ADVERTISEMENT

ನಾಪೋಕ್ಲು: ಇಂದು ರಾಟೆ ಉಯ್ಯಾಲೆ ಹಬ್ಬ

​ಪ್ರಜಾವಾಣಿ ವಾರ್ತೆ
Published 24 ಮೇ 2024, 4:27 IST
Last Updated 24 ಮೇ 2024, 4:27 IST
ನಾಪೋಕ್ಲು ಸಮೀಪದ ಬಲ್ಲಮಾವಟಿ ಗ್ರಾಮದ ರಾಟೆ ಭಗವತಿ ದೇವಿಯ ಉತ್ಸವದ ಅಂಗವಾಗಿ ಭದ್ರಕಾಳಿ ದೇವಿಯ ವಿಗ್ರಹವನ್ನು ರಾಟೆಯಲ್ಲಿ ತೂಗುತ್ತಿರುವ ದೃಶ್ಯ.(ಸಂಗ್ರಹ ಚಿತ್ರ)
ನಾಪೋಕ್ಲು ಸಮೀಪದ ಬಲ್ಲಮಾವಟಿ ಗ್ರಾಮದ ರಾಟೆ ಭಗವತಿ ದೇವಿಯ ಉತ್ಸವದ ಅಂಗವಾಗಿ ಭದ್ರಕಾಳಿ ದೇವಿಯ ವಿಗ್ರಹವನ್ನು ರಾಟೆಯಲ್ಲಿ ತೂಗುತ್ತಿರುವ ದೃಶ್ಯ.(ಸಂಗ್ರಹ ಚಿತ್ರ)   

ನಾಪೋಕ್ಲು: ಭದ್ರಕಾಳಿ ಅಮ್ಮನ ವಿಗ್ರಹವನ್ನು ರಾಟೆ ಉಯ್ಯಾಲೆಯಲ್ಲಿ ತೂಗುವ ವಿಶೇಷ ಉತ್ಸವಕ್ಕೆ ಸಮೀಪದ ಬಲ್ಲಮಾವಟಿ ಗ್ರಾಮದ ರಾಟೆ ಭಗವತಿ ದೇವಾಲಯ ಸಜ್ಜಾಗಿದೆ.

ಎರಡು ದಿನಗಳ ಉತ್ಸವಕ್ಕೆ ಗುರುವಾರ ಚಾಲನೆ ದೊರೆಯಿತು. ಬೆಳಿಗ್ಗೆ ಎಡಿಕೇರಿ ದೊಡ್ಡ ಮನೆಯಿಂದ ಭಂಡಾರ ತಂದು ದೇವಾಲಯದಲ್ಲಿ ಇರಿಸಿ ಪೂಜೆ ಸಲ್ಲಿಸಲಾಯಿತು. ತಂಡ್ರ ಹೊಳೆಯಲ್ಲಿ ಜಳಕ ನೆರವೇರಿಸಿದ ಬಳಿಕ ಪೀಲಿಯಾಟ್ ಹಾಗೂ ಬೋಡ್ ನಮ್ಮೆ ನೆರವೇರಿದವು. ಗ್ರಾಮಸ್ಥರು ವೇಷಧರಿಸಿ ದೇವರ ಉತ್ಸವದಲ್ಲಿ ಕುಣಿದು ಸಾಂಪ್ರದಾಯಿಕ ಆಚರಣೆ ನೆರವೇರಿಸಿದರು.

ಬಲ್ಲಮಾವಟಿ, ಪೇರೂರು, ಹಾಗೂ ಪುಲಿಕೋಟು ಗ್ರಾಮಗಳ ವ್ಯಾಪ್ತಿಗೆ ಸೇರಿದ ಬಲ್ಲತ್ತನಾಡಿನ ಪುರಾತನ ಭಗವತಿ ಭದ್ರಕಾಳಿ ದೇವಾಲಯದಲ್ಲಿ ಉಯ್ಯಾಲೆ ಹಬ್ಬಕ್ಕಾಗಿ ದೇವಾಲಯದ ಮುಂದೆ ದೊಡ್ಡ ಕಬ್ಬಿಣದ ರಾಟೆ ನಿರ್ಮಿಸಲಾಗಿದೆ. ಹಲವಾರು ವರ್ಷಗಳಿಂದ ಈ ಭಾಗದ ಜನರ ನಂಬಿಕೆ ಪ್ರತೀಕವಾಗಿ ಉತ್ಸವ ನಡೆದು ಬರುತ್ತಿದೆ.

ADVERTISEMENT

ಎರಡು ವರ್ಷಕ್ಕೊಮ್ಮೆ ನಡೆಯುವ ಈ ಉತ್ಸವ ಏಪ್ರಿಲ್ ತಿಂಗಳಲ್ಲಿ ನಡೆಯುತ್ತಿತ್ತು. ಈ ವರ್ಷ ದೇವಾಲಯದ ಆಡಳಿತ ಮಂಡಳಿ ಸದಸ್ಯರು, ಹಿರಿಯರು ಹಾಗೂ ತಕ್ಕಮುಖ್ಯಸ್ಥರು ಉತ್ಸವವನ್ನು ಮೇ ತಿಂಗಳಲ್ಲಿ ಆಚರಿಸಲು ನಿರ್ಧರಿಸಿದ್ದು ವಿವಿಧ ಸಾಂಪ್ರದಾಯಿಕ ಆಚರಣೆಗಳು ಗುರುವಾರ ನೆರವೇರಿದವು.

‘₹16 ಲಕ್ಷ ವೆಚ್ಚದಲ್ಲಿ ದೇವಾಲಯ ನವೀಕರಣಗೊಳಿಸಲಾಗಿದೆ. ಇನ್ನಷ್ಟು ಅಭಿವೃದ್ಧಿ ಕಾರ್ಯಗಳು ನಡೆಯಬೇಕಿವೆ. ಗ್ರಾಮಸ್ಥರ ನೆರವಿನಿಂದ ದೇವಾಲಯವನ್ನು ಮತ್ತಷ್ಟು ಅಭಿವೃದ್ಧಿ ಪಡಿಸಲಾಗುವುದು’ ಎಂದು ಗ್ರಾಮಸ್ಥ ಕುಶಾಲಪ್ಪ ತಿಳಿಸಿದರು.

ಶುಕ್ರವಾರ ಬೆಳಿಗ್ಗೆ ಉತ್ಸವದ ಅಂಗವಾಗಿ ಆರಾಟ್ ಬೊಳಕಾಟ್ ನಡೆಯಲಿದೆ. ಬಳಿಕ ಮಹಾಪೂಜೆ ನೆರವೇರಲಿದೆ. ಮಧ್ಯಾಹ್ನ ದೇವರನ್ನು ರಾಟೆಯಲ್ಲಿ ಕೂರಿಸಿ ಸಾಂಪ್ರದಾಯಿಕವಾಗಿ ತೂಗಲಾಗುವುದು. ಬಳಿಕ ಕ್ಷೇತ್ರಪಾಲ, ಶಾಸ್ತಾವು ಹಾಗೂ ಭದ್ರಕಾಳಿ ತೆರೆಗಳು ನಡೆಯಲಿವೆ.

ಗುರುವಾರ ನಡೆದ ಬೋಡ್ ಉತ್ಸವದಲ್ಲಿ ತಕ್ಕ ಮುಖ್ಯಸ್ಥರು, ನಾಡಿನ ಭಕ್ತರು, ಗ್ರಾಮಸ್ಥರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

ನಾಪೋಕ್ಲು ಸಮೀಪದ ಬಲ್ಲಮಾವಟಿ ಗ್ರಾಮದ ರಾಟೆ ಭಗವತಿ ದೇವಿಯ ಉತ್ಸವದ ಅಂಗವಾಗಿ ಗುರುವಾರ ಜರುಗಿದ ಬೋಡ್ ಉತ್ಸವದಲ್ಲಿ  ಭಕ್ತರು ವೇಷ ಧರಿಸಿ ನರ್ತಿಸಿದರು..

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.