಶಾಸಕ ಕೆ.ಆರ್.ರಮೇಶ್‌ಕುಮಾರ್ ಹೇಳಿದರು.

ಎ.ಕೆ.ಸುಬ್ಬಯ್ಯ ಅವರ ಪ್ರಥಮ ವರ್ಷದ ಸ್ಮರಣೆಯ ಅಂಗವಾಗಿ ಮಂಗಳವಾರ ರಾತ್ರಿ ಆಯೋಜಿಸಿದ್ದ 'ಮರೆಯಲಾಗದ ಆದರ್ಶ ಎ.ಕೆ.ಸುಬ್ಬಯ್ಯ’ ರಾಜ್ಯಮಟ್ಟದ ವೆಬಿನಾರ್‌ನಲ್ಲಿ ಅವರು ಮಾತನಾಡಿದರು.

‘ಯಾರ ಹಂಗಿಗೂ ಒಳಗಾಗದೇ ಸ್ವತಂತ್ರ ಚಿಂತನೆಯೊಂದಿಗೆ ಸುದೀರ್ಘ ಕಾಲ ಜನನಾಯಕರಾಗಿ ಬದುಕಿದ ಸುಬ್ಬಯ್ಯ ಅವರ ಮಹತ್ವ ಅವರ ನಿಧನದ ನಂತರ ಅರಿವಾಗುತ್ತಿದೆ’ ಎಂದು ಹೇಳಿದರು.

ADVERTISEMENT

‘ರಾಜಕಾರಣದಲ್ಲಿ ಬಹಳಷ್ಟು ಸಮಸ್ಯೆಗಳನ್ನು ನಿಭಾಯಿಸುತ್ತಿದ್ದ ಸುಬ್ಬಯ್ಯ ಸ್ವಾರ್ಥರಹಿತ ರಾಜಕಾರಣಿ ಆಗಿದ್ದರು. ಸಾರ್ವಜನಿಕ ಹಿತಕ್ಕಾಗಿ ತಮ್ಮ ಭವಿಷ್ಯವನ್ನೇ ಬಲಿಕೊಟ್ಟ ಅಪರೂಪದ ರಾಜಕಾರಣಿ’ ಎಂದು ಗುಣಗಾನ ಮಾಡಿದರು.

ಸಾಹಿತಿ ಡಾ.ರಹಮತ್ ತರೀಕೆರೆ ಮಾತನಾಡಿ, ‘ರಾಜಕೀಯ, ಚಳವಳಿ, ಚಿಂತನೆ, ವಿಚಾರವಾದ, ಲೇಖಕ ಮೊದಲಾದ ಬಹುಮುಖ ಪ್ರತಿಭೆ ಉಳ್ಳವರಾಗಿದ್ದರು. ಆಳವಾದ ಚಿಂತನೆ, ಪ್ರಭುತ್ವದ ವಿರುದ್ಧದ ಪ್ರತಿರೋಧ ಅವರನ್ನು ಉತ್ತಮ ಲೇಖಕರನ್ನಾಗಿಸಿತು. ಕನ್ನಡ ವಿಚಾರ ಸಾಹಿತ್ಯದಲ್ಲಿ ಸುಬ್ಬಯ್ಯ ಅವರ ವಿಚಾರಧಾರೆ ಕನ್ನಡಿಗರನ್ನು ಬೆರಗುಗೊಳಿಸುತ್ತಿತ್ತು’ ಎಂದು ಬಣ್ಣಿಸಿದರು.

ಹೋರಾಟಗಾರರಾದ ನೂರ್ ಶ್ರೀಧರ್ ಮಾತನಾಡಿ, ‘ಜನತಂತ್ರದ ಹೊಸ ಮಾದರಿಯ ಜನಾಂದೋಲನಕ್ಕೆ ಸುಬ್ಬಯ್ಯ ಪ್ರಮುಖ ಪ್ರೇರಕರಾಗಿದ್ದರು. ನಮಗೆ ಬುಲ್ಲೆಟ್, ಬ್ಯಾಲೆಟ್‌ಗಿಂತ ಮೂವ್‌ಮೆಂಟ್ ಮುಖ್ಯ ಎಂಬುದನ್ನು ತೋರಿಸಿಕೊಟ್ಟಿದ್ದರು’ ಎಂದು ಗುಣಗಾನ ಮಾಡಿದರು.

‘ದಿಡ್ಡಳ್ಳಿ ಹೋರಾಟವನ್ನು ರಾಜ್ಯಕ್ಕೆ ಪರಿಚಯಿಸಿದ ಸುಬ್ಬಯ್ಯ ಅವರು ಪ್ರತಿದಿನ ಅಂದಿನ ಹೋರಾಟಕ್ಕೆ ಮಾರ್ಗದರ್ಶನ ನೀಡುತ್ತಿದ್ದರು. ಇಂತಹ ಮಹಾನ್ ಹೋರಾಟಗಾರನನ್ನು ಕುರಿತು ಸಾಕ್ಷ್ಯಚಿತ್ರವೊಂದನ್ನು ಹೊರತರಬೇಕಾಗಿದೆ’ ಎಂದು ಅಭಿಪ್ರಾಯಪಟ್ಟರು

ಸುಬ್ಬಯ್ಯ ಅವರ ಪುತ್ರ ಎ.ಎಸ್. ಪೊನ್ನಣ್ಣ, ಮಾನವ ಹಕ್ಕು ಹೋರಾಟಗಾರ್ತಿ ತೀಸ್ತಾ ಸೆಟಲ್ವಾಡ್ ಮಾತನಾಡಿದರು.

ಕೋಮು ಸೌಹಾರ್ದ ವೇದಿಕೆ ಸಂಚಾಲಕ ಕೆ.ಎಲ್.ಅಶೋಕ್, ವಿ.ಪಿ.ಶಶಿಧರ್, ಡಾ.ವಾಸು, ಕೆ.ಆರ್.ವಿದ್ಯಾಧರ್, ಮನುಶೆಣೈ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.